ಪಾಕಿಸ್ತಾನದಲ್ಲಿ ಸರ್ಕಾರವನ್ನು ಟೀಕಿಸುವ ಪತ್ರಕರ್ತನ ಜತೆ ಬೆಲೆತೆತ್ತ ಗಿಳಿ ಮಾರಾಟಗಾರರು!
Viral News: ಪಾಕಿಸ್ತಾನದ ಪ್ರಸಿದ್ಧ ಯುಟ್ಯೂಬರ್/ಪತ್ರಕರ್ತ ಅಸದ್ ಅಲಿ ಟೂರ್ ಮತ್ತು ಹಲವಾರು ಪಕ್ಷಿ ಮಾರಾಟಗಾರರ ಬ್ಯಾಂಕ್ ಖಾತೆಗಳನ್ನು FIA ಸ್ಥಗಿತಗೊಳಿಸಿದೆ. ತನಗೆ ಮಾತ್ರವಲ್ಲ, ತನಗೆ ಪಕ್ಷಿಗಳನ್ನು ಮಾರಿದ ಜನರನ್ನೂ ಸಹ ಶಿಕ್ಷಿಸಲಾಗುತ್ತಿರುವುದು ಅಸಂಬದ್ಧ ಎಂದು ಟೂರ್ ಕಿಡಿಕಾರಿದ್ದಾರೆ.

ಸಾಂದರ್ಭಿಕ ಚಿತ್ರ.

ಇಸ್ಲಾಮಾಬಾದ್: ಪಾಕಿಸ್ತಾನದ ಪ್ರಸಿದ್ಧ ಯುಟ್ಯೂಬರ್/ಪತ್ರಕರ್ತ ಅಸದ್ ಅಲಿ ಟೂರ್ ಮತ್ತು ಹಲವಾರು ಪಕ್ಷಿ ಮಾರಾಟಗಾರರ ಬ್ಯಾಂಕ್ ಖಾತೆಗಳನ್ನು ಎಫ್‌ಐಎ (Federal Investigation Agency) ಸ್ಥಗಿತಗೊಳಿಸಿದೆ. ಗಿಳಿ ಮಾರಾಟದ ಹಣದ ವ್ಯವಹಾರಗಳಲ್ಲಿ ಅವ್ಯವಸ್ಥೆ ಅಥವಾ ಅನುಮಾನಾಸ್ಪದ ಚಟುವಟಿಕೆಗಳು ನಡೆದಿರುವ ಸಾಧ್ಯತೆ ಇರುವುದರಿಂದ ಈ ಕ್ರಮ ಕೈಗೊಳ್ಳಲಾಗಿದೆ ಎನ್ನಲಾಗಿದೆ.
ಈ ಪ್ರಕರಣ ಮೊದಲಿಗೆ ಏಪ್ರಿಲ್‌ನಲ್ಲಿ ಬೆಳಕಿಗೆ ಬಂದಿತ್ತು. ಕರಾಚಿಯಲ್ಲಿ ನೆಲೆಸಿರುವ 29 ವರ್ಷದ ಗಿಳಿ ಮಾರಾಟಗಾರ ರೋಝಿ ಖಾನ್, ಇಸ್ಲಾಮಾಬಾದ್‌ನಲ್ಲಿ ಗಿಳಿಯನ್ನು ಮಾರಿದ ಬಳಿಕ, ಹಣ ತೆಗೆದುಕೊಳ್ಳಲು ಯತ್ನಿಸಿದಾಗ ತಮ್ಮ ಬ್ಯಾಂಕ್ ಖಾತೆ ಮುಚ್ಚಲ್ಪಟ್ಟಿರುವುದು ತಿಳಿದುಬಂದಿದೆ. ಎಟಿಎಂನಲ್ಲಿ ಹಣ ತೆಗೆಯುವಾಗ ಅಮಾನ್ಯ ಬ್ಯಾಂಕ್ ಖಾತೆ ಎಂಬ ಸಂದೇಶ ಬಂದಿದೆ.
