ಫೋಟೋ ಗ್ಯಾಲರಿ ಆಪರೇಷನ್​ ಸಿಂಧೂರ್​ ಐಪಿಎಲ್​ ಅಕ್ಷಯ ತೃತೀಯ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Health Tips: ಮುಖ ಊದಿಕೊಂಡಂತಿದೆಯೇ? ಕಾರಣಗಳು ಇಲ್ಲಿವೆ

ಕಣ್ಣಿನ ಬುಡವೆಲ್ಲ ದಪ್ಪಗಾಗಿದೆ, ಮುಖ ಊದಿಕೊಂಡಂತಿದೆ, ಮುಖದಲ್ಲಿ ಆಯಾಸವೇ ತುಂಬಿದೆ, ಮುಖದ ಸಹಜ ಆಕಾರ ಮಾಯವಾಗಿದೆ ಎಂದಾದರೆ ಅದಕ್ಕೆ ಹಲವು ಕಾರಣಗಳಿರಬಹುದು. ಹಾರ್ಮೋನುಗಳ ವ್ಯತ್ಯಾಸ ಮತ್ತು ಅಂಗಾಂಗಗಳ ತೊಂದರೆಗಳವರೆಗೆ ಹಲವು ಕಾರಣಗಳು ಇದರ ಹಿಂದೆ ಇದ್ದೀತು. ಹೀಗಾಗಿ ಈ ಬಗ್ಗೆ ಎಚ್ಚರಿಕೆ ವಹಿಸುವುದು ಅಗತ್ಯ.

ಮುಖ ಊದಿಕೊಂಡಂತೆ ಇದ್ದರೆ ಈ ಬಗ್ಗೆ ಗಮನಹರಿಸಿ

Facial Swelling

Profile Pushpa Kumari May 7, 2025 6:00 AM

ನವದೆಹಲಿ: ಚಂದ್ರನಂಥ ಮುಖಮಂಡಲ ಇರಬೇಕೆಂಬ ಆಸೆ ಸಾಮಾನ್ಯವಾದದ್ದು. ಅದಕ್ಕಾಗೇ ಚಂದ್ರಮುಖಿ, ಚಂದ್ರಹಾಸ ಎಂಬೆಲ್ಲ ಹೆಸರುಗಳಿರುವುದು. ಸಹಜವಾದ ಬಟ್ಟಲು ಮುಖದ ಬದಲು, ಊದಿಕೊಂಡು ಚಂದ್ರನಂತಾದರೆ? ಕನ್ನಡಿ ನೋಡಿ ಕೊಂಡವರು ಗಾಬರಿ ಬೀಳುವುದು ಸಹಜ. ಕಣ್ಣಿನ ಬುಡವೆಲ್ಲ ದಪ್ಪಗಾಗಿದೆ,ಮುಖ ಊದಿಕೊಂಡಂತಿದೆ, ಮುಖದಲ್ಲಿ ಆಯಾಸವೇ ತುಂಬಿದೆ, ಮುಖದ ಸಹಜ (Face Feel Swollen) ಆಕಾರ ಮಾಯವಾಗಿದೆ ಎಂದಾದರೆ ಅದಕ್ಕೆ ಹಲವು ಕಾರಣ ಗಳಿರಬಹುದು. ಏನು ಕಾರಣಗಳವು ಮತ್ತು ಅವನ್ನು ಹೇಗೆ ಸರಿಪಡಿಸಿಕೊಳ್ಳಬಹುದು?

