ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಶಾಂತಿ ಮಾತುಕತೆಗೆ ವಿವಿಧ ದೇಶಗಳ ನಾಯಕರನ್ನು ಸ್ವಾಗತಿಸುವ ವೇಳೆ ಜಾರಿ ಬಿದ್ದ ಪಾಕಿಸ್ತಾನದ ಉಪಪ್ರಧಾನಿ ಇಶಾಕ್ ದಾರ್

Ishaq Dar: ಮಧ್ಯಪ್ರಾಚ್ಯದಲ್ಲಿ ಉಂಟಾಗಿರುವ ಸಂಘರ್ಷದ ವಾತಾವರಣವನ್ನು ಮಾತುಕತೆ ಮೂಲಕ ತಿಳಿಗೊಳಿಸಲು ಪಾಕಿಸ್ತಾನ ಮುಂದಾಗಿದೆ. ಅದಕ್ಕಾಗಿ ಇಸ್ಲಾಮಾಬಾದ್‌ನಲ್ಲಿ ಮಾತುಕತೆ ನಡೆಸುತ್ತಿದೆ. ಈ ಮಧ್ಯೆ ಸೌದಿ ಅರೇಬಿಯಾ, ಟರ್ಕಿ ಮತ್ತು ಈಜಿಪ್ಸ್‌ನ ವಿದೇಶಾಂಗ ಸಚಿವರನ್ನು ಸ್ವಾಗತಿಸುವ ವೇಳೆ ಪಾಕ್‌ ಉಪ ಪ್ರಧಾನಿಯೂ ಆಗಿರುವ ವಿದೇಶಾಂಗ ಸಚಿವ ಇಶಾಕ್ ದಾರ್ ಜಾರಿ ಬೀಳುತ್ತಿರುವ ವಿಡಿಯೊ ವೈರಲ್‌ ಆಗಿದೆ.

ಜಾರಿ ಬಿದ್ದ ಪಾಕಿಸ್ತಾನದ ಉಪಪ್ರಧಾನಿ ಇಶಾಕ್ ದಾರ್; ವಿಡಿಯೊ ವೈರಲ್‌

ಪಾಕಿಸ್ತಾನ ಉಪಪ್ರಧಾನಿ ಇಶಾಕ್‌ ದಾರ್‌ (ಸಂಗ್ರಹ ಚಿತ್ರ) -

Ramesh Ballamoole
Ramesh Ballamoole Mar 29, 2026 11:19 PM

ಇಸ್ಲಾಮಾಬಾದ್‌, ಮಾ. 29: ಪಶ್ಚಿಮ ಏಷ್ಯಾದಲ್ಲಿನ ಯುದ್ಧ ಆರಂಭವಾಗಿ 1 ತಿಂಗಳು ಕಳೆದಿದ್ದು, ಇನ್ನೂ ಕಡಿಮೆಯಾಗುವ ಲಕ್ಷಣ ಕಾಣಿಸುತ್ತಿಲ್ಲ. ಅಚ್ಚರಿ ಎಂಬಂತೆ ಉಗ್ರರನ್ನು ಪೋಷಿಸುವ ಪಾಕಿಸ್ತಾನ ಶಾಂತಿ ಮಂತ್ರ ಜಪಿಸುತ್ತಿದೆ. ಕದನ ವಿರಾಮಕ್ಕೆ ಕರೆ ನೀಡಿರುವ ಪಾಕಿಸ್ತಾನ ಸಂಧಾನಕ್ಕೆ ಮುಂದಾಗಿದೆ. ಈ ನಿಟ್ಟಿನಲ್ಲಿ ಸೌದಿ ಅರೇಬಿಯಾ, ಟರ್ಕಿ ಮತ್ತು ಈಜಿಪ್ಟ್ ಜತೆ ಮಾತುಕತೆ ನಡೆಸುತ್ತಿದೆ. ಈ ಮಧ್ಯೆ ರಾಜತಾಂತ್ರಿಕ ಚಟುವಟಿಕೆಗಳಲ್ಲಿ ಬಲವಾಗಿ ತೊಡಗಿಸಿಕೊಂಡಿರುವ ಪಾಕಿಸ್ತಾನದ ಉಪ ಪ್ರಧಾನಿಯೂ ಆಗಿರುವ ವಿದೇಶಾಂಗ ಸಚಿವ ಇಶಾಕ್ ದಾರ್ (Ishaq Dar) ವಿವಿಧ ದೇಶಗಳ ವಿದೇಶಾಂಗ ಸಚಿವರನ್ನು ಸ್ವಾಗತಿಸುವ ವೇಳೆ ಜಾರಿ ಬೀಳುತಿರುವ ವಿಡಿಯೊ ಸೋಶಿಯಲ್‌ ಮೀಡಿಯಾದಲ್ಲಿ ವೈರಲ್‌ (Viral Video) ಆಗಿದೆ.

