'ಬಾಗಿದ ಬೆನ್ನಿ'ನೊಂದಿಗೆ 20 ವರ್ಷಗಳು: 60 ವರ್ಷದ ರೋಗಿಯ 70-ಡಿಗ್ರಿ ಬೆನ್ನುಹುರಿ ವಕ್ರತೆಗೆ ಯಶಸ್ವಿ ಶಸ್ತ್ರಚಿಕಿತ್ಸೆ
ರೋಗಿಯು 'ಆಂಕೈಲೋಸಿಂಗ್ ಸ್ಪಾಂಡಿಲೈಟಿಸ್' ಎಂಬ ಸಮಸ್ಯೆಯಿಂದ ಬಳಲುತ್ತಿದ್ದರು. ಇದು ಬೆನ್ನುಹುರಿಯು ಕ್ರಮೇಣವಾಗಿ ಬಿಗಿಯಾಗಿ, ತನ್ನ ನಮ್ಯತೆಯನ್ನು ಕಳೆದುಕೊಳ್ಳುವಂತೆ ಮಾಡುವ ಸ್ಥಿತಿಯಾಗಿದೆ. ಹಿಂದೆ ಒಮ್ಮೆ ಕೆಳಗೆ ಬಿದ್ದಿದ್ದರಿಂದ ಅವರ ಬೆನ್ನುಹುರಿಯ ಮೇಲ್ಭಾಗ ದಲ್ಲಿ ಮುರಿತವೂ ಉಂಟಾಗಿತ್ತು, ಅದಕ್ಕೆ ಶಸ್ತ್ರಚಿಕಿತ್ಸೆಯಿಲ್ಲದೆ ಚಿಕಿತ್ಸೆ ನೀಡಲಾಗಿತ್ತು.
-
ಬೆಂಗಳೂರು: ರಾಜಾಜಿನಗರದ ಫೋರ್ಟಿಸ್ ಆಸ್ಪತ್ರೆಯು ಸುಮಾರು 20 ವರ್ಷಗಳಿಂದ ತೀವ್ರವಾಗಿ ಬಾಗಿದ ಬೆನ್ನಿನೊಂದಿಗೆ ಜೀವಿಸುತ್ತಿದ್ದ 60 ವರ್ಷದ ವ್ಯಕ್ತಿರೊಬ್ಬರಿಗೆ ಯಶಸ್ವಿಯಾಗಿ ಚಿಕಿತ್ಸೆ ನೀಡಿದೆ. ರೋಗಿಯು 70 ಡಿಗ್ರಿಗಿಂತಲೂ ಹೆಚ್ಚಿನ ಬೆನ್ನುಹುರಿ ವಕ್ರತೆಯನ್ನು ಹೊಂದಿದ್ದರು. ಇದರಿಂದಾಗಿ ಅವರಿಗೆ ತೀವ್ರವಾದ ನೋವು ಕಾಣಿಸಿ ಕೊಳ್ಳುತ್ತಿತ್ತು ಹಾಗೂ ನಡೆಯಲು ಮತ್ತು ದೈನಂದಿನ ಚಟುವಟಿಕೆಗಳನ್ನು ಮಾಡಲು ತುಂಬಾ ಕಷ್ಟಕರವಾಗಿತ್ತು. ಹಳೆಯ ಬೆನ್ನುಹುರಿ ಮುರಿತದ ಪರಿಣಾಮವಾಗಿ ಕಳೆದ ಒಂದು ವರ್ಷದಿಂದ ಅವರ ಆರೋಗ್ಯ ಸ್ಥಿತಿ ಮತ್ತಷ್ಟು ಹದಗೆಟ್ಟಿತ್ತು.
