ಇರಾನ್ ಯುದ್ಧ ಕದನ ವಿರಾಮ: ಹಾರ್ಮುಜ್ ಜಲಸಂಧಿಯಲ್ಲಿ ಸಿಲುಕಿರುವ ಭಾರತದ ತೈಲ, ಅನಿಲದ ಲೆಕ್ಕಾಚಾರ
ಇರಾನ್-ಅಮೆರಿಕ ಕದನ ವಿರಾಮದ ನಂತರ ಹಾರ್ಮುಜ್ ಜಲಸಂಧಿ ಭಾಗಶಃ ತೆರೆಯಲ್ಪಟ್ಟರೂ, ಭಾರತದ ಹಲವಾರು ತೈಲ ಮತ್ತು ಎಲ್‌ಪಿಜಿ ಹಡಗುಗಳು ಇನ್ನೂ ಸಿಲುಕಿಕೊಂಡಿವೆ. ಸುಮಾರು 68,000 ಮೆಟ್ರಿಕ್ ಟನ್ ಎಲ್‌ಪಿಜಿ ಮತ್ತು 4.23 ಲಕ್ಷ ಮೆಟ್ರಿಕ್ ಟನ್ ಕಚ್ಚಾ ತೈಲ ಸಾಗಣೆ ವಿಳಂಬವಾಗಿದ್ದು, ಸರ್ಕಾರ ಹಡಗುಗಳನ್ನು ಸುರಕ್ಷಿತವಾಗಿ ಹೊರತೆಗೆದಲು ಪ್ರಯತ್ನಿಸುತ್ತಿದೆ.
ಸಾಂದರ್ಭಿಕ ಚಿತ್ರ -
ನವದೆಹಲಿ, ಎ.8: ಅಮೆರಿಕ (America) ಮತ್ತು ಇರಾನ್ (Iran) ನಡುವೆ ಎರಡು ವಾರಗಳ ಕದನ ವಿರಾಮ (Ceasefire) ಘೋಷಣೆಯಾದ ಬೆನ್ನಲ್ಲೇ ಇರಾನ್ ತನ್ನ 'ಹಾರ್ಮುಜ್ ಜಲಸಂಧಿ (Strait of Hormuz)'ಯನ್ನು ತಾತ್ಕಾಲಿಕವಾಗಿ ತೆರೆಯಲು ಒಪ್ಪಿಕೊಂಡಿದೆ. ಆದರೆ, ಈ ಆಯಕಟ್ಟಿನ ಜಲಮಾರ್ಗದಲ್ಲಿ ಸಂಚಾರ ಇನ್ನೂ ಪೂರ್ಣ ಪ್ರಮಾಣದಲ್ಲಿ ಸಹಜ ಸ್ಥಿತಿಗೆ ಮರಳಿಲ್ಲ. ಈ ನಡುವೆ, ಅಪಾಯಕಾರಿ ಸಮುದ್ರ ಪ್ರದೇಶದಲ್ಲಿ ಭಾರತ (India)ದ ಎಷ್ಟು ಪ್ರಮಾಣದ ಇಂಧನ ಸಿಲುಕಿಕೊಂಡಿದೆ ಎಂಬ ಬಗ್ಗೆ 'ಇಂಡಿಯಾ ಟುಡೇ (India Today)' ಒಂದು ವಿಸ್ತೃತ ವಿಶ್ಲೇಷಣೆ ನಡೆಸಿದೆ.
ಸಿಲುಕಿರುವ ಭಾರತದ ಹಡಗುಗಳು
ಪ್ರಸ್ತುತ ಕನಿಷ್ಠ 20 ಭಾರತೀಯ ಧ್ವಜ ಹೊಂದಿರುವ ಹಡಗುಗಳು ಹಾರ್ಮುಜ್ ಜಲಸಂಧಿಯ ಪಶ್ಚಿಮ ಭಾಗದಲ್ಲಿ ಬಾಕಿಯಾಗಿವೆ. ಇವುಗಳಲ್ಲಿ 2 ಎಲ್‌ಪಿಜಿ (LPG) ಟ್ಯಾಂಕರ್‌ಗಳು ಮತ್ತು 4 ಕಚ್ಚಾ ತೈಲ (Crude Oil) ಟ್ಯಾಂಕರ್‌ಗಳು ಸೇರಿವೆ. 'ಬಿಡಬ್ಲ್ಯೂ ಲಾಯಲ್ಟಿ' (BW Loyalty) ಮತ್ತು 'ಜಗ್ ವಿಕ್ರಮ್' (Jag Vikram) ಎಂಬ ಎರಡು ಎಲ್‌ಪಿಜಿ ನೌಕೆಗಳು ಇಸ್ಲಾಮಾಬಾದ್ ಮಾತುಕತೆಯ ನಂತರ ಗ್ರೀನ್ ಸಿಗ್ನಲ್‌ಗಾಗಿ ಕಾಯುತ್ತಿವೆ.
