Israel Attack: ಹಮಾಸ್ ಮೇಲೆ ಇಸ್ರೇಲ್ ಮತ್ತೆ ಡೆಡ್ಲಿ ಅಟ್ಯಾಕ್ ದಾಳಿ- 30 ಜನ ಬಲಿ
Israel Attack on Hamas: ಕದನ ವಿರಾಮವನ್ನು ಉಲ್ಲಂಘಿಸಿರುವ ಇಸ್ರೇಲ್ ಮಿಲಿಟರಿ ಮಂಗಳವಾರ ಹಮಾಸ್ ಮೇಲೆ ದಾಳಿ ಮುಂದುವರಿಸಿದೆ. ಇದರಿಂದ ಗಾಜಾದಲ್ಲಿ 30 ಜನರು ಸಾವನ್ನಪ್ಪಿದ್ದಾರೆ. 12ಕ್ಕೂ ಹೆಚ್ಚು ಮಂದಿ ತೀವ್ರವಾಗಿ ಗಾಯಗೊಂಡಿದ್ದಾರೆ ಎಂದು ಗಾಜಾದ ನಾಗರಿಕ ರಕ್ಷಣಾ ಸಂಸ್ಥೆ ಬುಧವಾರ ಹೇಳಿದೆ.
-
ವಿದ್ಯಾ ಇರ್ವತ್ತೂರು
Oct 29, 2025 11:30 AM
ಗಾಜಾ: ಕದನ ವಿರಾಮವನ್ನು ಉಲ್ಲಂಘಿಸಿರುವ (Ceasefire violation) ಇಸ್ರೇಲ್ ಮಿಲಿಟರಿ ಮಂಗಳವಾರ ಪ್ಯಾಲೆಸ್ಟೀನಿಯನ್ ಪ್ರದೇಶದ (Palestinian territory) ಮೇಲೆ ನಡೆಸಿದ ದಾಳಿಯಲ್ಲಿ (Israel Attack) ಸುಮಾರು 30 ಮಂದಿ ಸಾವನ್ನಪ್ಪಿದ್ದಾರೆ. 12ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ ಎಂದು ಗಾಜಾದ ನಾಗರಿಕ ರಕ್ಷಣಾ ಸಂಸ್ಥೆ (Gaza’s civil defence agency) ಬುಧವಾರ ತಿಳಿಸಿದೆ. ನಮ್ಮ ಸಿಬ್ಬಂದಿ ಅವಶೇಷಗಳ ಅಡಿಯಲ್ಲಿ ಸಿಲುಕಿರುವ ಮೃತರು ಮತ್ತು ಗಾಯಗೊಂಡವರನ್ನು ಹೊರತೆಗೆಯುವ ಕೆಲಸ ಮಾಡುತ್ತಿದ್ದಾರೆ ಎಂದು ಗಾಜಾದ ನಾಗರಿಕ ರಕ್ಷಣಾ ಸಂಸ್ಥೆಯ ವಕ್ತಾರ ಮಹ್ಮದ್ ಬಸಲ್ ತಿಳಿಸಿದ್ದಾರೆ.
ಯುಎಸ್ ನ ಮಧ್ಯಸ್ಥಿಕೆಯಲ್ಲಿ ನಡೆದಿರುವ ಕದನ ವಿರಾಮವನ್ನು ಉಲ್ಲಂಘಿಸಿ ಇಸ್ರೇಲ್ ಮಿಲಿಟರಿಯು ಮಂಗಳವಾರ ಹಮಾಸ್ ಪಡೆಗಳ ಮೇಲೆ ವಾಯುದಾಳಿ ನಡೆಸಿದೆ ಎಂದು ಗಾಜಾದ ನಾಗರಿಕ ರಕ್ಷಣಾ ಸಂಸ್ಥೆ ಹೇಳಿದ ಗಂಟೆಗಳ ಬಳಿಕ ಸಾವು ನೋವುಗಳ ವರದಿ ಹೊರ ಬಿದ್ದಿದೆ. ಕಳೆದ ವಾರ ಇಸ್ರೇಲ್‌ಗೆ ಭೇಟಿ ನೀಡಿದ ಅಮೆರಿಕದ ಉಪಾಧ್ಯಕ್ಷ ಜೆಡಿ ವ್ಯಾನ್ಸ್, ಇಸ್ರೇಲ್ ಮಂಗಳವಾರ ನಡೆಸಿದ ದಾಳಿಯ ಬಳಿಕವೂ ಕದನ ವಿರಾಮ ಮುಂದುವರೆದಿದೆ ಎಂದು ಹೇಳಿದ್ದಾರೆ.
