ಭಾರತದ ತೈಲ ಬಿಕ್ಕಟ್ಟು ಶೀಘ್ರದಲ್ಲೇ ಅಂತ್ಯ; ಇನ್ಮುಂದೆ ಹೊರ್ಮುಜ್ ಜಲಸಂಧಿ ಅನಿವಾರ್ಯವಲ್ಲ: ಫುಜೈರಾ ಪೈಪ್‌ಲೈನ್ ಮೂಲಕ ಯುಎಇಯಿಂದ ಬರಲಿದೆ ಇಂಧನ
Habshan-Fujairah Oil Pipeline: ಇರಾನ್‌ನ ಹೊರ್ಮುಜ್ ಜಲಸಂಧಿಯಲ್ಲಿನ ಬಿಕ್ಕಟ್ಟು ಮುಂದುವರಿದಿದ್ದು, ಇಂಧನ ಸಾಗಾಟಕ್ಕೆ ಸಮಸ್ಯೆ ಎದುರಾಗಿದೆ. ಇದರಿಂದ ತೈಲ ಆಮದನ್ನೇ ಅವಲಂಬಿಸಿರುವ ಭಾರತದಂತಹ ದೇಶಗಳು ಸಮಸ್ಯೆ ಎದುರಿಸುತ್ತಿವೆ. ಇದೀಗ ಭಾರತಕ್ಕೆ ಗುಡ್‌ನ್ಯೂಸ್ ಸಿಕ್ಕಿದ್ದು, ಫುಜೈರಾ ಪೈಪ್‌ಲೈನ್ ಮೂಲಕ ಬೃಹತ್ ಪ್ರಮಾಣದಲ್ಲಿ ಇಂಧನ ಪೂರೈಸಲು ಯುಎಇ ಮುಂದಾಗಿದೆ.
ಸಾಂದರ್ಭಿಕ ಚಿತ್ರ -
ದೆಹಲಿ, ಏ. 29: ಇರಾನ್-ಇಸ್ರೆಲ್-ಅಮೆರಿಕ ಸಂಘರ್ಷಕ್ಕೆ ತಾತ್ಕಾಲಿಕ ಬ್ರೇಕ್ ಬಿದ್ದಿದ್ದು, ಇನ್ನೂ ಸಂಪೂರ್ಣವಾಗಿ ಯುದ್ಧ ಕೊನೆಗೊಂಡಿಲ್ಲ. ಹೀಗಾಗಿ ಹೊರ್ಮುಜ್ ಜಲಸಂಧಿಯ ಬಿಕ್ಕಟ್ಟು ಮುಂದುವರಿದಿದ್ದು, ಇಂಧನ ಸಾಗಾಟಕ್ಕೆ ಸಮಸ್ಯೆ ಎದುರಾಗಿದೆ. ಇದರಿಂದ ತೈಲ ಆಮದನ್ನೇ ಅವಲಂಬಿಸಿರುವ ಭಾರತದಂತಹ ದೇಶಗಳು ಸಂಕಷ್ಟಕ್ಕೆ ಸಿಲುಕಿವೆ. ಈ ಮಧ್ಯೆ ಭಾರತಕ್ಕೆ ಗುಡ್‌ನ್ಯೂಸ್ ಸಿಕ್ಕಿದ್ದು, ಫುಜೈರಾ ಪೈಪ್‌ಲೈನ್ (Habshan-Fujairah Oil Pipeline) ಮೂಲಕ ಬೃಹತ್ ಪ್ರಮಾಣದಲ್ಲಿ ಇಂಧನ ಪೂರೈಸಲು ಯುಎಇ ಮುಂದಾಗಿದೆ. ಈ ಮೂಲಕ ಹೊರ್ಮುಜ್ ಜಲಸಂಧಿಯ (Strait of Hormuz) ಹಂಗಿಲ್ಲದೆ ಭಾರತಕ್ಕೆ ಇಂಧನ ತಲುಪಲಿದೆ. 380-406 ಕಿ.ಮೀ. ಉದ್ದದ ಈ ಪೈಪ್ ಪ್ರತಿದಿನ 1.5-1.8 ಮಿಲಿಯನ್ ಬ್ಯಾರಲ್ ಇಂಧನ ಸಾಗಿಸುವ ಸಾಮರ್ಥ್ಯ ಹೊಂದಿದೆ.