ಪಾಕಿಸ್ತಾನವು ಅಮೆರಿಕ ಮತ್ತು ಇರಾನ್‌ ನಡುವೆ ಮಧ್ಯವರ್ತಿಯಾಗಿ ಗುರುತಿಸಿಕೊಳ್ಳಲು ಪ್ರಯತ್ನಿಸುತ್ತಿರುವ ಸಮಯದಲ್ಲೇ ದಾರ್ ಅವರ ಈ ವಿಡಿಯೊ ಹೊರ ಬಿದ್ದಿದ್ದು, ಗಮನ ಸೆಳೆದಿದೆ. ಅಮೆರಿಕ ಮತ್ತು ಇರಾನ್ ನಡುವಿನ ಪರೋಕ್ಷ ಶಾಂತಿ ಮಾತುಕತೆಗೆ ಮಧ್ಯಸ್ಥಿಕೆ ವಹಿಸಲು ಪಾಕಿಸ್ತಾನ ಸ್ವಯಂಪ್ರೇರಿತವಾಗಿ ಮುಂದೆ ಬಂದಿದ್ದು, ಇಸ್ಲಾಮಾಬಾದ್‌ನಲ್ಲಿ ಸಭೆ ಆಯೋಜಿಸಲಾಗಿದೆ. ಸೌದಿ ಅರೇಬಿಯಾ ಮತ್ತು ಈಜಿಪ್ಟ್‌ ವಿದೇಶಾಂಗ ಸಚಿವರನ್ನು ಸ್ವಾಗತಿಸುವ ವೇಳೆ ದಾರ್‌ ಜಾರಿ ಬಿದ್ದಿದ್ದಾರೆ.

ವೈರಲ್‌ ವಿಡಿಯೊ ಇಲ್ಲಿದೆ:



ಮಾತುಕತೆ ಮೂಲಕ ಯುದ್ಧಕ್ಕೆ ಬ್ರೇಕ್‌

ಮಾತುಕತೆ ಮತ್ತು ರಾಜತಾಂತ್ರಿಕತೆ ಮೂಲಕ ಮಾತ್ರ ಯುದ್ಧವನ್ನು ನಿಲ್ಲಿಸಬಹುದು ಎಂದಿರುವ ಪಾಕಿಸ್ತಾನ ಈ ನಿಟ್ಟಿನಲ್ಲಿ ವಿಶ್ವಾಸಾರ್ಹ ಮಧ್ಯಸ್ಥಿಕೆ ವಹಿಸುವುದಾಗಿ ತಿಳಿಸಿದೆ. ಮಾರ್ಚ್‌ 29 ಮತ್ತು 30ರಂದು ಇಸ್ಲಾಮಾಬಾದ್‌ನಲ್ಲಿ ನಡೆಯುವ ಸಭೆಯಲ್ಲಿ ಇಶಾಕ್‌ ದಾರ್‌ ಜತೆಗೆ ಸೌದಿ ಅರೇಬಿಯಾದ ಫೈಸಲ್‌ ಬಿನ್‌ ಫರ್ಹಾನ್‌ ಅಲ್‌ ಸೌದ್‌, ಟರ್ಕಿಯ ಹಕನ್‌ ಫಿದಾನ್‌ ಮತ್ತು ಈಜಿಪ್ಟ್‌ನ ಬದ್ರ್‌ ಅಬ್ದಲತಿ ಪಾಲ್ಗೊಂದಿದ್ದು, ಇರಾನ್‌-ಅಮೆರಿಕ-ಇಸ್ರೇಲ್‌ ನಡುವಿನ ಯುದ್ಧ ಮತ್ತು ಅದರಿಂದ ಅಂತಾರಾಷ್ಟ್ರೀಯ ಮಾರುಕಟ್ಟೆಯ ಮೇಲೆ ಬೀರುತ್ತಿರುವ ಪರಣಾಮ, ತೈಲ ಬಿಕ್ಕಟ್ಟಿನ ಬಗ್ಗೆ ಚರ್ಚೆ ನಡೆಸಲಿದ್ದಾರೆ ಎಂದು ಮೂಲಗಳು ತಿಳಿಸಿದೆ.

