ʼʼ2-3 ದಿನ ಅಥವಾ ಮುಂದಿನ ವಾರʼʼ: ಇರಾನ್ ವಿರುದ್ಧದ ದಾಳಿಗೆ ಮುಹೂರ್ತ ಫಿಕ್ಸ್ ಮಾಡಿದ್ರಾ ಡೊನಾಲ್ಡ್ ಟ್ರಂಪ್?
Donald Trump: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಇರಾನ್ ವಿರುದ್ಧ ಮತ್ತೊಮ್ಮೆ ಭೀಕರ ದಾಳಿಯ ಎಚ್ಚರಿಕೆ ನೀಡಿದ್ದಾರೆ. 2-3 ದಿನ ಅಥವಾ ಮುಂದಿನ ವಾರ ದಾಳಿ ನಡೆಸುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.
ಡೊನಾಲ್ಡ್ ಟ್ರಂಪ್ (ಸಂಗ್ರಹ ಚಿತ್ರ) -
ವಾಷಿಂಗ್ಟನ್, ಮೇ 19: ಪಶ್ಚಿಮ ಏಷ್ಯಾದಲ್ಲಿನ ಸಂಘರ್ಷ ಇನ್ನೂ ತಿಳಿಯಾಗಿಲ್ಲ. ಇರಾನ್ ಮತ್ತು ಅಮೆರಿಕ ಪಟ್ಟು ಸಡಿಲಿಸದ ಹಿನ್ನೆಲೆಯಲ್ಲಿ ಕದನ ವಿರಾಮ ಕುಸಿದು ಬೀಳುವ ಹಂತಕ್ಕೆ ತಲುಪಿದೆ. ಈ ಮಧ್ಯೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ (Donald Trump) ಇರಾನ್ ವಿರುದ್ಧ ಭೀಕರ ದಾಳಿಯ ಎಚ್ಚರಿಕೆ ನೀಡಿದ್ದಾರೆ. 2-3 ದಿನ ಅಥವಾ ಮುಂದಿನ ವಾರ ದಾಳಿ ನಡೆಸುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ. "ನಾವು ಯುದ್ಧ ಮಾಡಬೇಕಾಗಿಲ್ಲ ಎಂದು ನಾನು ಭಾವಿಸುತ್ತೇನೆ. ಆದರೆ ನಾವು ಅವರಿಗೆ ಮತ್ತೊಂದು ದೊಡ್ಡ ಹೊಡೆತ ನೀಡಬೇಕಾಗಬಹುದು. ನನಗೆ ಈ ಬಗ್ಗೆ ಇನ್ನೂ ಖಚಿತವಿಲ್ಲ. ನಿಮಗೆ ಶೀಘ್ರದಲ್ಲೇ ತಿಳಿಯುತ್ತದೆ" ಎಂದು ಟ್ರಂಪ್ ಈಗಾಗಲೇ ತಿಳಿಸಿದ್ದರು.
ಇರಾನ್ ಪರಮಾಣು ಶಸ್ತ್ರಾಸ್ತ್ರವನ್ನು ಹೊಂದಲು ಬಿಡುವುದಿಲ್ಲ ಎಂದು ಪುನರುಚ್ಚರಿಸಿದ ಟ್ರಂಪ್, ಅದನ್ನು ಅವರು ಬಳಸುವ ಅಪಾಯವಿದೆ ಎಂದಿದ್ದಾರೆ. ಆ ಮೂಲಕ ಇರಾನ್‌ನ ಪರಮಾಣು ಶಸ್ತ್ರಾಸ್ತ್ರ ಹೊಂದುವ ಪ್ರಯತ್ನವನ್ನು ತಡೆಯುವ ತಮ್ಮ ಉದ್ದೇಶವನ್ನು ಮತ್ತೊಮ್ಮೆ ಸ್ಪಷ್ಟಪಡಿಸಿದ್ದಾರೆ.
ಬರಾಕ್ ರಾವಿದ್ ಎಕ್ಸ್ ಪೋಸ್ಟ್:
Trump on Iran strike timeline: "2-3 days, maybe Friday or Saturday, early next week. A limited period of time"
— Barak Ravid (@BarakRavid) May 19, 2026
ಆಕ್ಸಿಯಾಸ್‌ನ ವರದಿಗಾರ ಬರಾಕ್ ರಾವಿದ್, ಎಕ್ಸ್ ಪೋಸ್ಟ್‌ನಲ್ಲಿ ಟ್ರಂಪ್ ಇರಾನ್ ಮೇಲೆ ಮುಂದಿನ ಕೆಲವು ದಿನಗಳಲ್ಲಿ ಹೊಸ ಮಿಲಿಟರಿ ದಾಳಿಗಳು ನಡೆಸಬಹುದು ಎಂದು ಹೇಳಿದ್ದಾರೆ. ʼʼಇರಾನ್ ಮೇಲೆ ಟ್ರಂಪ್ ದಾಳಿ ನಡೆಸಬಹುದಾದ ಟೈಮ್‌ಲೈನ್: 2-3 ದಿನಗಳು, ಶುಕ್ರವಾರ ಅಥವಾ ಶನಿವಾರ, ಮುಂದಿನ ವಾರ. ಈ ದಾಳಿ ಸೀಮಿತ ಅವಧಿಯದ್ದಾಗಿರಲಿದೆʼʼ ಎಂದು ತಿಳಿಸಿದ್ದಾರೆ.