ಇದು ಕೇವಲ ಮುಖದ ಸೌಂದರ್ಯ ಹಾಳಾಯ್ತು ಎಂದು ಕೊರಗುವ ಮಾತಲ್ಲ. ಇದರ ಬೇರುಗಳು ಆಳವಾಗಿಯೂ ಇರಬಹುದು. ಅಲರ್ಜಿಗಳಿಂದ ಹಿಡಿದು, ಹಾರ್ಮೋನುಗಳ ವ್ಯತ್ಯಾಸ ಮತ್ತು ಅಂಗಾಂಗಗಳ ತೊಂದರೆಗಳವರೆಗೆ ಹಲವು ಕಾರಣ ಗಳು ಇದರ ಹಿಂದೆ ಇದ್ದೀತು. ಎಲ್ಲಕ್ಕಿಂತ ಹೆಚ್ಚು ಪ್ರಭಾವಿಸುವುದೆಂದರೆ ದೇಹದಲ್ಲಿ ಉತ್ಪಾದನೆಯಾಗುವ ಕಾರ್ಟಿಸೋಲ್‌ ಎಂಬ ಚೋದಕದ ಪ್ರಮಾಣ. ಯಾವುದೇ ರೀತಿಯಲ್ಲಿ ಒತ್ತಡ ಹೆಚ್ಚಾದಾಗ ಶರೀರದಲ್ಲಿ ಉತ್ಪಾದನೆಯಾಗುವ ಕಾರ್ಟಿಸೋಲ್‌ ಪ್ರಮಾಣ ಹೆಚ್ಚುತ್ತದೆ. ಇದರಿಂದ ರಕ್ತದಲ್ಲಿ ಸಕ್ಕರೆಯಂಶ ಹೆಚ್ಚಾಗುವುದು, ಚರ್ಮದಲ್ಲಿರುವ ಕೊಲಾಜಿನ್‌ ಕಡಿಮೆಯಾಗಿ, ದೇಹದಲ್ಲಿ ಉರಿಯೂತ ಹೆಚ್ಚಾಗುವ ಸಾಧ್ಯತೆಗಳು ಅಧಿಕ. ದೀರ್ಘಕಾಲ ಈ ಒತ್ತಡದ ಹಾರ್ಮೋನು ಹೆಚ್ಚಾಗಿ ಸ್ರವಿಸುತ್ತಿದ್ದರೆ ಉಳಿದೆಲ್ಲ ಸಮಸ್ಯೆಗಳ ಜತೆಗೆ, ಮುಖದ ಆಕೃತಿ ಹಾಳಾಗಿ, ಚರ್ಮ ಸುಕ್ಕಾಗಿ ವಯಸ್ಸಾದಂತೆ ಕಾಣುತ್ತದೆ.

ನಿದ್ದೆ: ತೀರಾ ನಿದ್ದೆಗೆಟ್ಟರೂ ಮುಖ ಊದಿಕೊಂಡಂತಿರುತ್ತದೆ; ಅತಿಯಾಗಿ ನಿದ್ದೆ ಮಾಡಿದರೂ ಹಾಗೆಯೇ! ಸಾಮಾನ್ಯ ಚಟುವಟಿಕೆ ಇರುವಂಥ ವಯಸ್ಕರಿಗೆ ದಿನಕ್ಕೆ 7-8 ತಾಸುಗಳ ನಿದ್ದೆ ಬೇಕು ಮತ್ತು ಸಾಕು. ನಿದ್ದೆ ಇದಕ್ಕಿಂತ ಕಡಿಮೆ ಯಾದರೆ ದುಗ್ಧರಸ ಗ್ರಂಥಿಗಳ ಕ್ಷಮತೆ ಕಡಿಮೆಯಾಗಿ, ದೇಹದಲ್ಲಿ ನೀರಿನಂಶ ಉಳಿದುಕೊಳ್ಳುತ್ತದೆ. ಅತಿಯಾಗಿ ಮಲಗಿದರೆ, ಕಣ್ಣಿನ ಸುತ್ತಲಿನ ಕೋಶಗಳಲ್ಲಿ ಅಥವಾ ಮುಖದ ಕೋಶಗಳಲ್ಲಿ ಅಧಿಕ ನೀರಿನಂಶ ಸಂಗ್ರಹಗೊಳ್ಳುತ್ತದೆ. ಹಾಗಾಗಿ ಎಷ್ಟು ನಿದ್ದೆ ಮಾಡುತ್ತೀರಿ ಎಂಬುದರತ್ತ ಗಮನಕೊಡಿ.

