WHO Alert: ಕಲುಷಿತ ಭಾರತೀಯ ಕೆಮ್ಮಿನ ಸಿರಪ್ ಬಗ್ಗೆ ಎಚ್ಚರ: ವಿಶ್ವ ಆರೋಗ್ಯ ಸಂಸ್ಥೆ
ಇತ್ತೀಚಿಗೆ ಭಾರತದಲ್ಲಿ ಕಲುಷಿತ ಕೆಮ್ಮಿನ ಸಿರಪ್ ಸೇವಿಸಿ 21 ಮಕ್ಕಳು ಸಾವನ್ನಪ್ಪಿದ ಬಳಿಕ ಇದೀಗ ವಿಶ್ವದಾದ್ಯಂತ ಎಲ್ಲ ರಾಷ್ಟ್ರಗಳಿಗೆ ವಿಶ್ವ ಆರೋಗ್ಯ ಸಮಷ್ಟೇ ಎಚ್ಚರಿಕೆ ನೀಡಿದೆ. ಎಲ್ಲ ದೇಶಗಳಲ್ಲಿ ವಿಶೇಷವಾಗಿ ಅನೌಪಚಾರಿಕ ಮತ್ತು ಅನಿಯಂತ್ರಿತ ಪೂರೈಕೆ ಸರಪಳಿಗಳ ಬಗ್ಗೆ ಜಾಗರೂಕರಾಗಿರಲು ವಿಶ್ವ ಅರೋಗ್ಯ ಸಂಸ್ಥೆ ಕರೆ ನೀಡಿದೆ.

-

ನವದೆಹಲಿ: ಭಾರತದ ಕಲುಷಿತ ಕೆಮ್ಮಿನ ಸಿರಪ್ (Indian Cough Syrups)ಗಳ ಬಗ್ಗೆ ವಿಶ್ವ ಆರೋಗ್ಯ ಸಂಸ್ಥೆ (World Health Organization) ಎಚ್ಚರಿಕೆ ನೀಡಿದೆ. ಭಾರತದಲ್ಲಿ ತಯಾರಿಸಿದ ಮೂರು ನಿರ್ದಿಷ್ಟ ಕೆಮ್ಮಿನ ಸಿರಪ್‌ಗಳನ್ನು ಗುಣಮಟ್ಟದವಲ್ಲದ ಮತ್ತು ಅಪಾಯಕಾರಿ ಎಂದು ಗುರುತಿಸಿರುವ ವಿಶ್ವ ಆರೋಗ್ಯ ಸಂಸ್ಥೆ, ಈ ಕುರಿತು ಜಾಗತಿಕವಾಗಿ ಅಧಿಕಾರಿಗಳು ಹೆಚ್ಚಿನ ಎಚ್ಚರಿಕೆ ವಹಿಸಬೇಕು ಎಂದು ಹೇಳಿದೆ. ಸ್ರೆಸನ್ ಫಾರ್ಮಾಸ್ಯುಟಿಕಲ್‌ನ ಕೋಲ್ಡ್ರಿಫ್ (Coldrif), ರೆಡ್ನೆಕ್ಸ್ ಫಾರ್ಮಾಸ್ಯುಟಿಕಲ್ಸ್‌ನ ರೆಸ್ಪಿಫ್ರೆಶ್ ಟಿಆರ್ (Respifresh TR) ಮತ್ತು ಶೇಪ್ ಫಾರ್ಮಾದ ರೆಲೈಫ್ (ReLife) ಬಗ್ಗೆ ಎಚ್ಚರಿಕೆ ನೀಡಲಾಗಿದೆ.
ಮಧ್ಯ ಪ್ರದೇಶದಲ್ಲಿ ಈ ಔಷಧಗಳ ಸೇವನೆಯಿಂದ ಮಕ್ಕಳಲ್ಲಿ ತೀವ್ರ ಅನಾರೋಗ್ಯ ಮತ್ತು ಸಾವುಗಳು ಉಂಟಾಗಿತ್ತು. ಈ ಸಿರಪ್‌ಗಳ ಬಗ್ಗೆ ರಾಜ್ಯ ಮತ್ತು ಕೇಂದ್ರ ನಿಯಂತ್ರಕರು ಪ್ರಯೋಗಾಲಯಗಳಲ್ಲಿ ಪರೀಕ್ಷೆ ನಡೆಸಿದ್ದು, ಹೆಚ್ಚು ವಿಷಕಾರಿ ಕೈಗಾರಿಕಾ ದ್ರಾವಕವಾದ ಡೈಥಿಲೀನ್ ಗ್ಲೈಕಾಲ್ (DEG) ಇರುವಿಕೆ ದೃಢಪಟ್ಟಿದೆ. ಕೋಲ್ಡ್ರಿಫ್‌ನಲ್ಲಿ ಇದು ಅನುಮತಿಸಲಾದ ಮಿತಿಗಿಂತ ಸುಮಾರು 500 ಪಟ್ಟು ಹೆಚ್ಚಾಗಿದೆ ಎನ್ನಲಾಗಿದೆ.
