ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಮುಖದಲ್ಲಿ ಮೊಡವೆಯೇ? ಈ ಸಣ್ಣ ಬದಲಾವಣೆ ಮಾಡಿಕೊಂಡರೆ ಸಾಕು ಸಮಸ್ಯೆಗೆ ಸಿಗಲಿದೆ ಮುಕ್ತಿ

ಕೆಲವೊಮ್ಮೆ ಎಷ್ಟೇ ಔಷಧ, ಉಪಚಾರ, ಮನೆಮದ್ದು ಮಾಡಿದರೂ ನಮ್ಮ ನಿಯಂತ್ರಣಕ್ಕೆ ಸಿಗದಂತೆ ಮೊಡವೆ ಮತ್ತೆ ಮತ್ತೆ ಕೆನ್ನೆ-ಗಲ್ಲಗಳನ್ನೆಲ್ಲ ತುಂಬಿಸಿ ಕಿರಿಕಿರಿ ಹುಟ್ಟಿಸುತ್ತದೆ. ನಿತ್ಯದ ಬದುಕಿನಲ್ಲಿ ಕೆಲವೊಂದು ಸಣ್ಣ ಬದಲಾವಣೆಗಳನ್ನು ಮಾಡುವುದರಿಂದ ಮೊಡವೆಯ ಗೊಡವೆಯನ್ನು ತಗ್ಗಿಸಬಹುದು ಎಂಬುದು ಗೊತ್ತೇ?

ಮೊಡವೆ ಬರದಂತೆ ತಡೆಯುವ ಟಿಪ್ಸ್‌ ಇಲ್ಲಿದೆ

ಸಾಂದರ್ಭಿಕ ಚಿತ್ರ -

Profile
Pushpa Kumari Oct 10, 2026 7:00 AM

ಬೆಂಗಳೂರು: ಮೊಡವೆ ಯಾರಿಗೂ ಬೇಡ. ಆದರೆ ಮೊಡವೆಯೆಂದರೆ ಮುಖದ ಒಡವೆ ಎಂಬ ಕಲ್ಪನೆಯೂ ಇದೆಯಲ್ಲ! ಉಳಿದ ಒಡವೆಗಳನ್ನಾದರೆ ಬೇಕಾದಾಗ ಧರಿಸಿ, ಬೇಡದಾಗ ತೆಗೆದಿರಿಸ ಬಹುದು. ಆದರೆ ಈ ಒಡವೆಯನ್ನೇನು ಮಾಡುವುದು? ಕೆಲವೊಮ್ಮೆ ಎಷ್ಟೇ ಔಷಧ, ಉಪಚಾರ, ಮನೆಮದ್ದು ಮಾಡಿದರೂ ನಮ್ಮ ನಿಯಂತ್ರಣಕ್ಕೆ ಸಿಗದಂತೆ ಮತ್ತೆ ಮತ್ತೆ ಕೆನ್ನೆ-ಗಲ್ಲಗಳನ್ನೆಲ್ಲ ತುಂಬಿಸಿ ಕಿರಿಕಿರಿ ಹುಟ್ಟಿಸುತ್ತದೆ. ನಿತ್ಯದ ಬದುಕಿನಲ್ಲಿ ಕೆಲವೊಂದು ಸಣ್ಣ ಬದಲಾವಣೆಗಳನ್ನು ಮಾಡುವುದರಿಂದ ಮೊಡವೆಯ ಗೊಡವೆಯನ್ನು ತಗ್ಗಿಸಬಹುದು ಎಂಬುದು ಗೊತ್ತೇ?

