Donald Trump: ʼಅಮೆರಿಕದಷ್ಟು ಬಲಶಾಲಿ ರಾಷ್ಟ್ರ ಇನ್ನೊಂದಿಲ್ಲʼ; ಪರಮಾಣು ಪರೀಕ್ಷೆಗೆ ಆದೇಶ ನೀಡಿದ ಟ್ರಂಪ್
ರಷ್ಯಾ - ಉಕ್ರೇನ್, ಇಸ್ರೇಲ್ ಹಮಾಸ್ ಸೇರಿದಂತೆ ಜಗತ್ತಿನ ಹಲವೆಡೆ ಯುದ್ಧ ಹಾಗೂ ಯುದ್ಧ ಕವಿದ ವಾತಾವರಣ ಏರ್ಪಟ್ಟಿದೆ. ಇನ್ನೊಂದೆಡೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಪರಮಾಣು ಶಸ್ತ್ರಾಸ್ತ್ರಗಳ ಪರೀಕ್ಷೆಗೆ ರಕ್ಷಣಾ ಇಲಾಖೆಗೆ ಸೂಚಿಸಿದ್ದಾರೆ ಎಂದು ತಿಳಿದು ಬಂದಿದೆ.
-
Vishakha Bhat
Oct 30, 2025 10:28 AM
ವಾಷಿಂಗ್ಟನ್: ರಷ್ಯಾ - ಉಕ್ರೇನ್, ಇಸ್ರೇಲ್ ಹಮಾಸ್ ಸೇರಿದಂತೆ ಜಗತ್ತಿನ ಹಲವೆಡೆ ಯುದ್ಧ ಹಾಗೂ ಯುದ್ಧ ಕವಿದ ವಾತಾವರಣ ಏರ್ಪಟ್ಟಿದೆ. ಇನ್ನೊಂದೆಡೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ (Donald Trump) ಪರಮಾಣು ಶಸ್ತ್ರಾಸ್ತ್ರಗಳ ಪರೀಕ್ಷೆಗೆ ರಕ್ಷಣಾ ಇಲಾಖೆಗೆ ಸೂಚಿಸಿದ್ದಾರೆ (Nuclear Arms) ಎಂದು ತಿಳಿದು ಬಂದಿದೆ. ಇಂದು (ಗುರುವಾರ) ಚೀನಾ ಅಧ್ಯಕ್ಷ ಷಿ ಜಿನ್‌ಪಿಂಗ್ ಅವರನ್ನು ಭೇಟಿ ಮಾಡುವ ಮೊದಲು ಟ್ರಂಪ್ ಈ ನಿರ್ಧಾರವನ್ನು ಘೋಷಿಸಿದ್ದಾರೆ ಎನ್ನಲಾಗಿದೆ. ರಷ್ಯಾ ಎರಡು ಪರಮಾಣು ಸಜ್ಜಿತ ಶಸ್ತ್ರಾಸ್ತ್ರಗಳನ್ನು ಪರೀಕ್ಷಿಸಿರುವ ಸಮಯದಲ್ಲಿ ಟ್ರಂಪ್ ಅವರ ಘೋಷಣೆ ಬಂದಿದ್ದು, ಇದು ಅಂತಾರಾಷ್ಟ್ರೀಯ ಉದ್ವಿಗ್ನತೆಯನ್ನು ಹೆಚ್ಚಿಸಿದೆ. ತಮ್ಮ ಪರಮಾಣು ಶಸ್ತ್ರಾಸ್ತ್ರಗಳನ್ನು ಪರೀಕ್ಷಿಸುತ್ತಿರುವ ದೇಶಗಳ ಇತ್ತೀಚಿನ ಪರೀಕ್ಷಾ ಚಟುವಟಿಕೆಗಳಿಗೆ ಪ್ರತಿಕ್ರಿಯೆಯಾಗಿ ಟ್ರಂಪ್ ಈ ಕ್ರಮ ಕೈಗೊಂಡಿದ್ದಾರೆ.
