ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಫ್ಲೈದುಬೈ ಕಾಕ್‌ಪಿಟ್ ದಾಳಿ ಪ್ರಕರಣ: ಭಾರತೀಯ ಕ್ಯಾಪ್ಟನ್ ಮೇಲೆ ದಾಳಿ ನಡೆಸಿದ್ದ ಒಮಾನಿ ಪೈಲಟ್‌ನ ಆಪ್ತ ಮಾಲ್ಡೀವ್ಸ್‌ನ ಇಬ್ಬರು ಕೋ-ಪೈಲಟ್‌ಗಳು ಅರೆಸ್ಟ್!

ದುಬೈನಿಂದ ಟೆಲ್ ಅವಿವ್‌ಗೆ ತೆರಳುತ್ತಿದ್ದ ಫ್ಲೈದುಬೈ FZ1073 ವಿಮಾನದಲ್ಲಿ ಭಾರತೀಯ ಮೂಲದ ಕ್ಯಾಪ್ಟನ್ ಸ್ಮಿತ್ ಮಚ್ಚಾರ್ ಅವರ ಮೇಲೆ ಕೊಡಲಿಯಿಂದ ಹಲ್ಲೆ ನಡೆಸಿ ವಿಮಾನ ಅಪಹರಣಕ್ಕೆ ಯತ್ನಿಸಿದ ಪ್ರಕರಣದ ತನಿಖೆಯನ್ನು ಯುಎಇ ಅಧಿಕಾರಿಗಳು ತೀವ್ರಗೊಳಿಸಿದ್ದಾರೆ. ಪ್ರಕರಣದಲ್ಲಿ ಬಂಧಿತನಾಗಿರುವ ಒಮಾನಿ ಸಹ-ಪೈಲಟ್ ಹಮಾಮ್ ಅಲ್-ಹಮ್ಮಾಮಿಯ ಆಪ್ತ ಸಂಪರ್ಕ ಹೊಂದಿದ್ದ ಮಾಲ್ಡೀವ್ಸ್ ಮೂಲದ ಇಬ್ಬರು ಸಹ-ಪೈಲಟ್‌ಗಳನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗಿದೆ.

ಫ್ಲೈದುಬೈ ಕಾಕ್‌ಪಿಟ್ ದಾಳಿ ಪ್ರಕರಣಕ್ಮೆ ಟ್ವಿಸ್ಟ್

ಬಂಧಿತ ಒಮಾನಿ ಕೋ-ಪೈಲಟ್ ಹಮಾಮ್ ಅಲ್-ಹಮ್ಮಾಮಿಯ -

Profile
Sushmitha Jain Oct 13, 2026 7:31 PM

ನವದೆಹಲಿ: ದುಬೈ (Dubai)ನಿಂದ ಟೆಲ್ ಅವಿವ್‌ (Tel Aviv)ಗೆ ಸೆಪ್ಟೆಂಬರ್ 30 ರಂದು ತೆರಳುತ್ತಿದ್ದ ಫ್ಲೈದುಬೈ (Flydubai) FZ1073 ವಿಮಾನದ ಕಾಕ್‌ಪಿಟ್‌ನಲ್ಲಿ ಭಾರತೀಯ ಮೂಲದ ಮುಖ್ಯ ಕ್ಯಾಪ್ಟನ್ ಸ್ಮಿತ್ ಮಚ್ಚಾರ್(Smit Machchaar) ಮೇಲೆ ಕೊಡಲಿಯಿಂದ ಹಲ್ಲೆ ನಡೆಸಿ ವಿಮಾನ ಅಪಹರಣಕ್ಕೆ ಯತ್ನಿಸಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ, ಯುನೈಟೆಡ್ ಅರಬ್ ಎಮಿರೇಟ್ಸ್ ತನಿಖಾಧಿಕಾರಿಗಳು ಮಾಲ್ಡೀವ್ಸ್ ಮೂಲದ ಇಬ್ಬರು ಕೋ-ಪೈಲಟ್‌ಗಳನ್ನು ವಶಕ್ಕೆ ಪಡೆದಿದ್ದಾರೆ.