ಎಫ್‌ಐಎ ನಿರ್ದೇಶನದಡಿಯಲ್ಲಿ ಏಪ್ರಿಲ್ 10ರಂದು ಖಾತೆಯನ್ನು ಸ್ಥಗಿತಗೊಳಿಸಲಾಗಿದೆ ಎಂದು ಅವರ ಬ್ಯಾಂಕ್ ಮ್ಯಾನೇಜರ್ ನಂತರ ಅವರಿಗೆ ತಿಳಿಸಿದರು ಎಂದು ಪಾಕಿಸ್ತಾನ ಮೂಲದ ದಿ ಫ್ರೈಡೇ ಟೈಮ್ಸ್ ವರದಿ ಮಾಡಿದೆ. ನಾನು ಎಲ್ಲ ರೀತಿಯ ಜನರಿಗೆ ಪಕ್ಷಿಗಳನ್ನು ಮಾರಾಟ ಮಾಡುತ್ತೇನೆ ಎಂದು ರೋಝಿ ತಿಳಿಸಿದರು. ಆದರೆ ಪತ್ರಕರ್ತನಿಗೆ ಮಾರಾಟ ಮಾಡುವುದರಿಂದ ಇಂತಹ ಸಮಸ್ಯೆ ಉಂಟಾಗುತ್ತದೆ ಎಂದು ಭಾವಿಸಿರಲಿಲ್ಲ ಎಂದು ಅವರು ಹೇಳಿದರು.
ಈ ಸುದ್ದಿಯನ್ನೂ ಓದಿ: Pakistan Floods: ಪಾಕಿಸ್ತಾನದಲ್ಲಿ ಭೀಕರ ಪ್ರವಾಹ: ಲೈವ್ ವೇಳೆ ನೀರಿನಲ್ಲಿ ಕೊಚ್ಚಿಹೋದ ವರದಿಗಾರ; ವಿಡಿಯೊ ವೈರಲ್
ರೋಝಿ ಖಾನ್ ಅವರ ಬ್ಯಾಂಕ್ ಖಾತೆ ಮಾತ್ರ ಸ್ಥಗಿತವಾಗಿಲ್ಲ. ಲಾಹೋರ್, ಸರ್ಗೋಧ, ರಾವಲ್ಪಿಂಡಿ ಮತ್ತು ಇತರ ನಗರಗಳಲ್ಲಿನ ಮಾರಾಟಗಾರರು ಅಸದ್ ಅಲಿ ಟೂರ್ ಜತೆ ವ್ಯಾಪಾರ ಮಾಡಿದ ನಂತರ ತಮ್ಮ ಖಾತೆಗಳು ನಿರ್ಬಂಧಕ್ಕೊಳಗಾಗಿವೆ ಎಂಬುದು ತಿಳಿದುಬಂದಿದೆ.
ಲಾಹೋರ್‌ನ 60 ವರ್ಷದ ಉದ್ಯಮಿ ನದೀಮ್ ನಾಸಿರ್ ಎಂಬುವವರು, ಅನಿರೀಕ್ಷಿತವಾಗಿ ಚೆಕ್ ಬೌನ್ಸ್ ಆದ ನಂತರ ತಮ್ಮ ಖಾತೆಯನ್ನು ಯಾವುದೇ ಮುನ್ಸೂಚನೆಯಿಲ್ಲದೆ ಸ್ಥಗಿತಗೊಳಿಸಲಾಗಿದೆ ಎಂದು ತಿಳಿಸಿದ್ದಾರೆ. ಈ ಬಗ್ಗೆ ಎಫ್‌ಐಎ ಅಧಿಕಾರಿಗಳನ್ನು ಸಂಪರ್ಕಿಸಿದಾಗ, ಅವರು ಅಸದ್ ಅಲಿ ಟೂರ್ ಬಗ್ಗೆ ಪ್ರಶ್ನಿಸಿದರಂತೆ.
