ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಕೋಲ್ಕತ್ತಾ ಕಾಲ್ತುಳಿತ: ದುರ್ಗಾ ಪೂಜಾ ಪೆಂಡಾಲ್ ಸಮಿತಿಯಲ್ಲಿ ಸಿಎಂ ಸುವೇಂದು ಅಧಿಕಾರಿ ಸಂಬಂಧಿ ಇದ್ದಾರೆ ಎಂದ ಟಿಎಂಸಿ; ಬಿಜೆಪಿ ತಿರುಗೇಟು

ಕೋಲ್ಕತ್ತಾದಲ್ಲಿ ಶನಿವಾರ ನಡೆದ ಕಾಲ್ತುಳಿತ ಪ್ರಕರಣ ನಡೆದಿರುವ ದುರ್ಗಾ ಪೂಜಾ ಪೆಂಡಾಲ್ ಸಮಿತಿಯಲ್ಲಿ ಮುಖ್ಯಮಂತ್ರಿ ಸುವೇಂದು ಅಧಿಕಾರಿ ಅವರ ಸಂಬಂಧಿಯು ಕೂಡ ಇದ್ದಾರೆ ಎಂದು ತೃಣ ಮೂಲ ಕಾಂಗ್ರೆಸ್ ನಾಯಕಿ ಮಮತಾ ಬ್ಯಾನರ್ಜಿ ಅವರ ಬಣದ ನಾಯಕರು ಆರೋಪಿಸಿದ್ದಾರೆ. ಆದರೆ ಇದನ್ನು ನಿರಾಕರಿಸಿರುವ ಬಿಜೆಪಿ ಘಟನೆಗೆ ಸಂಬಂಧಿಸಿದಂತೆ ಏಳು ಮಂದಿಯನ್ನು ಬಂಧಿಸಲಾಗಿದೆ ಎಂದು ಹೇಳಿದೆ.

ದುರ್ಗಾ ಪೂಜಾ ಪೆಂಡಾಲ್ ಸಮಿತಿಯಲ್ಲಿ ಸಿಎಂ ಸಂಬಂಧಿ: ಟಿಎಂಸಿ ಆರೋಪ

ಸಂಗ್ರಹ ಚಿತ್ರ -

ಕೋಲ್ಕತ್ತಾ: ಉತ್ತರ ಕೋಲ್ಕತ್ತಾದ (north kolkata) ಗಿರೀಶ್‌ ಪಾರ್ಕ್‌ ಪೊಲೀಸ್‌ ಠಾಣೆ ವ್ಯಾಪ್ತಿಯ ಶಾರದಾ ಪಾರ್ಕ್‌ನ ಚೋರ್‌ ಬಗಾನ್‌ ದುರ್ಗಾ ಪೆಂಡಾಲ್‌ನಲ್ಲಿ (horbagan Durga Puja stampede) ಶನಿವಾರ ಸಂಜೆ ಉಂಟಾದ ಕಾಲ್ತುಳಿತದಲ್ಲಿ (stampede) 19 ಮಂದಿ ಸಾವನ್ನಪ್ಪಿದರು. ಇದು ಈಗ ಆಡಳಿತ ಪಕ್ಷ ಮತ್ತು ವಿರೋಧ ಪಕ್ಷಗಳ ನಡುವೆ ವಾಗ್ವಾದಕ್ಕೆ ಕಾರಣವಾಗಿದೆ. ದುರ್ಗಾ ಪೂಜಾ ಸಮಿತಿಯ (durga puja committee) ಆಯೋಜಕರಲ್ಲಿ ಬಹುತೇಕ ಮಂದಿ ಬಿಜೆಪಿಗೆ ಸೇರಿದವರಾಗಿದ್ದಾರೆ. ಇದರಲ್ಲಿ ಮುಖ್ಯಮಂತ್ರಿ ಸುವೇಂದು ಅಧಿಕಾರಿ ಅವರ ಸಂಬಂಧಿಯು ಕೂಡ ಇದ್ದಾರೆ ಎಂದು ತೃಣ ಮೂಲ ಕಾಂಗ್ರೆಸ್ ನಾಯಕಿ ಮಮತಾ ಬ್ಯಾನರ್ಜಿ ಅವರ ಬಣದ ನಾಯಕರು ಆರೋಪಿಸಿದ್ದಾರೆ.

