ಇರಾನ್ ಸಂಘರ್ಷದ ಬಗ್ಗೆ ಚೀನಾ ಮೌನವಾಗಿದ್ದೇಕೆ? ಬೀಜಿಂಗ್‌ನ ನಿಗೂಢ ತಂತ್ರ ಬಿಚ್ಚಿಟ್ಟ ತಜ್ಞರು
ಚೀನಾ ಇತ್ತೀಚಿನ ಇರಾನ್ ಸಂಬಂಧಿತ ಯುದ್ಧ ಪರಿಸ್ಥಿತಿಯ ಬಗ್ಗೆ ಬಹಿರಂಗವಾಗಿ ಪ್ರತಿಕ್ರಿಯೆ ನೀಡದೆ ಮೌನ ವಹಿಸಿರುವುದು ಜಾಗತಿಕ ರಾಜಕೀಯ ವಲಯದಲ್ಲಿ ಚರ್ಚೆಗೆ ಕಾರಣವಾಗಿದೆ. ತಜ್ಞರ ಅಭಿಪ್ರಾಯದಂತೆ, ಚೀನಾ ನೇರವಾಗಿ ಯಾವುದೇ ಪಾಳಯಕ್ಕೆ ಬೆಂಬಲ ಘೋಷಿಸದೆ ತನ್ನ ಆರ್ಥಿಕ ಹಾಗೂ ರಣತಂತ್ರದ ಹಿತಾಸಕ್ತಿಗಳನ್ನು ಕಾಪಾಡಿಕೊಳ್ಳಲು ಪ್ರಯತ್ನಿಸುತ್ತಿದೆ. ಚೀನಾಕ್ಕೆ ಇರಾನ್ ಪ್ರಮುಖ ತೈಲ ಪೂರೈಕೆದಾರ ರಾಷ್ಟ್ರವಾಗಿದ್ದು, ಮಧ್ಯಪ್ರಾಚ್ಯದಲ್ಲಿ ಸ್ಥಿರತೆ ಅದರ ವ್ಯಾಪಾರ ಮತ್ತು ಇಂಧನ ಭದ್ರತೆಗೆ ಅತ್ಯಂತ ಮುಖ್ಯವಾಗಿದೆ. ಇದೇ ವೇಳೆ, ಅಮೆರಿಕ ಹಾಗೂ ಪಶ್ಚಿಮ ರಾಷ್ಟ್ರಗಳೊಂದಿಗೆ ನೇರ ಘರ್ಷಣೆಗೆ ಹೋಗದಂತೆ ಸಮತೋಲನ ಕಾಯ್ದುಕೊಳ್ಳುವುದು ಬೀಜಿಂಗ್‌ನ ಪ್ರಮುಖ ಉದ್ದೇಶ.
ಸಾಂದರ್ಭಿಕ ಚಿತ್ರ. -
ಬೀಜಿಂಗ್, ಮಾ. 2: ಪಶ್ಚಿಮ ಏಷ್ಯಾದಲ್ಲಿ ಅಮೆರಿಕ (America) ಮತ್ತು ಇಸ್ರೇಲ್ (Israel) ನಡೆಸಿದ ದಾಳಿಗಳು ಇರಾನ್ (Iran) ಅನ್ನು ನೇರ ಸಂಘರ್ಷಕ್ಕೆ ತಳ್ಳಿವೆ. ಇದು ಚೀನಾದ (Chaina) ಆರ್ಥಿಕತೆಯ ನಾಡಿಮಿಡಿತದಂತಿರುವ ತೈಲ ಸರಬರಾಜಿಗೆ ಭೀತಿ ಉಂಟು ಮಾಡಿದೆ. ಈ ಪರಿಸ್ಥಿತಿಯಲ್ಲಿ ಚೀನಾ ದಾಳಿ ಖಂಡಿಸಿ ಕದನ ವಿರಾಮಕ್ಕೆ ಕರೆ ನೀಡಿದೆಯಾದರೂ, ಯಾವುದೇ ಆರ್ಥಿಕ ಪ್ರತೀಕಾರಕ್ಕೆ ಮುಂದಾಗದೆ ಮೌನಕ್ಕೆ ಶರಣಾಗಿದೆ. ಚೀನಾದ ಈ ನಿಲುವಿನ ಹಿಂದಿರುವ ಆರ್ಥಿಕ ಮತ್ತು ರಾಜತಾಂತ್ರಿಕ ಕಾರಣಗಳನ್ನು ತಜ್ಞರು ವಿಶ್ಲೇಷಿಸಿದ್ದಾರೆ.