ಆಹಾರ: ತಿನ್ನುವ ಆಹಾರದಲ್ಲಿ ಉಪ್ಪಿನಂಶ ಹೆಚ್ಚಾದರೆ, ಅಂದರೆ ಸೋಡಿಯಂ ಹೆಚ್ಚಿನ ಪ್ರಮಾಣದಲ್ಲಿ ದೇಹ ಸೇರಿದರೆ ದ್ರವಧಾರಣೆ ಹೆಚ್ಚುತ್ತದೆ. ಸ್ವಲ್ಪ ಸಡಿಲವಾಗಿರುವ ಮುಖದ ಕೋಶಗಳಲ್ಲಿ ನೀರಿನಂಶ ಅಧಿಕವಾಗಿ ಕಂಡುಬರುತ್ತವೆ. ಇದಲ್ಲದೆ, ಸಕ್ಕರೆ ಇಲ್ಲವೇ ಸಿಹಿ ಆಹಾರವನ್ನು ಸಿಕ್ಕಾಪಟ್ಟೆ ತಿಂದರೂ ದ್ರವಧಾರಣೆ ಹೆಚ್ಚುವುದನ್ನು ಕಾಣಬಹುದು. ಅತಿಯಾಗಿ ಸಂಸ್ಕರಿತ ಆಹಾರಗಳೂ ಇದನ್ನು ಉಂಟು ಮಾಡಬಲ್ಲವು. ಆಲ್ಕೋಹಾಲ್‌ ಅತಿಯಾದರಂತೂ ಇದು ನಿಶ್ಚಿತ.

ಜೀವನಶೈಲಿ: ಸಾಕಷ್ಟು ಚಟುವಟಿಕೆಯಿಲ್ಲದ ಜಡ ಜೀವನಶೈಲಿಯಿಂದ ರಕ್ತ ಮತ್ತು ದುಗ್ಧರಸದ ಪರಿಚಲನೆಯಲ್ಲಿ ಸಾಕಷ್ಟು ಏರುಪೇರಾಗುತ್ತದೆ. ಕೆಲವೊಮ್ಮೆ ಮುಖ ಮಾತ್ರವೇ ಅಲ್ಲ, ಕೈ-ಕಾಲುಗಳಲ್ಲಿ ಅಲ್ಪಸ್ವಲ್ಪ ನೀರು ತುಂಬಿ ಕೊಂಡಿದ್ದು, ಎಡೆಮಾ ಲಕ್ಷಣಗಳಿದ್ದರೆ, ಲಘುವಾದ ದೈಹಿಕ ಚಟುವಟಿಕೆಯಿಂದ ಅದನ್ನು ಕಡಿಮೆ ಮಾಡಲು ಸಾಧ್ಯವಿದೆ. ಹಾಗಾಗಿ ದೇಹಕ್ಕೆ ದಿನವೂ ಚಟುವಟಿಕೆಯಿರಲಿ.

ಅಲರ್ಜಿ: ಯಾವುದೇ ರೀತಿಯ ಅಲರ್ಜಿ ಕಾಣಿಸಿಕೊಂಡಾಗಲೂ ಕೆನ್ನೆಗಳು, ತುಟಿಯ ಆಚೀಚೆ, ಕಣ್ಣಿನ ಕೆಳಗೆಲ್ಲ ಊದಿ ಕೊಳ್ಳುವುದಿದೆ. ಕೆಲವು ಆಹಾರಗಳು, ಅಂದರೆ ಹಾಲು, ಗೋಧಿ, ಅಣಬೆ, ಬೀಜಗಳು ಮುಂತಾದ ಹಲವು ಬಗೆಯ ಆಹಾರಗಳು ಕೆಲವರಲ್ಲಿ ಅಲರ್ಜಿ ಹುಟ್ಟುಹಾಕಬಲ್ಲದು. ಇದರಿಂದ ದೇಹದಲ್ಲಿ ಹಿಸ್ಟಮೈನ್‌ಗಳು ಬಿಡುಗಡೆಯಾಗಿ ಚರ್ಮ, ಕಣ್ಣು, ಶ್ವಾಸಕೋಶ ಮುಂತಾದೆಡೆಗಳಲ್ಲಿ ಅಲರ್ಜಿ ಕಾಣಿಸಿಕೊಳ್ಳುತ್ತದೆ.

