ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಲೆಬನಾನ್ ಮೇಲೆ ಇಸ್ರೇಲ್ ಭೀಕರ ವಾಯುದಾಳಿ: 14 ಮಂದಿ ಸಾವು

ಲೆಬನಾನ್‌ನ ಬೈರೂತ್‌ನಲ್ಲಿ ಇಸ್ರೇಲ್ ನಡೆಸಿದ ವೈಮಾನಿಕ ದಾಳಿಯಲ್ಲಿ ಕನಿಷ್ಠ14 ಮಂದಿ ಸಾವನ್ನಪ್ಪಿ, ಹಲವರು ಗಾಯಗೊಂಡಿದ್ದಾರೆ. ಜನನಿಬಿಡ ಪ್ರದೇಶಗಳು ಮತ್ತು ಆಸ್ಪತ್ರೆ ಸಮೀಪದ ಪ್ರದೇಶಗಳೂ ದಾಳಿಗೆ ತುತ್ತಾಗಿದ್ದು, ಕುಟುಂಬಗಳೇ ನಾಶವಾಗಿರುವ ಘಟನೆಗಳು ವರದಿಯಾಗಿವೆ. ಗಡಿ ಪ್ರದೇಶಗಳಲ್ಲಿ ಆತಂಕ ಹೆಚ್ಚಿದ್ದು, ಸಾವಿರಾರು ಜನರು ವಲಸೆ ಹೋಗುತ್ತಿದ್ದಾರೆ.

ಲೆಬನಾನ್ ಮೇಲೆ ಇಸ್ರೇಲ್ ಸೇನೆಯಿಂದ ವೈಮಾನಿಕ ದಾಳಿ

ಲೆಬನಾನ್‌ ಮೇಲೆ ಇಸ್ರೇಲ್‌ನ ವೈಮಾನಿಕ ದಾಳಿ -

Profile
Sushmitha Jain Apr 6, 2026 6:03 PM

ಬೈರೂತ್, ಏ. 6: ಲೆಬನಾನ್‌ನಲ್ಲಿ (Lebanon) ಇಸ್ರೇಲ್ (Israel) ನಡೆಸಿದ ಭೀಕರ ವೈಮಾನಿಕ ದಾಳಿಯಲ್ಲಿ (Airstrikes) ಕನಿಷ್ಠ 14 ಜನರು ಸಾವನ್ನಪ್ಪಿದ್ದಾರೆ ಮತ್ತು 10ಕ್ಕೂ ಜನರು ಗಂಭೀರವಾಗಿ ಗಾಯಗೊಂಡಿದ್ದಾರೆ. ಹಿಜ್ಬುಲ್ಲಾ (Hizbollah) ಗುರಿಗಳನ್ನು ನಾಶಪಡಿಸುತ್ತಿರುವುದಾಗಿ ಇಸ್ರೇಲ್ ಪ್ರತಿಪಾದಿಸುತ್ತಿದ್ದರೂ, ವಾಸ್ತವದಲ್ಲಿ ಬೈರೂತ್‌ನ (Beirut) ಜನನಿಬಿಡ ಪ್ರದೇಶಗಳು ಮತ್ತು ನಾಗರಿಕ ಮೂಲ ಸೌಕರ್ಯಗಳು ಈ ದಾಳಿಗೆ ತತ್ತರಿಸಿ ಹೋಗಿವೆ.

ಭಾನುವಾರ (ಏಪ್ರಿಲ್‌ 5) ಮಧ್ಯಾಹ್ನ ಬೈರೂತ್‌ನ ಅತ್ಯಂತ ಜನನಿಬಿಡ ಪ್ರದೇಶವಾದ ಜ್ನಾ (Jnah) ಮೇಲೆ ಇಸ್ರೇಲಿ ಪಡೆಗಳು ಸರಣಿ ಬಾಂಬ್ ದಾಳಿ ನಡೆಸಿವೆ. ಈ ದಾಳಿ ಬೈರೂತ್‌ನ ಅತಿದೊಡ್ಡ ಆರೋಗ್ಯ ಕೇಂದ್ರವಾದ ರಫಿಕ್ ಹರಿರಿ ಸಾರ್ವಜನಿಕ ಆಸ್ಪತ್ರೆಯಿಂದ ಕೇವಲ ಕೆಲವೇ ಮೀಟರ್‌ಗಳ ದೂರದಲ್ಲಿ ನಡೆದಿದೆ. ಇಲ್ಲಿನ ವಸತಿ ಸಂಕೀರ್ಣಗಳನ್ನು ಗುರಿಯಾಗಿಸಿ ನಡೆಸಿದ ದಾಳಿಯಲ್ಲಿ ಮಹಿಳೆಯರು ಸೇರಿದಂತೆ ನಾಲ್ವರು ಸಾವನ್ನಪ್ಪಿದ್ದು, 49 ಮಂದಿ ಗಾಯಗೊಂಡಿದ್ದಾರೆ. 'ಮೆಡಿಸಿನ್ಸ್ ಸ್ಯಾನ್ಸ್ ಫ್ರಾಂಟಿಯರ್ಸ್' (MSF) ಈ ದಾಳಿಯನ್ನು ತೀವ್ರವಾಗಿ ಖಂಡಿಸಿದ್ದು, ಆಸ್ಪತ್ರೆಯ ಪಕ್ಕದಲ್ಲೇ ನಡೆದ ಈ ಸ್ಫೋಟದಿಂದ ರಕ್ತಸಿಕ್ತ ಸ್ಥಿತಿಯಲ್ಲಿದ್ದ ಜನರನ್ನು ಹೊತ್ತು ತರಲಾಗುತ್ತಿತ್ತು ಎಂದು ತಿಳಿಸಿದೆ.