ಡೈಥಿಲೀನ್ ಗ್ಲೈಕಾಲ್ ಮಾನವರಿಗೆ ವಿಷಕಾರಿ. ಇದುಹೊಟ್ಟೆ ನೋವು, ವಾಂತಿ, ಅತಿಸಾರ, ತಲೆನೋವು, ಮಾನಸಿಕ ಆರೋಗ್ಯ, ತೀವ್ರ ಮೂತ್ರಪಿಂಡದ ತೊಂದರೆ ಸೇರಿದಂತೆ ಜೀವಕ್ಕೆ ಅಪಾಯ ತರುವ ಗಂಭೀರ ಪರಿಣಾಮಗಳನ್ನು ಉಂಟು ಮಾಡುತ್ತದೆ. ಇದು ವಿಶೇಷವಾಗಿ ಚಿಕ್ಕ ಮಕ್ಕಳಲ್ಲಿ ಸಾವಿಗೆ ಕಾರಣವಾಗಬಹುದು. ಅದ್ದರಿಂದ ಯಾವುದೇ ಕಾರಣಕ್ಕೆ ಈ ಕಲುಷಿತ ಔಷಧವನ್ನು ಸೇವಿಸಬಾರದು ಎಂದು ವಿಶ್ವ ಆರೋಗ್ಯ ಸಂಸ್ಥೆ ತಿಳಿಸಿದೆ.
ಭಾರತದ ಕೇಂದ್ರ ಔಷಧ ಗುಣಮಟ್ಟ ನಿಯಂತ್ರಣ ಸಂಸ್ಥೆ (CDSCO) ಈ ಕುರಿತು ಜಾಗತಿಕ ಆರೋಗ್ಯ ಸಂಸ್ಥೆಗೆ ಮಾಹಿತಿ ನೀಡಿದ್ದು ಈ ಔಷಧಗಳ ಉತ್ಪಾದನೆಯನ್ನು ತಕ್ಷಣ ಸ್ಥಗಿತಗೊಳಿಸಲು ಆದೇಶಿಸಲಾಗಿದೆ. ಮಾರುಕಟ್ಟೆಯಿಂದ ಉತ್ಪನ್ನವನ್ನು ಹಿಂಪಡೆಯಲು ಪ್ರಾರಂಭಿಸಲಾಗಿದೆ ಎಂದು ತಿಳಿಸಿದೆ.
ಇದನ್ನೂ ಓದಿ: Agni-6 ICBM Test: ಶತ್ರುಗಳ ಎದೆಯಲ್ಲಿ ನಡುಕ ಹುಟ್ಟಿಸಲು ಭಾರತ ಸಜ್ಜು; ಅಗ್ನಿ-6 ಐಸಿಬಿಎಂ ಪರೀಕ್ಷೆ ಶೀಘ್ರ
ಕಲುಷಿತ ಔಷಧಗಳನ್ನು ಭಾರತದಿಂದ ರಫ್ತು ಮಾಡಿರುವುದಕ್ಕೆ ಯಾವುದೇ ಪುರಾವೆಗಳಿಲ್ಲ ಎಂದು ಸ್ಪಷ್ಟಪಡಿಸಿರುವ ಭಾರತದ ಕೇಂದ್ರ ಔಷಧ ಗುಣಮಟ್ಟ ನಿಯಂತ್ರಣ ಸಂಸ್ಥೆ, ಅನೌಪಚಾರಿಕ ಮತ್ತು ಅನಿಯಂತ್ರಿತ ಪೂರೈಕೆ ಸರಪಳಿಗಳ ಮೂಲಕ ಹೊರ ಹೋಗಿರಬಹುದು. ಹಾಗಾಗಿ ಆರೋಗ್ಯ ವೃತ್ತಿಪರರು, ನಿಯಂತ್ರಕ ಅಧಿಕಾರಿಗಳು ಮತ್ತು ಪ್ರಪಂಚದಾದ್ಯಂತದ ಸಾರ್ವಜನಿಕರಿಗೆ ಈ ಕಳಪೆ ಗುಣಮಟ್ಟದ ಉತ್ಪನ್ನಗಳ ಮಾಹಿತಿ ನೀಡಲು ಸೂಚಿಸಿದೆ.