ತೂಕ ಇಳಿಸಿದ್ದಾಗಿದೆ, ಮುಂದೆ?
losing weight: ಹಲವಾರು ತಿಂಗಳು ಡಯೆಟ್, ವ್ಯಾಯಾಮ ಎಂದೆಲ್ಲಾ ಕಟ್ಟುನಿಟ್ಟಾಗಿದ್ದು, ಈಗ ತೂಕ ಇಳಿಯಿತು ಎಂದ ಮೇಲೆ ಎಲ್ಲವನ್ನೂ ಸಡಿಲ ಬಿಡುವಂತಾಗುತ್ತದೆ. ಅಲ್ಲಿಗೆ ಇಳಿದ ತೂಕ ನಿಧಾನಕ್ಕೆ ಮರಳುತ್ತದೆ. ಮಾಡಿದ್ದೆಲ್ಲಾ ಮಣ್ಣಾಗುವ ಸ್ಥಿತಿ ಬರುತ್ತದೆ. ಹಾಗಾದರೆ ಜೀವನವಿಡೀ ಡಯೆಟ್ ಮಾಡುತ್ತಲೇ ಇರಬೇಕೇ? ನಮ್ಮ ಬದುಕನ್ನು ನಾವು ಸಾಮಾನ್ಯರಂತೆ ಜೀವಿಸುವುದು ಯಾವಾಗ ಎನಿಸಿದರೆ ಅಚ್ಚರಿಯಿಲ್ಲ. ಅಂಥವರಿಗೆ ಇಲ್ಲಿವೆ ಕೆಲವು ಸರಳ ಸೂತ್ರಗಳು.
ಸಾಂದರ್ಭಿಕ ಚಿತ್ರ -
ತೂಕ ಇಳಿಸುವ ಸಲುವಾಗಿ ಹಲವಾರು ತಿಂಗಳುಗಳಿಂದ ಕಟ್ಟುನಿಟ್ಟಾದ ಜೀವನಶೈಲಿಯಲ್ಲಿ (Strict Lifestyle) ಇದ್ದೀರಿ. ನೀರು-ನಿದ್ದೆ, ಆಹಾರ, ವ್ಯಾಯಾಮ ಎಲ್ಲವೂ ಸರಿಯಾಗಿದೆ. ಹಾಗಾಗಿ ತೂಕದ ಯಂತ್ರವೂ ನಿಮಗೆ ಬೇಕಾದ್ದನ್ನೇ ಹೇಳುತ್ತಿದೆ… ಅಭಿನಂದನೆಗಳು! ತೂಕ ಇಳಿಸಿದ್ದೀರಿ (losing weight). ಮುಂದೆ? ಇಳಿದ ತೂಕ ಮತ್ತೆ ಏರದಂತೆ ತಡೆಯುವ ಕೆಲಸ ಆಗಬೇಕಲ್ಲವೇ? ಅದು ಹೇಗೆ?
ಬಹಳಷ್ಟು ಜನರಿಗೆ ತೂಕ ಇಳಿಸಿದ್ದಕ್ಕಿಂತ ದೊಡ್ಡ ಸವಾಲು ಎದುರಾಗುವುದು ಈ ಹಂತದಲ್ಲಿ. ಹಲವಾರು ತಿಂಗಳು ಡಯೆಟ್, ವ್ಯಾಯಾಮ ಎಂದೆಲ್ಲಾ ಕಟ್ಟುನಿಟ್ಟಾಗಿದ್ದು, ಈಗ ತೂಕ ಇಳಿಯಿತು ಎಂದ ಮೇಲೆ ಎಲ್ಲವನ್ನೂ ಸಡಿಲ ಬಿಡುವಂತಾಗುತ್ತದೆ. ಅಲ್ಲಿಗೆ ಇಳಿದ ತೂಕ ನಿಧಾನಕ್ಕೆ ಮರಳುತ್ತದೆ. ಮಾಡಿದ್ದೆಲ್ಲಾ ಮಣ್ಣಾಗುವ ಸ್ಥಿತಿ ಬರುತ್ತದೆ. ಹಾಗಾದರೆ ಜೀವನವಿಡೀ ಡಯೆಟ್ ಮಾಡುತ್ತಲೇ ಇರಬೇಕೇ? ನಮ್ಮ ಬದುಕನ್ನು ನಾವು ಸಾಮಾನ್ಯರಂತೆ ಜೀವಿಸುವುದು ಯಾವಾಗ ಎನಿಸಿದರೆ ಅಚ್ಚರಿಯಿಲ್ಲ. ಅಂಥವರಿಗೆ ಇಲ್ಲಿವೆ ಕೆಲವು ಸರಳ ಸೂತ್ರಗಳು.
