Droupadi Murmu: ರಫೇಲ್ ಯುದ್ಧ ವಿಮಾನದಲ್ಲಿ ಹಾರಾಟ ನಡೆಸಿದ ರಾಷ್ಟ್ರಪತಿ ಮುರ್ಮು
Rafale fighter jet: ಕಾಶ್ಮೀರದ ಪಹಲ್ಗಾಮ್ ನಲ್ಲಿ ನಡೆದ ಭಯೋತ್ಪಾದಕ ದಾಳಿಗೆ ಪ್ರತಿಯಾಗಿ ಭಾರತ ನಡೆಸಿದ ಆಪರೇಷನ್ ಸಿಂದೂರ್ ಕಾರ್ಯಾಚರಣೆಯ ಪ್ರಮುಖ ಭಾಗವಾಗಿದ್ದ ಹರಿಯಾಣದ ಅಂಬಾಲಾ ವಾಯುಪಡೆ ನೆಲೆಗೆ ಭೇಟಿ ನೀಡಿದ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಇಲ್ಲಿ ರಫೇಲ್ ಯುದ್ಧ ವಿಮಾನದಲ್ಲಿ ಹಾರಾಟ ನಡೆಸಿದರು.
-
ವಿದ್ಯಾ ಇರ್ವತ್ತೂರು
Oct 29, 2025 3:09 PM
ಹರಿಯಾಣ: ಕಾಶ್ಮೀರದ (Kashmir) ಪಹಲ್ಗಾಮ್‌ನ ಬೈಸರನ್ ಕಣಿವೆಯಲ್ಲಿ ಏಪ್ರಿಲ್ 22ರಂದು ನಡೆದ ಭಯೋತ್ಪಾದಕ ದಾಳಿಗೆ (Pahalgam attack) ಪ್ರತಿಯಾಗಿ ಭಾರತೀಯ ಸೇನೆಯು ಮೇ 7ರಂದು ಆಪರೇಷನ್ ಸಿಂದೂರ್ (Operation Sindoor) ಕಾರ್ಯಾಚರಣೆ ನಡೆಸಿತ್ತು. ಈ ಕಾರ್ಯಾಚರಣೆ ವೇಳೆ ಯುದ್ಧ ವಿಮಾನಗಳು ಹರಿಯಾಣದ ಅಂಬಾಲಾ ವಾಯುಪಡೆ ನೆಲೆಯಿಂದ ( Ambala Air Force Base) ಹಾರಾಟ ನಡೆಸಿತ್ತು. ಇಲ್ಲಿಗೆ ಭೇಟಿ ನೀಡಿದ ರಾಷ್ಟ್ರಪತಿ ದ್ರೌಪದಿ ಮುರ್ಮು (President Droupadi Murmu) ಅವರು ರಫೇಲ್ ಯುದ್ಧ ವಿಮಾನದಲ್ಲಿ (Rafale fighter jet) ಹಾರಾಟ ನಡೆಸಿದರು. ಈ ಮೂಲಕ ಫ್ರೆಂಚ್ ಏರೋಸ್ಪೇಸ್ ದೈತ್ಯ ಡಸಾಲ್ಟ್ ಏವಿಯೇಷನ್ ತಯಾರಿಸಿದ ರಫೇಲ್ ನಲ್ಲಿ ಹಾರಾಟ ನಡೆಸಿದ ಭಾರತದ ಮೊದಲ ರಾಷ್ಟ್ರಪತಿ ಎಂದೆನಿಸಿಕೊಂಡರು.
ಕಳೆದ ಏಪ್ರಿಲ್ ತಿಂಗಳಲ್ಲಿ ಪಹಲ್ಗಾಮ್ ನಡೆದ ಭಯೋತ್ಪಾದಕ ದಾಳಿಗೆ ಪ್ರತಿಯಾಗಿ ಭಾರತ ಆಪರೇಷನ್ ಸಿಂದೂರ್ ಅನ್ನು ಪ್ರಾರಂಭಿಸಿದಾಗ ಹರಿಯಾಣದ ಈ ವಾಯುನೆಲೆಯಿಂದ ಹೊರಟ ರಫೇಲ್‌ಗಳು ಗಡಿಯುದ್ದಕ್ಕೂ ಭಯೋತ್ಪಾದಕ ಶಿಬಿರಗಳನ್ನು ನಾಶಮಾಡಿತ್ತು. ಈ ಮೂಲಕ ನವದೆಹಲಿಯು ಭಯೋತ್ಪಾದನಾ ವಿರೋಧಿ ಸಂದೇಶವನ್ನು ಶತ್ರು ರಾಷ್ಟ್ರಕ್ಕೆ ತಲುಪಿಸಿತ್ತು.
