Parashurama caught in Lokayukta trap: ಲೋಕಾಯುಕ್ತ ಬಲೆಗೆ ಬಿದ್ದ ಪರಶುರಾಮ; ಪರಾರಿಯಾಗಿದ್ದ ವೀರೇಶನ ವಿರುದ್ಧವೂ ಇಲಾಖಾ ಕ್ರಮ
ಸೆ.3ರಂದು ಬ್ರಹ್ಮಪುರ ಪೊಲೀಸ್ ಠಾಣೆಯಲ್ಲಿ ರೂಢಿಗತ ಅಪರಾಧಿ ಕಾರ್ತಿಕ ಎಂಬಾತನಿಗೆ ಗಡಿಪಾರು ಮಾಡುವುದಾಗಿ ಬೆದರಿಸಿ ಹಣಕ್ಕೆ ಬೇಡಿಕೆ ಇಟ್ಟಿರುವ ಆರೋಪ ಕೇಳಿಬಂದಿತ್ತು. ಒಂದು ಲಕ್ಷ ರೂ. ನೀಡುವಂತೆ ಒತ್ತಡ ಹೇರಲಾಗಿತ್ತು ಎನ್ನಲಾಗಿದ್ದು, ಈ ಪೈಕಿ ಈಗಾಗಲೇ ₹50 ಸಾವಿರ ಪಡೆದಿದ್ದರು. ಬಳಿಕ ಮತ್ತೆ ₹50 ಸಾವಿರಕ್ಕೆ ಬೇಡಿಕೆ ಇಟ್ಟಿದ್ದರು ಎನ್ನಲಾಗಿದೆ.
-
ಕಲಬುರಗಿ: ಪೊಲೀಸ್ ಠಾಣೆಯ ಆವರಣದಲ್ಲೇ ಲಂಚ ಸ್ವೀಕರಿಸುತ್ತಿದ್ದ ವೇಳೆ ಲೋಕಾಯುಕ್ತ(Lokayukta) ಬಲೆಗೆ ಬಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಪೊಲೀಸ್ ಪೇದೆಗಳನ್ನು ಅಮಾನತು ಗೊಳಿಸಲಾಗಿದೆ. ಇಲ್ಲಿನ ಬ್ರಹ್ಮಪುರ ಪೊಲೀಸ್ ಠಾಣೆಯ ಕಾನ್ಸ್ಟೆಬಲ್ ಗಳಾದ ಪರಶುರಾಮ ಹಾಗೂ ವೀರೇಶ ಅವರನ್ನು ಇಲಾಖಾ ವಿಚಾರಣೆಗೆ ಒಳಪಡಿಸಿ ಅಮಾನತುಗೊಳಿಸಿ ನಗರ ಪೊಲೀಸ್ ಆಯುಕ್ತ ಡಾ.ಶರಣಪ್ಪ ಎಸ್.ಡಿ. ಆದೇಶ ಹೊರಡಿಸಿದ್ದಾರೆ.
ಸೆ.3ರಂದು ಬ್ರಹ್ಮಪುರ ಪೊಲೀಸ್ ಠಾಣೆಯಲ್ಲಿ ರೂಢಿಗತ ಅಪರಾಧಿ ಕಾರ್ತಿಕ ಎಂಬಾತನಿಗೆ ಗಡಿಪಾರು ಮಾಡುವುದಾಗಿ ಬೆದರಿಸಿ ಹಣಕ್ಕೆ ಬೇಡಿಕೆ ಇಟ್ಟಿರುವ ಆರೋಪ ಕೇಳಿಬಂದಿತ್ತು. ಒಂದು ಲಕ್ಷ ರೂ. ನೀಡುವಂತೆ ಒತ್ತಡ ಹೇರಲಾಗಿತ್ತು ಎನ್ನಲಾಗಿದ್ದು, ಈ ಪೈಕಿ, ಈಗಾಗಲೇ ₹50 ಸಾವಿರ ಪಡೆದಿದ್ದರು. ಬಳಿಕ ಮತ್ತೆ ₹50 ಸಾವಿರಕ್ಕೆ ಬೇಡಿಕೆ ಇಟ್ಟಿದ್ದರು ಎನ್ನಲಾಗಿದೆ.
