ತುಮಕೂರಿನಲ್ಲಿ ಬಲೆಯಲ್ಲಿ ಸಿಕ್ಕಿಬಿದ್ದ ಚಿರತೆ ಸುಟ್ಟು ಹಾಕಿದ ಮೂವರ ಬಂಧನ
leopard burning case: ಅಕ್ರಮವಾಗಿ ನಿರ್ಮಿಸಿದ್ದ ತಂತಿ ಬಲೆಯಲ್ಲಿ ಸಿಕ್ಕಿ ಹಾಕಿಕೊಂಡ ಚಿರತೆಯನ್ನು ಸುಟ್ಟು ಹಾಕಿದ ಮೂವರನ್ನು ಬಂಧಿಸಿರುವ ಘಟನೆ ತುಮಕೂರಿನಲ್ಲಿ ನಡೆದಿದೆ. ರಾಗಿ ಬೆಳೆಯನ್ನು ಉಳಿಸುವ ಸಲುವಾಗಿ ಗೌರಗೊಂಡನಹಳ್ಳಿ ಗ್ರಾಮದ ಕೆಲವು ರೈತರು ಗದ್ದೆಯ ಸುತ್ತಲೂ ಅಕ್ರಮವಾಗಿ ತಂತಿ ಬಲೆಯನ್ನು ಹಾಕಿದ್ದರು. ಇದರಲ್ಲಿ ಚಿರತೆಯೊಂದು ಸಿಕ್ಕಿ ಹಾಕಿಕೊಂಡಿತ್ತು.
ಸಂಗ್ರಹ ಚಿತ್ರ -
ತುಮಕೂರು: ಕಾಡು ಪ್ರಾಣಿಗಳ ಉಪಟಳದಿಂದ ಕಂಗೆಟ್ಟಿದ್ದ ರೈತರು ಅಕ್ರಮವಾಗಿ ನಿರ್ಮಿಸಿದ್ದ ತಂತಿ ಬಲೆಯಲ್ಲಿ ಚಿರತೆಯೊಂದು (leopard burning case) ಸಿಕ್ಕಿ ಹಾಕಿಕೊಂಡಿದ್ದು, ಇದನ್ನು ಸುಟ್ಟು ಹಾಕಿದ ಮೂವರನ್ನು ಬಂಧಿಸಿರುವ ಘಟನೆ ತುಮಕೂರಿನ (tumakur crime) ಗೌರಗೊಂಡನಹಳ್ಳಿ ಗ್ರಾಮದಲ್ಲಿ ನಡೆದಿದೆ. ನಾರಾಯಣಪ್ಪ, ಜಿಡಿ ಶಿವಕುಮಾರ್ ಮತ್ತು ಚಂದ್ರೇಶಕರ್ ಬಂಧಿತರು. ಪ್ರಕರಣಕ್ಕೆ ಸಂಬಂಧಿಸಿದ ವಿಡಿಯೊಗಳು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ (Viral news) ಆಗಿದ್ದು, ಭಾರಿ ಆಕ್ರೋಶಕ್ಕೆ ಕಾರಣವಾಗಿತ್ತು. ಇನ್ನು ಹೆಚ್ಚಿನ ಬಂಧನಗಳಾಗುವ ಸಾಧ್ಯತೆ ಇದೆ ಎಂದು ಅರಣ್ಯ ಅಧಿಕಾರಿಗಳು ಶನಿವಾರ ತಿಳಿಸಿದ್ದಾರೆ.