ಅಭ್ಯಾಸಗಳಿರಲಿ: ಈವರೆಗೆ ರೂಢಿಸಿಕೊಂಡ ಒಳ್ಳೆಯ ಅಭ್ಯಾಸಗಳನ್ನು ಬಿಡಬೇಡಿ. ಅಂದರೆ ಸಮತೋಲಿತ ಆಹಾರ, ಸಾಕಷ್ಟು ನಾರು ಮತ್ತು ಪ್ರೊಟೀನ್ ಸೇವನೆಯನ್ನು ಮುಂದುವರಿಸಿ. ಇದು ಕೇವಲ ತೂಕ ಇಳಿಕೆಗೆ ಮಾತ್ರವಲ್ಲ, ತೂಕ ನಿರ್ವಹಣೆಗೂ ಅನುಕೂಲ. ಒಳ್ಳೆಯ ಸತ್ವಗಳಿಂದ ಹೊಟ್ಟೆ ತುಂಬಿದ್ದರೆ, ಹಾಳು-ಮೂಳು ತಿನ್ನಬೇಕೆಂದು ದೇಹವೇ ಬೇಡುವುದಿಲ್ಲ. ಅಲ್ಲಿಗೆ ಡಯೆಟ್ ಮಾಡುತ್ತಲೇ ಇರಬೇಕೆ ಎನ್ನುವ ಪ್ರಶ್ನೆಯೇ ಬಾರದು.
4 ವಾರಗಳಲ್ಲಿ 5 ಕೆಜಿ ತೂಕ ಇಳಿಸಿಕೊಳ್ಳಲು ಸಸ್ಯಾಹಾರಿ ಡಯಟ್ ಪ್ಲಾನ್; ಇಲ್ಲಿದೆ 7 ದಿನಗಳ ಆಹಾರ ಕ್ರಮ
ವ್ಯಾಯಾಮವಿರಲಿ: ಇದರ ಸ್ವರೂಪವನ್ನಿಷ್ಟು ಬದಲಿಸಿ, ಆಸಕ್ತಿಕರವಾಗಿ ಮಾಡಿಕೊಳ್ಳಿ. ಅಂದರೆ ದಿನವೂ ಜಿಮ್ಗೆ ಹೋಗುವುದು ಬೋರೆನಿಸಿದರೆ ಬೇರೆ ಬೇರೆ ಸ್ವರೂಪದ ವ್ಯಾಯಾಮಗಳನ್ನು ಆಯ್ದುಕೊಳ್ಳಿ. ಕ್ರಿಕೆಟ್, ಫುಟ್ಬಾಲ್, ಈಜು ಮುಂತಾದ ನಿಮ್ಮಿಷ್ಟದ ಯಾವುದೋ ಆಟದತ್ತ ಗಮನನೀಡಿ. ಸಮಾನ ಮನಸ್ಕ ಗುಂಪಿನೊಂದಿಗೆ ಸೇರಿ, ಬೆಟ್ಟ ಹತ್ತುವುದು, ರನ್ನಿಂಗ್ ಮುಂತಾದವು ಸಾಧ್ಯವೇ ನೋಡಿ. ಆಗ ತೂಕ ತನ್ನಷ್ಟಕ್ಕೆ ತಾನೇ ನಿರ್ವಹಣೆಗೊಳ್ಳುತ್ತದೆ.