ಕೋಲ್ಕತ್ತಾದ ಚೋರ್‌ಬಗಾನ್ ಸಾರ್ವಜನಿಕ ದುರ್ಗಾ ಪೂಜಾ ಪೆಂಡಾಲ್ ನಲ್ಲಿ ಶನಿವಾರ ಸಂಭವಿಸಿದ ಕಾಲ್ತುಳಿತ ಪ್ರಕರಣಕ್ಕೆ ಸಂಬಂಧಿಸಿ ಪೂಜಾ ಸಮಿತಿಯಲ್ಲಿರುವ ಸಿಎಂ ಅಧಿಕಾರಿ ಅವರ ಸಂಬಂಧಿ ದೇಬ್‌ದೀಪ್ ಅವರನ್ನು ಯಾವಾಗ ಬಂಧಿಸಲಾಗುತ್ತದೆ ಎಂದು ಟಿಎಂಸಿ ನಾಯಕರು ಪ್ರಶ್ನಿಸಿದ್ದಾರೆ.

ಕೋಲ್ಕತಾ ದುರ್ಗಾ ಪೆಂಡಾಲ್ ಕಾಲ್ತುಳಿತ: 19ಕ್ಕೇರಿದ ಸಾವಿನ ಸಂಖ್ಯೆ

ಕಾಲ್ತುಳಿತ ಪ್ರಕರಣಕ್ಕೆ ಸಂಬಂಧಿಸಿ ಏಳು ಮಂದಿಯನ್ನು ಬಂಧಿಸಲಾಗಿದೆ ಮತ್ತು ಈ ಕುರಿತು ತನಿಖೆಗೆ ಕೋಲ್ಕತ್ತಾ ಹೈಕೋರ್ಟ್‌ನ ಹಾಲಿ ನ್ಯಾಯಾಧೀಶರ ನೇತೃತ್ವದಲ್ಲಿ ವಿಶೇಷ ತನಿಖಾ ತಂಡವನ್ನು ಕೂಡ ರಚಿಸಲಾಗಿದೆ ಎಂದು ಮುಖ್ಯಮಂತ್ರಿ ಸುವೇಂದು ಅಧಿಕಾರಿ ತಿಳಿಸಿದ್ದಾರೆ.

ಈ ಕುರಿತು ಪ್ರತಿಕ್ರಿಯಿಸಿರುವ ಟಿಎಂಸಿ ವಕ್ತಾರ ಮತ್ತು ಕೋಲ್ಕತ್ತಾದ ಶಾಸಕ ಕುನಾಲ್ ಘೋಷ್, ಈ ಕಾಲ್ತುಳಿತವನ್ನು ತಡೆಯುವಲ್ಲಿ ಆಡಳಿತ ವ್ಯವಸ್ಥೆ ವಿಫಲವಾಗಿದೆ. ಆಯೋಜಕರು ಇದರ ಹೊಣೆ ಹೊರಬೇಕು. ಇದರಲ್ಲಿ ಅನೇಕ ಪ್ರಭಾವಿ ವ್ಯಕ್ತಿಗಳು ಶಾಮೀಲಾಗಿದ್ದಾರೆ ಎಂದು ಆರೋಪಿಸಿದರು.

ಸಾಮಾಜಿಕ ಮಾಧ್ಯಮದಲ್ಲಿ ಅವರು ಈ ಕುರಿತು ಪೋಸ್ಟ್ ಮಾಡಿದ್ದು, ಮುಖ್ಯಮಂತ್ರಿಯವರ ಹೇಳಿಕೆಯು ಅಪೂರ್ಣವಾಗಿದೆ. ಸಮಿತಿಯ ಪದಾಧಿಕಾರಿಗಳನ್ನು ತಕ್ಷಣವೇ ಬಂಧಿಸಬೇಕು. ಮುನ್ಸಿಪಲ್ ಕಾರ್ಪೊರೇಷನ್ ಮತ್ತು ಒಎಸ್‌ಡಿ ಅಧಿಕಾರಿಗಳನ್ನು ಹುದ್ದೆಯಿಂದ ತೆಗೆದುಹಾಕಬೇಕು. ನಿಷ್ಪಕ್ಷಪಾತ ತನಿಖೆ ನಡೆಸಬೇಕು. ಸಮಿತಿಯಲ್ಲಿ ಬಿಜೆಪಿ ಸದಸ್ಯರೇ ತುಂಬಿದ್ದಾರೆ ಮತ್ತು ಅವರನ್ನು ರಕ್ಷಿಸಲಾಗುತ್ತಿದೆ. ಮಳೆಯ ಮೇಲೆ ದೋಷ ಹೊರಿಸುವುದು ಆಡಳಿತಾತ್ಮಕ ವೈಫಲ್ಯವನ್ನು ಮುಚ್ಚಿಹಾಕುವ ಪ್ರಯತ್ನವಾಗಿದೆ ಎಂದು ಹೇಳಿದರು.