ಕ್ಯಾಪಿಟಲ್ ಹಿಲ್‌ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕದನ ವಿರಾಮವೆಂದರೆ ಸಣ್ಣ ಚಕಮಕಿಗಳು ನಡೆಯುವುದಿಲ್ಲ ಎಂದು ಅರ್ಥವಲ್ಲ. ಹಮಾಸ್ ಅಥವಾ ಗಾಜಾದೊಳಗಿನ ಬೇರೆ ಯಾರಾದರೂ ಇಸ್ರೇಲ್ ಸೈನಿಕರ ಮೇಲೆ ದಾಳಿ ಮಾಡಿದ್ದಾರೆ ಎಂಬುದು ಗೊತ್ತಿದೆ. ಇದಕ್ಕೆ ಇಸ್ರೇಲಿಗಳು ಪ್ರತಿಕ್ರಿಯಿಸುತ್ತಾರೆ. ಇದರ ಹೊರತಾಗಿಯೂ ಶಾಂತಿ ಮುಂದುವರಿಯುತ್ತದೆ ಎಂದು ನಾನು ಭಾವಿಸುತ್ತೇನೆ ಎಂದು ಅವರು ತಿಳಿಸಿದರು.
ಉಗ್ರಗಾಮಿ ಗುಂಪು ಹಮಾಸ್ ಪ್ಯಾಲೆಸ್ಟೀನಿಯನ್ ಪ್ರದೇಶದಲ್ಲಿ ಕದನ ವಿರಾಮವನ್ನು ಉಲ್ಲಂಘಿಸಿದೆ ಎಂದು ಇಸ್ರೇಲ್ ಮಂಗಳವಾರ ಆರೋಪಿಸಿದ್ದು,ಇದರ ಬಳಿಕವೇ ಇಸ್ರೇಲ್ ವಿಮಾನಗಳು ಗಾಜಾದ ಮೇಲೆ ದಾಳಿ ನಡೆಸಿದವು. ಇದು ಈ ತಿಂಗಳ ಆರಂಭದಲ್ಲಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮಧ್ಯಸ್ಥಿಕೆಯಲ್ಲಿ ನಡೆದ ಕದನ ವಿರಾಮ ಒಪ್ಪಂದದ ಬಳಿಕ ನಡೆದಿರುವ ಒಪ್ಪಂದ ಉಲ್ಲಂಘನೆಯ ಮೊದಲ ಪ್ರಕರಣವಾಗಿದೆ.
ಇಸ್ರೇಲ್ ದಾಳಿಯಿಂದ ಕನಿಷ್ಠ 26 ಜನರು ಸಾವನ್ನಪ್ಪಿದ್ದಾರೆ. ಗಾಜಾ ಪಟ್ಟಿಯಲ್ಲಿರುವ ಬುರೈಜ್ ನಿರಾಶ್ರಿತರ ಶಿಬಿರದಲ್ಲಿ ಐದು ಜನರು, ಗಾಜಾ ನಗರದ ಸಬ್ರಾ ನೆರೆಹೊರೆಯ ಕಟ್ಟಡದಲ್ಲಿ ನಾಲ್ವರು ಮತ್ತು ಖಾನ್ ಯೂನಿಸ್‌ನಲ್ಲಿ ಕಾರಿನಲ್ಲಿ ಐದು ಜನರು ಸಾವನ್ನಪ್ಪಿದ್ದರು ಎಂದು ಸ್ಥಳೀಯ ಆರೋಗ್ಯ ಅಧಿಕಾರಿಗಳು ತಿಳಿಸಿದ್ದಾರೆ.
