ಫೋಟೋ ಗ್ಯಾಲರಿ ಬಜೆಟ್​ T20 ವಿಶ್ವಕಪ್​ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ವಿದೇಶ ಕ್ರೈಂ ಧಾರ್ಮಿಕ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

ಟ್ರಂಪ್‌ ಈ ನಿರ್ಧಾರವೇ ಮೂರನೇ ಮಹಾಯುದ್ಧವನ್ನು ಶುರು ಮಾಡ್ತಾ? ಮಧ್ಯಪ್ರಾಚ್ಯ ಸಂಪೂರ್ಣ ಧಗಧಗ

ಅಮೆರಿಕ ಮತ್ತು ಇಸ್ರೇಲ್ ಪಡೆಗಳು ಇರಾನ್ ಮೇಲೆ ಜಂಟಿಯಾಗಿ ಬೃಹತ್ ದಾಳಿ ನಡೆಸಿರುವುದು ಜಾಗತಿಕ ಮಟ್ಟದಲ್ಲಿ ಭಾರೀ ಆತಂಕಕ್ಕೆ ಕಾರಣವಾಗಿದೆ. ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ “ಪ್ರಮುಖ ಯುದ್ಧ ಕಾರ್ಯಾಚರಣೆಗಳು” ನಡೆಯುತ್ತಿವೆ ಎಂದು ಘೋಷಣೆ ಮಾಡಿದ್ದು, ಇರಾನ್‌ನ ಕ್ಷಿಪಣಿ ವ್ಯವಸ್ಥೆ ಮತ್ತು ಅಣುಬಾಂಬ್ ಯೋಜನೆಗಳನ್ನು ತಡೆಯುವುದೇ ದಾಳಿಯ ಉದ್ದೇಶ ಎಂದು ತಿಳಿಸಿದ್ದಾರೆ. ಇತ್ತ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಇದನ್ನು ತಮ್ಮ ದೇಶದ ಅಸ್ತಿತ್ವದ ರಕ್ಷಣೆಯ ಹೋರಾಟವೆಂದು ಹೇಳಿದ್ದಾರೆ.

ಇರಾನ್ ಮೇಲೆ ಅಮೆರಿಕ–ಇಸ್ರೇಲ್ ದಾಳಿ..!; ಇದು 3ನೇ ಮಹಾಯುದ್ಧದ ಮುನ್ಸೂಚನೆಯೇ

ಸಾಂದರ್ಭಿಕ ಚಿತ್ರ -

Profile
Sushmitha Jain Mar 1, 2026 12:56 PM

ಟೆಹ್ರಾನ್: ವಿಶ್ವದಾದ್ಯಂತ ತೀವ್ರ ಆತಂಕ ಸೃಷ್ಟಿಸಿರುವ ಬೆಳವಣಿಗೆಯೊಂದರಲ್ಲಿ, ಅಮೆರಿಕ ಮತ್ತು ಇಸ್ರೇಲ್ ಪಡೆಗಳು ಶನಿವಾರ ಇರಾನ್ ಮೇಲೆ ಬೃಹತ್ ದಾಳಿಯನ್ನು ಆರಂಭಿಸಿವೆ. ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಇರಾನ್ ವಿರುದ್ಧ "ಪ್ರಮುಖ ಯುದ್ಧ ಕಾರ್ಯಾಚರಣೆಗಳು" (Major Combat Operations) ನಡೆಯುತ್ತಿವೆ ಎಂದು ಅಧಿಕೃತವಾಗಿ ಖಚಿತಪಡಿಸಿದ್ದಾರೆ. ಈ ಬೆನ್ನಲ್ಲೇ ಸಾಮಾಜಿಕ ಜಾಲತಾಣಗಳಲ್ಲಿ "ಮೂರನೇ ಮಹಾಯುದ್ಧ" (World War 3) ಆರಂಭವಾಯಿತೇ ಎಂಬ ಚರ್ಚೆಗಳು ಮತ್ತು ಮೀಮ್‌ಗಳ ಸುನಾಮಿಯೇ ಎದ್ದಿದೆ.

ದಾಳಿಯ ವಿವರ ಮತ್ತು ಟ್ರಂಪ್ ಘೋಷಣೆ

ಇರಾನ್ ರಾಜಧಾನಿ ಟೆಹ್ರಾನ್‌ನಲ್ಲಿರುವ ಸುಪ್ರೀಂ ಲೀಡರ್ ಆಯತೊಲ್ಲಾ ಅಲಿ ಖಮೇನಿ ಅವರ ಕಚೇರಿಯ ಸಮೀಪವೇ ಮೊದಲ ಸ್ಫೋಟಗಳು ಸಂಭವಿಸಿವೆ ಎಂದು ವರದಿಯಾಗಿದೆ. ಈ ಕಾರ್ಯಾಚರಣೆಯ ಬಗ್ಗೆ ವಿಡಿಯೋ ಸಂದೇಶ ಬಿಡುಗಡೆ ಮಾಡಿರುವ ಅಧ್ಯಕ್ಷ ಟ್ರಂಪ್, "ಇರಾನ್ ಆಡಳಿತದಿಂದ ಎದುರಾಗಲಿರುವ ಭೀಕರ ಬೆದರಿಕೆಗಳನ್ನು ಹೋಗಲಾಡಿಸಲು ಈ ಬೃಹತ್ ದಾಳಿ ನಡೆಸಲಾಗುತ್ತಿದೆ. ಇರಾನ್‌ನ ಕ್ಷಿಪಣಿ ವ್ಯವಸ್ಥೆಯನ್ನು ಧ್ವಂಸಗೊಳಿಸಲು ಮತ್ತು ಆ ದೇಶ ಅಣುಬಾಂಬ್ ತಯಾರಿಸುವುದನ್ನು ತಡೆಯಲು ನಾವು ವಿನಾಶಕಾರಿ ಶಕ್ತಿಯನ್ನು ಬಳಸಲಿದ್ದೇವೆ" ಎಂದು ಗುಡುಗಿದ್ದಾರೆ. ಇತ್ತ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಕೂಡ ಇರಾನ್ ಜನತೆಗೆ ಸರ್ಕಾರವನ್ನು ಕಿತ್ತೊಗೆಯುವಂತೆ ಕರೆ ನೀಡಿದ್ದು, ಇದು ಅಸ್ತಿತ್ವದ ರಕ್ಷಣೆಗಾಗಿ ನಡೆಸುತ್ತಿರುವ ಹೋರಾಟ ಎಂದಿದ್ದಾರೆ.

