ಹೊರ್ಮುಜ್ ಜಲ ಸಂಧಿಯಲ್ಲಿ ದಿಗ್ಬಂಧನ ವಿಸ್ತರಣೆಗೆ ಸಿದ್ದರಾಗಿ; ಡೊನಾಲ್ಡ್ ಟ್ರಂಪ್ ಆದೇಶ
ಕಳೆದ ಫೆಬ್ರವರಿ ತಿಂಗಳಾಂತ್ಯದಲ್ಲಿ ಯುಎಸ್ ಮತ್ತು ಇಸ್ರೇಲ್ ಸೇನಾ ಪಡೆಯು ಇರಾನ್ ಮೇಲೆ ದಾಳಿ ನಡೆಸಿದ ಬಳಿಕ ಹೊರ್ಮುಜ್ ಜಲ ಮಾರ್ಗವು ಉದ್ವಿಗ್ನತೆಯ ಕೇಂದ್ರವಾಗಿದೆ. ಇರಾನ್ ಇಲ್ಲಿ ಹಡಗುಗಳ ಸಂಚಾರಕ್ಕೆ ಅಡ್ಡಿ ಪಡಿಸಿದ್ದರಿಂದ ಇದನ್ನು ತೆರವುಗೊಳಿಸಲು ಯುಎಸ್ ಇರಾನ್ ಬಂದರುಗಳಿಗೆ ನಿರ್ಬಂಧ ವಿಧಿಸಿದೆ. ಇದೀಗ ಶಾಂತಿ ಮಾತುಕತೆಗಳು ಸ್ಥಗಿತಗೊಂಡಿರುವ ಪರಿಣಾಮ ದಿಗ್ಬಂಧನ ಮುಂದುವರಿಸಲು ತನ್ನ ಸಹಾಯಕರಿಗೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಆದೇಶಿಸಿದ್ದಾರೆ.
ಸಂಗ್ರಹ ಚಿತ್ರ -
ವಾಷಿಂಗ್ಟನ್: ಇರಾನ್ (Iran) ಜೊತೆಗಿನ ಶಾಂತಿ ಮಾತುಕತೆಗಳು ಸ್ಥಗಿತಗೊಂಡಿರುವ ಕಾರಣ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ (US President Donald Trump) ಅವರು ಹೊರ್ಮುಜ್ ಜಲ ಸಂಧಿಯಲ್ಲಿ ದಿಗ್ಬಂಧನ (blockade, Strait of Hormuz) ವಿಸ್ತರಣೆಗೆ ಸಿದ್ದರಾಗುವಂತೆ ತಮ್ಮ ಸಹಾಯಕರಿಗೆ ಡೊನಾಲ್ಡ್ ಟ್ರಂಪ್ ಸೂಚಿಸಿದ್ದಾರೆ. ಕಳೆದ ಫೆಬ್ರವರಿ ತಿಂಗಳಾಂತ್ಯದಲ್ಲಿ ಯುಎಸ್ ಮತ್ತು ಇಸ್ರೇಲ್ ಸೇನಾ ಪಡೆಯು ಇರಾನ್ ಮೇಲೆ ದಾಳಿ ನಡೆಸಿದ ಬಳಿಕ ಹೊರ್ಮುಜ್ ಜಲ ಮಾರ್ಗವನ್ನು ಇರಾನ್ ನಿರ್ಬಂಧಿಸಿತ್ತು. ಇದನ್ನು ತೆರವುಗೊಳಿಸಲು ಯುಎಸ್ ಇರಾನ್ ಬಂದರುಗಳಿಗೆ ನಿರ್ಬಂಧ ವಿಧಿಸಿತ್ತು. ಬಳಿಕ ನಡೆದಿರುವ ಕದನ ವಿರಾಮ ಮಾತುಕತೆಗಳು ಯಾವುದೇ ರೀತಿಯಲ್ಲಿ ಫಲಪ್ರದವಾಗದೇ ಇರುವುದರಿಂದ ಈಗ ಹೊರ್ಮುಜ್ ಜಲ ಸಂಧಿಯಲ್ಲಿ ದಿಗ್ಬಂಧನ ವಿಸ್ತರಿಸಲು ಡೊನಾಲ್ಡ್ ಟ್ರಂಪ್ ನಿರ್ಧರಿಸಿದ್ದಾರೆ.