ತುಮಕೂರು ಜಿಲ್ಲೆಯಲ್ಲಿ ಚಿರತೆಯನ್ನು ಸುಟ್ಟುಹಾಕಿದ ಪ್ರಕರಣಕ್ಕೆ ಸಂಬಂಧಿಸಿ ಗೌರಗೊಂಡನಹಳ್ಳಿ ಗ್ರಾಮದ ರೈತರಾಗಿರುವ ನಾರಾಯಣಪ್ಪ, ಜಿಡಿ ಶಿವಕುಮಾರ್ ಮತ್ತು ಚಂದ್ರೇಶಕರ್ ಎಂಬವರನ್ನು ಬಂಧಿಸಲಾಗಿದೆ. ಅವರು ತಮ್ಮ ರಾಗಿ ಹೊಲದ ಸುತ್ತಲೂ ತಂತಿ ಬಲೆ ಬೋನು ಹಾಕಿದ್ದರು. ಅದರಲ್ಲಿ ಚಿರತೆ ಸಿಕ್ಕಿಕೊಂಡಿದ್ದು, ಅದನ್ನು ಶುಕ್ರವಾರ ಸುಟ್ಟು ಹಾಕಿದ್ದಾರೆ. ಕೆಲವರು ಇದರ ವಿಡಿಯೊ ಮಾಡಿ ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಂಡಿದ್ದರು.
ನಾರಾಯಣಪ್ಪ ಅವರು ತಮ್ಮ ಕೃಷಿ ಭೂಮಿಯಲ್ಲಿ ರಾಗಿಯನ್ನು ಬೆಳೆಸಿದ್ದರು. ಆದರೆ ಕಾಡು ಹಂದಿ, ನವಿಲು ಮತ್ತು ಚಿರತೆಗಳ ದಾಳಿಯಿಂದ ಸುಮಾರು ಅರ್ಧದಷ್ಟು ಬೆಳೆ ನಾಶವಾಗಿದೆ. ಇದರಿಂದ ಹತಾಶೆಗೊಂಡಿದ್ದ ಅವರು ಉಳಿದ ಬೆಳೆಯನ್ನು ರಕ್ಷಿಸಲು ಅಕ್ರಮವಾಗಿ ಹೊಲದ ಸುತ್ತಲೂ ಹರಿತವಾದ ತಂತಿಯ ಬಲೆಯನ್ನು ಹಾಕಿದ್ದರು.
ಬೇಟೆಯನ್ನು ಹುಡುಕುತ್ತ ಬಂದಿದ್ದ ಚಿರತೆಯೊಂದು ಎರಡು ದಿನಗಳ ಹಿಂದೆ ಇದರಲ್ಲಿ ಸಿಕ್ಕಿಹಾಕಿಕೊಂಡಿತ್ತು. ಇದನ್ನು ಶುಕ್ರವಾರ ಬೆಳಗ್ಗೆ ನಾರಾಯಣಪ್ಪ, ಜಿಡಿ ಶಿವಕುಮಾರ್, ಚಂದ್ರಶೇಖರ್ ಎಂಬವರು ಸೇರಿ ಗ್ರಾಮದ ಕೆಲವು ಯುವಕರೊಂದಿಗೆ ಸುಟ್ಟು ಹಾಕಿದ್ದಾರೆ. ಇದರ ದೃಶ್ಯಗಳು ಸ್ಥಳೀಯ ವಾಟ್ಸಾಪ್ ಗುಂಪುಗಳಲ್ಲಿ ಹಂಚಿಕೆಯಾಗಿತ್ತು.
ಈ ಕುರಿತು ಮಾಹಿತಿ ನೀಡಿದ ತುಮಕೂರು ಅರಣ್ಯ ಸಹಾಯಕ ಸಂರಕ್ಷಣಾಧಿಕಾರಿ (ಎಸಿಎಫ್) ವಿ. ಪವಿತ್ರಾ, ಮಾಹಿತಿ ತಿಳಿದ ತಕ್ಷಣ ಅರಣ್ಯ ಅಧಿಕಾರಿಗಳು ದಾಳಿ ನಡೆಸಿ ಸುಟ್ಟ ಚಿರತೆಯ ಅವಶೇಷಗಳನ್ನು ವಶಕ್ಕೆ ಪಡೆದು ಮೂವರನ್ನು ಬಂಧಿಸಿದ್ದಾರೆ. ಆರೋಪಿಗಳನ್ನು ವೈದ್ಯಕೀಯ ಪರೀಕ್ಷೆಗಾಗಿ ಜಿಲ್ಲಾ ಆಸ್ಪತ್ರೆಗೆ ದಾಖಲಿಸಿ ಬಳಿಕ ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗಿದೆ. ಸದ್ಯ ಅವರನ್ನು ನ್ಯಾಯಾಂಗ ಬಂಧನದಲ್ಲಿ ಇರಿಸಲಾಗಿದೆ ಎಂದರು.
