ಇರಾನ್ ಪರಮಾಣು ಸ್ಥಾವರವನ್ನೇ ಟಾರ್ಗೆಟ್ ಮಾಡ್ತಾ ಅಮೆರಿಕ, ಇಸ್ರೇಲ್? ಹಾನಿಯಾಗಿದ್ದೆಷ್ಟು?
Iran’s envoy makes serious allegation: ಅಮೆರಿಕ ಮತ್ತು ಇಸ್ರೇಲ್, ಇರಾನಿನ ಪರಮಾಣು ಸೌಲಭ್ಯಗಳ ಮೇಲೆ ದಾಳಿ ಮಾಡಿದ್ದಾರೆ ಎಂದು ಅಂತಾರಾಷ್ಟ್ರೀಯ ಪರಮಾಣು ಇಂಧನ ಸಂಸ್ಥೆ (IAEA) ಯ ಇರಾನ್ ರಾಯಭಾರಿ ಆರೋಪಿಸಿದ್ದಾರೆ. ಆದರೆ, ಇದಕ್ಕೆ ಯಾವುದೇ ಸಾಕ್ಷ್ಯವಿಲ್ಲ ಎಂದು ಯುಎನ್ ಅಣು ಮೇಲ್ವಿಚಾರಕ ಸಂಸ್ಥೆಯ ಮುಖ್ಯಸ್ಥ ರಫೇಲ್ ಗ್ರೂಸಿ ಹೇಳಿದ್ದಾರೆ.
ಯುಎಸ್-ಇಸ್ರೇಲ್ ವಿರುದ್ಧ ಇರಾನ್ ರಾಯಭಾರಿ ಗಂಭೀರ ಆರೋಪ -
ಟೆಹ್ರಾನ್, ಮಾ.2: ಅಮೆರಿಕ ಮತ್ತು ಇಸ್ರೇಲ್, ಇರಾನಿನ ಪರಮಾಣು ಸೌಲಭ್ಯಗಳ ಮೇಲೆ ದಾಳಿ ಮಾಡಿದ್ದಾರೆ (US-Israel strikes) ಎಂದು ಅಂತಾರಾಷ್ಟ್ರೀಯ ಪರಮಾಣು ಇಂಧನ ಸಂಸ್ಥೆ (IAEA) ಯ ಇರಾನ್ ರಾಯಭಾರಿ (Iran’s envoy) ಆರೋಪಿಸಿದ್ದಾರೆ. ಆದರೆ, ವರದಿಯಾದ ದಾಳಿಗಳಲ್ಲಿ ಯಾವುದೇ ಪರಮಾಣು ತಾಣಗಳು ಹಾನಿಗೊಳಗಾಗಿವೆ ಎಂಬುದಕ್ಕೆ ಯಾವುದೇ ಪುರಾವೆಗಳಿಲ್ಲ ಎಂದು ವಿಶ್ವಸಂಸ್ಥೆಯ ಅಣು ಮೇಲ್ವಿಚಾರಕ ಸಂಸ್ಥೆಯ ಮುಖ್ಯಸ್ಥ ರಫೇಲ್ ಗ್ರೂಸಿ ಹೇಳಿದ್ದಾರೆ.
ಇಸ್ರೇಲ್ ಮತ್ತು ಅಮೆರಿಕ, ಇರಾನ್‌ನ ಅಣು ಮಹತ್ವಾಕಾಂಕ್ಷೆಯನ್ನು ದಾಳಿಗಳಿಗೆ ಪ್ರಮುಖ ಕಾರಣವೆಂದು ಉಲ್ಲೇಖಿಸಿವೆ. ಟೆಹ್ರಾನ್ ಅಣ್ವಸ್ತ್ರ ನಿರ್ಮಾಣ ಸಾಮರ್ಥ್ಯವನ್ನು ಅಭಿವೃದ್ಧಿಪಡಿಸುವ ಹಂತಕ್ಕೆ ಸಮೀಪಿಸುತ್ತಿದೆ ಎಂದು ಅವರು ಹೇಳಿದ್ದಾರೆ.