ಇರಾನ್ ಮತ್ತು ಯುಎಸ್ ನಡುವೆ ಕದನ ವಿರಾಮ ಪರಿಸ್ಥಿತಿ ಇದ್ದರೂ ಕೂಡ ಹೊರ್ಮುಜ್ ಜಲ ಮಾರ್ಗದಲ್ಲಿ ದಿಗ್ಬಂಧನ ವಿಸ್ತರಣೆಗೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ತಮ್ಮ ಸಹಾಯಕರಿಗೆ ಹೇಳಿದ್ದಾರೆ. ಈ ಕುರಿತು ಸೋಮವಾರ ನಡೆದ ಚರ್ಚೆಯಲ್ಲಿ ಇರಾನ್‌ನ ಬಂದರುಗಳಿಗೆ ಹೋಗುವ ಮತ್ತು ಅಲ್ಲಿಂದ ತೆರಳುವ ಹಡಗುಗಳನ್ನು ತಡೆದು ಇರಾನ್‌ನ ಆರ್ಥಿಕತೆ ಮತ್ತು ತೈಲ ರಫ್ತುನ್ನು ತಡೆಯುವ ನಿರ್ಧಾರ ಮಾಡಲಾಗಿದೆ. ಯುದ್ಧವನ್ನು ನಿಲ್ಲಿಸುವುದು ಅಥವಾ ಬಾಂಬ್ ದಾಳಿಯನ್ನು ಮತ್ತೆ ಆರಂಭಿಸುವುದು ದಿಗ್ಬಂಧನಕ್ಕಿಂತ ಹೆಚ್ಚು ಅಪಾಯ ಉಂಟು ಮಾಡುತ್ತದೆ ಎಂದು ಅಧಿಕಾರಿಗಳು ಟ್ರಂಪ್ ಗೆ ತಿಳಿಸಿದ್ದಾರೆ ಎನ್ನಲಾಗಿದೆ.
ಇರಾನ್ ಕೋಸ್ಟ್ ಗಾರ್ಡ್‌ನಿಂದ ಭಾರತೀಯ ಸಿಬ್ಬಂದಿ ಇದ್ದ ಹಡಗಿನ ಮೇಲೆ ಗುಂಡಿನ ದಾಳಿ!
ಈಗಾಗಲೇ ಹೊರ್ಮುಜ್ ನಲ್ಲಿ ಉಂಟಾಗಿರುವ ದಿಗ್ಬಂಧನದ ಕಾರಣದಿಂದ ಜಾಗತಿಕ ತೈಲ ಮಾರುಕಟ್ಟೆಯಲ್ಲಿ ತೈಲ ಬೆಲೆಗಳು 100 ಡಾಲರ್ ಗಡಿ ದಾಟಿದೆ. ಮಂಗಳವಾರ ಶೇಕಡಾ 2.8 ರಷ್ಟು ಏರಿಕೆಯಾಗಿ ಬ್ರೆಂಟ್ ಕಚ್ಚಾ ತೈಲ ಬ್ಯಾರೆಲ್‌ಗೆ 111 ಡಾಲರ್ ಗೆ ಮಾರಾಟವಾಗಿದೆ.
ಅಮೆರಿಕ ಮತ್ತು ಇರಾನ್ ನಡುವೆಕದನ ವಿರಾಮ ಏಪ್ರಿಲ್ 7ರಿಂದ ಆರಂಭಗೊಂಡಿದ್ದು, ಆ ಬಳಿಕ ಬಾಂಬ್ ದಾಳಿ ಕಡಿಮೆ ಮಾಡಿ ನಿರ್ಬಂಧಗಳ ಮೇಲೆ ಹೆಚ್ಚಿನ ಒಟ್ಟು ನೀಡಲಾಗಿದೆ. ಉಭಯ ದೇಶಗಳ ನಡುವಿನ ಮಾತುಕತೆ ವಿಫಲವಾದಾಗ ಕದನ ವಿರಾಮವನ್ನು ಅವಧಿಯನ್ನು ವಿಸ್ತರಿಸಿದ ಡೊನಾಲ್ಡ್ ಟ್ರಂಪ್, ಒಂದು ವೇಳೆ ಇರಾನ್ ಒಪ್ಪಂದಕ್ಕೆ ಬಾರದೇ ಇದ್ದರೆ ಟೆಹರಾನ್ ಅನ್ನು ಸಂಪೂರ್ಣ ವಿನಾಶ ಮಾಡುವುದಾಗಿ ಪ್ರತಿಜ್ಞೆ ಮಾಡಿದ್ದರು.
