ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Pakistan Floods: ಪಾಕಿಸ್ತಾನದಲ್ಲಿ ಭೀಕರ ಪ್ರವಾಹ: ಲೈವ್‌ ವೇಳೆ ನೀರಿನಲ್ಲಿ ಕೊಚ್ಚಿಹೋದ ವರದಿಗಾರ; ವಿಡಿಯೊ ವೈರಲ್

Viral Video: ಪ್ರವಾಹದ ಬಗ್ಗೆ ವರದಿ ಮಾಡುತ್ತಿದ್ದ ವೇಳೆ ಪತ್ರಕರ್ತನೊಬ್ಬ ನೀರಿನಲ್ಲಿ ಕೊಚ್ಚಿ ಹೋದ ಘಟನೆ ಪಾಕಿಸ್ತಾನದ ರಾವಲ್ಪಿಂಡಿಯಲ್ಲಿ ನಡೆದಿದೆ. ನೀರಿನ ಸೆಳೆತ ಹೆಚ್ಚಿದ್ದರೂ, ಅದರ ಮಧ್ಯದಲ್ಲಿ ನಿಂತು ವರದಿ ಮಾಡಿದ್ದಾನೆ. ಸದ್ಯ ಈ ವಿಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ.

ಪಾಕಿಸ್ತಾನದಲ್ಲಿ ಭೀಕರ ಪ್ರವಾಹ: ನೀರಿನಲ್ಲಿ ಕೊಚ್ಚಿಹೋದ ವರದಿಗಾರ

Profile Ramesh B Jul 19, 2025 1:35 PM

ಇಸ್ಲಾಮಾಬಾದ್‌: ಪಾಕಿಸ್ತಾನದಲ್ಲಿ ಪ್ರವಾಹ ಉಂಟಾಗಿದ್ದು, ಇದರ ಬಗ್ಗೆ ವರದಿ ಮಾಡುತ್ತಿದ್ದ ಪತ್ರಕರ್ತನೊಬ್ಬ ನೆರೆ ನೀರಿನಲ್ಲಿ ಕೊಚ್ಚಿ ಹೋದ ಘಟನೆ ನಡೆದಿದೆ (Pakistan Floods). ಸದ್ಯ ಈ ಘಟನೆಯ ವಿಡಿಯೊ ಸೋಶಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದೆ. ಪಾಕಿಸ್ತಾನದ ಹಲವು ಪ್ರದೇಶಗಳಲ್ಲಿ ಭಾರಿ ಮಳೆಯಿಂದ ಪ್ರವಾಹ ಪರಿಸ್ಥಿತಿ ನಿರ್ಮಾಣವಾಗಿದೆ. ನೇರಪ್ರಸಾರದ ಸಮಯದಲ್ಲಿ ರಾವಲ್ಪಿಂಡಿಯ ಚಾಹನ್ ಅಣೆಕಟ್ಟು ಬಳಿ ನೀರಿನ ಸೆಳೆತ ಹೆಚ್ಚಿದ್ದರೂ, ಅದರ ಮಧ್ಯದಲ್ಲಿ ನಿಂತು ವರದಿಗಾರನೊಬ್ಬ ವರದಿ ಮಾಡಿದ್ದಾನೆ. ಹೀಗಾಗಿ ಕೊಚ್ಚಿ ಹೋಗಿದ್ದಾನೆ (Viral Video) ಎನ್ನಲಾಗಿದೆ. ಸದ್ಯ ಈ ವಿಡಿಯೊ ನೋಡಿ ನೆಟ್ಟಿಗರು ಶಾಕ್‌ಗೆ ಒಳಗಾಗಿದ್ದಾರೆ.

ಕುತ್ತಿಗೆಯ ಆಳದವರೆಗಿದ್ದ ನೀರಿನಲ್ಲಿ ಕೈಯಲ್ಲಿ ಮೈಕ್ರೊಫೋನ್ ಹಿಡಿದುಕೊಂಡು ಪತ್ರಕರ್ತ ನೇರ ಪ್ರಸಾರದಲ್ಲಿ ವರದಿ ಮಾಡಿದ್ದಾನೆ. ನೀರಿನ ಪ್ರವಾಹ ಹೆಚ್ಚುತ್ತಿದ್ದರೂ ಆತ ಇದ್ಯಾವುದನ್ನೂ ಲೆಕ್ಕಿಸದೆ ತನ್ನ ವರದಿಯನ್ನು ಮುಂದುವರಿಸಿದ್ದಾನೆ. ಅಲ್ ಅರೇಬಿಯಾ ಇಂಗ್ಲಿಷ್ ಫೇಸ್‌ಬುಕ್‌ನಲ್ಲಿ ಹಂಚಿಕೊಂಡಿರುವ ಈ ವಿಡಿಯೊದಲ್ಲಿ ನೀರಿನಲ್ಲಿ ಮುಳುಗುವ ಮುನ್ನ ವರದಿಗಾರನ ತಲೆ ಮತ್ತು ಮೈಕ್‌ ಹಿಡಿದಿರುವ ಕೈ ಮಾತ್ರ ಕಂಡು ಬಂದಿದೆ.

