ಸಂಸದ ಲಿಂಗಮನೇನಿ ರಮೇಶ್ ಪುತ್ರ ಚಲಾಯಿಸುತ್ತಿದ್ದ ಕಾರು ಡಿಕ್ಕಿ: ಮಹಿಳೆ ಸಾವು
ವೇಗವಾಗಿ ಬಂದ ಕಾರೊಂದು ಡಿಕ್ಕಿಯಾಗಿ ರಸ್ತೆ ದಾಟುತ್ತಿದ್ದ ಮಹಿಳೆ ಸಾವನ್ನಪ್ಪಿರುವ ಘಟನೆ ಹೈದರಾಬಾದ್ ನಲ್ಲಿ ನಡೆದಿದೆ. ಕಾರನ್ನು ಸಂಸದ ಲಿಂಗಮನೇನಿ ರಮೇಶ್ ಅವರ ಪುತ್ರ ಲಿಂಗಮನೇನಿ ಸಂಜುಶ್ (21) ಚಲಾಯಿಸುತ್ತಿದ್ದರು ಎಂದು ಆರೋಪಿಸಲಾಗಿದೆ. ಈ ಕುರಿತು ಪ್ರಕರಣ ದಾಖಲಿಸಲಾಗಿದ್ದು, ಆರೋಪಿಯನ್ನು ಈವರೆಗೆ ಬಂಧಿಸಲಾಗಿಲ್ಲ ಎಂದು ಮಾಧಾಪುರದ ಸಹಾಯಕ ಪೊಲೀಸ್ ಆಯುಕ್ತ ಸಿ.ಎಚ್. ಶ್ರೀಧರ್ ತಿಳಿಸಿದ್ದಾರೆ.
ಸಂಗ್ರಹ ಚಿತ್ರ -
ಹೈದರಾಬಾದ್: ಸಂಸದರ ಪುತ್ರ (MP's son) ಚಲಾಯಿಸುತ್ತಿದ್ದ ಆಸ್ಟನ್ ಮಾರ್ಟಿನ್ ರಾಮ್ಸ್ ಕಾರು ಡಿಕ್ಕಿಯಾಗಿ ಮಹಿಳೆಯೊಬ್ಬರು ಸಾವನ್ನಪ್ಪಿರುವ (car accident) ಘಟನೆ ಹೈದರಾಬಾದ್ (hyderabad)ನಲ್ಲಿ ನಡೆದಿದೆ. ರಾಜ್ಯಸಭಾ ಸದಸ್ಯ ಲಿಂಗಮನೇನಿ ರಮೇಶ್ (MP Lingamaneni Ramesh) ಅವರ ಪುತ್ರ ಸಂಜುಶ್ (21) ಚಲಾಯಿಸುತ್ತಿದ್ದ ಕಾರು ರಸ್ತೆ ದಾಟುತ್ತಿದ್ದ ಭಾರತಿ (26) ಎಂಬವರಿಗೆ ಮಾಧಾಪುರ ಪ್ರದೇಶದಲ್ಲಿ ಆಗಸ್ಟ್ 16ರಂದು ಡಿಕ್ಕಿಯಾಗಿದೆ. ತೀವ್ರವಾಗಿ ಗಾಯಗೊಂಡ ಭಾರತಿ ಅವರನ್ನು ಅದೇ ಕಾರಿನಲ್ಲಿ ಜುಬಿಲಿ ಹಿಲ್ಸ್‌ನಲ್ಲಿರುವ ಅಪೋಲೋ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಅಲ್ಲಿ ಅವರು ಮೃತಪಟ್ಟಿದ್ದಾರೆ.
ಆಂಧ್ರಪ್ರದೇಶ ಉಪಮುಖ್ಯಮಂತ್ರಿ ಪವನ್ ಕಲ್ಯಾಣ್ ಅವರ ಜನ ಸೇನಾ ಪಕ್ಷದ ಸಂಸದರಾಗಿರುವ ಲಿಂಗಮನೇನಿ ರಮೇಶ್ ಅವರ ಪುತ್ರನೇ ಕಾರು ಚಲಾಯಿಸುತ್ತಿದ್ದದ್ದು ಎಂದು ಸ್ಥಳೀಯರು ಪೊಲೀಸರಿಗೆ ತಿಳಿಸಿದ್ದಾರೆ. ಸಂಜುಶ್ ಅವರನ್ನು ಬಂಧಿಸಲಾಗಿಲ್ಲ. ನೋಟಿಸ್ ನೀಡಲಾಗಿದೆ ಎಂದು ಪೊಲೀಸರ ತಿಳಿಸಿದ್ದಾರೆ.
