ಅಮೆರಿಕ-ಇರಾನ್ ಯುದ್ಧ ತಡೆಯಬಲ್ಲದೇ ಪಾಕಿಸ್ತಾನ? ಶಾಂತಿ ಮಾತುಕತೆಗಾಗಿ ಟೆಹ್ರಾನ್‌ಗೆ ಅಸೀಮ್ ಮುನೀರ್
ಅಮೆರಿಕ, ಇಸ್ರೇಲ್ ಮತ್ತು ಇರಾನ್ ನಡುವಿನ ಉದ್ವಿಗ್ನತೆಯನ್ನು ಕಡಿಮೆ ಮಾಡಲು ಪಾಕಿಸ್ತಾನ ಮಧ್ಯಸ್ಥಿಕೆಯ ಪ್ರಯತ್ನ ಆರಂಭಿಸಿದೆ. ಸೇನಾ ಮುಖ್ಯಸ್ಥ ಅಸೀಮ್ ಮುನೀರ್ ಟೆಹ್ರಾನ್‌ಗೆ ಭೇಟಿ ನೀಡಿ ಶಾಂತಿ ಮಾತುಕತೆ ನಡೆಸಲಿದ್ದು, ಪರಮಾಣು ಬಿಕ್ಕಟ್ಟು ಹಾಗೂ ಹೊರ್ಮುಜ್ ಜಲಸಂಧಿ ವಿವಾದದ ನಡುವೆ ಜಾಗತಿಕ ಆತಂಕ ಹೆಚ್ಚಾಗಿದೆ.
ಪಾಕಿಸ್ತಾನ ಸೇನಾ ಮುಖ್ಯಸ್ಥ ಅಸೀಮ್ ಮುನೀರ್ -
ಇಸ್ಲಾಮಾಬಾದ್, ಮೇ 21: ಇರಾನ, ಅಮೆರಿಕ ಮತ್ತು ಇಸ್ರೇಲ್ ನಡುವೆ ಮತ್ತೊಂದು ಸುತ್ತಿನ ಸಂಘರ್ಷವನ್ನು ತಡೆಯಲು ಹೊಸ ರಾಜತಾಂತ್ರಿಕ ಪ್ರಯತ್ನಗಳು ವೇಗ ಪಡೆದುಕೊಂಡಿವೆ. ಅಮೆರಿಕ ಬೆಂಬಲಿತ ಇತ್ತೀಚಿನ ಕದನ ವಿರಾಮ ಪ್ರಸ್ತಾಪವನ್ನು ಇರಾನ್ ಪರಿಶೀಲಿಸುತ್ತಿರುವ ಬೆನ್ನಲ್ಲೇ, ಉನ್ನತ ಮಟ್ಟದ ಸಮಾಲೋಚನೆಗಾಗಿ ಪಾಕಿಸ್ತಾನ ಸೇನಾ ಮುಖ್ಯಸ್ಥ ಅಸೀಮ್ ಮುನೀರ್ (Army chief Asim Munir) ಟೆಹ್ರಾನ್‌ಗೆ ಭೇಟಿ ನೀಡಲಿದ್ದಾರೆ. ಅತ್ಯಂತ ಸೂಕ್ಷ್ಮ ಸಮಯದಲ್ಲಿ ಈ ಭೇಟಿ ನಡೆಯುತ್ತಿದ್ದು, ಕದನ ವಿರಾಮ ಜಾರಿಗೆ ಬಂದು ಆರು ವಾರಗಳು ಕಳೆದರೂ ಮಾತುಕತೆಗಳು ಅತ್ಯಂತ ನಿಧಾನಗತಿಯಲ್ಲಿ ಸಾಗುತ್ತಿವೆ.
ಸಂಘರ್ಷದ ವಾತಾವರಣ ತಿಳಿಗೊಳಿಸಲು ಪಾಕಿಸ್ತಾನ ಕಳೆದ ಒಂದು ವಾರದಿಂದ ಟೆಹ್ರಾನ್ ಮತ್ತು ವಾಷಿಂಗ್ಟನ್ ನಡುವೆ ರಾಜತಾಂತ್ರಿಕ ಸಂವಹನವನ್ನು ತೀವ್ರಗೊಳಿಸಿದೆ. ಪಾಕಿಸ್ತಾನದ ಆಂತರಿಕ ಸಚಿವ ಮೊಹ್ಸಿನ್ ನಖ್ವಿ ಈಗಾಗಲೇ ಈ ವಾರ ಎರಡು ಬಾರಿ ಟೆಹ್ರಾನ್‌ಗೆ ಭೇಟಿ ನೀಡಿದ್ದಾರೆ. ಇದರ ಬೆನ್ನಲ್ಲೇ, ಪ್ರಸ್ತಾವಿತ ಶಾಂತಿ ಕಾರ್ಯಸೂಚಿಯ ಕುರಿತು ಹೆಚ್ಚಿನ ಚರ್ಚೆ ನಡೆಸಲು ಅಸೀಮ್ ಮುನೀರ್ ಆಗಮಿಸಲಿದ್ದಾರೆ ಎಂದು ಇರಾನ್ ಸರ್ಕಾರಿ ಮಾಧ್ಯಮಗಳು ವರದಿ ಮಾಡಿವೆ. ಉಭಯ ದೇಶಗಳ ನಡುವಿನ ಸಂದೇಶ ವಿನಿಮಯವನ್ನು ವೇಗಗೊಳಿಸಲು ಪಾಕಿಸ್ತಾನ ಪ್ರಯತ್ನಿಸುತ್ತಿದೆ ಎಂದು ರಾಯಿಟರ್ಸ್ ಸುದ್ದಿ ಸಂಸ್ಥೆ ತಿಳಿಸಿದೆ. ಇರಾನ್ ವಿದೇಶಾಂಗ ಸಚಿವಾಲಯದ ವಕ್ತಾರ ಎಸ್ಮಾಯಿಲ್ ಬಕಾಯಿ ಅವರು ಪಾಕಿಸ್ತಾನದ ಮಧ್ಯಸ್ಥಿಕೆಯ ಮೂಲಕ ಸಂದೇಶಗಳನ್ನು ವಿನಿಮಯ ಮಾಡಿಕೊಳ್ಳಲಾಗಿದೆ ಎಂದು ಖಚಿತಪಡಿಸಿದ್ದಾರೆ.
