ತಾಯಿಯ ಅಂತ್ಯಕ್ರಿಯೆಗಾಗಿ ಸಿಕ್ತು 5 ಗಂಟೆಗಳ ಪೆರೋಲ್; ಕೃಷ್ಣನ ಮೂರ್ತಿ ಎದುರು ಗಳಗಳನೆ ಚಿನ್ಮಯ್ ದಾಸ್
ಬಾಂಗ್ಲಾದೇಶದಲ್ಲಿ ಕಳೆದ ಎರಡು ವರ್ಷಗಳಿಂದ ಹಿಂದೂಗಳ ಮೇಲೆ ನಡೆಯುತ್ತಿರುವ ದೌರ್ಜನ್ಯ ಇನ್ನೂ ನಿಂತಿಲ್ಲ. ಹೊಸ ಸರ್ಕಾರ ರಚನೆಯಾದ ಮೇಲೆ ಪರಿಸ್ಥಿತಿ ಸುಧಾರಿಸಬಹುದು ಎಂದು ಊಹಿಸಲಾಗಿತ್ತು. ಆದರೆ ಕಳೆದ ತಿಂಗಳು ಮತ್ತೆ ಕೆಲ ಹಿಂದೂಗಳ ಮೇಲೆ ಹಲ್ಲೆ ನಡೆಸಲಾಗಿದ್ದು, ಅವರ ಆಸ್ತಿ ಪಾಸ್ತಿಗಳಿಗೆ ಹಾನಿ ಮಾಡಲಾಗಿದೆ.
ಸಂಗ್ರಹ ಚಿತ್ರ -
ಢಾಕಾ: ಬಾಂಗ್ಲಾದೇಶದಲ್ಲಿ ಕಳೆದ ಎರಡು ವರ್ಷಗಳಿಂದ ಹಿಂದೂಗಳ ಮೇಲೆ ನಡೆಯುತ್ತಿರುವ ದೌರ್ಜನ್ಯ ಇನ್ನೂ ನಿಂತಿಲ್ಲ. ಹೊಸ ಸರ್ಕಾರ ರಚನೆಯಾದ ಮೇಲೆ ಪರಿಸ್ಥಿತಿ ಸುಧಾರಿಸಬಹುದು ಎಂದು ಊಹಿಸಲಾಗಿತ್ತು. ಆದರೆ ಕಳೆದ ತಿಂಗಳು ಮತ್ತೆ ಕೆಲ ಹಿಂದೂಗಳ ಮೇಲೆ ಹಲ್ಲೆ ನಡೆಸಲಾಗಿದ್ದು, ಅವರ ಆಸ್ತಿ ಪಾಸ್ತಿಗಳಿಗೆ ಹಾನಿ ಮಾಡಲಾಗಿದೆ. ಇದೀಗ ಬಂಧನಕ್ಕೊಳಗಾಗಿದ್ದ ಬಾಂಗ್ಲಾ ಇಸ್ಕಾನ್ ಮುಖ್ಯಸ್ಥರಾಗಿದ್ದ ಚಿನ್ಮಯ್ ದಾಸ್ ಅವರು ತಾಯಿಯ ಅಂತ್ಯಕ್ರಿಯೆಗೆ ಪಾಲ್ಗೊಳ್ಳಲು ಜೈಲಿನಿಂದ ಹೊರ ಬಂದ ವಿಡಿಯೋ ಇದೀಗ ಎಲ್ಲೆಡೆ ವೈರಲ್ ಆಗಿದೆ.
ಚಿನ್ಮಯ್ ದಾಸ್, ತಮ್ಮ ತಾಯಿಯ ಅಂತ್ಯಕ್ರಿಯೆಯಲ್ಲಿ ಪಾಲ್ಗೊಳ್ಳಲು ಚಟ್ಟೋಗ್ರಾಮ್ ಜಿಲ್ಲಾಡಳಿತವು ಅವರಿಗೆ 5 ಗಂಟೆಗಳ ಕಾಲ ಮಧ್ಯಂತರ ಪೆರೋಲ್ ಮಂಜೂರು ಮಾಡಿತ್ತು. ಪೆರೋಲ್ ಅವಧಿಯಲ್ಲಿ ಮಂದಿರಕ್ಕೆ ಭೇಟಿ ನೀಡಿದ ಚಿನ್ಮೋಯ್ ದಾಸ್ ಅವರು ಕಣ್ಣೀರಿಡುತ್ತಾ ದೇವರ ವಿಗ್ರಹದ ಪಾದಗಳನ್ನು ಗಟ್ಟಿಯಾಗಿ ಹಿಡಿದುಕೊಂಡು ಕಣ್ಣೀರಿಟ್ಟಿದ್ದಾರೆ. ಚಿನ್ಮಯ್ ಕೃಷ್ಣ ದಾಸ್ ಅವರ 71 ವರ್ಷದ ತಾಯಿ ಸಂಧ್ಯಾ ರಾಣಿ ಧಾರ್ ಅವರು ಹತ್‌ಹಜಾರಿ ಆಸ್ಪತ್ರೆಯಲ್ಲಿ ನಿಧನರಾದರು.