ಗಮನಿಸಿ: ಮಿತ್ರರೊಂದಿಗೆ ಸೇರಿದಾಗ ಯಾವತ್ತೋ ಒಂದಿನ ಜಂಕ್ ತಿನ್ನುವುದು, ಹಬ್ಬದ ದಿನ ಸಿಹಿ ತಿನ್ನುವುದು- ಇವೆಲ್ಲ ಸಮಸ್ಯೆ ತರುವುದಿಲ್ಲ. ಆದರೆ ನಿಧಾನವಾಗಿ ಸಿಹಿತಿಂಡಿಗಳು, ಗುಜರಿ ತಿನಿಸುಗಳತ್ತ ಮನಸ್ಸು ಎಳೆಯುತ್ತಿದೆಯೇ ಎಂಬುದನ್ನು ಪರಿಶೀಲಿಸಿಕೊಳ್ಳಿ. ದಿನಕ್ಕೊಂದು ನೆವ ಹೇಳುತ್ತಾ ವ್ಯಾಯಾಮ ತಪ್ಪಿಸುತ್ತಿದ್ದೀರಾದರೆ, ಎಚ್ಚರಗೊಳ್ಳಿ. ಒತ್ತಡ ಹೆಚ್ಚಾಗಿ ನಿದ್ದೆಗೆಡುತ್ತಿದ್ದೀರಾದರೆ ಅದೂ ತೂಕ ಏರಿಸಬಲ್ಲದು. ನಿಮ್ಮದೇ ಬದುಕಿನ ಇಂಥ ಸೂಕ್ಷ್ಮ ಆಯಾಮಗಳತ್ತ ನೀವು ಗಮನ ನೀಡದಿದ್ದರೆ, ಅದು ಉಳಿದವರಿಂದ ಸಾಧ್ಯವಿಲ್ಲ.
ಅರ್ಥಮಾಡಿಕೊಳ್ಳಿ: ಆಹಾರದೊಂದಿಗೆ ನಿಮ್ಮ ಸಂಬಂಧವೇನು ಎನ್ನುವುದನ್ನು ಮೊದಲು ತಿಳಿದುಕೊಳ್ಳಿ. ಅಂದರೆ, ಒತ್ತಡ ಹೆಚ್ಚಾದಾಗ ಹೆಚ್ಚು ತಿನ್ನಬೇಕೆನಿಸುತ್ತದೆ, ಬೋರಾದಾಗ ಬಾಯಾಡಬೇಕೆನಿಸುತ್ತದೆ, ಬೇಸರವಾದಾಗ ಚಾಕಲೇಟ್ ಬೇಕೆನಿಸುತ್ತದೆ- ಇಂಥ ಯಾವುದೇ ರೀತಿಯನ್ನು ನಿಮ್ಮಲ್ಲಿ ನೀವು ಗುರುತಿಸಿಕೊಳ್ಳಬಹುದು. ಆಗ ಒತ್ತಡ ಕಡಿಮೆ ಮಾಡಿದರೆ ಬೇಕಾಬಿಟ್ಟಿ ತಿನ್ನುವುದನ್ನು ನಿಯಂತ್ರಿಸಬಹುದು ಅಥವಾ ಇನ್ನೇನು ಮಾಡಬಹುದು ಎಂಬುದನ್ನು ನಮಗೆ ನಾವೇ ನಿರ್ಧರಿಸಬಹುದು.
ಗುರಿ ಯಾವುದು?: ಒಮ್ಮೆ ತೂಕ ಇಳಿಸಿ, ನಂತರ ಜೀವನವಿಡೀ ಅದನ್ನು ನಿರ್ವಹಿಸಲು ಒದ್ದಾಡುತ್ತಲೇ ಇರಬೇಕಾದ್ದು ನಿಮ್ಮ ಗುರಿಯಲ್ಲ. ಬದಲಿಗೆ, ಜೀವನ ಪೂರ್ತಿಗೆ ಆಗುವಂಥ ಆರೋಗ್ಯಕರ ಅಭ್ಯಾಸಗಳನ್ನು ಬೆಳೆಸಿಕೊಳ್ಳುವುದು ನಿಮ್ಮ ಗುರಿಯಾಗಿರಲಿ. ರೋಗರಹಿತರಾಗಿ, ಆರೋಗ್ಯಪೂರ್ಣ ಬದುಕನ್ನು ಜೀವಿಸುವ ಸುಖ ಎಂಥದ್ದು ಎನ್ನುವುದನ್ನು ಅರ್ಥ ಮಾಡಿಕೊಳ್ಳುವ ಗುರಿ ಇರಿಸಿಕೊಳ್ಳಿ. ಇದರಿಂದ ಕಷ್ಟಪಟ್ಟು ತೂಕ ಇಳಿಸುವ ಅಥವಾ ಇಳಿದ ತೂಕ ಮರಳುತ್ತದೆಂಬ ಭೀತಿಯಲ್ಲಿ ಬದುಕುವ ಅವಸ್ಥೆ ದೂರವಾಗುತ್ತದೆ.