ಇಸ್ರೇಲ್–ಇರಾನ್ ಯುದ್ಧ ಭೀತಿ; ಭಾರತೀಯ ನಾಗರಿಕರಿಗೆ ತುರ್ತು ಎಚ್ಚರಿಕೆ ರವಾನಿಸಿದ ಕೇಂದ್ರ

ಜಾಗತಿಕ ಪ್ರತಿಕ್ರಿಯೆ ಮತ್ತು ಆತಂಕ

ಈ ಜಂಟಿ ದಾಳಿಯ ಬೆನ್ನಲ್ಲೇ ಭಾರತ, ಚೀನಾ, ಜರ್ಮನಿ, ಇಟಲಿ ಮತ್ತು ಪೋಲೆಂಡ್ ಸೇರಿದಂತೆ ಹಲವು ದೇಶಗಳು ಇರಾನ್‌ನಲ್ಲಿರುವ ತಮ್ಮ ನಾಗರಿಕರಿಗೆ ತಕ್ಷಣವೇ ದೇಶ ತೊರೆಯುವಂತೆ ತುರ್ತು ಸೂಚನೆ ನೀಡಿವೆ. ಇತ್ತ ಇರಾನ್ ವಿದೇಶಾಂಗ ಸಚಿವ ಅಬ್ಬಾಸ್ ಅರಾಗ್ಚಿ ಅವರು, "ಈ ದಾಳಿಯು ಅಕ್ರಮ ಮತ್ತು ಪ್ರಚೋದನಾಕಾರಿ. ನಮ್ಮ ಸಶಸ್ತ್ರ ಪಡೆಗಳು ಸನ್ನದ್ಧವಾಗಿದ್ದು, ಆಕ್ರಮಣಕಾರರಿಗೆ ತಕ್ಕ ಪಾಠ ಕಲಿಸಲಿವೆ" ಎಂದು ಪ್ರತಿ ಸವಾಲು ಹಾಕಿದ್ದಾರೆ.

ಸೋಷಿಯಲ್ ಮೀಡಿಯಾದಲ್ಲಿ ಮೀಮ್‌ಗಳ ಹಾವಳಿ

ಎಕ್ಸ್ (ಟ್ವಿಟರ್) ನಂತಹ ವೇದಿಕೆಗಳಲ್ಲಿ "Is WW3 starting?" ಎಂಬ ಹ್ಯಾಶ್‌ಟ್ಯಾಗ್ ಟ್ರೆಂಡ್ ಆಗುತ್ತಿದೆ. "ಹೊಸ ವರ್ಷ ಆರಂಭವಾಗಿ ಕೇವಲ ಎರಡು ತಿಂಗಳಲ್ಲೇ ಮಹಾಯುದ್ಧ ಶುರುವಾಯಿತೇ?" ಎಂದು ಕೆಲವರು ಆತಂಕ ವ್ಯಕ್ತಪಡಿಸಿದರೆ, ಇನ್ನು ಕೆಲವರು "ಮಹಾಯುದ್ಧ ಶುರುವಾಗುವುದಾದರೆ ನಾವು ಆಫೀಸ್ ಕೆಲಸ ಮಾಡುವುದನ್ನು ನಿಲ್ಲಿಸಬೇಕೇ?" ಎಂದು ತಮಾಷೆಯ ಮೀಮ್‌ಗಳನ್ನು ಹಂಚಿಕೊಳ್ಳುತ್ತಿದ್ದಾರೆ. ಜರ್ಮನಿಯ ಬಳಕೆದಾರರೊಬ್ಬರು "ಈ ಬಾರಿ ಮಹಾಯುದ್ಧಕ್ಕೆ ಜರ್ಮನಿ ಜವಾಬ್ದಾರಿಯಲ್ಲ ಎಂದು ಜರ್ಮನ್ನರು ನಿಟ್ಟುಸಿರು ಬಿಡುತ್ತಿದ್ದಾರೆ" ಎಂದು ವ್ಯಂಗ್ಯವಾಡಿದ್ದಾರೆ. ಒಟ್ಟಾರೆಯಾಗಿ, ಈ ಸಂಘರ್ಷವು ಜಾಗತಿಕ ಶಾಂತಿಗೆ ದೊಡ್ಡ ಧಕ್ಕೆ ತರುವ ಭೀತಿ ಮೂಡಿಸಿದೆ.