ಸರಕಿನ ಲೆಕ್ಕಾಚಾರ ಹೀಗಿದೆ
ಎಲ್‌ಪಿಜಿ (LPG): ಎರಡು ಎಲ್‌ಪಿಜಿ ಹಡಗುಗಳು ಒಟ್ಟು 68,080 ಮೆಟ್ರಿಕ್ ಟನ್ ಅನಿಲವನ್ನು ಹೊತ್ತೊಯ್ಯುತ್ತಿವೆ ಎಂದು ಅಂದಾಜಿಸಲಾಗಿದೆ. ಇದು ಭಾರತದ ಸುಮಾರು 48 ಲಕ್ಷ ಮನೆಬಳಕೆಯ ಸಿಲಿಂಡರ್‌ಗಳನ್ನು (ತಲಾ 14.2 ಕೆಜಿ) ಭರ್ತಿ ಮಾಡಲು ಸಾಕಾಗುತ್ತದೆ.
ಕಚ್ಚಾ ತೈಲ (Crude Oil):
ದೇಶ್ ವೈಭವ್, ದೇಶ್ ಸುರಕ್ಷಾ, ದೇಶ್ ವಿಭೋರ್ ಮತ್ತು ದೇಶ್ ಗರಿಮಾ ಎಂಬ ನಾಲ್ಕು ಬೃಹತ್ ತೈಲ ನೌಕೆಗಳು ಸುಮಾರು 4.23 ಲಕ್ಷ ಮೆಟ್ರಿಕ್ ಟನ್ ಕಚ್ಚಾ ತೈಲವನ್ನು ಹೊಂದಿವೆ. ಇದು ಸರಿಸುಮಾರು 31 ಲಕ್ಷ ಬ್ಯಾರೆಲ್ ತೈಲಕ್ಕೆ ಸಮನಾಗಿದೆ. ಈ ತೈಲವು ಭಾರತದ ಸಂಸ್ಕರಣಾಗಾರಗಳನ್ನು ತಲುಪಿದ ನಂತರ ಪೆಟ್ರೋಲ್, ಡೀಸೆಲ್ ಆಗಿ ಪರಿವರ್ತನೆಯಾಗಲಿದೆ.
ಕದನ ವಿರಾಮ ಜಾರಿಯಾದರೂ ಬಗೆಹರಿದಿಲ್ಲ ಸಮಸ್ಯೆ; ಹಾರ್ಮೊಜ್‌ನಲ್ಲಿ ಅನುಮತಿ ಪಡೆಯದ ಹಡಗು ನಾಶ ಎಂದ ಇರಾನ್
ಸರ್ಕಾರದ ಪ್ರಯತ್ನ
ಈ ಕುರಿತು ಮಾಹಿತಿ ನೀಡಿದ ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ರಣಧೀರ್ ಜೈಸ್ವಾಲ್, "ಹಲವು ಹಡಗುಗಳು ಈಗಾಗಲೇ ಜಲಸಂಧಿಯನ್ನು ದಾಟಿವೆ. ಗಲ್ಫ್ ರಾಷ್ಟ್ರಗಳ ಭಾಗಿದಾರರೊಂದಿಗೆ ನಾವು ನಿರಂತರ ಸಂಪರ್ಕದಲ್ಲಿದ್ದು, ಬಾಕಿಯಿರುವ ಹಡಗುಗಳನ್ನು ಆದಷ್ಟು ಬೇಗ ಸುರಕ್ಷಿತವಾಗಿ ಭಾರತಕ್ಕೆ ತರಲು ಪ್ರಯತ್ನಿಸುತ್ತಿದ್ದೇವೆ," ಎಂದು ತಿಳಿಸಿದ್ದಾರೆ.
ಈಗಾಗಲೇ ಭಾರತ ಸರ್ಕಾರದ ಮಾತುಕತೆಯ ಫಲವಾಗಿ 8 ಎಲ್‌ಪಿಜಿ ಟ್ಯಾಂಕರ್‌ಗಳು ಮತ್ತು 3 ತೈಲ ಟ್ಯಾಂಕರ್‌ಗಳು ಜಲಸಂಧಿಯನ್ನು ದಾಟಿ ಸುರಕ್ಷಿತವಾಗಿ ಹೊರಬಂದಿವೆ. ಉಳಿದ ಹಡಗುಗಳು ಕೂಡ ಮುಂದಿನ ಕೆಲವು ದಿನಗಳಲ್ಲಿ ಭಾರತದತ್ತ ಪ್ರಯಾಣ ಬೆಳೆಸುವ ನಿರೀಕ್ಷೆಯಿದೆ. ಈ ಕದನ ವಿರಾಮವು ಭಾರತದ ಇಂಧನ ಪೂರೈಕೆಯಲ್ಲಿ ಉಂಟಾಗಿದ್ದ ಅನಿಶ್ಚಿತತೆಯನ್ನು ಬಹುತೇಕ ದೂರ ಮಾಡಿದೆ.