ಇರಾನ್‌ನ ಐಎಇಎ ರಾಯಭಾರಿ ರೆಝಾ ನಜಾಫಿ ಅವರು, ಅಮೆರಿಕ-ಇಸ್ರೇಲ್ ದಾಳಿಗಳು ಅಣುಕೇಂದ್ರವನ್ನು ಗುರಿಯಾಗಿಸಿಕೊಂಡಿವೆ ಎಂದು ಆರೋಪಿಸಿದ್ದಾರೆ. ಈ ದಾಳಿಗಳನ್ನು ಅವರು ಕಾನೂನುಬಾಹಿರ ಮತ್ತು ಕ್ರೂರ ಎಂದು ಖಂಡಿಸಿದ್ದಾರೆ. ನಟಾಂಜ್ ಮೇಲೆ ದಾಳಿ ನಡೆಸಿರುವ ಬಗ್ಗೆ ಇಸ್ರೇಲ್ ಮತ್ತು ಅಮೆರಿಕ ಒಪ್ಪಿಕೊಂಡಿಲ್ಲ. ಯಾವುದೇ ಪರಮಾಣು ಕೇಂದ್ರಗಳು ಹಾನಿಗೊಳಗಾಗಿವೆ ಎಂಬುದಕ್ಕೆ ಯಾವುದೇ ಪುರಾವೆ ಇಲ್ಲ ಎಂದು ಐಎಇಎ ಮಹಾನಿರ್ದೇಶಕ ರಾಫೆಲ್ ಗ್ರೊಸಿ ಹೇಳಿದರು.
ಇಸ್ರೇಲ್ ಪ್ರಧಾನಿ ಕಚೇರಿ ಗುರಿಯಾಗಿರಿಸಿ ಇರಾನ್ ಕ್ಷಿಪಣಿ ದಾಳಿ; ಬೆಂಜಮಿನ್ ನೆತನ್ಯಾಹುಗೆ ಅಪಾಯ?
ಕಳೆದ ಮೂರು ದಿನಗಳಿಂದ ಮಧ್ಯಪ್ರಾಚ್ಯದಲ್ಲಿ ಸಂಘರ್ಷ ತೀವ್ರವಾಗಿ ಹೆಚ್ಚುತ್ತಿದ್ದು, ಯುಎಸ್-ಇಸ್ರೇಲ್ ಮಿತ್ರ ರಾಷ್ಟ್ರಗಳ ಮೇಲೂ ಪರಿಣಾಮ ಬೀರಿವೆ. ಗಲ್ಫ್ ಪ್ರದೇಶದ ಕೆಲವು ಭಾಗಗಳ ಮೇಲೆ ಇರಾನ್ ದಾಳಿ ನಡೆಸಿದೆ. ಅಮೆರಿಕ-ಇಸ್ರೇಲ್ ದಾಳಿಗೆ ಇರಾನ್‌ನಾದ್ಯಂತ ಇಲ್ಲಿಯವರೆಗೆ ಕನಿಷ್ಠ 555 ಜನರು ಮೃತಪಟ್ಟಿದ್ದಾರೆ. ಇಸ್ರೇಲಿ ದಾಳಿಗಳು ದಕ್ಷಿಣ ಲೆಬನಾನ್‌ಗೂ ವಿಸ್ತರಿಸಿವೆ. ಅಲ್ಲಿ ಕನಿಷ್ಠ 31 ಜನರು ಸಾವಿಗೀಡಾಗಿದ್ದಾರೆ ಎಂದು ವರದಿಯಾಗಿದೆ.
ಅಮೆರಿಕ ಮತ್ತು ಇಸ್ರೇಲ್ ಶನಿವಾರ (ಫೆ.28) ಇರಾನ್ ಮೇಲೆ ಸಂಘಟಿತ ದಾಳಿಗಳನ್ನು ನಡೆಸಿದ್ದವು. ಟೆಹ್ರಾನ್ ಕೂಡ ಇಸ್ರೇಲ್ ಮತ್ತು ಈ ಪ್ರದೇಶದಲ್ಲಿನ ಅಮೆರಿಕದ ನೆಲೆಗಳ ಮೇಲೆ ಪ್ರತೀಕಾರದ ದಾಳಿಗಳನ್ನು ಪ್ರಾರಂಭಿಸಿತು. ಇರಾನಿನ ಸರ್ವೋಚ್ಚ ನಾಯಕ ಅಯತೊಲ್ಲಾ ಅಲಿ ಖಮೇನಿಯ ಹತ್ಯೆ ಬಳಿಕ ಇರಾನ್ ಪ್ರತೀಕಾರದ ಪ್ರತಿಜ್ಞೆ ಮಾಡಿದೆ.