ನಾಸಿರ್ ಅವರಿಗೆ ಅಸದ್ ಅವರ ಪರಿಚಯ ಐದು ವರ್ಷಗಳ ಹಿಂದಿನದ್ದು. ನಾಸಿರ್ ಅವರೊಂದಿಗೆ ಉತ್ತಮ ಸಂಬಂಧವನ್ನು ಬೆಳೆಸಿಕೊಂಡಿದ್ದಾರಂತೆ. ಆದರೆ ಅವರು ಕೊನೆಯ ಬಾರಿಗೆ 2023 ಮತ್ತು 2024ರ ಆರಂಭದಲ್ಲಿ ಗಿಳಿಗಳನ್ನು ನಾಸಿರ್ ಬಳಿ ಖರೀದಿಸಿದ್ದಾರೆ. ಅಂದಿನಿಂದ, ನಮ್ಮ ನಡುವೆ ಯಾವುದೇ ವ್ಯವಹಾರ ವಹಿವಾಟು ನಡೆದಿಲ್ಲ ಎಂದು ಅವರು ತಿಳಿಸಿದ್ದಾರೆ.
ಅಸದ್ ಅಲಿ ಟೂರ್ ಒಬ್ಬ ಪ್ರಸಿದ್ಧ ಯುಟ್ಯೂಬರ್ ಮತ್ತು ಸರ್ಕಾರದ ನೇರ ಟೀಕಾಕಾರರಾಗಿದ್ದು, 3,35,000ಕ್ಕೂ ಹೆಚ್ಚು ಚಂದಾದಾರರನ್ನು ಹೊಂದಿದ್ದಾರೆ. ಅವರು ಅಪರೂಪದ ಗಿಳಿಗಳ ಬಗ್ಗೆ ಗಮನಾರ್ಹ ಉತ್ಸಾಹವನ್ನು ಹೊಂದಿದ್ದಾರೆ. ಅವುಗಳ ಆರೈಕೆಗಾಗಿ ತಿಂಗಳಿಗೆ 50,000 ರೂ.ಗಿಂತ ಹೆಚ್ಚು ಖರ್ಚು ಮಾಡುತ್ತಾರಂತೆ. ಟೂರ್ ಅವರ ಬ್ಯಾಂಕ್ ಖಾತೆಗಳು, ಅವರ ಪೋಷಕರು, ಸಹೋದರ ಮತ್ತು ಸೋದರಸಂಬಂಧಿಯ ಬ್ಯಾಂಕ್ ಖಾತೆಗಳನ್ನು ಸ್ಥಗಿತಗೊಳಿಸಲಾಗಿದ್ದರೂ, ಅವರೊಂದಿಗೆ ವ್ಯವಹರಿಸಿದ ಮಾರಾಟಗಾರರು ಸಹ ಇದೇ ರೀತಿಯ ನಿರ್ಬಂಧಗಳನ್ನು ಅನುಭವಿಸಿದ್ದಾರೆ. ತನಗೆ ಮಾತ್ರವಲ್ಲ, ತನಗೆ ಪಕ್ಷಿಗಳನ್ನು ಮಾರಿದ ಜನರನ್ನೂ ಸಹ ಶಿಕ್ಷಿಸಲಾಗುತ್ತಿರುವುದು ಅಸಂಬದ್ಧ ಎಂದು ಕಿಡಿಕಾರಿದ್ದಾರೆ.
ಇನ್ನು ಎಫ್‌ಐಎ ಅಥವಾ ಇತರ ಪಾಕಿಸ್ತಾನಿ ಅಧಿಕಾರಿಗಳು ಈ ವಿಷಯದ ಬಗ್ಗೆ ಸಾರ್ವಜನಿಕವಾಗಿ ಪ್ರತಿಕ್ರಿಯಿಸಿಲ್ಲ.