ಬಂಧಿತರು ಚಿರತೆಯನ್ನು ಸುಟ್ಟಿದ್ದಾಗಿ ಒಪ್ಪಿಕೊಂಡಿದ್ದಾರೆ. ವಶಪಡಿಸಿಕೊಂಡ ಅವಶೇಷಗಳು ಕೂಡ ಚಿರತೆದ್ದು ಎಂಬುದು ದೃಢಪಟ್ಟಿದೆ. ಹೆಚ್ಚಿನ ಪರೀಕ್ಷೆಗಾಗಿ ಅವಶೇಷಗಳನ್ನು ಹೈದರಾಬಾದ್‌ನ ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ. ಬೆಂಗಳೂರಿನ ತಜ್ಞರ ತಂಡವು ಹೆಚ್ಚಿನ ಪರೀಕ್ಷೆಗಳನ್ನು ನಡೆಸಲಿದೆ. ಇದರ ವರದಿ ಬಂದ ಬಳಿಕ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿತರ ಸಂಖ್ಯೆ ಹೆಚ್ಚಾಗಬಹುದು ಎಂದು ಅವರು ಹೇಳಿದರು.
ಪ್ರಕರಣಕ್ಕೆ ಸಂಬಂಧಿಸಿ ಹಿರಿಯ ಅರಣ್ಯ ಅಧಿಕಾರಿಗಳು ಶುಕ್ರವಾರ ತಡರಾತ್ರಿಯವರೆಗೆ ಸಭೆಗಳನ್ನು ನಡೆಸಿ ಸಾಕ್ಷ್ಯಗಳನ್ನು ಸಂಗ್ರಹಿಸಿದ್ದಾರೆ. ಬಂಧಿತರ ವಿರುದ್ಧ ವನ್ಯಜೀವಿ ಸಂರಕ್ಷಣಾ ಕಾಯ್ದೆ 1972 ರ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಇದರ ಅಡಿಯಲ್ಲಿ ಚಿರತೆ ಸೇರಿದಂತೆ ಸಂರಕ್ಷಿತ ವನ್ಯಜೀವಿಗಳನ್ನು ಬೇಟೆಯಾಡುವುದು, ಬಲೆಗೆ ಬೀಳಿಸುವುದು ಅಥವಾ ಅವುಗಳಿಗೆ ಹಾನಿ ಮಾಡುವುದು ಗಂಭೀರ ಜಾಮೀನು ರಹಿತ ಅಪರಾಧವಾಗಿದೆ. ಇದಕ್ಕೆ ಏಳು ವರ್ಷಗಳವರೆಗೆ ಜೈಲು ಶಿಕ್ಷೆಯಾಗಲಿದೆ ಎಂದು ಅವರು ತಿಳಿಸಿದರು.
ಬೆಂಗಳೂರಿನಲ್ಲಿ ಕೇವಲ 200 ರೂ.ಗಾಗಿ ಮಂಗಳಮುಖಿಯ ಭೀಕರ ಕೊಲೆ; ಆರೋಪಿ ಬಂಧನ
ಘಟನೆಯ ಬಳಿಕ ಅರಣ್ಯ ಅಧಿಕಾರಿಗಳು ಸ್ಥಳೀಯ ರೈತರಿಗೆ ಅಕ್ರಮ ವಿದ್ಯುತ್ ಅಥವಾ ತಂತಿ ಬಲೆಗಳನ್ನು ಅಳವಡಿಸದಂತೆ ಸೂಚಿಸಿದ್ದಾರೆ. ಕಾಡು ಪ್ರಾಣಿಗಳಿಂದ ತೊಂದರೆಯಾದಾಗ ತಕ್ಷಣ ಅರಣ್ಯ ಇಲಾಖೆಯ ಸಹಾಯವಾಣಿಗೆ ದೂರು ನೀಡುವಂತೆ ತಿಳಿಸಿದ್ದಾರೆ ಎಂದರು.