ಇದನ್ನೂ ಓದಿ: Fake Lokayukat Officer: ಲೋಕಾಯುಕ್ತ ಅಧಿಕಾರಿ ಎಂದು ನರ್ಸ್‌ಗೆ ಬೆದರಿಕೆ: 50 ಸಾವಿರ ವಸೂಲಿ: ನಕಲಿ ಅಧಿಕಾರಿ ಚೇತನ್ ಬಂಧನ
ಈ ಕುರಿತು ಲೋಕಾಯುಕ್ತರಿಗೆ ಮಾಹಿತಿ ನೀಡಲಾಗಿದ್ದು, ಕಾರ್ಯಾಚರಣೆ ನಡೆಸಿದ ಸಂದರ್ಭದಲ್ಲಿ ಠಾಣೆ ಆವರಣದಲ್ಲೇ ₹20 ಸಾವಿರ ಸ್ವೀಕರಿಸುತ್ತಿದ್ದ ಪರಶುರಾಮ್ ಸಾಕ್ಷಿ ಸಮೇತ ಸಿಕ್ಕಿಬಿದ್ದಿದ್ದ. ಇದೇ ವೇಳೆ ಮತ್ತೊಬ್ಬ ಆರೋಪಿ ವೀರೇಶ ಸ್ಥಳದಿಂದ ಪರಾರಿಯಾಗಿದ್ದ ಎಂದು ತಿಳಿದುಬಂದಿದೆ.
ಪ್ರಕರಣದ ಗಂಭೀರತೆ ಪರಿಗಣಿಸಿರುವ ನಗರ ಪೊಲೀಸ್ ಆಯುಕ್ತ ಡಾ.ಶರಣಪ್ಪ ಎಸ್.ಡಿ ಅವರು, ಇಬ್ಬರು ಸಿಬ್ಬಂದಿಯನ್ನು ಇಲಾಖಾ ವಿಚಾರಣೆಗೆ ಒಳಪಡಿಸಿ ಅಮಾನತು ಆದೇಶ ಹೊರಡಿಸಿದ್ದಾರೆ. ಲೋಕಾಯುಕ್ತ ತನಿಖೆಯ ಮುಂದುವರಿದ ಹಂತದಲ್ಲಿ ಪ್ರಕರಣಕ್ಕೆ ಸಂಬಂಧಿಸಿದಂತೆ ಮತ್ತಷ್ಟು ಮಾಹಿತಿ ಹೊರಬರುವ ಸಾಧ್ಯತೆ ಇದೆ.
ಠಾಣೆ ಆವರಣದಲ್ಲೇ ಲಂಚ ಸ್ವೀಕಾರ
ಸಾಮಾನ್ಯವಾಗಿ ಲಂಚ ಸ್ವೀಕಾರ ಪ್ರಕರಣಗಳಲ್ಲಿ ಅಧಿಕಾರಿಗಳು ಹಾಗೂ ಸಿಬ್ಬಂದಿ ಸಾರ್ವಜನಿಕ ಸ್ಥಳಗಳಲ್ಲಿ ಹಣ ಪಡೆಯುವಾಗ ಸಿಕ್ಕಿಬೀಳುವ ಘಟನೆಗಳು ನಡೆಯುತ್ತವೆ. ಆದರೆ ಬ್ರಹ್ಮಪುರ ಪೊಲೀಸ್ ಠಾಣೆಯ ಆವರಣದಲ್ಲೇ ಹಣ ಸ್ವೀಕರಿಸುವ ವೇಳೆ ಸಿಬ್ಬಂದಿ ಲೋಕಾಯುಕ್ತ ಬಲೆಗೆ ಬಿದ್ದಿರುವುದು ಪ್ರಕರಣದ ಗಂಭೀರತೆಯನ್ನು ಹೆಚ್ಚಿಸಿದೆ.
ಗೃಹ ಸಚಿವ ಪ್ರಿಯಾಂಕ್ ಖರ್ಗೆ ಅವರ ತವರು ಜಿಲ್ಲೆಯ ಪೊಲೀಸ್ ಠಾಣೆಯಲ್ಲೇ ಈ ಘಟನೆ ನಡೆದಿರುವುದು ಸಾರ್ವಜನಿಕ ವಲಯದಲ್ಲೂ ತೀವ್ರ ಚರ್ಚೆಗೆ ಕಾರಣವಾಗಿತ್ತು.
ಲೋಕಾಯುಕ್ತ ಕಾರ್ಯಾಚರಣೆಯ ಬಳಿಕ ಇಲಾಖಾ ಕ್ರಮ
ಲೋಕಾಯುಕ್ತ ಕಾರ್ಯಾಚರಣೆಯಲ್ಲಿ ಪೊಲೀಸ್ ಪೇದೆ ಸಿಕ್ಕಿಬಿದ್ದ ಬೆನ್ನಲ್ಲೇ ಪೊಲೀಸ್ ಇಲಾಖೆ ಆಂತರಿಕವಾಗಿ ಕ್ರಮಕ್ಕೆ ಮುಂದಾಗಿದೆ. ಆರೋಪ ಎದುರಿಸುತ್ತಿರುವ ಇಬ್ಬರು ಸಿಬ್ಬಂದಿಯನ್ನು ಅಮಾನತುಗೊಳಿಸಿರುವುದರಿಂದ ಪ್ರಕರಣಕ್ಕೆ ಮತ್ತಷ್ಟು ಮಹತ್ವ ಬಂದಿದೆ.