ಚೋರ್ ಬಗಾನ್ ಪ್ರದೇಶವು ಜೋರಾಸಂಕೊ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿದ್ದು, ಇಲ್ಲಿ ಕಳೆದ ಚುನಾವಣೆಯಲ್ಲಿ ಟಿಎಂಸಿಯ ವಿಜಯ್ ಉಪಾಧ್ಯಾಯ ಅವರನ್ನು ಸೋಲಿಸಿ ಬಿಜೆಪಿಯ ಜಿಜಯ್ ಓಜಾ ಜಯಗಳಿಸಿದ್ದರು. ಓಜಾ ಅವರು ಹೊಸ ಸಮಿತಿಯ ಅಧ್ಯಕ್ಷರಾಗಿದ್ದಾರೆ.

ಕಾಲ್ತುಳಿತದ ಬಳಿಕ ಸ್ಥಳಕ್ಕೆ ಭೇಟಿ ನೀಡಿದ್ದ ಓಜಾ ಅವರು, ನಾನೂ ಕೂಡ ಸಮಿತಿಯಲ್ಲಿದ್ದೇನೆ. ಮುಖ್ಯಮಂತ್ರಿಗಳು ಈ ಬಗ್ಗೆ ತನಿಖೆಗೆ ಆದೇಶಿಸಿದ್ದಾರೆ.ಸುರಕ್ಷತಾ ಮಾನದಂಡಗಳಿಗೆ ಹೋಲಿಸಿದರೆ ಈ ವರ್ಷದ ಪೆಂಡಾಲ್‌ಗೆ ಪ್ರವೇಶ ಮತ್ತು ನಿರ್ಗಮನ ಮಾರ್ಗಗಳು ತುಂಬಾ ಕಿರಿದಾಗಿದ್ದವು ಎನ್ನುವ ಮಾಹಿತಿ ತಮಗೆ ಇರಲಿಲ್ಲ ಎಂದು ತಿಳಿಸಿದರು.

ಟಿಎಂಸಿ ಪ್ರಧಾನ ಕಾರ್ಯದರ್ಶಿ ಅಭಿಷೇಕ್ ಬ್ಯಾನರ್ಜಿ ಅವರು ಸಾಮಾಜಿಕ ಮಾಧ್ಯಮದ ಎಕ್ಸ್ ಖಾತೆಯಲ್ಲಿ ಪೋಸ್ಟ್ ಮಾಡಿ, ಮುಖ್ಯಮಂತ್ರಿಯವರ ಸಂಬಂಧಿಕರೊಬ್ಬರು ಪೂಜಾ ಸಮಿತಿಯಲ್ಲಿದ್ದಾರೆ ಎನ್ನುವ ಆರೋಪ ಕೇಳಿ ಬಂದಿದೆ. ಪೂಜಾ ಪೆಂಡಾಲ್ ವ್ಯವಸ್ಥೆಗಳಲ್ಲಿ ಬಿಜೆಪಿಯ ಉತ್ತರ ಕೋಲ್ಕತ್ತಾ ಘಟಕದ ಅಧ್ಯಕ್ಷ ತಮೋಘ್ನ ಘೋಷ್ ಅವರೂ ಭಾಗಿಯಾಗಿದ್ದಾರೆ. ಸಿಎಂ ಸುವೇಂದು ಅಧಿಕಾರಿ ಅವರ ಸಂಬಂಧಿ ತಪ್ಪಿತಸ್ಥರಾದರೆ ಅವರನ್ನು ಯಾವಾಗ ಜೈಲಿಗೆ ಕಳುಹಿಸುತ್ತೀರಿ ಎಂದು ಪ್ರಶ್ನಿಸಿದರು.

