ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

"ನನ್ನ ತಂದೆಯನ್ನು ಎಳೆದು ಹೊಡೆದರು"; ಜಂತರ್ ಮಂತರ್ ಪ್ರತಿಭಟನೆಯಲ್ಲಿ ಪೊಲೀಸರ ಮೇಲಿನ ಹಲ್ಲೆ ಬಗ್ಗೆ ಕುಟುಂಬ ಹೇಳಿದ್ದೇನು?

Jantar Mantar Protest: ದೆಹಲಿ ಜಂತರ್ ಮಂತರ್‌ನಲ್ಲಿ ನಡೆದ ಪರೀಕ್ಷೆ ಪ್ರಶ್ನೆಪತ್ರಿಕೆ ಸೋರಿಕೆ ವಿರೋಧಿ ಪ್ರತಿಭಟನೆಯ ವೇಳೆ ಕರ್ತವ್ಯದಲ್ಲಿದ್ದ ಹಲವು ಪೊಲೀಸ್ ಸಿಬ್ಬಂದಿ ಗಾಯಗೊಂಡಿದ್ದಾರೆ. ಈ ಘಟನೆ ಬಳಿಕ ಅವರ ಕುಟುಂಬದ ಸದಸ್ಯರು ತಮ್ಮ ನೋವು ಹಂಚಿಕೊಂಡಿದ್ದು, ಪೊಲೀಸರ ಮೇಲಿನ ಹಲ್ಲೆ ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ನಡೆಯುತ್ತಿರುವ ಟೀಕೆಗಳ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕರ್ತವ್ಯದಲ್ಲಿದ್ದ ಪೊಲೀಸರ ಮೇಲೆ ದಾಳಿ; ಕುಟುಂಬಗಳ ಆಕ್ರೋಶ

ಕರ್ತವ್ಯದಲ್ಲಿದ್ದ ಪೊಲೀಸರ ಮೇಲೆ ದಾಳಿ -

Profile
Sushmitha Jain Jul 31, 2026 3:28 PM

ನವದೆಹಲಿ: ದೆಹಲಿ ಜಂತರ್ ಮಂತರ್ (Jantar Mantar Protest) ನಲ್ಲಿ ನಡೆದ ಪರೀಕ್ಷೆ ಪ್ರಶ್ನೆಪತ್ರಿಕೆ ಸೋರಿಕೆ (Exam Paper Leak) ವಿರೋಧಿ ಪ್ರತಿಭಟನೆ ವೇಳೆ ಕರ್ತವ್ಯ ನಿರ್ವಹಿಸುತ್ತಿದ್ದ ಪೊಲೀಸ್ ಸಿಬ್ಬಂದಿ ಮೇಲೆ ನಡೆದ ಹಲ್ಲೆ ಬಗ್ಗೆ ಅವರ ಕುಟುಂಬದ ಸದಸ್ಯರುತೀವ್ರ ಆಕ್ರೋಶ ಮತ್ತು ನೋವು ವ್ಯಕ್ತಪಡಿಸಿದ್ದಾರೆ. "ಪೊಲೀಸ್ ಸಮವಸ್ತ್ರದ ಹಿಂದೆ ಒಬ್ಬ ಅಧಿಕಾರಿಯಷ್ಟೇ ಅಲ್ಲ, ಅವರ ತಾಯಿ, ತಂದೆ, ಪತ್ನಿ, ಮಕ್ಕಳು ಹಾಗೂ ಸುರಕ್ಷಿತವಾಗಿ ಮನೆಗೆ ಮರಳಲಿ ಎಂದು ಕಾಯುವ ಒಂದು ಕುಟುಂಬವೂ ಇದೆ," ಎಂದು ಪೊಲೀಸ್ ಸಿಬ್ಬಂದಿಯೊಬ್ಬರ ಕುಟುಂಬದ ಸದಸ್ಯೆ ಹೇಳಿದರು.

"ನನ್ನ ತಂದೆಯನ್ನು ಗುಂಪು ಎಳೆದು ಹಲ್ಲೆ ಮಾಡಿತು"

ದೆಹಲಿ ವಿಶ್ವವಿದ್ಯಾಲಯದ ವಿದ್ಯಾರ್ಥಿ ಕುಂಜಲ್ ಮಾತನಾಡಿ, ತಮ್ಮ ತಂದೆ ದೆಹಲಿ ಪೊಲೀಸ್ ಉಪನಿರೀಕ್ಷಕರಾಗಿದ್ದು, ಭಾರತೀಯ ನೌಕಾಪಡೆಯಲ್ಲಿ ಮೆರೈನ್ ಕಮಾಂಡೋ ಆಗಿಯೂ ಸೇವೆ ಸಲ್ಲಿಸಿದ್ದರು ಎಂದು ತಿಳಿಸಿದರು.