ಇರಾನ್‌ನ ಹಿರಿಯ ಅಧಿಕಾರಿಯೊಬ್ಬರು ಅಮೆರಿಕದೊಂದಿಗೆ ಯಾವುದೇ ಮಾತುಕತೆ ನಡೆಸುವುದಿಲ್ಲ ಎಂದು ಹೇಳಿದೆ. ನಾವು ಅಮೆರಿಕ ಜೊತೆ ಮಾತುಕತೆ ನಡೆಸುವುದಿಲ್ಲ ಎಂದು ಇರಾನ್‍ನ ಉನ್ನತ ಭದ್ರತಾ ಅಧಿಕಾರಿ ಅಲಿ ಲಾರಿಜಾನಿ ಹೇಳಿದ್ದಾರೆ.
ಇಸ್ರೇಲ್ ಮತ್ತು ಅಮೆರಿಕದ ಪಡೆಗಳಿಗೆ ಆತಿಥ್ಯ ವಹಿಸಿರುವ ಗಲ್ಫ್ ದೇಶಗಳ ಮೇಲೆ ಇರಾನ್, ಡ್ರೋನ್‌ಗಳು ಮತ್ತು ಕ್ಷಿಪಣಿಗಳನ್ನು ಹಾರಿಸಿದೆ. ಈ ಸಂಘರ್ಷದಲ್ಲಿ ಮೂವರು ಅಮೆರಿಕನ್ ಸೈನಿಕರು ಮೃತಪಟ್ಟಿದ್ದಾರೆ ಎಂದು ಯುಎಸ್ ಸೆಂಟ್ರಲ್ ಕಮಾಂಡ್ ವರದಿ ಮಾಡಿದೆ.
ಇರಾನ್‌ನಲ್ಲಿ 3 ದಿನದಲ್ಲಿ 550ಕ್ಕೂ ಅಧಿಕ ಸಾವು; ಅಮೆರಿಕದಿಂದ ಮತ್ತೆ ಕ್ಷಿಪಣಿ ದಾಳಿ
ಈ ಮಧ್ಯೆ ಇಸ್ರೇಲ್, ಟೆಹ್ರಾನ್ ಮೇಲೆ ದಾಳಿಗಳನ್ನು ಮುಂದುವರೆಸಿದೆ. ಲೆಬನಾನ್‌ಗೆ ಈ ಕಾರ್ಯಾಚರಣೆಯನ್ನು ವಿಸ್ತರಿಸಿದೆ. ಹೆಜ್ಬೊಲ್ಲಾವು ಇಸ್ರೇಲಿ ಪ್ರದೇಶದ ಕಡೆಗೆ ರಾಕೆಟ್‌ಗಳು ಮತ್ತು ಡ್ರೋನ್‌ಗಳನ್ನು ಹಾರಿಸುತ್ತಿದ್ದಂತೆ ಇಸ್ರೇಲಿ ಮಿಲಿಟರಿ ಅಧಿಕಾರಿಗಳು ಹಲವು ದಿನಗಳ ಯುದ್ಧದ ಬಗ್ಗೆ ಎಚ್ಚರಿಸಿದ್ದಾರೆ.
ಈ ಸಂಘರ್ಷವು ಈಗಾಗಲೇ ಜಾಗತಿಕ ಪರಿಣಾಮಗಳನ್ನು ಉಂಟುಮಾಡುತ್ತಿದೆ. ಸುಯೆಜ್ ಕಾಲುವೆಯ ಮೂಲಕ ಸಾಗಣೆಯನ್ನು ಕೆಲವು ಕಂಪನಿಗಳು ಸ್ಥಗಿತಗೊಳಿಸಿವೆ. ಮಧ್ಯಪ್ರಾಚ್ಯದ ಅನೇಕ ದೇಶಗಳಲ್ಲಿ ವಾಯುಪ್ರದೇಶ ಮುಚ್ಚಲಾಗಿದೆ. ಸಾವಿರಾರು ಪ್ರಯಾಣಿಕರು ತಮ್ಮ ದೇಶಗಳಿಗೆ ಹೋಗಲಾಗದೆ ಸಿಲುಕಿಕೊಂಡಿದ್ದಾರೆ. ವಿಶ್ವ ವ್ಯಾಪಾರದ ಐದನೇ ಒಂದು ಭಾಗದಷ್ಟು ಕಚ್ಚಾ ತೈಲವನ್ನು ಸಾಗಿಸುವ ಮಾರ್ಗವಾದ ಹಾರ್ಮುಜ್ ಜಲಸಂಧಿಯ ಮೂಲಕ ತೈಲ ಹರಿವಿಗೆ ಸಂಭಾವ್ಯ ಅಡ್ಡಿಯಾಗುವ ಬಗ್ಗೆ ಕಳವಳಗಳು ಹೆಚ್ಚುತ್ತಿವೆ.