ಈ ಪೈಪ್‌ಲೈನ್ ಅಬುಧಾಬಿಯ ಹಬ್ಶಾನ್ ಟರ್ಮಿನಲ್‌ನಿಂದ ಫುಜೈರಾ ಟರ್ಮಿನಲ್ ತನಕ ಚಾಚಿಕೊಂಡಿದೆ. ಹಬ್ಶಾನ್ ಟರ್ಮಿನಲ್‌ನಿಂದ ಸಾಗುವ ಇಂಧನವನ್ನು ಫುಜೈರಾ ಟರ್ಮಿನಲ್‌ನಲ್ಲಿನ ಬೃಹತ್ ಸಂಗ್ರಹಗಾರದಲ್ಲಿ ಸಂಗ್ರಹಿಸಿ ಬಳಿಕ ಹಡಗು ಮೂಲಕ ಸಾಗಿಸಲಾಗುತ್ತದೆ. ಫುಜೈರಾ ಟರ್ಮಿನಲ್ ಹೊರ್ಮುಜ್ ಜಲಸಂಧಿಯ ಹೊರಗಿರುವ ಯುಎಇಯ ಪ್ರಮುಖ ತೈಲ ಸಾಗಾಟ ಕೇಂದ್ರ.
ಫುಜೈರಾ ಪೈಪ್‌ಲೈನ್ ಮೂಲಕ ಭಾರತಕ್ಕೆ ಹೆಚ್ಚಲಿದೆ ಇಂಧನ ಪೂರೈಕೆ:
🚨🇦🇪 By utilizing its Fujairah pipeline to bypass the Strait of Hormuz, the UAE can now freely increase production by up to 2 million barrels per day. This expansion could effectively break the market's high-price grip, independent of Iranian or Saudi influence. https://t.co/JihvoaUcUV pic.twitter.com/LyBYoJtj8K
— Terror Alarm (@Terror_Alarm) April 28, 2026
ಒಪೆಕ್‌ನಿಂದ ಹೊರಬಂದ ಯುಎಇ; ಭಾರತಕ್ಕೆ ಲಾಭ
ಯುಎಇ ಇದೀಗ ಮಹತ್ವದ ನಿರ್ಧಾರ ತೆಗೆದುಕೊಂಡಿದ್ದು, ಪೆಟ್ರೋಲಿಯಂ ಪೂರೈಕೆ ಮಾಡುವ ಸಂಘಟನೆ ಒಪೆಕ್‌ನಿಂದ (Organization of the Petroleum Exporting Countries) ಹಿಂದೆ ಸರಿದಿದೆ. ಪೆಟ್ರೋಲಿಯಂ ರಫ್ತು ಮಾಡುವ ದೇಶಗಳ ಸಂಘಟನೆಯಿಂದ ಯುಎಇ ನಿರ್ಗಮಿಸಿರುವುದು ಮಧ್ಯ ಪ್ರಾಚ್ಯದಲ್ಲಿನ ಇಂಧನ ವ್ಯಾಪಾರ ಸ್ಥಿತಿಗತಿಯನ್ನೇ ಬದಲಾಯಿಸಲಿದೆ. ಜತೆಗೆ ಜಾಗತಿಕ ತೈಲ ವ್ಯಾಪಾರಕ್ಕೆ ಹೊಸ ಸಾಧ್ಯತೆಗಳನ್ನು ತೆರೆದಿದೆ. ಮೇ 1ರಿಂದ ಜಾರಿಗೆ ಬರುವಂತೆ ಅಬುಧಾಬಿಯು ಸೌದಿ ಅರೇಬಿಯಾ ನಿಗದಿಪಡಿಸಿದ ತೈಲ ಕಾರ್ಟೆಲ್‌ನ ಉತ್ಪಾದನಾ ಮಿತಿಗಳಿಂದ ಮುಕ್ತವಾಗಲಿದೆ ಎಂದು ಘೋಷಿಸಿದೆ. ಇದು ಹೊರ್ಮುಜ್ ಜಲಸಂಧಿಯನ್ನು ಸಂಪೂರ್ಣವಾಗಿ ಬೈಪಾಸ್ ಮಾಡುವ ಕಾರ್ಯತಂತ್ರವಾದ ಫುಜೈರಾ ಪೈಪ್‌ಲೈನ್ ಮೂಲಕ ಭಾರತಕ್ಕೆ ಹೆಚ್ಚಿದ ರಫ್ತು ಮಾಡಲಿರುವ ಬಾಗಿಲು ತೆರೆಯಲಿದೆ.
