ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

Vishwavani Health: ಅತಿಯಾದ ಮೊಬೈಲ್‌ ಬಳಕೆಯಿಂದ ಜೆನ್ ಝೀಗಳಲ್ಲಿ ಹೆಚ್ಚುತ್ತಿದೆ ಮಾನಸಿಕ ಅನಾರೋಗ್ಯ; ಹೆತ್ತವರು ಮಾಡಬೇಕಾದ್ದೇನು?

Mental Health: ಇತ್ತೀಚಿನ ದಿನಗಳಲ್ಲಿ ಜೆನ್ ಝೀಗಳಲ್ಲಿ ಮಾನಸಿಕ ಅನಾರೋಗ್ಯ ಹೆಚ್ಚಾಗುತ್ತಿದ್ದು, ಇದಕ್ಕೆ ಮುಖ್ಯ ಕಾರಣ ಭಯ, ಖಿನ್ನತೆ, ಆತಂಕ. ಮುಂದಿನ ಹತ್ತು ವರ್ಷಗಳಲ್ಲಿ ದೈಹಿಕ ಅನಾರೋಗ್ಯಕ್ಕಿಂತ ಮಾನಸಿಕ ಅನಾರೋಗ್ಯವೇ ಹೆಚ್ಚಾಗುವ ಸಾಧ್ಯತೆ ಇದೆ. ಇದಕ್ಕೆ ಹಲವು ಕಾರಣಗಳಿವೆ. ಅವುಗಳು ಯಾವುದು ಎನ್ನುವ ಕುರಿತು ಮೈಸೂರು ವಿವಿಯ ಡಾ. ಸುತ್ತೂರು ಮಾಲಿನಿ ಅವರು ನೀಡಿರುವ ಮಾಹಿತಿ ಇಲ್ಲಿದೆ.

ಜೆನ್ ಝೀಗಳಲ್ಲಿ ಹೆಚ್ಚುತ್ತಿದೆ ಮಾನಸಿಕ ಅನಾರೋಗ್ಯ

ಡಾ. ಸುತ್ತೂರು ಮಾಲಿನಿ -

ಬೆಂಗಳೂರು: ಜೆನ್ ಝೀಗಳಲ್ಲಿ ಮಾನಸಿಕ ಅನಾರೋಗ್ಯ (Mental health) ಹೆಚ್ಚಾಗುತ್ತಿದ್ದು ಇದಕ್ಕೆ ಮುಖ್ಯ ಕಾರಣ ಆಧುನಿಕ ತಂತ್ರಜ್ಞಾನಗಳು. ಅದರಲ್ಲೂ ಮುಖ್ಯವಾಗಿ ಸ್ಮಾರ್ಟ್ ಫೋನ್‌ಗಳು. ಇದು ಅವರಲ್ಲಿ ಆತಂಕ, ಭಯ, ಖಿನ್ನತೆ, ಕೋಪವನ್ನು ಹೆಚ್ಚಿಸುತ್ತಿದೆ. ಇದರಿಂದ ಅವರು ಮಾನಸಿಕ ಅನಾರೋಗ್ಯಕ್ಕೆ ಗುರಿಯಾಗುತ್ತಿದ್ದಾರೆ ಎಂದು ಮೈಸೂರು ವಿಶ್ವವಿದ್ಯಾಲಯದ ಜೆನೆಟಿಕ್ಸ್‌ ಮತ್ತು ಜಿನೋಮಿಕ್ಸ್‌ ಅಧ್ಯಯನ ವಿಭಾಗದ ಮುಖ್ಯಸ್ಥೆ ಡಾ. ಸುತ್ತೂರು ಮಾಲಿನಿ (Dr. Suttur Malini) ಹೇಳಿದರು. ವಿಶ್ವವಾಣಿ ಹೆಲ್ತ್ (Vishwavani Health) ಯುಟ್ಯೂಬ್‌ ಚಾನಲ್‌ನಲ್ಲಿ ನಿರೂಪಕಿ ಸ್ವಾತಿ ಕೃಷ್ಣ ಆಚಾರ್ಯ ಅವರೊಂದಿಗಿನ ಸಂದರ್ಶನದಲ್ಲಿ ಅವರು ಮಾತನಾಡಿದರು.

ಮುಂದಿನ ಹತ್ತು ವರ್ಷಗಳಲ್ಲಿ ದೈಹಿಕ ಅನಾರೋಗ್ಯಕ್ಕಿಂತ ಮಾನಸಿಕ ಅನಾರೋಗ್ಯವೇ ಹೆಚ್ಚಾಗುತ್ತದೆ. ಯಾಕೆಂದರೆ ಇವತ್ತು ಎಲ್ಲರೂ ಒತ್ತಡದಲ್ಲೇ ಬದುಕುತ್ತಿದ್ದಾರೆ. ಒತ್ತಡವನ್ನು ನಿರ್ವಹಣೆ ಮಾಡುವುದು ಹೇಗೆಂದು ಅವರಿಗೆ ತಿಳಿದಿಲ್ಲ ಎಂದರು.