ಕಾರಣವೇನು?: ಇದಕ್ಕೂ ಮೊದಲು, ಮೊಡವೆಗಳು ಗಂಟುಬೀಳಲು ಕಾರಣವೇನು ಎಂಬುದನ್ನು ತಿಳಿಯೋಣ. ಹದಿವಯಸ್ಸಿನವರಿಗೆ ಮೊಡವೆಗಳನ್ನು ಸಹಿಸಿಕೊಳ್ಳುವುದು ಕೆಲಕಾಲ ಅನಿವಾರ್ಯ. ಎಷ್ಟೇ ಸ್ಕಿನ್‌ಕೇರ್‌ ಎಂದು ಉಪಚರಿಸಿದರೂ, ಒಮ್ಮೆ ತಗ್ಗಿದಂತಾಗಿ ಮತ್ತೆ ಬರುತ್ತವೆ ಮೊಡವೆಗಳು. ಕೆಲವು ವರ್ಷಗಳ ನಂತರ ಅವು ತಾನಾಗಿಯೇ ಮಾಯವಾಗುವ ಸಂದರ್ಭಗಳೇ ಹೆಚ್ಚು. ತೀರಾ ಎಣ್ಣೆ ಚರ್ಮವಾಗಿದ್ದರೆ ಈ ಬಗ್ಗೆ ಹೆಚ್ಚು ಎಚ್ಚರ ವಹಿಸಬೇಕು. ಹಾರ್ಮೋನುಗಳ ವ್ಯತ್ಯಾಸ ಕೂಡ ಇದಕ್ಕೆ ಕಾರಣವಾಗಿರಬಹುದು. ಆನುವಂಶಿಕ ಕಾರಣಗಳನ್ನು ಸಹ ತಳ್ಳಿಹಾಕುವಂತಿಲ್ಲ. ಇವೆಲ್ಲ ಅಲ್ಲದೆಯೆ ಕೆಲವೊಮ್ಮೆ ನಮ್ಮ ನಿತ್ಯದ ಅಭ್ಯಾಸಗಳು ಈ ಚರ್ಮದ ಸಮಸ್ಯೆಗಳಿಗೆ ಕಾರಣವಾಗಬಹುದು. ಏನವು?

ಕೊಳಕಾದ ಮೊಬೈಲು: ದಿನದಲ್ಲಿ ಒಂದಿಷ್ಟು ಹೊತ್ತು ಮೊಬೈಲನ್ನು ಕೆನ್ನೆಗೆ ಅಂಟಿಸಿಕೊಂಡೇ ಇರುವ ಅಭ್ಯಾಸ ನಮ್ಮಲ್ಲಿ ಬಹಳ ಮಂದಿಗಿದೆ. ಆ ಮೊಬೈಲಿನ ಪರದೆಯ ಮೇಲೆ, ಎಣ್ಣೆಜಿಡ್ಡು, ಬೆವರು, ಮೇಕಪ್‌ ಮುಂತಾದ ಲೋಕದ ಕೊಳಕೆಲ್ಲ ಇದ್ದರೆ ಅದರಿಂದ ಚರ್ಮಕ್ಕೆ ತೊಂದರೆಯಾಗುವ ಸಾಧ್ಯತೆಯಿದೆ. ಹಾಗಾಗಿ ಮೊಬೈಲನ್ನು ಚರ್ಮಕ್ಕೆ ತಾಗಿಸದಂತೆ, ಸ್ಪೀಕರ್‌ ಹಾಕಿ ಮುಖದ ಮುಂದೆ ಹಿಡಿಯಲು ಸಾಧ್ಯವೇ ಎಂದು ನೋಡಿ.

ದಿಂಬಿನ ಕವರ್‌: ನಮ್ಮ ಮುಖಕ್ಕೆ ಕೊಳಕು ಅಂಟಿಸುವ ಮತ್ತೊಂದು ಸಾಧ್ಯತೆ ಇರುವುದು ನಾವು ನಿತ್ಯವೂ ಬಳಸುವ ದಿಂಬಿನ ಕವರ್‌ಗೆ. ಕೂದಲಿನ ಕಸಮಸಿಗಳು, ಎಣ್ಣೆ, ಬೆವರು, ಸತ್ತಚರ್ಮದ ಕೋಶಗಳು ಮುಂತಾದ ಹಲವು ಬಗೆಯ ಕಶ್ಮಲಗಳನ್ನೆಲ್ಲ ದಿಂಬಿನ ಕವರ್‌ನಲ್ಲಿ ಕಾಣಬಹುದು. ಅದನ್ನು ಆಗಾಗ ಬದಲಿಸದಿದ್ದರೆ ಮೊಡವೆಯ ತೊಂದರೆ ಮತ್ತೆ ಮತ್ತೆ ಬರುವುದಕ್ಕೆ ಅದೂ ಕಾರಣವಾಗಬಹುದು.