ಹೊರ್ಮುಜ್ ಜಲಸಂಧಿಯ ಬಳಿ ಹಡಗು ಡಿಕ್ಕಿ: ಇಬ್ಬರು ಭಾರತೀಯರಿಗೆ ಗಾಯ
ಯುಎಇ ತನ್ನ ತೈಲ ಉತ್ಪಾದನೆಯನ್ನು ದಿನಕ್ಕೆ ಒಂದು ಮಿಲಿಯನ್ ಬ್ಯಾರೆಲ್‌ಗಳಷ್ಟು ತಕ್ಷಣ ಹೆಚ್ಚಿಸಬಹುದಾದ್ದರಿಂದ ಭಾರತದ ಪಾಲಿಗೆ ಇದು ಗುಡ್‌ನ್ಯೂಸ್ ಎಂದೇ ಪರಿಗಣಿಸಲಾಗಿದೆ. ಯುಎಇ ಈಗಾಗಲೇ ಭಾರತದ ಪ್ರಮುಖ ಕಚ್ಚಾ ತೈಲ ಪೂರೈಕೆ ದೇಶವಾಗಿದೆ. ಪರ್ಷಿಯನ್ ಕೊಲ್ಲಿ ಮತ್ತು ಹೊರ್ಮುಜ್ ಜಲಸಂಧಿಯಲ್ಲಿನ ಅಡೆತಡೆಗಳ ನಡುವೆ ಭಾರತ ಫುಜೈರಾ ಮೂಲಕ ಇಂಧನ ಸ್ವೀಕರಿಸಲಿದೆ. ಈಗ ಒಪೆಕ್‌ನಿಂದ ಯುಎಇ ಹಿಂದೆ ಸರಿದ ಕಾರಣ ಭಾರತಕ್ಕೆ ಹೆಚ್ಚಿನ ತೈಲ, ಕಚ್ಚಾ ತೈಲವನ್ನು ಕಳುಹಿಸಲು ಸಾಧ್ಯವಾಗಲಿದೆ.
ಮಂಗಳವಾರ (ಏಪ್ರಿಲ್ 28) ಅಬುಧಾಬಿ ತೆಗೆದುಕೊಂಡ ನಿರ್ಧಾರವು ಒಪೆಕ್‌ನಲ್ಲಿ ಸುಮಾರು 60 ವರ್ಷಗಳ ಯುಎಇಯ ಸದಸ್ಯತ್ವವನ್ನು ಕೊನೆಗೊಳಿಸಿದೆ. ಉತ್ಪಾದನಾ ನೀತಿ ಮತ್ತು ರಾಷ್ಟ್ರೀಯ ಹಿತಾಸಕ್ತಿಯ ಗಮನಿಸಿಯೇ ಈ ನಿರ್ಧಾರ ತೆಗೆದುಕೊಂಡಿರುವುದಾಗಿ ಯುಎಇ ತಿಳಿಸಿದೆ.
