ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಪಾಕಿಸ್ತಾನದಲ್ಲಿ ಶಾಂತಿ ರ‍್ಯಾಲಿ ವೇಳೆ ಆತ್ಮಾಹುತಿ ಬಾಂಬ್ ದಾಳಿ; ಐವರು ಪೊಲೀಸರು ಸೇರಿ 14 ಮಂದಿ ಸಾವು

Bomb blast in Pakistan: ಶಾಂತಿ ರ‍್ಯಾಲಿಯ ವೇಳೆ ಭೀಕರ ಸ್ಫೋಟ ನಡೆದು ಪೊಲೀಸ್ ಸಿಬ್ಬಂದಿ ಸೇರಿ 14 ಮಂದಿ ಸಾವನ್ನಪ್ಪಿದ್ದು, ಕನಿಷ್ಠ 18 ಮಂದಿ ಗಾಯಗೊಂಡಿರುವ ಘಟನೆ ಪಾಕಿಸ್ತಾನದ ಖೈಬರ್ ಪಖ್ತುಂಖ್ವಾ ಪ್ರಾಂತ್ಯದಲ್ಲಿ ನಡೆದಿದೆ.

ಪಾಕಿಸ್ತಾನದಲ್ಲಿ ಶಾಂತಿ ರ‍್ಯಾಲಿ ವೇಳೆ ಆತ್ಮಾಹುತಿ ಬಾಂಬ್ ದಾಳಿ

ಸಂಗ್ರಹ ಚಿತ್ರ -

Vishakha Bhat Heggar
Vishakha Bhat Heggar Aug 3, 2026 8:08 AM

ಇಸ್ಲಾಮಾಬಾದ್: ಶಾಂತಿ ರ‍್ಯಾಲಿಯ ವೇಳೆ ಭೀಕರ ಸ್ಫೋಟ ನಡೆದು ಪೊಲೀಸ್ ಸಿಬ್ಬಂದಿ ಸೇರಿ 13 ಮಂದಿ ಸಾವನ್ನಪ್ಪಿದ್ದು, ಕನಿಷ್ಠ 18 ಮಂದಿ ಗಾಯಗೊಂಡಿರುವ ಘಟನೆ ಪಾಕಿಸ್ತಾನದ (Pakistan) ಖೈಬರ್ ಪಖ್ತುಂಖ್ವಾ (Khyber Pakhtunkhwa) ಪ್ರಾಂತ್ಯದಲ್ಲಿ ನಡೆದಿದೆ. ಭೀಕರ ಸ್ಫೋಟದ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ.

ಕಳೆದ ಕೆಲವು ತಿಂಗಳುಗಳಿಂದ ಭದ್ರತಾ ಪರಿಸ್ಥಿತಿ ಹದಗೆಟ್ಟಿರುವ ಸ್ವಾತ್ ಪ್ರದೇಶದಲ್ಲಿ ಶಾಂತಿ ಸ್ಥಾಪನೆಗೆ ಒತ್ತಾಯಿಸಿ, ಸ್ಥಳೀಯ ಬುಡಕಟ್ಟು ಮಂಡಳಿಯಾದ ಸ್ವಾತ್ ಅಮನ್ ಜಿರ್ಗಾ ಈ ಶಾಂತಿ ರ‍್ಯಾಲಿಯನ್ನು ಆಯೋಜಿಸಿತ್ತು. ರ‍್ಯಾಲಿಯಲ್ಲಿ ಭಾಗವಹಿಸಿದ್ದವರು ಪ್ರದೇಶದಲ್ಲಿ ಶಾಂತಿ ಕಾಪಾಡುವಂತೆ ಒತ್ತಾಯಿಸಿ ಘೋಷಣೆಗಳನ್ನು ಕೂಗುತ್ತಾ ಫಲಕಗಳನ್ನು ಹಿಡಿದು ಪ್ರತಿಭಟನೆ ನಡೆಸುತ್ತಿದ್ದರು. ಈ ವೇಳೆ ಬಾಂಬ್ ಸ್ಫೋಟ ಸಂಭವಿಸಿದೆ.

