ಇಂದಿನಿಂದ ಉಜ್ಬೇಕಿಸ್ತಾನ್, ಕಿರ್ಗಿಸ್ತಾನ್ ಪ್ರವಾಸ: ಪ್ರಧಾನಿ ನರೇಂದ್ರ ಮೋದಿ ಕಾರ್ಯಸೂಚಿಯಲ್ಲಿ ಏನಿದೆ ?
ಪ್ರಧಾನಿ ನರೇಂದ್ರ ಮೋದಿ ಅವರು ಆಗಸ್ಟ್ 29ರಿಂದ 30ರವರೆಗೆ ಉಜ್ಬೇಕಿಸ್ತಾನ್, ಕಿರ್ಗಿಸ್ತಾನ್ ಪ್ರವಾಸ ನಡೆಸಲಿದ್ದಾರೆ. ಈ ಸಂದರ್ಭದಲ್ಲಿ ಅವರು ವ್ಯಾಪಾರ, ರಕ್ಷಣೆ ಮತ್ತು ದ್ವಿಪಕ್ಷೀಯ ಸಂಬಂಧಗಳ ಕುರಿತು ಮಾತುಕತೆ ನಡೆಸಲಿದ್ದಾರೆ. ಆಗಸ್ಟ್ 31 ರಿಂದ ಸೆಪ್ಟೆಂಬರ್ 1 ರವರೆಗೆ ಶಾಂಘೈ ಸಹಕಾರ ಸಂಸ್ಥೆಯ ಶೃಂಗಸಭೆಯಲ್ಲಿ ಭಾಗವಹಿಸಲಿದ್ದಾರೆ.
ಸಂಗ್ರಹ ಚಿತ್ರ -
ನವದೆಹಲಿ: ನಾಲ್ಕು ದಿನಗಳ ಅಧಿಕೃತ ಪ್ರವಾಸದ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ (Prime Minister Narendra Modi) ಅವರು ಶನಿವಾರ ಉಜ್ಬೇಕಿಸ್ತಾನ್ (Uzbekistan) ಮತ್ತು ಕಿರ್ಗಿಸ್ತಾನ್‌ಗೆ (Kyrgyzstan) ತೆರಳಿದ್ದಾರೆ. ಈ ಸಂದರ್ಭದಲ್ಲಿ 26ನೇ ಶಾಂಘೈ ಸಹಕಾರ ಸಂಸ್ಥೆಯ ಶೃಂಗಸಭೆಯಲ್ಲಿ (26th Shanghai Cooperation Organisation Summit) ಭಾಗವಹಿಸಲಿರುವ ಅವರು ವ್ಯಾಪಾರ, ರಕ್ಷಣೆ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿನ ಪಾಲುದಾರಿಕೆಗೆ ಸಂಬಂಧಿಸಿ ವಿದೇಶಿ ನಾಯಕರೊಂದಿಗೆ ದ್ವಿಪಕ್ಷೀಯ ಮಾತುಕತೆಗಳನ್ನು ನಡೆಸಲಿದ್ದಾರೆ. ಪ್ರಧಾನಿಯಾದ ಬಳಿಕ ಮೋದಿಯವರು ಇದೀಗ ನಾಲ್ಕನೇ ಬಾರಿಗೆ ಉಜ್ಬೇಕಿಸ್ತಾನ್‌ಗೆ ಭೇಟಿ ನೀಡುತ್ತಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಅವರು ಆಗಸ್ಟ್ 29 ಮತ್ತು 30ರಂದು ಉಜ್ಬೇಕಿಸ್ತಾನ್ ಭೇಟಿ ನಡೆಸಿ ಬಳಿಕ ಆಗಸ್ಟ್ 31 ರಿಂದ ಸೆಪ್ಟೆಂಬರ್ 1 ರವರೆಗೆ ಶಾಂಘೈ ಸಹಕಾರ ಸಂಸ್ಥೆಯ ಶೃಂಗಸಭೆಯಲ್ಲಿ ಭಾಗವಹಿಸಲು ಕಿರ್ಗಿಸ್ತಾನ್ ಗಣರಾಜ್ಯಕ್ಕೆ ಭೇಟಿ ನೀಡಲಿದ್ದಾರೆ.