ಅಕ್ಟೋಬರ್ 10ರಂದು ಅಮೆರಿಕ ನೇತೃತ್ವದಲ್ಲಿ ಕದನ ವಿರಾಮ ಒಪ್ಪಂದ ಜಾರಿಗೆ ಬಂದಿತು. ಕದನ ವಿರಾಮದ ನಿಯಮಗಳ ಪ್ರಕಾರ ಹಮಾಸ್ ಸುಮಾರು 2,000 ಪ್ಯಾಲೆಸ್ಟೀನಿಯನ್ ಅಪರಾಧಿಗಳು ಮತ್ತು ಯುದ್ಧಕಾಲದ ಬಂಧಿತರಿಗೆ ಪ್ರತಿಯಾಗಿ ಎಲ್ಲಾ ಜೀವಂತ ಒತ್ತೆಯಾಳುಗಳನ್ನು ಬಿಡುಗಡೆ ಮಾಡಿತು. ಇದಕ್ಕೆ ಪ್ರತಿಯಾಗಿ ಇಸ್ರೇಲ್ ತನ್ನ ಸೈನ್ಯವನ್ನು ಹಿಂದಕ್ಕೆ ಕರೆಸಿ ದಾಳಿಯನ್ನು ನಿಲ್ಲಿಸಿತ್ತು. ಈ ಮೂಲಕ 2023ರ ಅಕ್ಟೋಬರ್ 7ರಂದು ಇಸ್ರೇಲ್ ಮೇಲೆ ಹಮಾಸ್ ನಡೆಸಿದ ದಾಳಿಯಿಂದ ಪ್ರಾರಂಭವಾದ ಯುದ್ಧ ಎರಡು ವರ್ಷಗಳ ಬಳಿಕ ನಿಂತಿತ್ತು. ಇದೀಗ ಎರಡೂ ರಾಷ್ಟ್ರಗಳೂ ಕೂಡ ಪರಸ್ಪರ ಕದನ ವಿರಾಮ ಉಲ್ಲಂಘನೆ ಮಾಡಲಾಗಿದೆ ಎಂದು ಆರೋಪಿಸಿದ್ದಾರೆ.
ಈ ಕುರಿತು ಪ್ರತಿಕ್ರಿಯಿಸಿರುವ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು, ಒತ್ತೆಯಾಳುಗಳ ಶವಗಳನ್ನು ಇಸ್ರೇಲ್‌ಗೆ ಹಿಂದಿರುಗಿಸುವ ಪ್ರಕ್ರಿಯೆಯಲ್ಲಿ ಹಮಾಸ್ ಕೆಲವು ತಪ್ಪುಗಳನ್ನು ಮಾಡಿದೆ. ಇದೀಗಹಮಾಸ್ ಕದನ ವಿರಾಮವನ್ನು ಉಲ್ಲಂಘಿಸಿದೆ ಎಂದು ಆರೋಪಿಸಿದ್ದಾರೆ.
ಇದನ್ನೂ ಓದಿ: Theft Case: ದುಬೈಯಲ್ಲಿ ಚಿನ್ನದ ನೆಕ್ಲೆಸ್ ಕದ್ದ ಯುರೋಪಿಯನ್ ಮಹಿಳೆಗೆ 3.5 ಲಕ್ಷ ರೂ. ದಂಡ
ಹಮಾಸ್ ಗುಂಪಿನ ಸಶಸ್ತ್ರ ವಿಭಾಗವಾದ ಅಲ್-ಕಸ್ಸಾಮ್ ಬ್ರಿಗೇಡ್ಸ್, ಇಸ್ರೇಲ್ ಕದನ ವಿರಾಮವನ್ನು ಉಲ್ಲಂಘಿಸಿದೆ. ಒತ್ತೆಯಾಳುಗಳ ಹಸ್ತಾಂತರವನ್ನು ಮುಂದೂಡುವುದಾಗಿ ತಿಳಿಸಿದೆ. ಅಲ್-ಕಸ್ಸಾಮ್ ಗಾಜಾದಲ್ಲಿ ಮಂಗಳವಾರ ತಡರಾತ್ರಿ ನಡೆಸಿದ ಶೋಧ ಕಾರ್ಯಾಚರಣೆಯ ವೇಳೆ ಇಬ್ಬರು ಇಸ್ರೇಲಿ ಒತ್ತೆಯಾಳುಗಳಾದ ಅಮಿರಾಮ್ ಕೂಪರ್ ಮತ್ತು ಸಹರ್ ಬರೂಚ್ ಅವರ ಶವಗಳನ್ನು ವಶಪಡಿಸಿಕೊಂಡಿದೆ ಎಂದು ಹೇಳಿದೆ.