ರಾಜಾಜಿನಗರದ ಫೋರ್ಟಿಸ್ ಆಸ್ಪತ್ರೆಯ ಮೂಳೆ ಮತ್ತು ಬೆನ್ನುಹುರಿ ಶಸ್ತ್ರಚಿಕಿತ್ಸಕ ಡಾ. ಶ್ರೀಕಾಂತ ಕೆ.ಎಸ್. ನೇತೃತ್ವದ ಬಹು-ವಿಭಾಗದ ವೈದ್ಯಕೀಯ ತಂಡವು, ಈ ತೀವ್ರ ಬೆನ್ನು ಹುರಿ ವಕ್ರತೆ ಸರಿಪಡಿಸಲು ಎಂಟು ಗಂಟೆಗಳ ಸುದೀರ್ಘ ಶಸ್ತ್ರಚಿಕಿತ್ಸೆ ನಡೆಸಿತು.
ಇದನ್ನೂ ಓದಿ: Health Tips: ಬೆಲ್ಲದ ಸೇವನೆ ಸಕ್ಕರೆಗಿಂತ ನಿಜವಾಗಿಯೂ ಉತ್ತಮವೇ? ತಜ್ಞರು ಹೇಳೋದೇನು?
ಶಸ್ತ್ರಚಿಕಿತ್ಸೆಯ ಬಳಿಕ, ರೋಗಿಯು ಮರುದಿನವೇ ನೇರವಾಗಿ ನಿಲ್ಲಲು, ಯಾವುದೇ ಆಧಾರವಿಲ್ಲದೆ ಸ್ವತಂತ್ರವಾಗಿ ನಡೆಯಲು ಹಾಗೂ ತಮ್ಮ ದಿನನಿತ್ಯದ ಕೆಲಸಗಳನ್ನು ತಾವೇ ಮಾಡಿಕೊಳ್ಳಲು ಶಕ್ತರಾಗಿದ್ದಾರೆ.
ರೋಗಿಯು 'ಆಂಕೈಲೋಸಿಂಗ್ ಸ್ಪಾಂಡಿಲೈಟಿಸ್' ಎಂಬ ಸಮಸ್ಯೆಯಿಂದ ಬಳಲುತ್ತಿದ್ದರು. ಇದು ಬೆನ್ನುಹುರಿಯು ಕ್ರಮೇಣವಾಗಿ ಬಿಗಿಯಾಗಿ, ತನ್ನ ನಮ್ಯತೆಯನ್ನು ಕಳೆದುಕೊಳ್ಳು ವಂತೆ ಮಾಡುವ ಸ್ಥಿತಿಯಾಗಿದೆ. ಹಿಂದೆ ಒಮ್ಮೆ ಕೆಳಗೆ ಬಿದ್ದಿದ್ದರಿಂದ ಅವರ ಬೆನ್ನುಹುರಿಯ ಮೇಲ್ಭಾಗದಲ್ಲಿ ಮುರಿತವೂ ಉಂಟಾಗಿತ್ತು, ಅದಕ್ಕೆ ಶಸ್ತ್ರಚಿಕಿತ್ಸೆಯಿಲ್ಲದೆ ಚಿಕಿತ್ಸೆ ನೀಡಲಾಗಿತ್ತು.
ಕಾಲಾನಂತರದಲ್ಲಿ, ಈ ಮೂಲ ಸಮಸ್ಯೆ ಮತ್ತು ಹಳೆಯ ಮುರಿತ ಎರಡೂ ಸೇರಿ ಅವರ ಬೆನ್ನು ಕ್ರಮೇಣವಾಗಿ ಬಗ್ಗುವಂತೆ ಮಾಡಿತ್ತು. ಕಳೆದ ಒಂದು ವರ್ಷದಿಂದ, ಬೆನ್ನು ಹೆಚ್ಚು ಬಗ್ಗಿದ್ದ ಭಾಗದಲ್ಲಿ ಅವರಿಗೆ ತೀವ್ರವಾದ ನೋವು ಕಾಣಿಸಿಕೊಳ್ಳಲಾರಂಭಿಸಿತು ಮತ್ತು ನಡೆಯುವುದು ಹಾಗೂ ದಿನನಿತ್ಯದ ಕೆಲಸಗಳನ್ನು ಮಾಡುವುದು ಅವರಿಗೆ ಇನ್ನಷ್ಟು ಕಷ್ಟಕರವಾಗಿತ್ತು.