ನೇಪಾಳ ಪ್ರವಾಹ: ಸುರಕ್ಷಿತವಾಗಿ ದೆಹಲಿಗೆ ಬಂದಿಳಿದ 21 ಮಂದಿ ತಮಿಳುನಾಡಿನ ಯಾತ್ರಿಕರು
ಉಜ್ಬೇಕಿಸ್ತಾನ್ ಪ್ರವಾಸ ಯೋಜನೆಗಳೇನು?
ಉಜ್ಬೇಕಿಸ್ತಾನ್ ಭೇಟಿ ವೇಳೆ ಅವರು ಉಭಯ ರಾಷ್ಟ್ರಗಳ ನಡುವಿನ ಕಾರ್ಯತಂತ್ರದ ಪಾಲುದಾರಿಕೆಯನ್ನು ಮತ್ತಷ್ಟು ಬಲಪಡಿಸುವ ಕುರಿತು ಉಜ್ಬೇಕಿಸ್ತಾನ್ ಅಧ್ಯಕ್ಷ ಶವ್ಕತ್ ಮಿರ್ಜಿಯೋಯೆವ್ ಅವರೊಂದಿಗೆ ಮಾತುಕತೆ ನಡೆಸಲಿದ್ದಾರೆ. ಡಿಜಿಟಲ್ ಸಂಪರ್ಕ, ಇಂಧನ, ವ್ಯಾಪಾರ, ಹೂಡಿಕೆ, ಶಿಕ್ಷಣ, ರಕ್ಷಣೆ ಸಂಬಂಧಗಳಲ್ಲಿ ಸಹಕಾರದ ಕುರಿತು ಭವಿಷ್ಯದ ಕಾರ್ಯಸೂಚಿಯನ್ನು ರೂಪಿಸುವ ಕುರಿತು ಯೋಜನೆಗಳನ್ನು ಹಂಚಿಕೊಳ್ಳಲಿದ್ದಾರೆ. ಇದರೊಂದಿಗೆ ವಿಕಸಿತ ಭಾರತ್ 2047 ಮತ್ತು ಉಜ್ಬೇಕಿಸ್ತಾನ್ 2030ರ ಹಂಚಿಕೆಯ ಅಭಿವೃದ್ಧಿ ದೃಷ್ಟಿಕೋನಗಳ ಕುರಿತು ಅವರು ಚರ್ಚೆ ನಡೆಸಲಿದ್ದಾರೆ.
#WATCH | Prime Minister @narendramodi departs for Tashkent, Uzbekistan, for a bilateral visit.
— DD News (@DDNewslive) August 29, 2026
During the visit, PM Modi will hold delegation-level talks with President Shavkat Mirziyoyev, focusing on strengthening bilateral ties and advancing cooperation in trade, investment,… pic.twitter.com/jtDqzHwuI2
ಈ ಬಳಿಕ ಪ್ರಧಾನಿ ನರೇಂದ್ರ ಮೋದಿ ಅವರು ತಾಷ್ಕೆಂಟ್‌ನಲ್ಲಿರುವ ಶಾಸ್ತ್ರಿ ಸ್ಮಾರಕ ಮತ್ತು ತಾಷ್ಕೆಂಟ್ ಸ್ಟೇಟ್ ಯುನಿವರ್ಸಿಟಿ ಆಫ್ ಓರಿಯಂಟಲ್ ಸ್ಟಡೀಸ್‌ನ ಮಹಾತ್ಮ ಗಾಂಧಿ ಕೇಂದ್ರಕ್ಕೂ ಭೇಟಿ ನೀಡಲಿದ್ದಾರೆ ಎನ್ನಲಾಗಿದೆ.
