Crime News: ತಂಗಿಯನ್ನು ಪ್ರೀತಿಸಿದ ಕಾರಣಕ್ಕೆ ಯುವಕನನ್ನು ತುಂಡು ತುಂಡಾಗಿ ಕತ್ತರಿಸಿ ಎಸೆದ ಅಣ್ಣ!
ತಂಗಿಯನ್ನು ಪ್ರೀತಿಸಿದ್ದ ಎಂಬ ಕಾರಣಕ್ಕೆ ಯುವಕನೋರ್ವನನ್ನು ಬರ್ಬರವಾಗಿ ಕೊಲೆ ಮಾಡಿ ದೇಹವನ್ನು ತುಂಡು ತುಂಡಾಗಿ ಕತ್ತರಿಸಿ ಬೀಸಾಕಿರುವ ಮನಕಲಕುವ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ. ಕೃತ್ಯ ಬೆಳಕಿಗೆ ಬರುತ್ತಿದ್ದಂತೆ ಆರೋಪಿಗಳ ಎಡೆಮುರಿಕಟ್ಟುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.

-

ಕಾನ್ಪುರ: ಸ್ನೇಹಿತನ ತಂಗಿ ಜತೆ ಸಂಬಂಧ ಹೊಂದಿದ ಯುವಕನನ್ನು ಭೀಕರವಾಗಿ ಕೊಲೆ (Murder) ಮಾಡಿರುವ ಘಟನೆ ಉತ್ತರ ಪ್ರದೇಶದಲ್ಲಿ (Uttar Pradesh) ನಡೆದಿದೆ. ಕಾನ್ಪುರದ (Kanpur) ಮಹಾರಾಜ್‌ಪುರದ ಗಂಗಾ ನದಿಯ (Ganga River) ದಡದಲ್ಲಿ ಈ ದುಷ್ಕೃತ್ಯ ನಡೆದಿದ್ದು, ರಿಷಿಕೇಶ್ (22) ಎಂಬ ಯುವಕ ಕೊಲೆಯಾದ ದುರ್ದೈವಿ.
ಹೌದು ಭಾನುವಾರ ಗಂಗಾ ನದಿಯ ತೀರ ಭಾಗದಲ್ಲಿ ರಿಷಿಕೇಶ್ ನ ದೇಹವನ್ನು ಕತ್ತರಿಸಿ ಬೀಸಾಕಿರುವುದು ಬೆಳಕಿಗೆ ಬಂದಿದ್ದು, ಘಟನೆ ಕುರಿತು ಮಾಹಿತಿ ಹೊರ ಬೀಳುತ್ತಿದ್ದಂತೆ ಚಕೇರಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದರು. ಅಲ್ಲದೇ ತನಿಖೆಯನ್ನು ಕೈಗೆತ್ತಿಕೊಂಡು ವಿಚಾರಣೆ ಮುಂದುವರೆಸಿದ್ದರು.ಈ ವೇಳೆ ಇದೊಂದು ಕೊಲೆ ಎಂದು ತಿಳಿದು ಬಂದಿದ್ದು, ಕೃತ್ಯದಲ್ಲಿ ಭಾಗಿಯಾಗಿದ್ದ ನಾಲ್ವರು ಆರೋಪಿಗಳನ್ನು ಬಂಧಿಸಿದ್ದಾರೆ. ಇನ್ನುಳಿದಂತೆ ಪ್ರಕರಣದ ಮುಖ್ಯ ಆರೋಪಿ ಸೇರಿದಂತೆ ಇನ್ನೂ ನಾಲ್ವರು ತಲೆಮರೆಸಿಕೊಂಡಿದ್ದಾರೆ ಎನ್ನಲಾಗಿದೆ.
ಈ ಬಗ್ಗೆ ಪೂರ್ವ ಡಿಸಿಪಿ ಸತ್ಯಜಿತ್ ಗುಪ್ತಾ ಮಾಹಿತಿ ನೀಡಿದ್ದು, ಈ ಕೊಲೆಗೆ ವೈಯಕ್ತಿಕ ದ್ವೇಷವೇ ಕಾರಣ. ರಿಷಿಕೇಶ್, ಮುಖ್ಯ ಆರೋಪಿ ಪವನ್ ನಿಷಾದ್‌ನ ತಂಗಿಯೊಂದಿಗೆ ಸಂಬಂಧ ಹೊಂದಿದ್ದ. ಈ ಹಿನ್ನಲೆ ಪವನ್, ರಿಷಿಕೇಶ್‌ಗೆ ತಂಗಿಯಿಂದ ದೂರವಿರುವಂತೆ ಎಚ್ಚರಿಕೆ ನೀಡಿದ್ದ. ಆದರೆ, ರಿಷಿಕೇಶ್ ಈ ಎಚ್ಚರಿಕೆಯನ್ನು ಕಡೆಗಣಿಸಿದ್ದು, ಕೊಲೆಗೆ ಕಾರಣವಾಯಿತು ಎಂದು ತನಿಖಾಧಿಕಾರಿಗಳು ತಿಳಿಸಿದ್ದಾರೆ.