ವೈರಲ್‌ ವಿಡಿಯೊ ಇಲ್ಲಿದೆ:



ಈ ದೃಶ್ಯ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದ್ದು, ಹಲವಾರು ಮಂದಿ ಪ್ರತಿಕ್ರಿಯಿಸಿದ್ದಾರೆ. ಕೆಲವು ಬಳಕೆದಾರರು ಆತನ ಧೈರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಇತರರು ಅಂತಹ ಅಪಾಯಕಾರಿ ಪರಿಸ್ಥಿತಿಗಳಲ್ಲಿ ವರದಿ ಮಾಡುವ ನಿರ್ಧಾರವನ್ನು ಟೀಕಿಸಿದ್ದಾರೆ. ಇದು ಪತ್ರಿಕೋದ್ಯಮಕ್ಕೆ ಅಗತ್ಯವಿದೆಯೇ ಅಥವಾ ಟಿಆರ್‌ಪಿ ಹುಚ್ಚೇ ಎಂದು ಟೀಕಿಸಿದ್ದಾರೆ.

ಸದ್ಯ, ವರದಿಗಾರನ ಗುರುತು ಇನ್ನೂ ತಿಳಿದಿಲ್ಲ. ಸಾಮಾಜಿಕ ಮಾಧ್ಯಮಗಳಲ್ಲಿ ಹಲವರು ವರದಿ ಮಾಡುವಾಗ ಪತ್ರಕರ್ತ ತನ್ನ ಪ್ರಾಣವನ್ನೇ ಪಣಕ್ಕಿಟ್ಟಿದ್ದಾರೆ ಎಂದು ಹೇಳಿದರೆ. ಇನ್ನು ಕೆಲವರು ಟಿವಿ ಚಾನೆಲ್‌ಗಳ ಟಿಆರ್‌ಪಿ ಹಸಿವು ಎಂದು ದೂರಿದ್ದಾರೆ. ವೈರಲ್ ಆಗಿರುವ ವಿಡಿಯೊ ಮಾಧ್ಯಮ ಜವಾಬ್ದಾರಿಯ ಕುರಿತು ಚರ್ಚೆಯನ್ನು ಮತ್ತೆ ಹುಟ್ಟುಹಾಕಿದೆ. ಅಪಾಯಕಾರಿ ಸಂದರ್ಭಗಳಲ್ಲಿ ಪತ್ರಕರ್ತರ ಸುರಕ್ಷತೆಯ ಬಗ್ಗೆ ಗಂಭೀರ ಕಳವಳಗಳನ್ನು ಹುಟ್ಟುಹಾಕಿದೆ.

ಪ್ರವಾಹದಿಂದ 116 ಮಂದಿ ಸಾವು

ಜೂನ್ 26ರಿಂದ ನಿರಂತರವಾಗಿ ಸುರಿಯುತ್ತಿರುವ ಧಾರಾಕಾರ ಮಳೆಯಿಂದಾಗಿ ಪಾಕಿಸ್ತಾನದಲ್ಲಿ ಪ್ರವಾಹ ಉಂಟಾಗಿದ್ದು, ಇದುವರೆಗೆ ಕನಿಷ್ಠ 116 ಜನ ಸಾವಿಗೀಡಾಗಿದ್ದಾರೆ ಮತ್ತು 250ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ. ಪಂಜಾಬ್ ಪ್ರಾಂತ್ಯದಲ್ಲಿ 44 ಮಂದಿ, ಖೈಬರ್ ಪಖ್ತುನ್ಖಾದಲ್ಲಿ 37, ಸಿಂಧ್‌ನಲ್ಲಿ 18 ಮತ್ತು ಬಲೂಚಿಸ್ತಾನ್‌ನಲ್ಲಿ 19 ಮಂದಿ ಮೃತಪಟ್ಟಿದ್ದಾರೆ. ಆಕ್ರಮಿತ ಕಾಶ್ಮೀರದಲ್ಲಿ (ಪಿಒಕೆ) ಒಬ್ಬರು ಮೃತಪಟ್ಟಿದ್ದು, ಐದು ಮಂದಿ ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ.

ಪ್ರವಾಹವು ಲಕ್ಷಾಂತರ ಜನರನ್ನು ಬಾಧಿಸಿದ್ದು, ನೂರಾರು ಮನೆಗಳು ನಾಶಗೊಂಡಿವೆ. ವಿದ್ಯುತ್ ಮತ್ತು ನೀರಿನಂತಹ ಅಗತ್ಯ ಸೇವೆಗಳನ್ನು ಅಸ್ತವ್ಯಸ್ತಗೊಳಿಸಿದೆ. ಚಹಾನ್ ಅಣೆಕಟ್ಟು ಕುಸಿತವು ಪರಿಸ್ಥಿತಿಯನ್ನು ಮತ್ತಷ್ಟು ಉಲ್ಬಣಗೊಳಿಸಿದೆ. ರಾವಲ್ಪಿಂಡಿ ಸೇರಿದಂತೆ ಹಲವು ಪ್ರದೇಶಗಳು ಮುಳುಗಿವೆ. ಪರಿಹಾರ ಮತ್ತು ರಕ್ಷಣಾ ಕಾರ್ಯಾಚರಣೆಗಳನ್ನು ಕೈಗೊಳ್ಳಲಾಗಿದೆ.