ಸಾಮಾಜಿಕ ಮಾಧ್ಯಮದ ಎಕ್ಸ್ ಖಾತೆಯಲ್ಲಿ ಉಜ್ಬೇಕಿಸ್ತಾನ್ ಮತ್ತು ಕಿರ್ಗಿಸ್ತಾನ್ ಪ್ರವಾಸ ಬಗ್ಗೆ ಮಾಹಿತಿ ಹಂಚಿಕೊಂಡಿರುವ ಪ್ರಧಾನಿ ನರೇಂದ್ರ ಮೋದಿ, ಭಾರತ ಮತ್ತು ಉಜ್ಬೇಕಿಸ್ತಾನ್ ಸ್ನೇಹವನ್ನು ಸುಧಾರಿಸಲು ತಾಷ್ಕೆಂಟ್‌ನಲ್ಲಿ ಅಧ್ಯಕ್ಷ ಶವ್ಕತ್ ಮಿರ್ಜಿಯೋಯೆವ್ ಅವರೊಂದಿಗೆ ದ್ವಿಪಕ್ಷೀಯ ಮಾತುಕತೆ ನಡೆಸಲಿದ್ದೇನೆ. ತಾಷ್ಕೆಂಟ್ ಸ್ಟೇಟ್ ಯುನಿವರ್ಸಿಟಿ ಆಫ್ ಓರಿಯಂಟಲ್ ಸ್ಟಡೀಸ್‌ನಲ್ಲಿ ಶಾಸ್ತ್ರಿ ಸ್ಮಾರಕ ಮತ್ತು ಮಹಾತ್ಮ ಗಾಂಧಿ ಕೇಂದ್ರಕ್ಕೆ ಭೇಟಿ ನೀಡಲು ಕಾತರನಾಗಿದ್ದೇನೆ. ಇದರೊಂದಿಗೆ ಬಿಷ್ಕೆಕ್‌ನಲ್ಲಿ ನಡೆಯುವ ಎಸ್‌ಸಿಒ ಶೃಂಗಸಭೆಯಲ್ಲಿ ಬಹುಪಕ್ಷೀಯ ಮತ್ತು ದ್ವಿಪಕ್ಷೀಯ ಸಭೆಗಳಲ್ಲಿ ಭಾಗವಹಿಸುತ್ತಿರುವುದಾಗಿ ತಿಳಿಸಿದ್ದಾರೆ.
ಕಿರ್ಗಿಸ್ತಾನ್ ಪ್ರವಾಸ ಯೋಜನೆಗಳೇನು?
ಉಜ್ಬೇಕಿಸ್ತಾನ್‌ನಿಂದ 26 ನೇ ಎಸ್‌ಸಿಒ ಶೃಂಗಸಭೆಯಲ್ಲಿ ಭಾಗವಹಿಸಲು ಕಿರ್ಗಿಸ್ತಾನ್ ಅಧ್ಯಕ್ಷ ಸದಿರ್ ಝಪರೋವ್ ಅವರ ಆಹ್ವಾನದ ಮೇರೆಗೆ ಬಿಷ್ಕೆಕ್‌ಗೆ ಪ್ರಯಾಣಿಸಲಿರುವ ಪ್ರಧಾನಿ ಮೋದಿ ಅಲ್ಲಿ ಎಸ್‌ಸಿಒ ನಾಯಕರೊಂದಿಗೆ ಹಲವಾರು ದ್ವಿಪಕ್ಷೀಯ ಸಭೆಗಳನ್ನು ನಡೆಸಲಿದ್ದಾರೆ.
ಇನ್ಮುಂದೆ ಜಂಕ್ ಫುಡ್ ಪ್ಯಾಕೆಟ್ ಮೇಲೆ ಲೇಬಲಿಂಗ್ ಕಡ್ಡಾಯ; ಆಹಾರ ನಿಯಂತ್ರಣ ಪ್ರಾಧಿಕಾರದಿಂದ ಹೊಸ ಮಾರ್ಗಸೂಚಿ
ಇದರೊಂದಿಗೆ 6ನೇ ವಿಶ್ವ ಅಲೆಮಾರಿ ಕ್ರೀಡಾಕೂಟದ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಲಿದ್ದಾರೆ. ಇದೇ ಸಂದರ್ಭದಲ್ಲಿ ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರೊಂದಿಗೆ ದ್ವಿಪಕ್ಷೀಯ ಮಾತುಕತೆ ನಡೆಸಲಿದ್ದಾರೆ ಎನ್ನಲಾಗಿದೆ.