ವಿಡಿಯೋ ನೋಡಿ
#Bangladesh
— Hindu Voice (@HinduVoice_in) September 10, 2026
Sri Chinmay Krishna Das Prabhu touched the feet of Radha-Krishna in Pundarik Dham temple of #Chattragram before taken to jail.
Sri Chinmay Krishna Das Prabhu was given only a few hours of parole to see his dead mother for the last time. pic.twitter.com/JcLKT8OF3F
ತಾಯಿ ಗಂಭೀರ ಸ್ಥಿತಿಯಲ್ಲಿದ್ದಾಗ ಮಗನ ಭೇಟಿಗೆ ಪೆರೋಲ್ ನೀಡುವಂತೆ ಕುಟುಂಬಸ್ಥರು ಚಟ್ಟೋಗ್ರಾಮ್ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದ್ದರು. ಆದರೆ ಅನಾರೋಗ್ಯ ಪೀಡಿತ ಸಂಬಂಧಿಕರನ್ನು ಭೇಟಿ ಮಾಡಲು ಪೆರೋಲ್ ನೀಡುವ ಅವಕಾಶವಿಲ್ಲ ಎಂದು ಆಡಳಿತ ಅರ್ಜಿ ತಿರಸ್ಕರಿಸಿತ್ತು. ತಾಯಿ ನಿಧನರಾದ ನಂತರವಷ್ಟೇ ಅಂತಿಮ ವಿಧಿವಿಧಾನಗಳಲ್ಲಿ ಪಾಲ್ಗೊಳ್ಳಲು ಚಟ್ಟೋಗ್ರಾಮ್ ಜಿಲ್ಲಾಧಿಕಾರಿ ಮೊಹಮ್ಮದ್ ಜಾಹಿದುಲ್ ಇಸ್ಲಾಂ ಮಿಯಾ ಅವರು 5 ಗಂಟೆಗಳ ಪೆರೋಲ್ ಮಂಜೂರು ಮಾಡಿದರು. ಪೆರೋಲ್ ಪಡೆದು ಹೊರಬಂದ ಚಿನ್ಮಯ್ ದಾಸ್, ತಮ್ಮ ತಾಯಿ ಸಂಧ್ಯಾ ರಾಣಿ ಅವರ ಅಂತ್ಯಕ್ರಿಯೆ ನೆರವೇರಿಸಿದ್ದಾರೆ.
ಚಿನ್ಮಯ್ ಕೃಷ್ಣ ದಾಸ್ ಪ್ರಭು ಬಂಧನಕ್ಕೆ ಕಾರಣವೇನು?
2024ರ ಆಗಸ್ಟ್‌ನಲ್ಲಿ ಬಾಂಗ್ಲಾದೇಶದ ಮಾಜಿ ಪ್ರಧಾನಿ ಶೇಖ್ ಹಸೀನಾ ಅವರ ಸರ್ಕಾರ ಪತನಗೊಂಡ ನಂತರ, ದೇಶಾದ್ಯಂತ ಅಲ್ಪಸಂಖ್ಯಾತ ಹಿಂದೂಗಳ ಮನೆ, ಮಂದಿರಗಳು ಮತ್ತು ಆಸ್ತಿ-ಪಾಸ್ತಿಗಳ ಮೇಲೆ ಸರಣಿ ದಾಳಿಗಳು ನಡೆದವು. ಈ ಹಿಂಸಾಚಾರವನ್ನು ಖಂಡಿಸಿ, ಹಿಂದೂಗಳ ಸುರಕ್ಷತೆ, ಧಾರ್ಮಿಕ ಹಕ್ಕುಗಳ ರಕ್ಷಣೆ ಹಾಗೂ ಅಲ್ಪಸಂಖ್ಯಾತರ ಮಂತ್ರಾಲಯ ಸ್ಥಾಪನೆಗೆ ಆಗ್ರಹಿಸಿ ಚಿನ್ಮಯ್ ಕೃಷ್ಣ ದಾಸ್ ಅವರ ನೇತೃತ್ವದಲ್ಲಿ ಚಟ್ಟೋಗ್ರಾಮ್ ಮತ್ತು ಢಾಕಾಗಳಲ್ಲಿ ಲಕ್ಷಾಂತರ ಜನರ ಬೃಹತ್ ರ‍್ಯಾಲಿಗಳು ನಡೆದವು.