ಫೆಬ್ರವರಿ 28ರಂದು ಅಮೆರಿಕ ಮತ್ತು ಇಸ್ರೇಲ್ ಜಂಟಿಯಾಗಿ ಇರಾನ್‌ನ ಪರಮಾಣು ಕೇಂದ್ರಗಳು ಮತ್ತು ಕ್ಷಿಪಣಿ ನೆಲೆಗಳ ಮೇಲೆ 'ಆಪರೇಷನ್ ಎಪಿಕ್ ಫ್ಯೂರಿ' ಹೆಸರಿನಲ್ಲಿ ಬೃಹತ್ ದಾಳಿ ನಡೆಸಿದೆ. ಇದಕ್ಕೆ ಪ್ರತಿಯಾಗಿ ಇರಾನ್, ಯುಎಇ, ಕತಾರ್ ಮತ್ತು ದುಬೈಯಲ್ಲಿರುವ ಅಮೆರಿಕದ ಮಿಲಿಟರಿ ನೆಲೆಗಳ ಮೇಲೆ ಕ್ಷಿಪಣಿ ದಾಳಿ ನಡೆಸುವ ಮೂಲಕ ಯುದ್ಧವನ್ನು ಮತ್ತಷ್ಟು ವಿಸ್ತರಿಸಿತು.
ಚೀನಾಕ್ಕೆ ಈ ಬಿಕ್ಕಟ್ಟು ಕೇವಲ ರಾಜಕೀಯವಲ್ಲ, ಅದು ನೇರವಾಗಿ ಅದರ ಆರ್ಥಿಕತೆಯ ಮೇಲೆ ಪರಿಣಾಮ ಬೀರುತ್ತದೆ. ಇರಾನ್‌ನ ಒಟ್ಟು ತೈಲ ರಫ್ತಿನ ಶೇ. 80ಕ್ಕಿಂತ ಹೆಚ್ಚು ಭಾಗವನ್ನು ಚೀನಾ ಒಂದೇ ಖರೀದಿಸುತ್ತದೆ. 2025ರಲ್ಲಿ ಚೀನಾ ದಿನಕ್ಕೆ ಸುಮಾರು 1.38 ಮಿಲಿಯನ್ ಬ್ಯಾರೆಲ್ ತೈಲವನ್ನು ಇರಾನ್‌ನಿಂದ ಪಡೆದಿದೆ. ಇದು ಚೀನಾದ ಒಟ್ಟು ತೈಲ ಆಮದಿನ ಶೇ. 13ರಿಂದ 14ರಷ್ಟಾಗಿದೆ. ಸದ್ಯದ ಉದ್ವಿಗ್ನತೆಯಿಂದಾಗಿ ಚೀನಾ ತನ್ನ ತೈಲ ಅವಲಂಬನೆಯನ್ನು ರಷ್ಯಾದತ್ತ ತಿರುಗಿಸುತ್ತಿದ್ದರೂ, ಇರಾನ್ ಅದರ ಪ್ರಮುಖ ಪಾಲುದಾರನಾಗಿಯೇ ಉಳಿದಿದೆ.
