ಹೋಗಲು ಅನುಮತಿ ನೀಡಿ, ಗುಂಡು ಹಾರಿಸಿದ್ದೀರಿ: ಇರಾನ್‌ಗೆ ಭಾರತೀಯ ಟ್ಯಾಂಕರ್‌ನಿಂದ ಆಕ್ರೋಶದ ಸಂದೇಶ
ಹೋಗಲು ಅನುಮತಿ ಕೊಟ್ಟು ಬಳಿಕ ಗುಂಡು ಹಾರಿಸುತ್ತಿದ್ದೀರಿ ಎಂದು ಇರಾನ್ ವಿರುದ್ಧ ಭಾರತೀಯ ಹಡಗು ಸಿಬ್ಬಂದಿ ಆಕ್ರೋಶ ವ್ಯಕ್ತಪಡಿಸಿರುವ ಘಟನೆ ನಡೆದಿದೆ. ಹೊರ್ಮುಜ್ ಜಲಸಂಧಿಯಲ್ಲಿ ಎರಡು ಭಾರತೀಯ ಧ್ವಜ ಹೊತ್ತ ಹಡಗುಗಳ ಮೇಲೆ ಇರಾನ್ ನ ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್ ಪಡೆಗಳು ಗುಂಡಿನ ದಾಳಿ ನಡೆಸಿದ ಬಳಿಕ ಈ ಘಟನೆ ನಡೆದಿದೆ ಎನ್ನಲಾಗಿದೆ.
ಸಂಗ್ರಹ ಚಿತ್ರ -
ಟೆಹರಾನ್: ಹೊರ್ಮುಜ್ ಜಲಸಂಧಿಯ (Strait of Hormuz) ಬಳಿ ಭಾರತೀಯ ಧ್ವಜ ಹೊತ್ತಿರುವ ಎರಡು ಹಡಗುಗಳ (Indian flagged tanker) ಮೇಲೆ ಶನಿವಾರ ಇರಾನ್ (Iran war) ನ ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್ ಪಡೆಗಳು (Iran’s Islamic Revolutionary Guard Corps) ಗುಂಡಿನ ದಾಳಿ ನಡೆಸಿದೆ. ಈ ಸಂದರ್ಭದಲ್ಲಿ ಭಾರತೀಯ ಹಡಗು ಸಿಬ್ಬಂದಿ ಇರಾನ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ನೀವು ಹೋಗಲು ಅನುಮತಿ ನೀಡಿದ್ದೀರಿ, ಈಗ ಗುಂಡು ಹಾರಿಸುತ್ತಿದ್ದೀರಿ ಎಂದು ಭಾರತೀಯ ಟ್ಯಾಂಕರ್‌ನ ಸಿಬ್ಬಂದಿ ಇರಾನ್ ಗೆ ಆಕ್ರೋಶದ ಸಂದೇಶ ಕಳುಹಿಸಿದ್ದಾರೆ ಎನ್ನಲಾಗಿದೆ.
ಭಾರತೀಯ ಧ್ವಜ ಹೊತ್ತ ಟ್ಯಾಂಕರ್‌ನಿಂದ ಇರಾನ್ ಗೆ ರೇಡಿಯೋ ಸಂದೇಶ ಕಳುಹಿಸಲಾಗಿದೆ. ಹೋಗಲು ಅನುಮತಿ ನೀಡಿದ ಬಳಿಕ ಹೊರ್ಮುಜ್ ಜಲಸಂಧಿಯಲ್ಲಿ ಇರಾನ್ ಪಡೆಗಳು ಗುಂಡಿನ ದಾಳಿ ನಡೆಸಿರುವ ಬಗ್ಗೆ ಆಕ್ರೋಶ ವ್ಯಕ್ತಪಡಿಸಲಾಗಿದ್ದು, ಹಡಗುಗಳು ಹಿಂದಕ್ಕೆ ಹೋಗಲು ಬಿಡುವಂತೆ ಒತ್ತಾಯಿಸಿರುವುದು ಆಡಿಯೋದಲ್ಲಿ ಸೆರೆಯಾಗಿದೆ.
ಆಡಿಯೋದಲ್ಲಿ ಏನಿದೆ?