ಮುಂಬೈ ದಾಳಿ ಪ್ರಕರಣಕ್ಕೆ ಹೊಸ ತಿರುವು: ಪಾಕ್ ಮೂಲದ 6 ಆರೋಪಿಗಳ ವಿರುದ್ಧ ವಿಚಾರಣೆ ಆರಂಭ
ಈ ಕುರಿತು ಮಾಹಿತಿ ನೀಡಿದ ಮಾಧಾಪುರದ ಸಹಾಯಕ ಪೊಲೀಸ್ ಆಯುಕ್ತ ಸಿ.ಎಚ್. ಶ್ರೀಧರ್ , ರಾಜ್ಯಸಭಾ ಸದಸ್ಯ ಲಿಂಗಮನೇನಿ ರಮೇಶ್ ಅವರ ಪುತ್ರ ಲಿಂಗಮನೇನಿ ಸಂಜುಶ್ ಚಲಾಯಿಸುತ್ತಿದ್ದ ಕಾರು ಇನಾರ್ಬಿಟ್ ಮಾಲ್‌ನಲ್ಲಿರುವ ಲೈಫ್‌ಸ್ಟೈಲ್ ಬಟ್ಟೆ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ ಭಾರತಿ ಮುಖಿ ಎಂಬವರಿಗೆ ಡಿಕ್ಕಿಯಾಗಿದೆ. ಅವರು ಆಗಸ್ಟ್ 16 ರಂದು ಮಾಧಾಪುರ ಪ್ರದೇಶದ ತನ್ನ ಕೆಲಸದ ಸ್ಥಳದ ಬಳಿ ರಸ್ತೆ ದಾಟುತ್ತಿದ್ದಾಗ ಈ ಅಪಘಾತ ಸಂಭವಿಸಿದೆ ಎಂದರು.
ಜಾಮೀನು ನೀಡಬಹುದಾದ ಅಪರಾಧವಾಗಿರುವುದರಿಂದ ಆರೋಪಿಗೆ ನೋಟಿಸ್ ನೀಡಲಾಗಿದೆ. ಆರೋಪಿಯ ವಿರುದ್ದದ ಆರೋಪ ಸಾಬೀತಾದರೆ ನ್ಯಾಯಾಲಯ ಅವರಿಗೆ ಏಳು ವರ್ಷಗಳಿಗಿಂತ ಕಡಿಮೆ ಅವಧಿಯ ಶಿಕ್ಷೆಯನ್ನು ವಿಧಿಸುವ ಸಾಧ್ಯತೆ ಇದೆ ಎಂದರು.
ಏನಾಗಿತ್ತು?
ಭಾರತಿ ಅವರು ಸಹೋದ್ಯೋಗಿ ಪೂಜಾ ಅಶೋಕ್ ಅಲೋನ್ ಅವರೊಂದಿಗೆ ಭಾನುವಾರ ಮಧ್ಯಾಹ್ನ 3 ಗಂಟೆ ಸುಮಾರಿಗೆ ಊಟ ಮಾಡಲು ಹತ್ತಿರದ ಐಟಿಸಿ ಕೊಹೆನೂರ್ ಪ್ರದೇಶದ ಕಡೆಗೆ ಹೋಗಿದ್ದರು.ಬಳಿಕ ಅವರು ಮರಳಿ ಬರುತ್ತಿದ್ದಾಗ ಭಾರತಿ ಅವರಿಗೆ ಡಿಕ್ಕಿ ಹೊಡೆದಿದೆ. ಭಾರತಿ ಅವರ ತಲೆಗೆ ತೀವ್ರ ಗಾಯವಾಗಿದ್ದು, ಜುಬಿಲಿ ಹಿಲ್ಸ್‌ನಲ್ಲಿರುವ ಅಪೋಲೋ ಆಸ್ಪತ್ರೆಯಲ್ಲಿ ಅವರು ಮೃತಪಟ್ಟಿದ್ದಾರೆ.
ಆಕೆಯ ಸ್ನೇಹಿತೆ ಪೂಜಾ ಅವರು ಅಂಗಡಿ ವ್ಯವಸ್ಥಾಪಕ ಅಶ್ವಿನ್ ಕುಮಾರ್‌ಗೆ ಮಾಹಿತಿ ನೀಡಿದ್ದು, ಅವರು ಪೊಲೀಸರಿಗೆ ಕರೆ ಮಾಡಿ ಮಾಹಿತಿ ತಿಳಿಸಿದರು. ಕಾರು ಚಾಲಕನ ವಿರುದ್ಧ ಅತಿ ವೇಗ ಮತ್ತು ನಿರ್ಲಕ್ಷ್ಯದ ಚಾಲನೆ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.