ಗಲ್ಫ್ ರಾಷ್ಟ್ರಗಳಲ್ಲಿರುವ 90 ಲಕ್ಷ ಭಾರತೀಯರ ಸುರಕ್ಷತೆಯ ಬಗ್ಗೆ ಕೇಂದ್ರ ಸಚಿವ ಸಂಪುಟ ಸಮಿತಿ ಚರ್ಚೆ
'ಅವೆಲ್ಲನ್ ಇಂಟೆಲಿಜೆನ್ಸ್' ಸಹ-ಸಂಸ್ಥಾಪಕ ಬಾಲಕೃಷ್ಣನ್ ಅವರ ಪ್ರಕಾರ, ಇರಾನ್‌ನ ಈ ಪ್ರತೀಕಾರವು ಒಂದು "ಐತಿಹಾಸಿಕ ವ್ಯೂಹಾತ್ಮಕ ತಪ್ಪು". ಇರಾನ್ ಅರಬ್ ರಾಷ್ಟ್ರಗಳಲ್ಲಿರುವ ಅಮೆರಿಕದ ಆಸ್ತಿಗಳನ್ನು ಗುರಿಯಾಗಿಸುವ ಮೂಲಕ ತನ್ನ ಮಿತ್ರರಾಷ್ಟ್ರಗಳನ್ನು ಕಳೆದುಕೊಳ್ಳುತ್ತಿದೆ ಮತ್ತು ಇಸ್ರೇಲ್-ಅಮೆರಿಕದ ಬಲವರ್ಧನೆಗೆ ದಾರಿ ಮಾಡಿಕೊಡುತ್ತಿದೆ. ಇದು ಚೀನಾದ 'ಬೆಲ್ಟ್ ಆ್ಯಂಡ್ ರೋಡ್' ಮೂಲ ಸೌಕರ್ಯ ಯೋಜನೆಗಳಿಗೂ ಅಡ್ಡಿಯಾಗಬಹುದು.
ಚೀನಾಕ್ಕೆ ಇರುವ ಅತಿ ದೊಡ್ಡ ಆತಂಕವೆಂದರೆ 'ಹಾರ್ಮುಜ್ ಜಲಸಂಧಿ'. ಚೀನಾದ ಶೇ. 44ರಷ್ಟು ತೈಲ ಆಮದು ಈ ಮಾರ್ಗದ ಮೂಲಕವೇ ಬರುತ್ತದೆ. ಒಂದು ವೇಳೆ ಈ ಮಾರ್ಗದಲ್ಲಿ ಅಡೆತಡೆ ಉಂಟಾದರೆ, ತೈಲ ಬೆಲೆ ಪ್ರತಿ ಬ್ಯಾರೆಲ್‌ಗೆ 100ರಿಂದ 130 ಡಾಲರ್‌ಗೆ ಏರಬಹುದು. ಇದು ಚೀನಾದ ಕೈಗಾರಿಕಾ ಕ್ಷೇತ್ರಕ್ಕೆ ಭಾರಿ ಪೆಟ್ಟು ನೀಡಲಿದೆ.
ಒಟ್ಟಾರೆಯಾಗಿ, ಇರಾನ್ ಚೀನಾದ ಮೇಲೆ ಹೆಚ್ಚು ಅವಲಂಬಿತವಾಗಿದೆ. ಹೀಗಾಗಿ ಚೀನಾ ತನ್ನ ಹಿತಾಸಕ್ತಿಗಳನ್ನು ಕಾಪಾಡಿಕೊಳ್ಳಲು ತೆರೆಮರೆಯಲ್ಲಿ ಸಂಘರ್ಷ ತಣಿಸಲು ಪ್ರಯತ್ನಿಸುತ್ತಿದೆ. ಯುದ್ಧವು ಪ್ರಾದೇಶಿಕವಾಗಿ ಹರಡದಂತೆ ತಡೆಯುವುದು ಮತ್ತು ತನ್ನ ತೈಲ ಪೂರೈಕೆ ಮಾರ್ಗಗಳನ್ನು ಸುರಕ್ಷಿತವಾಗಿರಿಸಿಕೊಳ್ಳುವುದು ಬೀಜಿಂಗ್‌ನ ಸದ್ಯದ ಆದ್ಯತೆ.