ವಿಷಾನಿಲ, ಬಾಂಬ್ ಪರೀಕ್ಷೆ: ಗುಜರಾತ್‌ನಲ್ಲಿ ಐವರು ಜೈಶ್ ಭಯೋತ್ಪಾದಕರ ಬಂಧನ
ಗುಜರಾತ್‌ನಲ್ಲಿ ಐವರು ಜೈಶ್ ಭಯೋತ್ಪಾದಕರನ್ನು ಬಂಧಿಸಲಾಗಿದೆ. ಇವರು ಜಮ್ಮು ಮತ್ತು ಕಾಶ್ಮೀರದಲ್ಲಿ ವಿಶೇಷ ತರಬೇತಿ ಪಡೆದು ಬಾಂಬ್ ತಯಾರಿಕೆ, ವಿಷಕಾರಿ ಅನಿಲ ಬಳಕೆ ಸೇರಿದಂತೆ ಭಯೋತ್ಪಾದನೆಗೆ ಸಂಬಂಧಿಸಿದ ಕಾರ್ಯವಿಧಾನಗಳನ್ನು ಕಲಿಸುತ್ತಿದ್ದರು ಎಂದು ಆರೋಪಿಸಲಾಗಿದೆ. ಗುಜರಾತ್ ಭಯೋತ್ಪಾದನಾ ನಿಗ್ರಹ ದಳವು ಕಾರ್ಯಾಚರಣೆ ನಡೆಸಿ ಇವರನ್ನು ಬಂಧಿಸಿದೆ.
ಸಂಗ್ರಹ ಚಿತ್ರ -
ಗುಜರಾತ್: ವಿಷಕಾರಿ ಅನಿಲ, ಬಾಂಬ್ ಪರೀಕ್ಷೆ ನಡೆಸುತ್ತಿದ್ದ ಐವರನ್ನು ಗುಜರಾತ್ ಭಯೋತ್ಪಾದನಾ ನಿಗ್ರಹ ದಳ (Gujarat Anti-Terrorism Squad) ಬಂಧಿಸಿದೆ. ಇವರನ್ನು ಜೈಶ್-ಎ- ಮೊಹಮ್ಮದ್ ಭಯೋತ್ಪಾದಕರೆಂದು (Jaish-e-Mohammed terrorists) ಗುರುತಿಸಲಾಗಿದೆ. ಜಮ್ಮು ಮತ್ತು ಕಾಶ್ಮೀರದಲ್ಲಿ (Jammu and kashmir) ವಿಶೇಷ ತರಬೇತಿ ಪಡೆದ ಇವರು ನಿಖರವಾದ ಬಾಂಬ್ ತಯಾರಿಕೆ, ಭೂಗತವಾಗಿ ಅಡಗಿಸಿಡುವ ವಿಷಕಾರಿ ಅನಿಲಗಳು ಸೇರಿದಂತೆ ವಿಭಿನ್ನ ರೀತಿಯ ಒಟ್ಟು 40 ಭಯೋತ್ಪಾದನಾ ತಂತ್ರಗಳನ್ನು ಪರೀಕ್ಷೆ ನಡೆಸುತ್ತಿದ್ದರು ಎಂದು ಆರೋಪಿಸಲಾಗಿದೆ. ಬಂಧಿತರನ್ನು ಮೆಹ್ಸಾನಾ ಜಿಲ್ಲೆಯ ಕಾಡಿ ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗಿದ್ದು, ಹೆಚ್ಚಿನ ವಿಚಾರಣೆಗಾಗಿ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ತಮ್ಮನ್ನು ತಾವು ಜೈಶ್ ಎ ಮೊಹಮ್ಮದ್ ಸಂಘಟನೆಗೆ ಸೇರಿದ ಭಯೋತ್ಪಾದಕರೆಂದು ಅವರು ಹೇಳಿಕೊಂಡಿದ್ದಾರೆ. ಅವರನ್ನು ಬಂಧಿಸಿರುವ ಗುಜರಾತ್ ಭಯೋತ್ಪಾದನಾ ನಿಗ್ರಹ ದಳವು ಅವರ ತರಬೇತಿ ಕ್ರಮಗಳ ಕುರಿತು ಹೆಚ್ಚಿನ ತನಿಖೆಯನ್ನು ಮುಂದುವರಿಸಿದೆ. ಇದಕ್ಕಾಗಿ ಬಂಧಿತರಲ್ಲಿ ಇಬ್ಬರೊಂದಿಗೆ ಎಟಿಸಿ ತಂಡ ಜಮ್ಮು ಮತ್ತು ಕಾಶ್ಮೀರಕ್ಕೆ ಪ್ರಯಾಣ ಬೆಳೆಸಿದೆ. ಅಲ್ಲಿ ಆರೋಪಿಗಳು ಎಕೆ -47 ಅಸಾಲ್ಟ್ ರೈಫಲ್‌ಗಳನ್ನು ನಿರ್ವಹಿಸಲು ವಿಶೇಷ ತರಬೇತಿಯನ್ನು ಪಡೆದಿದ್ದಾರೆ ಎನ್ನಲಾಗಿದೆ.