ಡಾ. ಸುತ್ತೂರು ಮಾಲಿನಿ ಅವರೊಂದಿಗಿನ ಸಂದರ್ಶನ:



ಇವತ್ತು ಸಮಾಧಾನವಾಗಿ ಯಾವ ಕೆಲಸವನ್ನು ಮಾಡಲು ಆಗುತ್ತಿಲ್ಲವೆಂದರೆ ಅದಕ್ಕೆ ಕಾರಣ ದೈಹಿಕ ಚಟುವಟಿಕೆ ಸರಿಯಾಗಿ ಇಲ್ಲದೇ ಇರುವುದು, ಹೆಚ್ಚು ಹೊತ್ತು ಕುಳಿತು ಕೆಲಸ ಮಾಡುವುದು, ಸರಿಯಾಗಿ ನಿದ್ರೆ ಮಾಡದೇ ಇರುವುದು, ಜಂಕ್ ಆಹಾರಗಳನ್ನು ಸೇವಿಸುವುದಾಗಿದೆ. ಜೆನ್ ಝೀಗಳಲ್ಲಿಇವತ್ತು ಮಾನಸಿಕ ಶಕ್ತಿ ಎಂಬುದು ತೀರಾ ಕುಸಿದಿದೆ. ಹೀಗಾಗಿ ಸವಾಲುಗಳನ್ನು ಎದುರಿಸುವಂತ ಶಕ್ತಿಯನ್ನು ನಾವು ಕಳೆದುಕೊಳ್ಳುತ್ತಿದ್ದೇವೆ. ಇವತ್ತು ಎಲ್ಲರೂ ತಮ್ಮ ಮಕ್ಕಳು ಎಂಜಿನಿಯರ್, ಡಾಕ್ಟರ್ ಆಗಬೇಕು ಎಂದು ಬಯಸುತ್ತಾರೆ. ಸಮಾಜದ ಮೆಚ್ಚುಗೆಗಾಗಿ ನಾವು ಮಕ್ಕಳ ಮೇಲೆ ಒತ್ತಡವನ್ನು ಹೇರುತ್ತಿದ್ದೇವೆ. ಪೋಷಕರ ಅತಿಯಾದ ಬಯಕೆ, ಮನೆ, ಸಮಾಜ, ಜೊತೆಗಾರರ ಒತ್ತಡ, ಹೋಲಿಕೆಗಳು ಮಕ್ಕಳನ್ನು ದುರ್ಬಲರನ್ನಾಗಿ ಮಾಡುತ್ತಿದೆ ಎಂದರು.

ಮದುವೆ ಬಳಿಕ ಮಹಿಳೆ ದಪ್ಪಗಾಗಲು ಕಾರಣವೇನು? ಹೇಗೆ ಇದನ್ನು ನಿಯಂತ್ರಿಸುವುದು?

ಹಿಂದೆ ಜನರು ನಮಗೋಸ್ಕರ ಬದುಕಿದರೆ ಈಗ ಎಲ್ಲರೂ ಇನ್ನೊಬ್ಬರಿಗಾಗಿ ಬದುಕುತ್ತಿದ್ದಾರೆ. ಹೋಲಿಕೆ ಮಾಡಿಕೊಳ್ಳುವುದು ಸ್ವಾಭಾವಿಕವಾಗಿದೆ. ನಮ್ಮ ಸಾಮರ್ಥ್ಯವನ್ನು ಅರಿಯದೇ ಇರುವುದು ಕೂಡ ಇದಕ್ಕೆ ಮುಖ್ಯ ಕಾರಣ ಎಂದು ಅವರು ಹೇಳಿದರು.

ಮನುಷ್ಯ ಸಂಘ ಜೀವಿ. ಇವತ್ತು ವರ್ಚುವಲ್ ಜಗತ್ತಿಗೆ ಬೇಕಾದಂತೆ ಎಲ್ಲರೂ ಬದುಕಲು ಪ್ರಯತ್ನಿಸುತ್ತಿದ್ದಾರೆ. ಎಲ್ಲಾ ಎಡಿಟೆಡ್ ಆಗಿರುವುದರಿಂದ ಸ್ವಂತಿಕೆ, ಸ್ವಾಭಾವಿಕವಾಗಿರುವುದನ್ನು ಮುಚ್ಚಿಡುತ್ತಿದ್ದೇವೆ. ಇದು ಒಂಟಿತನ, ಒತ್ತಡಕ್ಕೆ ಕಾರಣವಾಗುತ್ತಿದೆ. ಇದಕ್ಕೆ ಕಾರಣ ಹಲವಾರು. ಮುಖ್ಯವಾಗಿ ಕುಟುಂಬ ಮಕ್ಕಳಿಗೆ ಸಮಯ ನೀಡುತ್ತಿಲ್ಲ. ಮಗು ಬದುಕುವುದೇ ಸಮಾಜಕ್ಕಾಗಿ ಎನ್ನುವ ಭಾವನೆ, ಎಲ್ಲವೂ ತಕ್ಷಣ ಸಿಗುತ್ತೆ, ಸಿಗಬೇಕು ಎನ್ನುವ ಧೋರಣೆಗಳು ಇದಕ್ಕೆ ಕಾರಣ ಎಂದು ಹೇಳಿದರು.