ಅತಿಯಾದ ಮೊಬೈಲ್‌ ಬಳಕೆಯಿಂದ ಜೆನ್ ಝೀಗಳಲ್ಲಿ ಹೆಚ್ಚುತ್ತಿದೆ ಮಾನಸಿಕ ಅನಾರೋಗ್ಯ

ಅತಿಯಾದ ಉಪಚಾರ: ತ್ವಚೆಗೆ ಉಪಚಾರ ಮಾಡುವ ಹೆಸರಿನಲ್ಲಿ ಅತಿಯಾಗಿ ಸ್ಕಿನ್‌ಕೇರ್‌ ಮಾಡಿದರೆ ತೊಂದರೆಗಳು ಬರಬಹುದು, ಜೋಕೆ! ಸಿಕ್ಕಾಪಟ್ಟೆ ಕ್ಲೆನ್ಸರ್‌ಗಳು ಅಥವಾ ಎಕ್ಸ್‌ಫಾಲಿಯೇಟರ್‌ಗಳ ಬಳಕೆಯಿಂದ ಚರ್ಮದ ರಕ್ಷಣಾ ಹೊದಿಕೆ ಹಾಳಾಗಬಹುದು. ಹಾಗಾಗಿ ತ್ವಚೆಗೆ ಹಾನಿ ಮಾಡದಂಥ ಮೃದುವಾದ ಉತ್ಪನ್ನಗಳನ್ನೇ ಬಳಸಿ. ಅವುಗಳನ್ನಾದರೂ ಅತಿಯಾಗಿ ಬಳಸಬೇಡಿ, ಮಿತಿಯಿರಲಿ.

ಕಾಸ್ಮೆಟಿಕ್ಸ್‌: ಕೂದಲಿನ ಆರೈಕೆಗಾಗಿ ನಾನಾ ವಿಧದ ತೈಲಗಳು, ಜೆಲ್‌ಗಳು, ಕಂಡೀಷನರ್‌ಗಳನ್ನು ಬಳಸುತ್ತೀರೇ? ಇವೆಲ್ಲವೂ ಮುಖ, ಕುತ್ತಿಗೆ, ಭುಜಗಳ ಸಂಪರ್ಕಕ್ಕೆ ಬಂದೇಬರುತ್ತವೆ. ಇವು ಗಳಿಂದಲೂ ಅಲರ್ಜಿ ಆಗಬಹುದು ಅಥವಾ ಚರ್ಮದ ಸೂಕ್ಷ್ಮ ರಂಧ್ರಗಳು ಬಿಗಿದುಕೊಳ್ಳಬಹುದು. ಹಾಗಾದರೆ ಮೊಡವೆ ಬರುವುದು ನಿಶ್ಚಿತ. ಮಾತ್ರವಲ್ಲ, ಅತಿಯಾಗಿ ಮೇಕಪ್‌ ಬಳಸುವವರು ನೀವಾದರೆ ಆ ಯಾವುದೇ ಉತ್ಪನ್ನಗಳು ನಿಮಗೆ ಅಲರ್ಜಿಯಾಗುತ್ತಿಲ್ಲ ಎಂಬುದನ್ನು ಖಾತ್ರಿ ಮಾಡಿಕೊಳ್ಳಿ. ಬಳಸುವ ಮೇಕಪ್‌ ಬ್ರಷ್‌, ಸ್ಪಾಂಜ್‌ಗಳನ್ನು ಸದಾ ಸ್ವಚ್ಛವಾಗಿಯೇ ಇರಿಸಿ. ಇವೆಲ್ಲ ಉತ್ತಮ ಗುಣಮಟ್ಟದ್ದೇ ಆಗಿರಲಿ.

ಒತ್ತಡ, ಆಹಾರ, ನಿದ್ದೆ: ಒತ್ತಡವು ನೇರವಾಗಿ ಮೊಡವೆ ಬರುವುದಕ್ಕೆ ಕಾರಣವಾಗುವುದಿಲ್ಲ. ಆದರೆ ಇರುವ ಮೊಡವೆಗಳನ್ನು ಇನ್ನಷ್ಟು ಹೆಚ್ಚಿಸುತ್ತದೆ. ಕಾರಣ, ನಿದ್ದೆ ಕಡಿಮೆಯಾದರೆ, ಒತ್ತಡ ಹೆಚ್ಚಾದರೆ ದೇಹದ ಹಾರ್ಮೋನುಗಳ ಮಟ್ಟದಲ್ಲಿ ಏರಿಳಿತವಾಗುತ್ತದೆ. ಇವು ಮೊಡವೆ ಬರುವುದಕ್ಕೆ ಕಾರಣವಾಗಬಹುದು. ಆಹಾರದಲ್ಲಿ ಸರಳ ಪಿಷ್ಟಗಳು, ಅತಿಯಾದ ಖಾರ, ಎಣ್ಣೆಯ ಅಂಶಗಳು ಚರ್ಮದ ಆರೋಗ್ಯಕ್ಕೆ ಹೇಳಿಸಿದ್ದಲ್ಲ. ಹೆಚ್ಚಿನ ಸಕ್ಕರೆಯಂಶವೂ ಕೆಲವರಿಗೆ ಮೊಡವೆ ತಂದಿಡಬಹುದು.