ಹೊರ್ಮುಜ್ ಜಲಸಂಧಿಯಲ್ಲಿ ದಿಗ್ಬಂಧನ ವಿಧಿಸಲು ಟ್ರಂಪ್ ತಮ್ಮ ನೌಕಾಪಡೆಯನ್ನು ಬಳಸುತ್ತಿದ್ದಾರೆ. ಇರಾನ್ ಆಡಳಿತವು ತನ್ನ ಪ್ರಮುಖ ಬೇಡಿಕೆಗಳಿಗೆ ಮಣಿಯುವವರೆಗೆ ಅದನ್ನು ಮುಂದುವರಿಸುವುದಾಗಿ ಹೇಳಿದ್ದಾರೆ. ಇದಕ್ಕಾಗಿ ಇರಾನ್ ಪರಮಾಣು ಪುಷ್ಟೀಕರಣವನ್ನು ಕೊನೆಗೊಳಿಸಬೇಕು, ಎಂದಿಗೂ ತನ್ನ ಬಳಿ ಯಾವುದೇ ಪರಮಾಣು ಶಸ್ತ್ರಾಸ್ತ್ರವನ್ನು ಹೊಂದುವುದಿಲ್ಲ ಎಂದು ಪ್ರತಿಜ್ಞೆ ಮಾಡಬೇಕು ಎಂದು ಹೇಳಿದ್ದಾರೆ.
ಇರಾನ್‌ನ 3-ಅಂಶ
ಯುಎಸ್ ಮತ್ತು ಟೆಹರಾನ್ ನಡುವಿನ ಮಾತುಕತೆಯಲ್ಲಿ ಇರಾನ್ ಕದನ ವಿರಾಮಕ್ಕೆ ಮಧ್ಯವರ್ತಿಯಾಗಿರುವ ಪಾಕಿಸ್ತಾನದ ಮೂಲಕ ಹೊಸ 3-ಅಂಶಗಳ ಪ್ರಸ್ತಾವನೆಯನ್ನು ವಾಷಿಂಗ್ಟನ್‌ಗೆ ಕಳುಹಿಸಿದೆ. ಇದರಲ್ಲಿ ನಿರ್ಣಾಯಕ ಜಲಮಾರ್ಗವನ್ನು ಪುನಃ ತೆರೆಯುವುದು, ಇರಾನಿನ ಬಂದರುಗಳ ಮೇಲಿನ ಯುಎಸ್ ನೌಕಾ ದಿಗ್ಬಂಧನವನ್ನು ತೆಗೆದುಹಾಕುವುದು ಮತ್ತು ಟೆಹರಾನ್ ಪರಮಾಣು ಕಾರ್ಯಕ್ರಮದ ಕುರಿತು ಮಾತುಕತೆಗಳನ್ನು ಕೆಲ ಕಾಲದವರೆಗೆ ವಿಳಂಬಗೊಳಿಸುವ ವಿಷಯವಿದೆ. ಇದಕ್ಕೆ ಪ್ರತಿಕ್ರಿಯಿಸಿರುವ ಟ್ರಂಪ್, ಇರಾನ್ ಸದ್ಭಾವನೆಯಿಂದ ವ್ಯವಹರಿಸುತ್ತಿಲ್ಲ. ಅದರ ಪ್ರಮುಖ ಬೇಡಿಕೆಗಳನ್ನು ಪೂರೈಸಲು ಸಾಧ್ಯವಿಲ್ಲ ಎಂದು ತಮ್ಮ ಸಹಾಯಕರಿಗೆ ಹೇಳಿದ್ದಾರೆ.