ಪ್ರತಿಫಲಕ್ಕಾಗಿ ನಾವು ಕಾಯುವುದನ್ನು ಮಕ್ಕಳಿಗೆ ಕಲಿಸಬೇಕು. ದುಡ್ಡು ಕೊಟ್ಟರೆ ಎಲ್ಲವೂ ಸಿಗುತ್ತದೆ ಎನ್ನುವ ಕಾಲದಲ್ಲಿ ಇವತ್ತು ನಾವಿದ್ದೇವೆ. ಹೀಗಾಗಿ ಕಷ್ಟಪಟ್ಟು ಗಳಿಸಬೇಕು ಎನ್ನುವ ಆಸಕ್ತಿ ಮಕ್ಕಳಲ್ಲಿ ಕಡಿಮೆಯಾಗುತ್ತಿದೆ. ಸಾಧನೆಗಾಗಿ ಶಾರ್ಟ್ ಕಟ್ ಅಭ್ಯಾಸ ಮಾಡುತ್ತಿದ್ದಾರೆ. ಮನುಷ್ಯನ ಮೆದುಳು ಯಾವತ್ತೂ ಕೂಡ ನೆಗೆಟಿವ್ ಕಡೆಗೆ ಬೇಗನೆ ಸೆಳೆಯುತ್ತದೆ. ಹೀಗಾಗಿ ಬೇಗ ಜನಪ್ರಿಯತೆ ಗಳಿಸುವ ಆಸಕ್ತಿ ಮಕ್ಕಳಲ್ಲಿ ಹೆಚ್ಚಾಗುತ್ತಿದೆ. ಇಲ್ಲಿ ಸೋತಾಗ ಅವರು ಡಿಪ್ರೆಶನ್ ಗೆ ಹೊರಟು ಹೋಗುತ್ತಾರೆ. ಅವಕಾಶಗಳು ಬೇಕಾದಷ್ಟು ಇದೆ ಎಂಬುದನ್ನು ನಾವು ಅವರಿಗೆ ತೋರಿಸಿಕೊಡಬೇಕು ಎಂದು ಹೇಳಿದರು.

ಇದರೊಂದಿಗೆ ಜಂಕ್ ಆಹಾರ ಸೇವನೆ ಮಾಡುವುದು, ಮೆದುಳಿಗೆ ಪೂರಕ ಆಹಾರ ಸೇವನೆ ಮಾಡದೇ ಇರುವುದು, ನೀರು ಸರಿಯಾಗಿ ಕುಡಿಯುವುದಿಲ್ಲ. ನಿದ್ರೆ ಸರಿಯಾಗಿ ಮಾಡದೇ ಇರುವುದು ದೈಹಿಕ ಚಟುವಟಿಕೆಗಳು ಸರಿಯಾಗಿ ಇಲ್ಲದೇ ಇರುವುದು ಕೂಡ ಕಾರಣವಾಗುತ್ತಿದೆ ಎಂದು ತಿಳಿಸಿದರು.

ಜೆನ್ ಝೀಗಳನ್ನು ಕಾಡುತ್ತಿದೆ ಕಣ್ಣುರಿ, ಕತ್ತುನೋವು; ಕಾರಣವೇನು? ಏನಿದಕ್ಕೆ ಪರಿಹಾರ?

ಓದುವ ಅಭ್ಯಾಸ, ಸಾಹಿತ್ಯ ಅಭಿರುಚಿ, ತೋಟಗಾರಿಕೆ, ಸಂಗೀತ ಕೇಳುವುದು, ಚಿತ್ರ ಬರೆಯುವುದು ಇವೆಲ್ಲವು ಮಾನಸಿಕ ಒತ್ತಡವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಇದರೊಂದಿಗೆ ಕೆಲವು ನಿರ್ಧಾರ ತೆಗೆದುಕೊಳ್ಳುವಾಗ ಹಿರಿಯರ ಮಾರ್ಗದರ್ಶನ ಪಡೆಯುವುದು ಮುಖ್ಯವಾಗಿರುತ್ತದೆ. ಇದರಿಂದ ಸಮಸ್ಯೆಗಳನ್ನು ನಾವು ಸುಲಭವಾಗಿ ನಿರ್ವಹಿಸಬಹುದಾಗಿದೆ ಎನ್ನುವ ಅರಿವು ಮಕ್ಕಳಲ್ಲಿ ಮೂಡಿಸಬೇಕಿದೆ ಎಂದು ಡಾ. ಸುತ್ತೂರು ಮಾಲಿನಿ ಸಲಹೆ ನೀಡಿದರು.