ವಿಸ್ತೃತ ಮೌಲ್ಯಮಾಪನದ ನಂತರ, ಈ ಶಾಶ್ವತ ವಕ್ರತೆಯನ್ನು ಸರಿಪಡಿಸಲು ಶಸ್ತ್ರ ಚಿಕಿತ್ಸೆಯೇ ಅಗತ್ಯವೆಂದು ವೈದ್ಯರು ನಿರ್ಧರಿಸಿದರು. ತಂಡವು 'ಪೆಡಿಕಲ್ ಸಬ್ಟ್ರಾಕ್ಷನ್ ಆಸ್ಟಿಯೊಟೊಮಿ' (ಪಿಎಸ್ಒ) ಎಂಬ ಸಂಕೀರ್ಣ ಶಸ್ತ್ರಚಿಕಿತ್ಸಾ ವಿಧಾನವನ್ನು ನಡೆಸಿತು. ತೀವ್ರವಾದ ಬೆನ್ನುಹುರಿ ವಕ್ರತೆಯನ್ನು ಸರಿಪಡಿಸಲು ಮತ್ತು ಬೆನ್ನುಹುರಿಯನ್ನು ಉತ್ತಮ ಜೋಡಣೆಗೆ ತರಲು ಇದನ್ನು ಬಳಸಲಾಗುತ್ತದೆ. ಸುಮಾರು ಎಂಟು ಗಂಟೆಗಳ ಕಾಲ ನಡೆದ ಈ ಶಸ್ತ್ರಚಿಕಿತ್ಸೆಯಲ್ಲಿ, ನರಗಳು ಮತ್ತು ಬೆನ್ನುಹುರಿಯನ್ನು ನಿರಂತರವಾಗಿ ಗಮನಿಸುತ್ತಲೇ ಬಹಳ ಎಚ್ಚರಿಕೆಯಿಂದ ಬೆನ್ನುಹುರಿಯ ವಕ್ರತೆಯನ್ನು ಸರಿಪಡಿಸಿ ಸ್ಥಿರಗೊಳಿಸಲಾಯಿತು.
ರೋಗಿಯ ಬೆನ್ನುಹುರಿಯು ಅತಿಯಾಗಿ ಬಗ್ಗಿದ್ದ ಕಾರಣ, ಅವರಿಗೆ ಅರಿವಳಿಕೆ ನೀಡುವುದು ಕೂಡ ಅತ್ಯಂತ ಸವಾಲಿನದ್ದಾಗಿತ್ತು. ಅವರ ಕುತ್ತಿಗೆ ಮತ್ತು ಬೆನ್ನುಹುರಿಯ ಚಲನೆಯು ಬಹಳ ಸೀಮಿತವಾಗಿದ್ದರಿಂದ, ಶಸ್ತ್ರಚಿಕಿತ್ಸೆಗಾಗಿ ಅವರನ್ನು ಸುರಕ್ಷಿತವಾಗಿ ಮಲಗಿಸುವುದು ಕಷ್ಟಕರವಾಗಿತ್ತು.