ಈ ಕುರಿತು ಟ್ರೂತ್ ಸೋಷಿಯಲ್ ಪೋಸ್ಟ್ ನಲ್ಲಿ ಬರೆದಿರುವ ಟ್ರಂಪ್, ದಿಗ್ಬಂಧನ ಮುಂದುವರಿಸುವುದು ಆರಾಮದಾಯಕ. ಇದು ಸುರಕ್ಷಿತ ಆಯ್ಕೆಯಾಗಿದೆ. ಇದರಿಂದ ಇರಾನ್ ಆರ್ಥಿಕತೆ ಮೇಲೆ ಹೊಡೆತ ನೀಡಬಹುದು. ನಾನು ಕೂಡ ಆದಷ್ಟು ಶೀಘ್ರದಲ್ಲಿ ಹೊರ್ಮುಜ್ ಜಲಸಂಧಿಯನ್ನು ತೆರೆಯಲು ಬಯಸುತ್ತೇನೆ. ಇದಕ್ಕಾಗಿ ಅವರು ಒಪ್ಪಂದಕ್ಕೆ ಶೀಘ್ರದಲ್ಲಿ ಬರಬೇಕು ಎಂದು ತಿಳಿಸಿದ್ದಾರೆ.
ಯುಎಸ್ ಹೊರ್ಮುಜ್ ಜಲಸಂಧಿಯಲ್ಲಿ ದಿಗ್ಬಂಧನ ವಿಧಿಸುವ ಮೊದಲು ಇರಾನ್‌ನ ಚಾಬಹಾರ್ ಬಂದರಿನಲ್ಲಿ ಸುಮಾರು ಐದು ಹಡಗುಗಳು ಲಂಗರು ಹಾಕಿದ್ದವು. ದಿಗ್ಬಂಧನದ ಬಳಿಕ ಇದೀಗ ಅಲ್ಲಿ ಸುಮಾರು 20ಕ್ಕೂ ಹೆಚ್ಚು ಹಡಗುಗಳು ಲಂಗರು ಹಾಕಿವೆ ಎಂದು ಯುಎಸ್ ಸೆಂಟ್ರಲ್ ಕಮಾಂಡ್ ವರದಿ ತಿಳಿಸಿದೆ.
ಇಸ್ಲಾಮಾಬಾದ್‌ನಲ್ಲಿ ನಡೆಯಬೇಕಿದ್ದ ಎರಡನೇ ಸುತ್ತಿನ ಮಾತುಕತೆಗೆ ಇರಾನ್ ತನ್ನ ನಿಯೋಗವನ್ನು ಕಳುಹಿಸಲು ನಿರಾಕರಿಸಿದ ಬಳಿಕ ಯುಎಸ್ ಉಪಾಧ್ಯಕ್ಷ ಜೆಡಿ ವ್ಯಾನ್ಸ್ ಕೂಡ ತಮ್ಮ ಭೇಟಿಯನ್ನು ರದ್ದುಗೊಳಿಸಿದರು. ಇದರ ಅನಂತರ ಇರಾನ್‌ನ ವಿದೇಶಾಂಗ ಸಚಿವ ಅಬ್ಬಾಸ್ ಅರಾಗ್ಜಿ ಪಾಕಿಸ್ತಾನಕ್ಕೆ ಬಂದಿದ್ದರು. ಆದರೆ ಅವರು ಬರುವುದಕ್ಕೂ ಮೊದಲೇ ಸ್ಟೀವ್ ವಿಟ್ಕಾಫ್ ಮತ್ತು ಜೇರೆಡ್ ಕುಶ್ನರ್ ಅವರನ್ನು ಒಳಗೊಂಡ ಯುಎಸ್ ನಿಯೋಗವು ಅಲ್ಲಿಂದ ತೆರಳಿತ್ತು. ಇದಕ್ಕೆ ಪ್ರತಿಕ್ರಿಯಿಸಿರುವ ಡೊನಾಲ್ಡ್ ಟ್ರಂಪ್, ಪ್ರಯಾಣದಲ್ಲಿ ಹೆಚ್ಚು ಸಮಯ ವ್ಯರ್ಥವಾಗುತ್ತದೆ. ಅವರು ಮಾತನಾಡಲು ಬಯಸಿದರೆ ಕರೆ ಮಾಡಲಿ ಎಂದು ತಿಳಿಸಿದ್ದರು.