ಓಜಾ, ಘೋಷ್ ಮತ್ತು ಮುಖ್ಯಮಂತ್ರಿಯವರ ಸಂಬಂಧಿ ಈ ಪ್ರಕರಣದಿಂದ ಪಾರಾಗಬಹುದು ಎಂಬ ಅನುಮಾನವಿದೆ. ಸುವೇಂದು ಅಧಿಕಾರಿ ಅವರು ಆಡಳಿತಗಾರರಾಗಿ ತಮ್ಮ ಸಾಂವಿಧಾನಿಕ ಜವಾಬ್ದಾರಿಯನ್ನು ನಿರ್ವಹಿಸಲಿ ಎಂದು ತಿಳಿಸಿದರು.

ಇದಕ್ಕೆ ತಿರುಗೇಟು ನೀಡಿದ ಬಿಜೆಪಿ ವಕ್ತಾರ, ಕಾಶಿಪುರ-ಬೆಲ್ಗಾಚಿಯಾ ಕ್ಷೇತ್ರದ ಶಾಸಕ ರಿತೇಶ್ ತಿವಾರಿ, ದಶಕಗಳಿಂದಲೂ ಪಾರ್ಥ ಚಟರ್ಜಿ, ಅರೂಪ್ ಬಿಸ್ವಾಸ್ ಮತ್ತು ಫಿರ್ಹಾದ್ ಹಕೀಮ್ ಅವರಂತಹ ಟಿಎಂಸಿ ನಾಯಕರು ಸಾರ್ವಜನಿಕ ದುರ್ಗಾ ಪೂಜೆಗಳೊಂದಿಗೆ ನಿಕಟ ಸಂಪರ್ಕ ಹೊಂದಿದ್ದಾರೆ. ಕೆಲವು ಬಿಜೆಪಿ ನಾಯಕರು ಕೂಡ ಇಂತಹ ಪೂಜೆಗಳೊಂದಿಗೆ ಗುರುತಿಸಿಕೊಂಡಿರಬಹುದು. ಇದರಲ್ಲಿ ತಪ್ಪೇನಿದೆ ಎಂದು ಪ್ರಶ್ನಿಸಿದರು.

ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಕೂಡ ಈ ಘಟನೆಗೆ ಸಂಬಂಧಿಸಿ ನಿಷ್ಪಕ್ಷಪಾತ ತನಿಖೆಗೆ ಆಗ್ರಹಿಸಿದ್ದಾರೆ. ಈ ಕುರಿತು ಸಾಮಾಜಿಕ ಮಾಧ್ಯಮದ ಎಕ್ಸ್ ಖಾತೆಯಲ್ಲಿ ಪೋಸ್ಟ್ ಮಾಡಿರುವ ಅವರು, ಇದೊಂದು ಅತ್ಯಂತ ದುಃಖಕರ ಘಟನೆ. ಮೃತರ ಕುಟುಂಬಗಳಿಗೆ ನನ್ನ ಸಂತಾಪಗಳು. ಗಾಯಗೊಂಡವರು ಶೀಘ್ರ ಗುಣಮುಖರಾಗಲಿ ಎಂದು ಪ್ರಾರ್ಥಿಸುತ್ತೇನೆ ಎಂದು ತಿಳಿಸಿದ್ದಾರೆ.

ನವರಾತ್ರಿ ಪೂಜೆ ವೇಳೆ ಭೀಕರ ದುರಂತ; ಕೋಲ್ಕತಾದಲ್ಲಿ ಪೆಂಡಾಲ್‌ ಕುಸಿದು ಕಾಲ್ತುಳಿತ, 17 ಮಂದಿ ಸಾವು

ಭವಿಷ್ಯದಲ್ಲಿ ಇಂತಹ ದುರಂತ ಮರುಕಳಿಸದಂತೆ ಈ ಘಟನೆಯ ಬಗ್ಗೆ ನಿಷ್ಪಕ್ಷಪಾತ ತನಿಖೆ ನಡೆಸಬೇಕು. ಪರಿಹಾರ ಕಾರ್ಯಗಳಲ್ಲಿ ಸಾಧ್ಯವಿರುವ ಎಲ್ಲ ನೆರವನ್ನೂ ನೀಡುವಂತೆ ಕಾಂಗ್ರೆಸ್ ಕಾರ್ಯಕರ್ತರಿಗೆ ಮನವಿ ಮಾಡುವುದಾಗಿ ತಿಳಿಸಿದರು.