"ನನ್ನ ತಂದೆ ಪ್ರತಿಭಟನಾ ಸ್ಥಳದಲ್ಲಿ ಬ್ಯಾರಿಕೇಡ್‌ಗಳ ಬಳಿ ಕರ್ತವ್ಯದಲ್ಲಿದ್ದರು. ಜುಲೈ 25ರಂದು ಗುಂಪೊಂದು ಅವರನ್ನು ಎಳೆದುಕೊಂಡು ಹೋಗಿ ಹಲ್ಲೆ ನಡೆಸಿತು. ಅವರು ನಾಲ್ಕು ಗಂಟೆಗಳ ಕಾಲ ಆಸ್ಪತ್ರೆಯಲ್ಲಿ ಪ್ರಜ್ಞಾಹೀನರಾಗಿದ್ದರು. ರಾತ್ರಿ ಮನೆಗೆ ಬಂದಾಗ ಅವರ ಸಮವಸ್ತ್ರ ರಕ್ತದಿಂದ ಕೆಂಪಾಗಿತ್ತು," ಎಂದು ಅವರು ಹೇಳಿದರು.

"ತಲೆಗೆ ನಾಲ್ಕು ಹೊಲಿಗೆ ಹಾಕಲಾಗಿತ್ತು. ಆದರೂ ಅವರು 'ಇದು ಕರ್ತವ್ಯದ ಭಾಗ, ಸಣ್ಣ ಗಾಯ' ಎಂದು ನಮಗೆ ಧೈರ್ಯ ಹೇಳಿದರು. ಆದರೆ ಸಾಮಾಜಿಕ ಜಾಲತಾಣಗಳಲ್ಲಿ ಅವರನ್ನು ಅಪರಾಧಿಯಂತೆ ಬಿಂಬಿಸಿದ್ದು ನಮಗೆ ಅತ್ಯಂತ ನೋವುಂಟು ಮಾಡಿತು," ಎಂದು ಕುಂಜಲ್ ತಿಳಿಸಿದರು.

"ಗಲಭೆಕೋರರು ವಿದ್ಯಾರ್ಥಿಗಳೊಂದಿಗೆ ಬೆರೆತಿದ್ದರು"

ಪೊಲೀಸ್ ಸಿಬ್ಬಂದಿಯೊಬ್ಬರ ಪತ್ನಿ ಸೀಮಾ ಮಾತನಾಡಿ, ತಮ್ಮ ಪತಿ 33 ವರ್ಷಗಳಿಂದ ಪೊಲೀಸ್ ಇಲಾಖೆಯಲ್ಲಿ ಸೇವೆ ಸಲ್ಲಿಸುತ್ತಿದ್ದು, ಪ್ರತಿಭಟನೆಯ ದಿನ ಕರ್ತವ್ಯದಲ್ಲಿದ್ದರು ಎಂದು ಹೇಳಿದರು.

"ಆ ದಿನ ಬೆಳಿಗ್ಗೆ ಅವರು ಪರಿಸ್ಥಿತಿ ಗಂಭೀರವಾಗಿದೆ ಎಂದು ಕರೆ ಮಾಡಿ ತಿಳಿಸಿದ್ದರು. ಸಂಜೆ ಕರೆ ಮಾಡಿದಾಗ ಅವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಪ್ರತಿಭಟನೆಯಲ್ಲಿ ಕೆಲ ಸಮಾಜಘಾತುಕ ಅಂಶಗಳು ಸೇರಿಕೊಂಡು ಕಲ್ಲು, ಹೂವಿನ ಕುಂಡ, ಚಪ್ಪಲಿ ಹಾಗೂ ಇತರ ವಸ್ತುಗಳಿಂದ ಪೊಲೀಸರ ಮೇಲೆ ಹಲ್ಲೆ ನಡೆಸಿದರು," ಎಂದು ಹೇಳಿದರು. ಅವರು ಮತ್ತಷ್ಟು ಮಾತನಾಡಿ, "ನನ್ನ ಪತಿಯ ಹೆಲ್ಮೆಟ್ ಸಂಪೂರ್ಣ ಒಡೆದು ಹೋಗಿತ್ತು. ಅದು ಇರದಿದ್ದರೆ ಅವರ ಜೀವವೇ ಹೋಗುತ್ತಿತ್ತು. ಆ ವಿಚಾರ ನೆನೆಸಿಕೊಂಡರೂ ಭಯವಾಗುತ್ತದೆ," ಎಂದರು.