ಭಾರತದ ಸಶಸ್ತ್ರ ಪಡೆಗಳ ಸುಪ್ರೀಂ ಕಮಾಂಡರ್ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು 2023ರ ಏಪ್ರಿಲ್ 8ರಂದು ಅಸ್ಸಾಂನ ತೇಜ್‌ಪುರ ವಾಯುಪಡೆ ನಿಲ್ದಾಣದಲ್ಲಿ ಸುಖೋಯ್-30 ಎಂಕೆಐ ಜೆಟ್‌ನಲ್ಲಿ ಹಾರಾಟ ನಡೆಸಿದ್ದರು. ಈ ಮೂಲಕ ಅವರು ಸುಖೋಯ್-30 ಎಂಕೆಐ ಜೆಟ್‌ನಲ್ಲಿ ಹಾರಾಟ ನಡೆಸಿದ ದೇಶದ ಮೂರನೇ ರಾಷ್ಟ್ರಪತಿ ಮತ್ತು ಎರಡನೇ ಮಹಿಳಾ ರಾಷ್ಟ್ರ ಮುಖ್ಯಸ್ಥೆ ಎಂದೆನಿಸಿಕೊಂಡರು.
ಇದನ್ನೂ ಓದಿ: WIFI ID name: ವೈಫೈ ಐಡಿ ಹೆಸರಿನಲ್ಲಿ ಕಾಣಿಸಿಕೊಂಡ ದೇಶದ್ರೋಹಿ ಹೆಸರು, ಜನ ಶಾಕ್
ದ್ರೌಪದಿ ಮುರ್ಮು ಅವರಿಗಿಂತ ಮೊದಲು ಮಾಜಿ ರಾಷ್ಟ್ರಪತಿಗಳಾದ ಎಪಿಜೆ ಅಬ್ದುಲ್ ಕಲಾಂ ಮತ್ತು ಪ್ರತಿಭಾ ಪಾಟೀಲ್ ಅವರು ಪುಣೆ ಬಳಿಯ ಲೋಹೆಗಾಂವ್‌ನಲ್ಲಿ ಸುಖೋಯ್-30 ಎಂಕೆಐನಲ್ಲಿ ಹಾರಾಟ ನಡೆಸಿದ್ದರು. ಫ್ರೆಂಚ್ ಏರೋಸ್ಪೇಸ್ ದೈತ್ಯ ಡಸಾಲ್ಟ್ ಏವಿಯೇಷನ್ ತಯಾರಿಸಿದ ರಫೇಲ್ ನಲ್ಲಿ ಭಾರತೀಯ ರಾಷ್ಟ್ರಪತಿಯೊಬ್ಬರು ಹಾರಾಟ ನಡೆಸುತ್ತಿರುವುದು ಇದೇ ಮೊದಲು. 17 ನೇ ಸ್ಕ್ವಾಡ್ರನ್, 'ಗೋಲ್ಡನ್ ಆರೋಸ್' ನ ಭಾಗವಾಗಿರುವ ರಫೇಲ್ ಯುದ್ಧ ವಿಮಾನಗಳು 2020ರಲ್ಲಿ ಅಂಬಾಲಾದ ವಾಯುಪಡೆ ನಿಲ್ದಾಣದಲ್ಲಿ ಭಾರತೀಯ ವಾಯುಪಡೆಯ ನೌಕಾಪಡೆಗೆ ಸೇರಿದವು.