1992ರಲ್ಲಿ ಅಮೆರಿಕ ಕೊನೆಯದಾಗಿ ಪರಮಾಣು ಪರೀಕ್ಷೆ ನಡೆಸಿತ್ತು. ವಿಶ್ವದಲ್ಲೇ ಅತಿ ಹೆಚ್ಚು ಪರಮಾಣು ಶಸ್ತ್ರಾಸ್ತ್ರಗಳನ್ನು ಅಮೆರಿಕ ಹೊಂದಿದೆ ಎಂದು ಡೊನಾಲ್ಡ್ ಟ್ರಂಪ್ ಸಾಮಾಜಿಕ ಜಾಲತಾಣದ ಮೂಲಕ ಘೋಷಿಸಿದ್ದಾರೆ. ಪರಮಾಣು ಶಸ್ತ್ರಾಸ್ತ್ರಗಳನ್ನು ಹೊಂದಿರುವ ದೇಶಗಳ ಪೈಕಿ ರಷ್ಯಾ ಎರಡನೇ ಸ್ಥಾನದಲ್ಲಿದ್ದರೆ, ಚೀನಾ ಮೂರನೇ ಸ್ಥಾನದಲ್ಲಿದೆ. ಇತ್ತೀಚೆಗೆ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಬುಧವಾರ ಪೋಸಿಡಾನ್ ಪರಮಾಣು ಚಾಲಿತ ಸೂಪರ್ ಟಾರ್ಪಿಡೊವನ್ನು ಯಶಸ್ವಿಯಾಗಿ ಪರೀಕ್ಷಿಸಿದೆ ಎಂದು ಹೇಳಿದ್ದರು. ಪುಟಿನ್ ಹೇಳಿಕೆ ಬಳಿಕ ಈ ಬೆಳವಣಿಗೆ ನಡೆದಿದೆ.
ರಷ್ಯಾದ ಪರಮಾಣು ಪರೀಕ್ಷೆಗೆ ಟ್ರಂಪ್ ಆಕ್ಷೇಪ ವ್ಯಕ್ತಪಡಿಸಿದ್ದರು. ಟಿನ್ ಕ್ಷಿಪಣಿಗಳನ್ನು ಪರೀಕ್ಷಿಸುವ ಬದಲು ಉಕ್ರೇನ್ ಯುದ್ಧವನ್ನು ಕೊನೆಗೊಳಿಸುವತ್ತ ಗಮನಹರಿಸಬೇಕು ಎಂದು ಹೇಳಿದ್ದರು. ಒಂದು ವಾರದಲ್ಲಿ ಕೊನೆಗೊಳ್ಳಬೇಕಿದ್ದ ಈ ಯುದ್ಧವು ಈಗ ನಾಲ್ಕನೇ ವರ್ಷಕ್ಕೆ ಕಾಲಿಟ್ಟಿದೆ. ಪುಟಿನ್ ಕ್ಷಿಪಣಿಗಳನ್ನು ಪರೀಕ್ಷಿಸುವ ಬದಲು ಅದನ್ನು ಕೊನೆಗೊಳಿಸಬೇಕು ಎಂದು ಹೇಳಿದ್ದರು. ಇದೀಗ ಅಮೆರಿಕ ಮತ್ತೆ ಪರಮಾಣು ಪರೀಕ್ಷೆಯತ್ತ ದಾಪುಗಾಲಿಟ್ಟಿದೆ.
ಈ ಸುದ್ದಿಯನ್ನೂ ಓದಿ: US-China: ಸುಂಕ ಯುದ್ಧಕ್ಕೆ ತೆರೆ ಎಳೆದು ತಾತ್ಕಾಲಿಕ ಒಪ್ಪಂದ ಮಾಡಿಕೊಂಡ ಅಮೆರಿಕ-ಚೀನಾ; ಶೇ.115ಕ್ಕೆ ಟಾರಿಫ್ ಕಡಿತ
ಚೀನಾ ಜೊತೆ ಹದಗೆಟ್ಟಿದ್ದ ಸಂಬಂಧವನ್ನು ಸರಿ ಪಡಿಸಲು ಟ್ರಂಪ್ ಮುಂದಾಗಿದ್ದಾರೆ. ಡೊನಾಲ್ಡ್ ಟ್ರಂಪ್ ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಅವರನ್ನು ಭೇಟಿ ಮಾಡಿದ್ದಾರೆ. ಉಭಯ ನಾಯಕರು ಉನ್ನತ ಮಟ್ಟದ ಶೃಂಗಸಭೆಯಲ್ಲಿ ಭೇಟಿಯಾದರು. ಆರು ವರ್ಷಗಳ ಬಳಿಕ ಇವರು ಮುಖಾಮುಖಿಯಾಗಿದ್ದಾರೆ. ಉಭಯ ದೇಶದ ನಾಯಕರು ಸುಂಕ, ರಕ್ಷಣಾ ಕ್ಷೇತ್ರ ಸೇರಿದಂತೆ ಹಲವು ವಿಷಯಗಳ ಕುರಿತು ಚರ್ಚೆ ನಡೆಸಿದ್ದಾರೆ.