ಇರಾನ್‌ನ ಶಾಂತಿ ಪ್ರಸ್ತಾಪ ತಿರಸ್ಕರಿಸಿದ ಅಮೆರಿಕ: ಅಧ್ಯಕ್ಷ ಟ್ರಂಪ್ ಹೇಳಿದ್ದೇನು?
ದಾಳಿ ಮುಂದೂಡಿದ್ದ ಟ್ರಂಪ್
ʼʼಅಮೆರಿಕದೊಂದಿಗೆ ಶಾಂತಿ ಒಪ್ಪಂದ ಮಾಡಿಕೊಳ್ಳಲಿ ಇರಾನ್‌ಗೆ ಕ್ಷಣಗಣನೆ ಆರಂಭವಾಗಿದೆ. ಟೆಹರಾನ್ ನಾಯಕರು ವೇಗವಾಗಿ ಚಲಿಸದಿದ್ದರೆ ಇರಾನ್‌ನಲ್ಲಿ ಏನೂ ಉಳಿಯುವುದಿಲ್ಲ" ಎಂದು ಟ್ರಂಪ್ ಭಾನುವಾರ (ಮೇ 17) ಎಚ್ಚರಿಕೆ ನೀಡಿದ್ದರು. ಆದಾಗ್ಯೂ ಟ್ರಂಪ್ ಸೋಮವಾರ, ಮಂಗಳವಾರ ಇರಾನ್ ಮೇಲೆ ನಡೆಸಲು ಉದ್ದೇಶಿಸಿದ್ದ ದಾಳಿಯನ್ನು ರದ್ದುಗೊಳಿಸಿದ್ದರು. ಶಾಂತಿ ಒಪ್ಪಂದದ ಕಡೆಗೆ ಗಂಭೀರ ಮಾತುಕತೆಗಳು ನಡೆಯುತ್ತಿರುವುದರಿಂದ ದಾಳಿ ಮುಂದೂಡಿರುವುದಾಗಿ ಅವರು ಹೇಳಿದ್ದರು. ಕತಾರ್, ಸೌದಿ ಅರೇಬಿಯಾ ಮತ್ತು ಯುಎಇಗಳ ಕೋರಿಕೆಯ ಮೇರೆಗೆ ಇರಾನ್ ಮೇಲಿನ ದಾಳಿ ಮುಂದೂಡುತ್ತಿರುವುದಾಗಿ ಟ್ರಂಪ್ ತಿಳಿಸಿದ್ದರು.
"ನಾವು ದೊಡ್ಡ ದಾಳಿ ಮಾಡಲು ಸಿದ್ಧರಾಗುತ್ತಿದ್ದೆವು. ಸೌದಿ ಅರೇಬಿಯಾ, ಕತಾರ್, ಯುಎಇ ಮತ್ತಿತರ ದೇಶಗಳ ಕೋರಿಕೆಯ ಮೇರೆಗೆ ಸ್ವಲ್ಪ ಸಮಯದವರೆಗೆ ಇರಾನ್ ಮೇಲಿನ ದಾಳಿ ಮುಂದೂಡಿದ್ದೇನೆ" ಎಂದು ಟ್ರಂಪ್ ಘೋಷಿಸಿದ್ದರು. ಇರಾನ್ ಮೇಲೆ ದಾಳಿಯನ್ನು ಪುನರಾರಂಭಿಸುವ ನಿರ್ಧಾರ ತೆಗೆದುಕೊಳ್ಳಲು ಒಂದು ಗಂಟೆ ಬಾಕಿ ಇದೆ ಎನ್ನುವಾಗ ಬಂದ ಕರೆಯಿಂದ ದಾಳಿ ಮೂಂದೂಡಲಾಗಿತ್ತು ಎನ್ನಲಾಗಿದೆ. "ನಾವು ದಾಳಿ ನಡೆಸಲು ಒಂದು ಗಂಟೆ ದೂರದಲ್ಲಿದ್ದೆವು. ನಾವೆಲ್ಲರೂ ಸಿದ್ಧರಾಗಿದ್ದೆವು. ಕೊನೆ ಕ್ಷಣದಲ್ಲಿ ಹಿಂದೆ ಸರಿದೆವುʼʼ ಎಂದು ಅಮೆರಿಕ ತಿಳಿಸಿತ್ತು.
ಏಪ್ರಿಲ್ 8ರಂದು ಕದನ ವಿರಾಮ ಜಾರಿಗೆ ಬಂದ ನಂತರ, ಇರಾನ್ ಮತ್ತು ಅಮೆರಿಕ ಮಾತುಕತೆ ನಡೆಸಿದ್ದರೂ ನಿರ್ದಿಷ್ಟ ಒಪ್ಪಂದಕ್ಕೆ ಬರಲಾಗಿಲ್ಲ. ಇರಾನ್ ಪ್ರಮುಖ ಜಾಗತಿಕ ಇಂಧನ ಮಾರ್ಗ ಹೊರ್ಮುಜ್ ಜಲಸಂಧಿಯ ಮೇಲೆ ಬಿಗಿಯಾದ ಹಿಡಿತವನ್ನು ಕಾಯ್ದುಕೊಂಡಿರುವುದರಿಂದ ಅಮೆರಿಕ ನೌಕಾ ದಿಗ್ಭಂಧನ ಮುಂದುವರಿಸಿದೆ.
ವಿದೇಶದ ಇನ್ನಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.
ʼಪ್ರವಾಸಿ ಪ್ರಪಂಚʼ ವೆಬ್‌ಸೈಟ್‌ಗೆ ಭೇಟಿ ನೀಡಲು ಇಲ್ಲಿ ಕ್ಲಿಕ್ ಮಾಡಿ.