ಮೋಟಾರ್ ಟ್ಯಾಂಕರ್ ಸನ್ಮಾರ್ ಹೆರಾಲ್ಡ್‌ನ ಕ್ಯಾಪ್ಟನ್ ತುರ್ತಾಗಿ ಕರೆ ಮಾಡಿ, ಸೆಪಾ ನೌಕಾಪಡೆ, ಸೆಪಾ ನೌಕಾಪಡೆ ಇದು ಮೋಟಾರ್ ಟ್ಯಾಂಕರ್ ಸನ್ಮಾರ್ ಹೆರಾಲ್ಡ್. ನೀವು ನನಗೆ ಹೋಗಲು ಅನುಮತಿ ನೀಡಿದ್ದೀರಿ. ನನ್ನ ಹೆಸರು ನಿಮ್ಮ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದೆ. ನೀವು ನನಗೆ ಹೋಗಲು ಅನುಮತಿ ನೀಡಿದ್ದೀರಿ. ಈಗ ಗುಂಡು ಹಾರಿಸುತ್ತಿದ್ದೀರಿ. ನಾನು ಹಿಂತಿರುಗಲು ಬಿಡಿ ಎಂದು ಹೇಳಿರುವುದು ಆಡಿಯೊದಲ್ಲಿ ಸೆರೆಯಾಗಿದೆ.
ಹೊರ್ಮುಜ್ ಜಲಸಂಧಿಯನ್ನು ದಾಟಲು ಪ್ರಯತ್ನಿಸುತ್ತಿದ್ದ ಭಾರತೀಯ ಧ್ವಜ ಹೊತ್ತ ತೈಲ ಟ್ಯಾಂಕರ್‌ನಿಂದ ಈ ರೇಡಿಯೋ ಸಂದೇಶವನ್ನು ಇರಾನ್ ಗೆ ಕಳುಹಿಸಲಾಗಿದೆ. ದಾಳಿಗೆ ಒಳಗಾದ ಹಡಗುಗಳ ಉದ್ರಿಕ್ತ ಸಿಬ್ಬಂದಿ ಇರಾನ್ ನೌಕಾಪಡೆಗೆ ಮನವಿ ಮಾಡುತ್ತಿರುವುದನ್ನು ಇದರಲ್ಲಿ ಕೇಳಬಹುದು.
ಎರಡು ಹಡಗುಗಳ ಮೇಲೆ ದಾಳಿ
ಹೊರ್ಮುಜ್ ಜಲಸಂಧಿಯ ಮೂಲಕ ಶನಿವಾರ ಹಾದುಹೋಗಲು ಪ್ರಯತ್ನಿಸುತ್ತಿದ್ದ ಭಾರತೀಯ ಧ್ವಜ ಹೊತ್ತ ಸೂಪರ್ ಟ್ಯಾಂಕರ್ ಸೇರಿದಂತೆ ಎರಡು ವ್ಯಾಪಾರಿ ಹಡಗುಗಳ ಮೇಲೆ ಗುಂಡಿನ ದಾಳಿ ನಡೆದಿತ್ತು. ಭಾನುವಾರ ಈ ಕುರಿತ ಆಡಿಯೋ ಹೊರಹೊಮ್ಮಿದೆ. ಇರಾನ್‌ನ ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್ ಸಿಬ್ಬಂದಿ ಹಡಗು ಮೇಲೆ ಗುಂಡಿನ ದಾಳಿ ನಡೆಸಲು ಪ್ರಾರಂಭಿಸಿದ ಬಳಿಕ ಹಡಗುಗಳು ದಿಕ್ಕನ್ನು ಬದಲಾಯಿಸಿದವು.
ಭಾರತೀಯ ಸೂಪರ್ ಟ್ಯಾಂಕರ್ ಇರಾಕ್ ನಿಂದ ಸುಮಾರು 2 ಮಿಲಿಯನ್ ಬ್ಯಾರೆಲ್ ತೈಲವನ್ನು ಸಾಗಿಸುತ್ತಿತ್ತು. ಈ ಹಡಗುಗಳನ್ನು ಪಶ್ಚಿಮಕ್ಕೆ ಮರುನಿರ್ದೇಶಿಸಲಾಗುತ್ತಿದ್ದಾಗ ಇರಾನ್ ಪಡೆಯ ಗನ್‌ಬೋಟ್‌ಗಳು ಇವುಗಳ ಮೇಲೆ ಗುಂಡು ಹಾರಿಸಿವೆ ಎಂದು ಯುನೈಟೆಡ್ ಕಿಂಗ್‌ಡಮ್ ಮ್ಯಾರಿಟೈಮ್ ಟ್ರೇಡ್ ಆಪರೇಷನ್ಸ್ ತಿಳಿಸಿದೆ.