ಇದನ್ನು ನಿಭಾಯಿಸಲು, ರಾಜಾಜಿನಗರದ ಫೋರ್ಟಿಸ್ ಆಸ್ಪತ್ರೆಯ ಅರಿವಳಿಕೆ ತಜ್ಞರಾದ ಡಾ. ನವೀನ್ ಗೌಡ ಅವರು 'ಅವೇಕ್ ಫೈಬರ್ಆಪ್ಟಿಕ್ ಇಂಟ್ಯೂಬೇಶನ್' ಎಂಬ ತಂತ್ರ ಬಳಸಿದರು. ಈ ವಿಧಾನದಲ್ಲಿ, ರೋಗಿಯು ಎಚ್ಚರವಿದ್ದು ಉಸಿರಾಡುತ್ತಿರುವಾಗಲೇ ಶ್ವಾಸನಾಳದ ಕೊಳವೆಯನ್ನು ಸುರಕ್ಷಿತವಾಗಿ ಅಳವಡಿಸಲಾಗುತ್ತದೆ, ಮತ್ತು ಇದರಿಂದ ಬೆನ್ನುಹುರಿಗೆ ಯಾವುದೇ ಅನಗತ್ಯ ಚಲನೆಯಾಗುವುದನ್ನು ತಪ್ಪಿಸಬಹುದು. ಶಸ್ತ್ರಚಿಕಿತ್ಸೆ ಯ ನಂತರ, ರೋಗಿಯನ್ನು ಸುಮಾರು ಒಂದು ದಿನ ತೀವ್ರ ನಿಗಾ ಘಟಕದಲ್ಲಿ (ಐಸಿಯು) ಇರಿಸಿ ಗಮನಿಸಿದ ಬಳಿಕ ವಾರ್ಡ್ಗೆ ಸ್ಥಳಾಂತರಿಸಲಾಯಿತು. ಅವರು ಮರುದಿನವೇ ನಡೆಯಲು ಪ್ರಾರಂಭಿಸಿದರು ಮತ್ತು ತಮ್ಮ ವೈಯಕ್ತಿಕ ಕೆಲಸಗಳನ್ನು ಸ್ವತಂತ್ರವಾಗಿ ಮಾಡಿಕೊಳ್ಳಲು ಶಕ್ತರಾದರು.
ಈ ಪ್ರಕರಣದ ಕುರಿತು ಮಾತನಾಡಿದ ಬೆಂಗಳೂರಿನ ರಾಜಾಜಿನಗರದ ಫೋರ್ಟಿಸ್ ಆಸ್ಪತ್ರೆಯ ಮೂಳೆ ಮತ್ತು ಬೆನ್ನುಹುರಿ ಶಸ್ತ್ರಚಿಕಿತ್ಸಕ ಡಾ. ಶ್ರೀಕಾಂತ ಕೆ.ಎಸ್., "ರೋಗಿಯು ಸುಮಾರು 20 ವರ್ಷಗಳಿಂದ ತೀವ್ರವಾದ ಬೆನ್ನುಹುರಿ ವಕ್ರತೆಯೊಂದಿಗೆ ಬದುಕುತ್ತಿದ್ದರು. ಇದು ಅವರ ಓಡಾಟ ಮತ್ತು ದೈನಂದಿನ ಜೀವನದ ಮೇಲೆ ಗಮನಾರ್ಹ ಪರಿಣಾಮ ಬೀರಿತ್ತು. 70 ಡಿಗ್ರಿಗಿಂತಲೂ ಹೆಚ್ಚಿನ ಈ ಶಾಶ್ವತ ವಕ್ರತೆಯನ್ನು ಸರಿಪಡಿಸಲು ಎಚ್ಚರಿಕೆಯ ಯೋಜನೆ ಮತ್ತು ನಿಖರವಾದ ಶಸ್ತ್ರಚಿಕಿತ್ಸೆಯ ಅಗತ್ಯವಿತ್ತು. ಬೆನ್ನುಹುರಿಯ ವಕ್ರತೆಯನ್ನು ಸರಿಪಡಿಸುವುದು ಮಾತ್ರವಲ್ಲದೆ, ಅವರು ತಮ್ಮ ಸ್ವಾತಂತ್ರ್ಯ ಮತ್ತು ಉತ್ತಮ ಜೀವನಮಟ್ಟವನ್ನು ಮರಳಿ ಪಡೆಯುವಂತೆ ಸಹಾಯ ಮಾಡುವುದು ನಮ್ಮ ಉದ್ದೇಶವಾಗಿತ್ತು. ಶಸ್ತ್ರಚಿಕಿತ್ಸೆಯ ಮರುದಿನವೇ ಅವರು ನೇರವಾಗಿ ನಿಂತು, ಸ್ವತಂತ್ರವಾಗಿ ನಡೆಯುವುದನ್ನು ನೋಡುವುದು ನಮಗೆ ವಿಶೇಷವಾಗಿ ಪ್ರೋತ್ಸಾಹದಾಯಕವಾಗಿತ್ತು" ಎಂದು ಹೇಳಿದರು.