ಹಲವು ವರ್ಷಗಳಿಂದ ಒಪೆಕ್ ಯುಎಇಯ ಉತ್ಪಾದನೆಯನ್ನು ದಿನಕ್ಕೆ ಸುಮಾರು 3.4 ಮಿಲಿಯನ್ ಬ್ಯಾರೆಲ್‌ಗಳಿಗೆ ಮಿತಿಗೊಳಿಸಿತ್ತು. ದೇಶದ ನಿಕ್ಷೇಪಗಳು ಮತ್ತು ಮೂಲಸೌಕರ್ಯಗಳು ಇನ್ನೂ ಹೆಚ್ಚಿನ ತೈಲ ಉತ್ಪಾದಿಸುವ ಸಾಮರ್ಥ್ಯ ಹೊಂದಿವೆ. ಸೌದಿ ಅರೇಬಿಯಾ ನೇತೃತ್ವದ ಕಾರ್ಟೆಲ್ ಹೆಚ್ಚಿನ ತೈಲ ಮಾರುಕಟ್ಟೆಯಲ್ಲಿ ಪ್ರವಾಹವನ್ನುಂತೆ ಬೆಲೆ ಕುಸಿಯದಂತೆ ತಡೆಯಲು ಈ ಮಿತಿ ನಿಗದಿಪಡಿಸಿದೆ. ಬೆಲೆಗಳನ್ನು ಸ್ಥಿರವಾಗಿಡಲು ಮತ್ತು ಆದಾಯ ಕಾಯ್ದುಕೊಳ್ಳಲು OPEC ಸದಸ್ಯ ರಾಷ್ಟ್ರಗಳು ಕಡಿಮೆ ಉತ್ಪಾದನೆ ಒಪ್ಪಂದಕ್ಕೆ ಬಂದಿವೆ. ಯುಎಇ ದಿನಕ್ಕೆ 4.8-5 ಮಿಲಿಯನ್ ಬ್ಯಾರೆಲ್ ಉತ್ಪಾದಿಸುತ್ತಿದೆ.

ಚಿತ್ರಕೃಪೆ: ಇಂಡಿಯಾ ಟುಡೆ
ಹಬ್ಶಾನ್-ಫುಜೈರಾ ತೈಲ ಪೈಪ್‌ಲೈನ್ ವೈಶಿಷ್ಟ್ಯ
ಅಬುಧಾಬಿ ಕಚ್ಚಾ ತೈಲ ಪೈಪ್‌ಲೈನ್ (ADCOP) ಎಂದೂ ಹಬ್ಶಾನ್-ಫುಜೈರಾ ತೈಲ ಪೈಪ್‌ಲೈನ್ ಅನ್ನು ಕರೆಯಲಾಗುತ್ತದೆ. ಅಬುಧಾಬಿಯ ಹಬ್ಶಾನ್ ತೈಲ ಕ್ಷೇತ್ರಗಳಿಂದ ಓಮನ್ ಕೊಲ್ಲಿಯ ಫುಜೈರಾ ಬಂದರಿನವರೆಗೆ 380-406 ಕಿ.ಮೀ. ವಿಸ್ತರಿಸಿರುವ ಈ ಪೈಪ್‌ಲೈನ್ ಅನ್ನು ಹೊರ್ಮುಜ್‌ನ ಕಿರಿದಾದ ಜಲಸಂಧಿಯನ್ನು ತಪ್ಪಿಸಲು ನಿರ್ಮಿಸಲಾಗಿದೆ.