"The sortie on Rafale is an unforgettable experience for me. This first flight on the potent Rafale aircraft has instilled in me a renewed sense of pride in the nation's defence capabilities. I congratulate the Indian Air Force and the entire team of Air Force Station, Ambala for… pic.twitter.com/Ud3LX8uqBU
— President of India (@rashtrapatibhvn) October 29, 2025
ಯುದ್ಧ ವಿಮಾನದಲ್ಲಿ ಹಾರಾಟ ನಡೆಸಿದ ಭಾರತದ ರಾಷ್ಟ್ರಪತಿಗಳು
ರಾಷ್ಟ್ರಪತಿ ದ್ರೌಪದಿ ಮುರ್ಮು ಬುಧವಾರ ಹರಿಯಾಣದ ಅಂಬಾಲಾ ವಾಯುಪಡೆ ನೆಲೆಯಲ್ಲಿ ರಫೇಲ್ ಯುದ್ಧ ವಿಮಾನದಲ್ಲಿ ಹಾರಾಟ ನಡೆಸುವ ಮೂಲಕ ಭಾರತೀಯ ವಾಯುಪಡೆಯ ಅತ್ಯಾಧುನಿಕ ಬಹುಪಾತ್ರ ಯುದ್ಧ ವಿಮಾನದಲ್ಲಿ ಹಾರಾಟ ನಡೆಸಿದ ಮೊದಲ ಭಾರತೀಯ ರಾಷ್ಟ್ರಪತಿ ಎಂದೆನಿಸಿಕೊಂಡಿದ್ದಾರೆ. ಈ ಹಿಂದೆ ಇವರು ಅಸ್ಸಾಂನ ತೇಜ್‌ಪುರದಿಂದ ಸುಖೋಯ್-30ಎಂಕೆಐ ವಿಮಾನದಲ್ಲಿ ಹಾರಾಟ ನಡೆಸಿದ್ದರು.
2009ರಲ್ಲಿ ರಾಷ್ಟ್ರಪತಿ ಪ್ರತಿಭಾ ಪಾಟೀಲ್ ಅವರು ಪುಣೆಯ ಲೋಹೆಗಾಂವ್ ಐಎಎಫ್ ನೆಲೆಯಿಂದ ಸು -30 ಎಂಕೆಐ ವಿಮಾನದಲ್ಲಿ ಹಾರಾಟ ನಡೆಸಿದರು. 74 ನೇ ವಯಸ್ಸಿನಲ್ಲಿ ಅವರು ಸುಮಾರು 30 ನಿಮಿಷಗಳ ಕಾಲ ಯುದ್ಧ ವಿಮಾನದಲ್ಲಿ ಹಾರಾಟ ನಡೆಸಿದ ಭಾರತದ ಮೊದಲ ಮಹಿಳಾ ರಾಷ್ಟ್ರಪತಿಯಾಗಿ ಗುರುತಿಸಿಕೊಂಡರು.
ರಾಷ್ಟ್ರಪತಿ ಎಪಿಜೆ ಅಬ್ದುಲ್ ಕಲಾಂ ಅವರು 2006 ರಲ್ಲಿ ಸು -30 ಎಂಕೆಐ ವಿಮಾನದಲ್ಲಿ ಹಾರಾಟ ನಡೆಸಿದ್ದರು. ಯುದ್ಧ ವಿಮಾನವನ್ನು ಹಾರಿಸಿದ ಮೊದಲ ಭಾರತೀಯ ರಾಷ್ಟ್ರಪತಿ ಎಂದು ಗುರುತಿಸಿಕೊಂಡಿದ್ದಾರೆ. 74 ವರ್ಷದಲ್ಲಿ ಅವರು ಕಾಕ್‌ಪಿಟ್‌ನಲ್ಲಿ ಸುಮಾರು 40 ನಿಮಿಷಗಳನ್ನು ಕಳೆದಿದ್ದರು.
ಇನ್ನು ಪ್ರಧಾನಿ ನರೇಂದ್ರ ಮೋದಿ, ಸಚಿವರಾದ ರಾಜನಾಥ್ ಸಿಂಗ್, ನಿರ್ಮಲಾ ಸೀತಾರಾಮನ್, ಕಿರಣ್ ರಿಜುಜು, ರಾವ್ ಇಂದ್ರಜಿತ್ ಸಿಂಗ್, ಜಾರ್ಜ್ ಫೆರ್ನಾಂಡಿಸ್, ಬಿಜೆಪಿ ನಾಯಕ ರಾಜೀವ್ ಪ್ರತಾಪ್ ರೆಡ್ಡಿ ಅವರು ಕೂಡ ವಿವಿಧ ರೀತಿಯ ಯುದ್ಧ ವಿಮಾನಗಳಲ್ಲಿ ಹಾರಾಟ ನಡೆಸಿದ್ದರು.