ರಾಜಾಜಿನಗರದ ಫೋರ್ಟಿಸ್ ಆಸ್ಪತ್ರೆಯ ಅರಿವಳಿಕೆ ತಜ್ಞರಾದ ಡಾ. ನವೀನ್ ಗೌಡ ಅವರು ಮಾತನಾಡಿ, "ರೋಗಿಯ ಬೆನ್ನುಹುರಿಯ ತೀವ್ರ ವಕ್ರತೆ ಮತ್ತು ಬಿಗಿತದಿಂದಾಗಿ ಅವರಿಗೆ ಅರಿವಳಿಕೆ ನೀಡುವುದು ದೊಡ್ಡ ಸವಾಲಾಗಿತ್ತು. ಅವರ ಕುತ್ತಿಗೆಯ ಚಲನೆ ಕೂಡ ಸೀಮಿತವಾಗಿದ್ದ ಕಾರಣ, ಸಾಮಾನ್ಯ ವಿಧಾನದಲ್ಲಿ ಉಸಿರಾಟದ ಕೊಳವೆಯನ್ನು ಅಳವಡಿಸುವುದು ಕಷ್ಟಕರವಾಗಿತ್ತು. ಹೀಗಾಗಿ ನಾವು ʻಅವೇಕ್ ಫೈಬರ್ಆಪ್ಟಿಕ್ ಇಂಟ್ಯೂಬೇಶನ್ʼ ವಿಧಾನವನ್ನು ಬಳಸಿದೆವು. ಇದು ಬೆನ್ನುಹುರಿಯ ಚಲನೆಯನ್ನು ಕಡಿಮೆ ಮಾಡುವ ಜೊತೆಗೆ ಅವರ ಶ್ವಾಸಕೋಶದ ಮಾರ್ಗವನ್ನು ಸುರಕ್ಷಿತವಾಗಿ ನಿರ್ವಹಿಸಲು ನಮಗೆ ಅವಕಾಶ ಮಾಡಿಕೊಟ್ಟಿತು. ಸುರಕ್ಷಿತವಾದ ಫಲಿತಾಂಶವನ್ನು ಖಚಿತಪಡಿಸಿ ಕೊಳ್ಳಲು ಶಸ್ತ್ರಚಿಕಿತ್ಸಾ, ಅರಿವಳಿಕೆ ಮತ್ತು ತುರ್ತು ನಿಗಾ ಘಟಕದ ತಂಡಗಳ ನಡುವಿನ ನಿಕಟ ಸಮನ್ವಯ ಬಹಳ ಮುಖ್ಯವಾಗಿತ್ತು" ಎಂದರು.
ರೋಗಿಯು ತಮ್ಮ ಸಂತಸ ಹಂಚಿಕೊಳ್ಳುತ್ತಾ, "ಕಳೆದ 20 ವರ್ಷಗಳಿಂದ, ಬೆನ್ನು ಬಗ್ಗಿಸಿಕೊಂಡೇ ಬದುಕುವುದನ್ನು ನಾನು ರೂಢಿಸಿಕೊಂಡಿದ್ದೆ. ಸಾಮಾನ್ಯ ಜನರು ಸುಲಭ ವಾಗಿ ಮಾಡುವ ಎಷ್ಟೋ ಚಿಕ್ಕ-ಪುಟ್ಟ ಕೆಲಸಗಳನ್ನು ಮಾಡಲೂ ನನಗೆ ಕಷ್ಟವಾಗುತ್ತಿತ್ತು. ನೋವು ಮತ್ತು ನಡೆಯಲು ಪಡುತ್ತಿದ್ದ ಕಷ್ಟಗಳು ಕ್ರಮೇಣ ನನ್ನ ದೈನಂದಿನ ಜೀವನದ ಭಾಗವಾಗಿಬಿಟ್ಟಿದ್ದವು. ಶಸ್ತ್ರಚಿಕಿತ್ಸೆಯ ನಂತರ, ಮರುದಿನವೇ ನಾನು ಬೆನ್ನು