ಸುಮಾರು 4 ಬಿಲಿಯನ್ ಡಾಲರ್ ವೆಚ್ಚದಲ್ಲಿ 2012ರಲ್ಲಿ ಪೂರ್ಣಗೊಂಡ 48 ಇಂಚಿನ ಪೈಪ್‌ಲೈನ್ ದಿನಕ್ಕೆ 1.5 ಮಿಲಿಯನ್ ಬ್ಯಾರೆಲ್ ತೈಲ ಸಾಗಾಟ ಸಾಮರ್ಥ್ಯವನ್ನು ಹೊಂದಿದೆ. ಫುಜೈರಾದಿಂದ ಟ್ಯಾಂಕರ್‌ಗಳು ಕಚ್ಚಾ ತೈಲವನ್ನು ಲೋಡ್ ಮಾಡಿ ನೇರವಾಗಿ ಅರೇಬಿಯನ್ ಸಮುದ್ರಕ್ಕೆ ಸಾಗುತ್ತವೆ. ಹೀಗಾಗಿ ಹೊರ್ಮುಜ್ ಜಲಸಂಧಿಯ ಅಗತ್ಯವೇ ಇರುವುದಿಲ್ಲ.
ಭಾರತಕ್ಕೆ ಉಪಯುಕ್ತ
ಭಾರತಕ್ಕೆ ಈ ಮಾರ್ಗವು ಉಪಯುಕ್ತ ಎನ್ನುವುದು ಈಗಾಗಲೇ ಸಾಬೀತಾಗಿದೆ. ಹೊರ್ಮುಜ್ ಸಂಕಷ್ಟದ ಬಳಿಕ ಭಾರತೀಯ ಸಂಸ್ಕರಣಾಗಾರಗಳು ಫುಜೈರಾ ಮೂಲಕ ಆಮದು ಹೆಚ್ಚಿಸಿದೆ. ಯುಎಇ ಈಗ ಒಪೆಕ್ ಮಿತಿಗಳಿಂದ ಮುಕ್ತವಾಗಿರುವುದರಿಂದ ಕೋಟಾ ಚಿಂತೆಗಳಿಲ್ಲದೆ ಹೆಚ್ಚಿನ ಕಚ್ಚಾ ತೈಲವು ಈ ಮಾರ್ಗದ ಮೂಲಕ ಸಾಗಲಿದೆ.
ಭಾರತ ಮತ್ತು ಯುಎಇ ತೈಲ ಒಪ್ಪಂದವನ್ನು ಮೀರಿದ ಸಮಗ್ರ ಕಾರ್ಯತಂತ್ರದ ಪಾಲುದಾರಿಕೆ ಹೊಂದಿವೆ. ಎರಡೂ ದೇಶಗಳ ನಡುವಿನ ದ್ವಿಪಕ್ಷೀಯ ವ್ಯಾಪಾರವು ಪ್ರಸ್ತುತ 200 ಶತಕೋಟಿ ಡಾಲರ್ ಗುರಿಯತ್ತ ಸಾಗುತ್ತಿದೆ. ಯುಎಇ ಭಾರತದ ಕಚ್ಚಾ ಇಂಧನ ಆಮದುಗಳ ಪೈಕಿ ಸುಮಾರು ಶೇಕಡಾ 9-10ರಷ್ಟು ಪೂರೈಸುತ್ತದೆ ಮತ್ತು ಪ್ರಮುಖ ಎಲ್‌ಎನ್‌ಜಿ ಪೂರೈಕೆದಾರ ದೇಶವೂ ಹೌದು. ಯುಎಇಯ ಒಪೆಕ್ ನಿರ್ಗಮನವು ಈ ಬಂಧವನ್ನು ಬಲಪಡಿಸುವ ಸಾಧ್ಯತೆ ಇದೆ.
ದೇಶದ ಇನ್ನಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.
ʼಪ್ರವಾಸಿ ಪ್ರಪಂಚʼ ವೆಬ್‌ಸೈಟ್‌ಗೆ ಭೇಟಿ ನೀಡಲು ಇಲ್ಲಿ ಕ್ಲಿಕ್ ಮಾಡಿ.