ಮಾಹಿತಿಯ ಪ್ರಕಾರ, ಈ ಸ್ಫೋಟ ಆತ್ಮಾಹುತಿ ದಾಳಿಯಂತೆಯೇ ಕಂಡುಬಂದಿದೆ. ಆದರೆ, ಇದು ಆತ್ಮಾಹುತಿ ದಾಳಿ ಎಂಬುದನ್ನು ಪಾಕಿಸ್ತಾನ ಅಧಿಕಾರಿಗಳು ಇನ್ನೂ ಅಧಿಕೃತವಾಗಿ ದೃಢಪಡಿಸಿಲ್ಲ. ಸ್ಫೋಟದ ತೀವ್ರತೆಗೆ ಹಲವರು ಗಾಯಗೊಂಡಿದ್ದು, ರಕ್ಷಣಾ ಸಿಬ್ಬಂದಿ ಗಾಯಾಳುಗಳನ್ನು ಸಮೀಪದ ಆಸ್ಪತ್ರೆಗಳಿಗೆ ದಾಖಲಿಸಿದ್ದಾರೆ. ಗಾಯಗೊಂಡವರಲ್ಲಿ ಕೆಲವರ ಸ್ಥಿತಿ ಗಂಭೀರವಾಗಿರುವುದರಿಂದ ಸಾವಿನ ಸಂಖ್ಯೆ ಮತ್ತಷ್ಟು ಏರಿಕೆಯಾಗುವ ಸಾಧ್ಯತೆಯಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಈ ದಾಳಿಗೂ ಮೊದಲು, ಇದೇ ದಿನ ಪೇಶಾವರ-ಇಸ್ಲಾಮಾಬಾದ್ ಮೋಟಾರ್‌ವೇ ಟೋಲ್ ಪ್ಲಾಜಾ ಬಳಿ ಸುಧಾರಿತ ಸ್ಫೋಟಕ ಬ್ಲಾಸ್ಟ್‌ ಆಗಿ ಇಬ್ಬರು ಪೊಲೀಸ್‌ ಅಧಿಕಾರಿಗಳು ಸಾವನ್ನಪ್ಪಿದ್ಧ ಘಟನೆ ನಡೆದಿತ್ತು. ಇದಕ್ಕೂ ಮೊದಲು, ಜು.30ರಂದು ಹಂಗು ಪ್ರಾಂತ್ಯದ ಪೊಲೀಸ್ ಚೆಕ್‌ಪೋಸ್ಟ್ ಮೇಲೆ ನಡೆದ ದಾಳಿಯಲ್ಲಿ ಕನಿಷ್ಠ 9 ಪೊಲೀಸ್‌ ಅಧಿಕಾರಿಗಳು ಸಾವನ್ನಪ್ಪಿದ್ದರು ಎಂದು ವರದಿಯಾಗಿದೆ.

ದಾಳಿಯ ಹೊಣೆಯನ್ನು ತಕ್ಷಣಕ್ಕೆ ಯಾವುದೇ ಸಂಘಟನೆ ವಹಿಸಿಕೊಂಡಿಲ್ಲವಾದರೂ, ನಿಷೇಧಿತ ‘ತೆಹ್ರೀಕ್-ಇ-ತಾಲಿಬಾನ್ ಪಾಕಿಸ್ತಾನ್’ ಉಗ್ರ ಸಂಘಟನೆಯೇ ಈ ಕೃತ್ಯ ಎಸಗಿದೆ ಎಂದು ಅಧಿಕಾರಿಗಳು ಶಂಕಿಸಿದ್ದಾರೆ.ಖೈಬರ್ ಪಖ್ತುಂಖ್ವಾ ಭಾಗದಲ್ಲಿ ಕಳೆದ ಕೆಲವು ತಿಂಗಳುಗಳಿಂದ ಟಿಟಿಪಿ ಉಗ್ರರ ದಾಳಿ ತೀವ್ರಗೊಂಡಿದ್ದು, ಈಗಾಗಲೇ 819 ಕ್ಕೂ ಹೆಚ್ಚು ಭದ್ರತಾ ಸಿಬ್ಬಂದಿ ಮತ್ತು ನಾಗರಿಕರು ಪ್ರಾಣ ಕಳೆದುಕೊಂಡಿದ್ದಾರೆ.