ಈ ಸುದ್ದಿಯನ್ನೂ ಓದಿ: Viral News: ಅತ್ಯಾಚಾರ ಆರೋಪ; ಬಂಧಿಸಲು ತೆರಳಿದ್ದ ಪೊಲೀಸರಿಗೆ ಗುಂಡು ಹಾರಿಸಿ ಎಸ್ಕೇಪ್ ಆದ ಶಾಸಕ!
ವರದಿಯ ಪ್ರಕಾರ, ಆರೋಪಿಗಳ ಗುಂಪು ಶುಕ್ರವಾರ ರಿಷಿಕೇಶ್‌ನನ್ನು ಕಕೋರಿ ಕಾಡಿಗೆ ಕರೆದೊಯ್ದು, ಕತ್ತು ಕೊಯ್ದು ಕೊಲೆ ಮಾಡಿದ್ದಾರೆ. ನಂತರ ದೇಹವನ್ನು ತುಂಡರಿಸಿ, ಚೀಲಗಳಲ್ಲಿ ತುಂಬಿ, ಇ-ರಿಕ್ಷಾದಲ್ಲಿ ಸಾಗಿಸಿ, ಗಂಗಾ ನದಿಯ ಸೇತುವೆಯಿಂದ ಎಸೆದಿದ್ದಾರೆ. ರಿಷಿಕೇಶ್‌ನ ದೇಹದ ತುಂಡು 22 ಕಿಮೀ ದೂರದಲ್ಲಿ ಕಂಡುಬಂದಿದ್ದು, ಉಳಿದ ಭಾಗಗಳನ್ನೂ ನದಿಯಲ್ಲಿ ಎಸೆದಿರುವ ಸಾಧ್ಯತೆಯಿದೆ ಎಂದು ಪೊಲೀಸರು ಶಂಕಿಸಿದ್ದಾರೆ.
ರಿಷಿಕೇಶ್‌ನ ಸಹೋದರ ರವಿ ಕುಮಾರ್, ಪವನ್ ನಿಷಾದ್, ಆತನ ಸಹೋದರ ಬಾಬಿ ನಿಷಾದ್, ನಾಗ ನಿಷಾದ್ ಉರ್ಫ್ ಪ್ರೇಮ್, ಅರುಣ್ ನಿಷಾದ್, ನಿಖಿಲ್, ಸತ್ಯಂ ಮತ್ತು ಇತರ ಇಬ್ಬರ ವಿರುದ್ಧ ಕೊಲೆ ದೂರು ದಾಖಲಿಸಿದ್ದಾರೆ. ಬಂಧಿತ ಆರೋಪಿಗಳಾದ ಮೊಗ್ಲಿ ಉರ್ಫ್ ಪ್ರಿನ್ಸ್, ನಿಖಿಲ್, ಆಕಾಶ್ ಉರ್ಫ್ ಆಲೂ, ಮತ್ತು ರಿಶು ವರ್ಮಾ ತಮ್ಮ ಅಪರಾಧವನ್ನು ಒಪ್ಪಿಕೊಂಡಿದ್ದಾರೆ. ಅವರು ಕಕೋರಿಯಲ್ಲಿ ಕೊಲೆ ಮಾಡಿ, ದೇಹವನ್ನು ನದಿಗೆ ಎಸೆದ ಕುರಿತು ವಿವರಿಸಿದ್ದಾರೆ. ಆದರೆ, ಪವನ್, ಬಾಬಿ, ಸತ್ಯಂ, ಮತ್ತು ಡ್ಯಾನಿ ತಲೆಮರೆಸಿಕೊಂಡಿದ್ದಾರೆ. ಉಳಿದ ಆರೋಪಿಗಳಿಗಾಗಿ ಪೊಲೀಸರು ಶೋಧ ಕಾರ್ಯಾಚರಣೆ ಆರಂಭಿಸಿದ್ದಾರೆ.