ಲೆಬನಾನ್‌ ಮೇಲೆ ಇಸ್ರೇಲ್‌ ದಾಳಿ:



ಛಿದ್ರಗೊಂಡ ಕುಟುಂಬಗಳು

ಕೇವಲ ಬೈರೂತ್ ಮಾತ್ರವಲ್ಲದೆ, ಇತರ ಭಾಗಗಳಲ್ಲೂ ಸಾವು-ನೋವುಗಳು ಸಂಭವಿಸಿವೆ. ಕಾಫರ್ ಎಂಬಲ್ಲಿ ಕಾರೊಂದರ ಮೇಲೆ ನಡೆದ ಬಾಂಬ್ ದಾಳಿಯಲ್ಲಿ ನಾಲ್ವರು ಮೃತಪಟ್ಟಿದ್ದಾರೆ. ಮತ್ತೊಂದೆಡೆ, ಕಾಫರ್-ಹಟ್ಟಾ ಎಂಬಲ್ಲಿ ಇಡೀ ಕುಟುಂಬವನ್ನೇ ಗುರಿಯಾಗಿಸಿ ನಡೆಸಿದ ದಾಳಿಯಲ್ಲಿ ಒಂದೇ ಕುಟುಂಬದ ಐವರು ಸದಸ್ಯರು ಬಲಿಯಾಗಿದ್ದಾರೆ. ಕಳೆದ ನಾಲ್ಕು ದಿನಗಳಲ್ಲಿ ನಾಗರಿಕರ ಸಾವುಗಳ ಸಂಖ್ಯೆ 100ಕ್ಕಿಂತ ಹೆಚ್ಚಾಗಿದ್ದು, ಇದು ಇಸ್ರೇಲ್ ತನ್ನ ದಾಳಿಯ ವ್ಯಾಪ್ತಿಯನ್ನು ನಾಗರಿಕ ಪ್ರದೇಶಗಳಿಗೆ ವಿಸ್ತರಿಸುತ್ತಿರುವುದನ್ನು ಸೂಚಿಸಿದೆ.

ದೆಹಲಿ ವಿಧಾನಸಭೆಯಲ್ಲಿ ಭಾರೀ ಭದ್ರತಾ ಲೋಪ; ಬ್ಯಾರಿಕೇಡ್‌ ಮುರಿದು, ಸ್ಪೀಕರ್ ವಾಹನದ ಮೇಲೆ ಶಾಯಿ ಎಸೆದ ವ್ಯಕ್ತಿ!

ಗಡಿ ಭಾಗದಲ್ಲಿ ಆತಂಕ

ಲೆಬನಾನ್ ಸಾರ್ವಜನಿಕ ಆರೋಗ್ಯ ಸಚಿವಾಲಯದ ಅಂಕಿಅಂಶಗಳ ಪ್ರಕಾರ, ಈವರೆಗೆ ಇಸ್ರೇಲ್‌ ನಡೆಸಿದ ದಾಳಿಯಲ್ಲಿ ಮೃತಪಟ್ಟವರ ಸಂಖ್ಯೆ 1,465ಕ್ಕೆ ಏರಿದ್ದು, 4,400ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ. ಇಸ್ರೇಲ್‌ನ ಎಚ್ಚರಿಕೆಯ ನಂತರ ಲೆಬನಾನ್ ಮತ್ತು ಸಿರಿಯಾವನ್ನು ಸಂಪರ್ಕಿಸುವ ಪ್ರಮುಖ ಗಡಿಯಾದ ಮಸ್ನಾವನ್ನು ಶನಿವಾರ ಮುಚ್ಚಲಾಗಿದೆ. ಯುದ್ಧದ ಭೀತಿಯಿಂದಾಗಿ ಸಾವಿರಾರು ಜನರು ತಮ್ಮ ಮನೆಗಳನ್ನು ತೊರೆದು ಸುರಕ್ಷಿತ ಸ್ಥಳಗಳತ್ತ ವಲಸೆ ಹೋಗುತ್ತಿದ್ದಾರೆ. ಜ್ನಾ ಪ್ರದೇಶದಲ್ಲಿ ಕೆಲಸ ಮಾಡುತ್ತಿದ್ದ ಸುಡಾನ್ ದೇಶದ ಕಾರ್ಮಿಕರು ಧ್ವಂಸಗೊಂಡ ಕಟ್ಟಡಗಳ ಅವಶೇಷಗಳ ನಡುವೆ ತಮ್ಮ ಸಾಮಗ್ರಿಗಳನ್ನು ಹುಡುಕುತ್ತಿರುವ ದೃಶ್ಯಗಳು ಅಲ್ಲಿನ ಪರಿಸ್ಥಿತಿಯ ಗಂಭೀರತೆಯನ್ನು ಎತ್ತಿ ತೋರಿಸಿದೆ.