ಬಂಧಿತ ಒಮಾನಿ ಕೋ-ಪೈಲಟ್ ಹಮಾಮ್ ಅಲ್-ಹಮ್ಮಾಮಿಯ ಹಿನ್ನೆಲೆ ಹಾಗೂ ಆತನ ಸಂಪರ್ಕ ಜಾಲದ ತನಿಖೆಯನ್ನು ವಿಸ್ತರಿಸಿರುವ ಯುಎಇ ಭಯೋತ್ಪಾದನಾ ನಿಗ್ರಹ ದಳದ ಅಧಿಕಾರಿಗಳು, ಅಕ್ಟೋಬರ್ 3 ರಂದು ಫ್ಲೈದುಬೈನಲ್ಲಿ ಕಾರ್ಯನಿರ್ವಹಿಸುತ್ತಿದ್ದ ಮಾಲ್ಡೀವ್ಸ್‌ನ ಇಬ್ಬರು ಸಹ-ಪೈಲಟ್‌ಗಳನ್ನು ವಶಕ್ಕೆ ಪಡೆದಿದ್ದಾರೆ. ಈ ಇಬ್ಬರು ಪೈಲಟ್‌ಗಳು ಹಮ್ಮಾಮಿಯೊಂದಿಗೆ ನಿಕಟ ವೈಯಕ್ತಿಕ ಹಾಗೂ ವೃತ್ತಿಪರ ಸಂಬಂಧ ಹೊಂದಿದ್ದರು. ಅವರು ಒಟ್ಟಿಗೆ ವಿಮಾನ ಶಿಫ್ಟ್‌ಗಳಲ್ಲಿ ಕೆಲಸ ಮಾಡುತ್ತಿದ್ದಲ್ಲದೆ, ಒಂದೇ ವಸತಿ ಕಟ್ಟಡದಲ್ಲಿ ವಾಸಿಸುತ್ತಿದ್ದರು ಎಂದು ಪ್ರಾಥಮಿಕ ತನಿಖೆಯಲ್ಲಿ ತಿಳಿದುಬಂದಿದೆ.

ಹಮಾಮ್ ಅಲ್-ಹಮ್ಮಾಮಿ ತನ್ನೊಂದಿಗೆ ತೀವ್ರಗಾಮಿ ಸಿದ್ಧಾಂತ, ಹುತಾತ್ಮತೆ ಅಥವಾ 9/11 ಮಾದರಿಯ ಆತ್ಮಹತ್ಯಾ ದಾಳಿಯ ಬಗ್ಗೆ ಚರ್ಚಿಸಿದ್ದನೇ ಎಂಬುದನ್ನು ಪತ್ತೆಹಚ್ಚಲು ಅಧಿಕಾರಿಗಳು ಈ ಮಾಲ್ಡೀವ್ಸ್ ಪೈಲಟ್‌ಗಳ ಡಿಜಿಟಲ್ ಸಂವಹನ, ಫೋನ್ ಕರೆಗಳು ಹಾಗೂ ಸಭೆಗಳ ದಾಖಲೆಗಳನ್ನು ತೀವ್ರ ಪರಿಶೀಲನೆಗೆ ಒಳಪಡಿಸಿದ್ದಾರೆ.

ʼʼಕ್ಯಾಪ್ಟನ್‌ ಸ್ಮಿತ್‌ ಮಚ್ಚಾರ್‌ ಚೇತರಿಸಿಕೊಳ್ಳುತ್ತಿದ್ದಾರೆʼʼ: ಫ್ಲೈದುಬೈ ಹೀರೋ ಆರೋಗ್ಯದ ಬಗ್ಗೆ ಮಹತ್ವದ ಅಪ್‌ಡೇಟ್‌ ನೀಡಿದ ಭಾರತೀಯ ರಾಯಭಾರ ಕಚೇರಿ

ಅಲ್-ಖೈದಾ ಪ್ರೇರಿತ 'ಲೋನ್ ವುಲ್ಫ್' ದಾಳಿ:

ಯುಎಇ ತನಿಖಾಧಿಕಾರಿಗಳ ಪ್ರಕಾರ, ಹಮ್ಮಾಮಿ ಈ ಸಂಚಿನಲ್ಲಿ ತಾನು ಏಕಾಂಗಿಯಾಗಿ ಭಾಗಿಯಾಗಿರುವುದಾಗಿ ತಪ್ಪೊಪ್ಪಿಕೊಂಡಿದ್ದಾನೆ. ಆತನ ಸಾಮಾಜಿಕ ಜಾಲತಾಣಗಳನ್ನು ಪರಿಶೀಲಿಸಿದಾಗ ಒಸಾಮಾ ಬಿನ್ ಲಾಡೆನ್, ಅಯ್ಮನ್ ಅಲ್-ಜವಾಹಿರಿ ಸೇರಿದಂತೆ ಅಲ್-ಖೈದಾ ನಾಯಕರ ಚಿತ್ರಗಳು ಪತ್ತೆಯಾಗಿವೆ. ಯೆಮೆನ್ ಮೂಲದ ಅಲ್-ಖೈದಾ ಸಂಘಟನೆ ಆತನನ್ನು 'ಹೀರೋ' ಎಂದು ಕೊಂಡಾಡಿದ್ದರೂ, ಆತನಿಗೆ ಯಾವುದೇ ಉಗ್ರ ಸಂಘಟನೆಯೊಂದಿಗೆ ಅಧಿಕೃತ ಸಾಂಸ್ಥಿಕ ನಂಟಿರುವುದು ದೃಢಪಟ್ಟಿಲ್ಲ. ಬದಲಾಗಿ, ಆತ ಸ್ವಯಂ-ಪ್ರೇರಿತ 'ಲೋನ್ ವುಲ್ಫ್' ಉಗ್ರ ಎಂದು ಗುಪ್ತಚರ ಸಂಸ್ಥೆಗಳು ಗುರುತಿಸಿವೆ.

2001ರ ಅಮೆರಿಕದ 9/11 ದಾಳಿಯ ಮಾದರಿಯಲ್ಲೇ ಪ್ಯಾಸೆಂಜರ್ ವಿಮಾನವನ್ನು ಆತ್ಮಹತ್ಯಾ ಅಸ್ತ್ರವಾಗಿ ಬಳಸಲು ಹಮ್ಮಾಮಿ ಹಲವು ವರ್ಷಗಳಿಂದ ಹವಣಿಸುತ್ತಿದ್ದ. ದುಬೈನಿಂದ ಟೆಲ್ ಅವಿವ್‌ಗೆ ನೇರ ವಿಮಾನ ಕಾರ್ಯಾಚರಣೆ ನಡೆಸುವ ಏಕೈಕ ಕಾರಣಕ್ಕೆ ಆತ ಫ್ಲೈದುಬೈ ಏರ್‌ಲೈನ್ಸ್ ಆಯ್ಕೆ ಮಾಡಿಕೊಂಡಿದ್ದ. ದಾಳಿಗೆ ಮುನ್ನ ಅದೇ ಮಾರ್ಗದಲ್ಲಿ ಎರಡು ಬಾರಿ ಪ್ರಯಾಣಿಸಿ ವಿಮಾನ ನಿಲ್ದಾಣ ಮತ್ತು ಮಾರ್ಗದ ರಹಸ್ಯ ಮಾಹಿತಿ ಸಂಗ್ರಹಿಸಿದ್ದ ಎಂದು ತನಿಖೆಯಲ್ಲಿ ಬಹಿರಂಗವಾಗಿದೆ.

ಈ ಘಟನೆಯು ಪಶ್ಚಿಮ ಏಷ್ಯಾದ ನಾಗರಿಕ ವಿಮಾನಯಾನ ಭದ್ರತಾ ತಪಾಸಣೆ ಮತ್ತು ಸಿಬ್ಬಂದಿ ನೇಮಕಾತಿ ಪ್ರಕ್ರಿಯೆಯಲ್ಲಿನ ಗಂಭೀರ ಲೋಪಗಳನ್ನು ಬೆಟ್ಟುಮಾಡಿದೆ. ಒಮಾನ್‌ನಲ್ಲಿದ್ದಾಗಲೇ ತೀವ್ರಗಾಮಿ ಒಲವಿನ ಅನುಮಾನವಿದ್ದರೂ ಹಮ್ಮಾಮಿ ಫ್ಲೈದುಬೈ ಭದ್ರತಾ ತಪಾಸಣೆಯನ್ನು ಹೇಗೆ ದಾಟಿದ ಹಾಗೂ ವಶಕ್ಕೆ ಪಡೆದಿರುವ ಮಾಲ್ಡೀವ್ಸ್ ಪೈಲಟ್‌ಗಳ ಹಿನ್ನೆಲೆ ತಪಾಸಣೆಯಲ್ಲಿ ಲೋಪಗಳಿವೆಯೇ ಎಂಬ ಕುರಿತು ಅಧಿಕಾರಿಗಳು ಕೂಲಂಕಷ ತನಿಖೆ ಮುಂದುವರಿಸಿದ್ದಾರೆ.