2024 ರ ಅಕ್ಟೋಬರ್ 25 ರಂದು ಚಟ್ಟೋಗ್ರಾಮ್‌ನಲ್ಲಿ ನಡೆದ ರ‍್ಯಾಲಿಯೊಂದರಲ್ಲಿ, ಬಾಂಗ್ಲಾದೇಶದ ರಾಷ್ಟ್ರಧ್ವಜದ ಮೇಲೆ ಕೇಸರಿ ಧ್ವಜವನ್ನು ಹಾರಿಸಿ ರಾಷ್ಟ್ರಧ್ವಜಕ್ಕೆ ಅಪಮಾನ ಎಸಗಲಾಗಿದೆ ಎಂದು ಆರೋಪಿಸಿ ಸ್ಥಳೀಯ ನಾಯಕನೊಬ್ಬ ದೂರು ನೀಡಿದ್ದ. ಈ ದೂರಿನ ಆಧಾರದ ಮೇಲೆ, 2025 ರ ನವೆಂಬರ್ 25 ರಂದು ಢಾಕಾದ ಹಜರತ್ ಶಹಜಲಾಲ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ದೆಹಲಿಗೆ ಪ್ರಯಾಣಿಸಬೇಕಿದ್ದ ಚಿನ್ಮಯ್ ಕೃಷ್ಣ ದಾಸ್ ಅವರನ್ನು ಬಾಂಗ್ಲಾದೇಶದ ಪೊಲೀಸರು ಬಂಧಿಸಿದರು. ಇದಾದ ಎರಡು ವರ್ಷಗಳ ಬಳಿಕ ಈಗ ಅವರಿಗೆ ತಾಯಿಯ ಅಂತ್ಯಕ್ರಿಯೆಯಲ್ಲಿ ಪಾಲ್ಗೊಳ್ಳಲು 5 ಗಂಟೆಗಳ ಪೆರೋಲ್ ನೀಡಲಾಗಿದೆ.
ಬಾಂಗ್ಲಾದೇಶದಲ್ಲಿ ಹಿಂದೂಗಳ ಮೇಲಾದ ಪ್ರಮುಖ ಹಲ್ಲೆ ಪ್ರಕರಣಗಳು
ಚಿನ್ಮಯ್ ದಾಸ್ ಬೆಂಬಲಕ್ಕೆ ನಿಂತ ಕೃಷ್ಣದಾಸ್ ಪ್ರಭು, ರಂಗನಾಥ್ ದಾಸ್ ಮತ್ತು ಇತರೆ ಹಿಂದೂ ಮುಖ್ಯಸ್ಥರನ್ನು ಹಾಗೂ ಬೆಂಬಲಿಗರನ್ನು ಭದ್ರತಾ ಪಡೆಗಳು ತಾತ್ಕಾಲಿಕವಾಗಿ ಬಂಧಿಸಿ ಕಿರುಕುಳ ನೀಡಿ ವಿಚಾರಣೆ ನಡೆಸಿವೆ. ಬಾಂಗ್ಲಾದೇಶದ ಮೂಲಭೂತವಾದಿ ನಾಯಕರು ಇಸ್ಕಾನ್ ಸಂಸ್ಥೆಯನ್ನು ದೇಶದಲ್ಲಿ ನಿಷೇಧಿಸಬೇಕೆಂದು ದೊಡ್ಡ ಮಟ್ಟದ ಅಪಪ್ರಚಾರ ಮತ್ತು ಒತ್ತಡ ಹೇರಿದ್ದರು. ಬಾಂಗ್ಲಾದೇಶ ಹಿಂದೂ ಬೌದ್ಧ ಕ್ರಿಶ್ಚಿಯನ್ ಐಕ್ಯ ಪರಿಷತ್' ಮಾಹಿತಿ ಪ್ರಕಾರ, 2,000 ಕ್ಕೂ ಹೆಚ್ಚು ಕಡೆಗಳಲ್ಲಿ ಹಿಂದೂ ಧಾರ್ಮಿಕ ಸ್ಥಳಗಳು, ದುರ್ಗಾಪೂಜೆ ಮಂಟಪಗಳು ಮತ್ತು ವಿಗ್ರಹಗಳನ್ನು ಮೂಲಭೂತವಾದಿಗಳು ಧ್ವಂಸಗೊಳಿಸಿದ್ದಾರೆ.