ವಿದ್ಯಾರ್ಥಿಗಳ ವಿರುದ್ಧ ಯಾವುದೇ ಕಾನೂನು ಕ್ರಮವಿಲ್ಲ, ಅಪರಾಧಿಗಳನ್ನು ಬಿಡಲ್ಲ; ಪ್ರತಿಭಟನೆ ಕುರಿತು ದೆಹಲಿ ಸರ್ಕಾರ ಹೇಳಿಕೆ

"ಒಂದು ಮುಖ ಮಾತ್ರ ತೋರಿಸಲಾಗುತ್ತಿದೆ"

ಪ್ರತಿಭಟನೆಯಲ್ಲಿ ಪೊಲೀಸರು ವಿದ್ಯಾರ್ಥಿಗಳ ಮೇಲೆ ದೌರ್ಜನ್ಯ ಎಸಗಿದ್ದಾರೆ ಎಂಬ ಒಂದು ಬದಿಯ ಚಿತ್ರಣ ಮಾತ್ರ ಸಮಾಜದ ಮುಂದೆ ಬರುತ್ತಿದೆ ಎಂದು ಕುಟುಂಬದವರು ಆರೋಪಿಸಿದರು. "ನಿಜವಾಗಿ ಪೊಲೀಸರು ಕೂಡ ಗಂಭೀರವಾಗಿ ಗಾಯಗೊಂಡಿದ್ದಾರೆ. ಅವರ ನೋವು, ತ್ಯಾಗ ಮತ್ತು ಕುಟುಂಬಗಳ ಸಂಕಷ್ಟದ ಬಗ್ಗೆ ಯಾರೂ ಮಾತನಾಡುತ್ತಿಲ್ಲ. ಜನಪ್ರತಿನಿಧಿಗಳು ಈ ವಿಷಯವನ್ನು ಸಂಸತ್ತಿನಲ್ಲಿ ಪ್ರಸ್ತಾಪಿಸಬೇಕು," ಎಂದು ಅವರು ಮನವಿ ಮಾಡಿದರು.

ಎಸಿಪಿ ಪುತ್ರನ ಹೇಳಿಕೆ

ಸಹಾಯಕ ಪೊಲೀಸ್ ಆಯುಕ್ತ (ACP) ಅವರ ಪುತ್ರ ಲಕ್ಷ್ಯ ಸಿಂಗ್ ಬಿಷ್ಟ್ ಮಾತನಾಡಿ, ತಮ್ಮ ತಂದೆಯ ತಲೆಗೆ ನಾಲ್ಕು ಹೊಲಿಗೆ ಹಾಕಲಾಗಿದ್ದು, ಆ ಚಿತ್ರವನ್ನು ನೋಡಿದಾಗ ತೀವ್ರ ಆತಂಕಕ್ಕೊಳಗಾದೆ ಎಂದು ಹೇಳಿದರು. "ನನ್ನ ತಂದೆಯ ಪ್ರಕಾರ, ಅದು ಕೇವಲ ವಿದ್ಯಾರ್ಥಿಗಳ ಪ್ರತಿಭಟನೆಯಾಗಿರಲಿಲ್ಲ. ಗಲಭೆಕೋರರು ಮತ್ತು ದುಷ್ಕರ್ಮಿಗಳು ಪರಿಸ್ಥಿತಿಯನ್ನು ದುರುಪಯೋಗಪಡಿಸಿಕೊಂಡು ಹಿಂಸಾಚಾರ ನಡೆಸಿದರು," ಎಂದು ಹೇಳಿದರು.

ಪ್ರತಿಭಟನೆ ಹಿಂಪಡೆಯಲಾಯಿತು

ಪರೀಕ್ಷೆ ಪ್ರಶ್ನೆಪತ್ರಿಕೆ ಸೋರಿಕೆ ವಿರೋಧಿಸಿ ಕಾಕ್‌ರೋಚ್ ಜನತಾ ಪಾರ್ಟಿ (CJP) ನೇತೃತ್ವದಲ್ಲಿ ನಡೆದ ಪ್ರತಿಭಟನೆ, ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆ ನೀಡಿದ ಬಳಿಕ ಹಿಂಪಡೆಯಲಾಯಿತು. ಬೋಸ್ಟನ್ ವಿಶ್ವವಿದ್ಯಾಲಯದ ಪದವೀಧರ ಅಭಿಜೀತ್ ದಿಪ್ಕೆ ಭಾರತಕ್ಕೆ ಮರಳಿ, ಪರೀಕ್ಷಾ ಪ್ರಶ್ನೆಪತ್ರಿಕೆ ಸೋರಿಕೆ ವಿರುದ್ಧ ಈ ಪ್ರತಿಭಟನೆಗೆ ನೇತೃತ್ವ ನೀಡಿದ್ದರು.