ಪ್ರಧಾನಿ ಮೋದಿ ಭೇಟಿಯ ವೇಳೆ ಕೇಳಿದ ಪ್ರಶ್ನೆಯನ್ನು ಸಮರ್ಥಿಸಿಕೊಂಡ ನಾರ್ವೆ ಪತ್ರಕರ್ತೆ
ಮುಂದುವರಿದ ಪರಮಾಣು ಬಿಕ್ಕಟ್ಟು
ಮಾತುಕತೆಗೆ ಪ್ರಮುಖ ಅಡ್ಡಿಯಾಗಿರುವುದು ಇರಾನ್‌ನ ಸಮೃದ್ಧ ಯುರೇನಿಯಂ ದಾಸ್ತಾನು. ಈ ದಾಸ್ತಾನನ್ನು ಇರಾನ್ ದೇಶದಿಂದ ಹೊರಗೆ ಕಳುಹಿಸಬೇಕು ಎಂದು ಅಮೆರಿಕ ಮತ್ತು ಇಸ್ರೇಲ್ ಪಟ್ಟು ಹಿಡಿದಿವೆ. ಆದರೆ ಯುರೇನಿಯಂ ದಾಸ್ತಾನನ್ನು ದೇಶದಿಂದ ಹೊರಗೆ ಕಳುಹಿಸಬಾರದು ಎಂಬುದು ಇರಾನ್‌ನ ಸರ್ವೋಚ್ಚ ನಾಯಕರ ನಿರ್ದೇಶನವಾಗಿದೆ. ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ರಾಜತಾಂತ್ರಿಕತೆಗೆ ಮುಕ್ತವಾಗಿದ್ದರೂ, ಸೂಕ್ತ ಪ್ರತಿಕ್ರಿಯೆ ಸಿಗದಿದ್ದರೆ ದಾಳಿ ನಡೆಸುವ ಆಯ್ಕೆ ಮುಕ್ತವಾಗಿದೆ ಎಂದು ಎಚ್ಚರಿಸಿದ್ದಾರೆ.
ಹೊರ್ಮುಜ್ ಜಲಸಂಧಿಯ ಮೇಲಿನ ನಿಯಂತ್ರಣ
ಪರಮಾಣು ವಿವಾದದ ಜತೆಗೆ, ವಿಶ್ವದ ಪ್ರಮುಖ ಇಂಧನ ಸಾಗಣೆ ಮಾರ್ಗವಾದ ಹೊರ್ಮುಜ್ ಜಲಸಂಧಿಯ ಸುತ್ತಲೂ ಆತಂಕ ಹೆಚ್ಚಾಗಿದೆ. ಇರಾನ್ ಇತ್ತೀಚೆಗೆ ಈ ಜಲಸಂಧಿಯ ಸುತ್ತ ನಿಯಂತ್ರಿತ ಕಡಲ ವಲಯವನ್ನು ಘೋಷಿಸಿದ್ದು, ಹಡಗುಗಳ ಸಂಚಾರಕ್ಕೆ ಹೊಸ ಪ್ರಾಧಿಕಾರದ ಅನುಮತಿ ಕಡ್ಡಾಯಗೊಳಿಸಿದೆ. ಯುದ್ಧದ ಮುನ್ನ ದಿನಕ್ಕೆ 140 ರಷ್ಟಿದ್ದ ಹಡಗುಗಳ ಸಂಚಾರ ಈಗ ಕೇವಲ 26ಕ್ಕೆ ಕುಸಿದಿದೆ. ಅಮೆರಿಕ ಇರಾನ್‌ನ ಈ ನಿಯಂತ್ರಣವನ್ನು ತಿರಸ್ಕರಿಸಿದ್ದು, ಪ್ರಸ್ತುತ ಕದನ ವಿರಾಮ ಜಾರಿಯಲ್ಲಿದ್ದರೂ ಪರಿಸ್ಥಿತಿ ಇನ್ನೂ ಗಂಭೀರವಾಗಿದೆ.