ಅಂಗಾಂಗ ದೋಷ: ಅಲ್ಬುಮಿನ್‌ ಉತ್ಪಾದನೆ ಮೂಲಕ ದ್ರವಧಾರಣೆಯನ್ನು ನಿಯಂತ್ರಿಸುವ ಕೆಲಸ ಯಕೃತ್ತಿನದ್ದು. ಸಿರೋಸಿಸ್‌ ಅಥವಾ ಹೆಪಟೈಟಿಸ್‌ನಂಥ ತೊಂದರೆಯಿದ್ದಾಗ ಹೀಗೆ ನೀರು ತುಂಬಿಕೊಳ್ಳುವುದು ಸಾಮಾನ್ಯ. ಕಿಡ್ನಿ ತೊಂದರೆಗಳಿದ್ದಾಗಲೂ ದ್ರವಧಾರಣೆಯ ಲಕ್ಷಣಗಳು ಕಾಣುತ್ತವೆ. ಆದರೆ ಇಂಥ ಪ್ರಕರಣಗಳಲ್ಲಿ ಕೇವಲ ಮುಖದಲ್ಲಷ್ಟೇ ಅಲ್ಲ, ದೇಹದ ಇನ್ನೂ ಕೆಲವು ಭಾಗಗಳು ಊದಿಕೊಂಡಂತೆ ಕಾಣಬಹುದು. ಇದಲ್ಲದೆ, ಕೆಲವು ಸ್ಟೆರಾಯ್ಡ್‌ಗಳು, ಸ್ಟೆರಾಯ್ಡ್‌ ಇಲ್ಲದಂಥ ಉರಿಯೂತ ಶಾಮಕಗಳು, ಕ್ಯಾಲ್ಶಿಯಂ ತಡೆಯುವ ಮದ್ದುಗಳು, ಹಾರ್ಮೋನು ಔಷಧಿಗಳಿಂದಲೂ ಊತ ಕಾಣಿಸಬಹುದು.

ಇದನ್ನು ಓದಿ: Health Tips: ಬೆಳ್ಳುಳ್ಳಿಯ ಸಿಪ್ಪೆಯನ್ನು ಕಸ ಎಂದು ಬಿಸಾಡದಿರಿ, ಇದರಲ್ಲಿವೆ ಆರೋಗ್ಯ ಲಾಭ!

ಏನು ಮಾಡಬೇಕು?: ಕೆಲವು ಬಗೆಯ ಗ್ರೀನ್‌ ಟೀ, ಬಾರ್ಲಿ ನೀರನ್ನು ಕುಡಿಯುವುದರಿಂದ ಮುಖದಲ್ಲಿರುವ ಅಧಿಕ ನೀರನ್ನು ಹೊರಹಾಕಲು ಸಾಧ್ಯವಾಗುತ್ತದೆ. ಉಪ್ಪು, ಸಕ್ಕರೆ ಮತ್ತು ಆಲ್ಕೋಹಾಲ್‌ ಸೇವನೆಯನ್ನು ಮಿತಗೊಳಿಸಿ. ನಿತ್ಯವೂ ಲಘು ವ್ಯಾಯಾಮವನ್ನು ತಪ್ಪಿಸಬೇಡಿ. ಇದರಿಂದ ರಕ್ತಪರಿಚಲನೆ ಮಾತ್ರವಲ್ಲ, ದುಗ್ಧರಸದ ಪರಿಚಲನೆಯೂ ಸುಲಲಿತವಾಗುತ್ತದೆ. ಇದಲ್ಲದೆಯೂ ಕೆಲವು ಕ್ರಮಗಳು ಮುಖದ ಊತವನ್ನು ಕಡಿಮೆ ಮಾಡಲು ನೆರವಾಗಬಲ್ಲವು.

ತಣ್ಣಗಿನ ನೀರಿನ ಪಾತ್ರೆಯಲ್ಲಿ ಮುಖವನ್ನು ಕೆಲವು ಕ್ಷಣಗಳ ಕಾಲ ಅದ್ದಿರಿಸುವುದು ಉಪಯುಕ್ತ. ಐಸ್‌ ನೀರಿನ ಬಳಕೆಯಿಂದ ಸಮಸ್ಯೆಯಿಲ್ಲ ಎಂದರೆ, ಅಂಥ ನೀರನ್ನೂ ಇದಕ್ಕಾಗಿ ಬಳಸಬಹುದು. ತಣ್ಣಗಿನ ನೀರು ಚರ್ಮದಡಿಗಿನ ಊತವನ್ನು ಕಡಿಮೆ ಮಾಡಬಲ್ಲದು. ಚರ್ಮದ ಕೋಶಗಳನ್ನು ಬಿಗಿ ಮಾಡಿ, ಆ ಭಾಗದಲ್ಲಿರುವ ನೀರಿನಂಶವನ್ನು ತೆಗೆಯಬಲ್ಲದು. ಲಘುವಾದ ಮಸಾಜ್‌ ಮತ್ತು ಫೇಸ್‌ ಟ್ಯಾಪಿಂಗ್‌ ಸಹ ಉಪಯುಕ್ತ.