ನೇರಮಾಡಿ ನಿಲ್ಲುತ್ತೇನೆ ಮತ್ತು ಸ್ವತಃ ನಡೆಯುತ್ತೇನೆ ಎಂದು ಇಷ್ಟು ಬೇಗ ನಾನು ನಿರೀಕ್ಷಿಸಿರಲಿಲ್ಲ. ಮತ್ತೆ ಜನರ ಮುಖವನ್ನು ನೇರವಾಗಿ ನೋಡಿ ಮಾತನಾಡುವುದು ಮತ್ತು ನನ್ನ ದಿನನಿತ್ಯದ ಕೆಲಸಗಳನ್ನು ನಾನೇ ಮಾಡಿಕೊಳ್ಳಲು ಸಾಧ್ಯವಾಗುತ್ತಿರುವುದು, ನಾನು ಬಹುತೇಕ ಮರೆತೇ ಹೋಗಿದ್ದ ಸ್ವಾತಂತ್ರ್ಯವನ್ನು ನನಗೆ ಮರಳಿ ನೀಡಿದೆ. ನನ್ನ ಚಿಕಿತ್ಸೆಯುದ್ದಕ್ಕೂ ವಹಿಸಿದ ಕಾಳಜಿ, ಪರಿಣತಿ ಮತ್ತು ಬೆಂಬಲಕ್ಕಾಗಿ ನಾನು ಡಾ. ಶ್ರೀಕಾಂತ ಮತ್ತು ರಾಜಾಜಿನಗರ ಫೋರ್ಟಿಸ್ ಆಸ್ಪತ್ರೆಯ ಸಂಪೂರ್ಣ ತಂಡಕ್ಕೆ ಅತ್ಯಂತ ಕೃತಜ್ಞನಾಗಿದ್ದೇನೆ" ಎಂದು ಹೇಳಿದರು.
ರಾಜಾಜಿನಗರದ ಫೋರ್ಟಿಸ್ ಆಸ್ಪತ್ರೆಯ ಫೆಸಿಲಿಟಿ ಡೈರೆಕ್ಟರ್ ಶ್ರೀಮತಿ ಹಂಸಾ ಶಶಾಂಕ್ ಅವರು ಮಾತನಾಡಿ, "ಇದು ಬಹು ತಂಡಗಳ ಪರಿಣತಿ ಮತ್ತು ನಿಕಟ ಸಮನ್ವ ಯವನ್ನು ಬೇಡುವಂತಹ ಒಂದು ಸವಾಲಿನ ಪ್ರಕರಣವಾಗಿತ್ತು. ವಿಶೇಷ ಶಸ್ತ್ರಚಿಕಿತ್ಸಾ ಆರೈಕೆ, ಅರಿವಳಿಕೆ ಮತ್ತು ತೀವ್ರ ನಿಗಾ ವಿಭಾಗಗಳು ಒಟ್ಟಾಗಿ ಕೆಲಸ ಮಾಡಿದಾಗ ಎಂತಹ ದ್ದನ್ನು ಸಾಧಿಸಬಹುದು ಎಂಬುದನ್ನು ಈ ಫಲಿತಾಂಶವು ತೋರಿಸುತ್ತದೆ. ರೋಗಿಗಳು ತಮ್ಮ ಚಲನಶೀಲತೆ, ಸ್ವಾತಂತ್ರ್ಯ ಮತ್ತು ಉತ್ತಮ ಗುಣಮಟ್ಟದ ಜೀವನವನ್ನು ಮರಳಿ ಪಡೆಯಲು ಸಹಾಯ ಮಾಡುವ ಸುಧಾರಿತ ಆರೈಕೆಯನ್ನು ಒದಗಿಸಲು ರಾಜಾಜಿನಗರದ ಫೋರ್ಟಿಸ್ ಆಸ್ಪತ್ರೆಯಲ್ಲಿ ನಾವು ಸದಾ ಬದ್ಧರಾಗಿದ್ದೇವೆ," ಎಂದು ತಿಳಿಸಿದರು.