ಇರಾನ್ ಅಧ್ಯಕ್ಷರೊಂದಿಗೆ ಷರೀಫ್ ಮಾತುಕತೆ: ಪಾಕಿಸ್ತಾನದಲ್ಲಿ ಮಧ್ಯಪ್ರಾಚ್ಯ ಶಾಂತಿ ಮಾತುಕತೆಗೆ ಸಿದ್ಧತೆ

ʼʼಪಾಕಿಸ್ತಾನವು ಸೌದಿ ಅರೇಬಿಯಾ, ಈಜಿಪ್ಟ್‌ ಮತ್ತು ಟರ್ಕಿ ಜತೆಗಿನ ಸಂಬಂಧವನ್ನು ಗೌರವಿಸುತ್ತದೆ. ಈ ಮಾತುಕತೆಗೆ ವೇದಿಕೆ ಕಲ್ಪಿಸುವ ಮೂಲಕ ಈ ದೇಶಗಳೊಂದಿಗಿನ ಸಂಬಂಧವನ್ನು ಮತ್ತಷ್ಟು ಬಲಪಡಿಸುವ ಉದ್ದೇಶ ಹೊಂದಿದೆ. ಸಭೆಯ ಬಳಿಕ ಪ್ರಧಾನಿ ಶೆಹಬಾಜ್‌ ಶರೀಫ್‌ ಅವರನ್ನು ಸಚಿವರು ಭೇಟಿಯಾಗಲಿದ್ದಾರೆʼʼ ಎಂದು ಪಾಕಿಸ್ತಾನ ಪ್ರಕಟಣೆಯಲ್ಲಿ ತಿಳಿಸಿದೆ.

ವಿಶೇಷ ಎಂದರೆ ಪಶ್ಚಿಮ ಏಷ್ಯಾದಲ್ಲಿ ನಡೆಯುತ್ತಿರುವ ಈ ಯುದ್ಧವನ್ನು ಕೊನೆಗಳೊಸಲು ಉದ್ದೇಶಿಸಿರುವ ಈ ಸಭೆಯನ್ನು ಆರಂಭದಲ್ಲಿ ಟರ್ಕಿಯಲ್ಲಿ ಆಯೋಜಿಸಲು ನಿರ್ಧರಿಸಲಾಗಿತ್ತು. ಬಳಿಕ ಇದನ್ನು ಪಾಕಿಸ್ತಾನಕ್ಕೆ ಸ್ಥಳಾಂತಿಸಲಾಯಿತು ಎನ್ನಲಾಗಿದೆ.

ಮುಸ್ಲಿಂ ರಾಷ್ಟ್ರಗಳ ಈ ಸಮಾವೇಶವು ಜಾಗತಿಕ ರಾಜತಾಂತ್ರಿಕ ವಲಯದಲ್ಲಿ ಭಾರಿ ಕುತೂಹಲ ಮೂಡಿಸಿದೆ. ಮಧ್ಯಪ್ರಾಚ್ಯದ ಈ ಬಿಕ್ಕಟ್ಟನ್ನು ನಿಭಾಯಿಸುವಲ್ಲಿ ಪಾಕಿಸ್ತಾನದ ಈ ಹೊಸ 'ಶಾಂತಿ ದೂತ'ನ ಪಾತ್ರವು ಅತ್ಯಂತ ನಿರ್ಣಾಯಕವೆಂದು ಭಾವಿಸಲಾಗಿದೆ. ಇದು ಎಷ್ಟರ ಮಟ್ಟಿಗೆ ಯಶಸ್ವಿಯಾಗಲಿದೆ ಎನ್ನುವುದನ್ನು ಕಾದು ನೋಡಬೇಕಿದೆ.

ವಿದೇಶದ ಇನ್ನಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್‌ ಮಾಡಿ

ʼಪ್ರವಾಸಿ ಪ್ರಪಂಚʼ ವೆಬ್‌ಸೈಟ್‌ಗೆ ಭೇಟಿ ನೀಡಲು ಇಲ್ಲಿ ಕ್ಲಿಕ್‌ ಮಾಡಿ.