ಶರದ್ ಪವಾರ್–ಅಜಿತ್ ಪವಾರ್ ಮತ್ತೆ ಒಂದಾಗುತ್ತಾರಾ? ಮಹಾರಾಷ್ಟ್ರ ರಾಜಕೀಯದಲ್ಲಿ ಹೊಸ ಸಾಧ್ಯತೆಯದ್ದೇ ಚರ್ಚೆ
ಆರೋಪಿಗಳಿಗೆ ಜೀವರಾಸಾಯನಿಕ ತಂತ್ರಗಳನ್ನು ಬಳಸುವ ಕುರಿತು ಕೂಡ ತರಬೇತಿ ನೀಡಲಾಗಿದೆ. ಮುಖ್ಯವಾಗಿ ನಾಗರಿಕರ ವಿರುದ್ಧ ಶಸ್ತ್ರಾಸ್ತ್ರಗಳನ್ನು ಬಳಸಲು ಮಾರಕ ಕಾರ್ಬನ್ ಮಾನಾಕ್ಸೈಡ್ ಅನಿಲವನ್ನು ಹೇಗೆ ತಯಾರಿಸುವುದು ಎಂಬುದನ್ನು ಕಲಿಸಲಾಗಿದೆ ಎನ್ನುವುದು ತನಿಖೆ ವೇಳೆ ತಿಳಿದು ಬಂದಿದೆ.
ಆರೋಪಿಗಳು ಮಾಡ್ಯೂಲ್ ಅಬ್ದುಲ್ಲಾ ಎಂದು ಗುರುತಿಸಿರುವ ವಿದೇಶಿ ಹ್ಯಾಂಡ್ಲರ್‌ನ ನೇರ ಮಾರ್ಗದರ್ಶನದಲ್ಲಿ ಕಾರ್ಯನಿರ್ವಹಿಸುತ್ತಿದ್ದರು. ಸ್ಥಳೀಯವಾಗಿ ತಮ್ಮ ಜಾಲವನ್ನು ರಚಿಸಲು ಕಾಶ್ಮೀರಿ ಯುವಕರೊಂದಿಗೆ ಸಂಪರ್ಕ ಸಾಧಿಸಲು ಆರೋಪಿಗಳು ವಡೋದರಾಕ್ಕೆ ಪ್ರಯಾಣಿಸಿದ್ದರು ಎನ್ನಲಾಗಿದೆ.
ಆರೋಪಿಗಳು ಈಗಾಗಲೇ ಪ್ರಾಯೋಗಿಕ ಪ್ರಯೋಗಗಳನ್ನು ನಡೆಸಿದ್ದಾರೆ ಎನ್ನುವುದು ಕೂಡ ತನಿಖೆ ವೇಳೆ ತಿಳಿದು ಬಂದಿದೆ. ಎಂಟು ಪ್ರತ್ಯೇಕ ಸ್ಥಳಗಳಲ್ಲಿ ಬಾಂಬ್ ಸ್ಫೋಟ ಪರೀಕ್ಷೆಗಳನ್ನು ನಡೆಸಲಾಗಿದೆ. ಪರೀಕ್ಷಾ ಸ್ಫೋಟಗಳ ಬಳಿಕ ಸ್ಪೋಟದ ಸಾಮಗ್ರಿಗಳನ್ನು ಸಾರ್ವಜನಿಕ ಕಸದ ಡಂಪ್‌ಸ್ಟರ್‌ಗಳಿಗೆ ಎಸೆಯಲಾಗಿದೆ. ಇದನ್ನು ಫೋರೆನ್ಸಿಕ್ ತಂಡಗಳು ತನಿಖೆಗಾಗಿ ವಶಕ್ಕೆ ಪಡೆಯಲಾಗಿದೆ.
ಸ್ಥಳೀಯ ಯುವಕರನ್ನು ಭಯೋತ್ಪಾದನಾ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಲು ತಂಡದ ಮುಖ್ಯ ಆರೋಪಿ ಅಮೀನ್ ಶೇರಾ ಖಾದಿಯಾಸನ್‌ನ ಮದರಸಾದಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಆತನ ಬಳಿಯಿಂದ 43 ಜಿಹಾದಿ ಪುಸ್ತಕಗಳು, ಡಿಜಿಟಲ್ ಕೈಪಿಡಿಗಳನ್ನು ವಶಕ್ಕೆ ಪಡೆಯಲಾಗಿದೆ.
ನೋಡ ನೋಡುತ್ತಿದ್ದಂತೆ ನದಿ ತಟದಲ್ಲಿದ್ದ 12 ವರ್ಷದ ಬಾಲಕನನ್ನೇ ಎಳೆದೊಯ್ದ ಮೊಸಳೆ; ಬೆಚ್ಚಿಬಿದ್ದ ಗ್ರಾಮಸ್ಥರು
ವಿದೇಶಿ ಹ್ಯಾಂಡ್ಲರ್‌ನಿಂದ ಸುಮಾರು 3 ಲಕ್ಷ ರೂ. ಗಳನ್ನು ಆರೋಪಿಗಳು ಪಡೆದಿದ್ದಾರೆ. ಇದರಲ್ಲಿ ಅವರು ಕಾರು, ಬೈಕ್ ಅನ್ನು ಖರೀದಿ ಮಾಡಿದ್ದರು. ಬಂಧನದ ವೇಳೆ ಅವರು ಮೊದಲ ಬಾಂಬ್ ಸ್ಪೋಟಕ್ಕೆ ಅಹಮದಾಬಾದ್‌ನಲ್ಲಿ ಹೊಟೇಲ್ ಅನ್ನು ಹುಡುಕಾಟ ನಡೆಸುತ್ತಿದ್ದರು ಎನ್ನುವುದು ತನಿಖೆ ವೇಳೆ ತಿಳಿದು ಬಂದಿದೆ.