ಎಲ್‌ಪಿಜಿ ಕೊರತೆ ನಡುವೆಯೂ ಗುಡ್‌ನ್ಯೂಸ್ ಹಂಚಿಕೊಂಡ ಕೇಂದ್ರ; ಉತ್ಪಾದನೆ ಶೇಕಡಾ 25ರಷ್ಟು ಏರಿಕೆ
LPG production increases: ಅಡುಗೆ ಅನಿಲ ಉತ್ಪಾದನೆಯಲ್ಲಿ ಶೇಕಡಾ 25ರಷ್ಟು ಹೆಚ್ಚಳವಾಗಿದ್ದು, ಯಾರೂ ಕೂಡ ಭಯಭೀತರಾಗಿ ಖರೀದಿಸುವ ಅಗತ್ಯವಿಲ್ಲ ಎಂದು ಕೇಂದ್ರ ಸರ್ಕಾರ ತಿಳಿಸಿದೆ. ಅಮೆರಿಕ ಮತ್ತು ಇಸ್ರೇಲ್ ಜತೆಗಿನ ಯುದ್ಧದ ಸಂದರ್ಭದಲ್ಲಿ ಇರಾನ್ ತೈಲ ಸಾಗಾಟ ಮಾರ್ಗ ಹೊರ್ಮುಜ್ ಜಲಸಂಧಿ ಮುಚ್ಚಿದೆ. ಅಂದಿನಿಂದ ಸರ್ಕಾರ ದೇಶೀಯ ಉತ್ಪಾದನೆಯನ್ನು ಹೆಚ್ಚಿಸಲು ನಿರ್ದೇಶಿಸಿತ್ತು.
ಸಾಂದರ್ಭಿಕ ಚಿತ್ರ -
ನವದೆಹಲಿ, ಮಾ. 12: ವಾಣಿಜ್ಯ ಎಲ್‌ಪಿಜಿ (LPG) ಕೊರತೆಯಿಂದಾಗಿ ದೇಶಾದ್ಯಂತ ಹೋಟೆಲ್‌ಗಳು ಮತ್ತು ರೆಸ್ಟೋರೆಂಟ್‌ಗಳು ಮುಚ್ಚುತ್ತಿರುವ ವರದಿಗಳ ಮಧ್ಯೆ, ಅಡುಗೆ ಅನಿಲ ಉತ್ಪಾದನೆಯಲ್ಲಿ ಶೇಕಡಾ 25ರಷ್ಟು ಹೆಚ್ಚಳವಾಗಿದ್ದು, ಭಯಭೀತರಾಗಿ ಖರೀದಿಸುವ ಅಗತ್ಯವಿಲ್ಲ ಎಂದು ಕೇಂದ್ರ ಸರ್ಕಾರ (Central Government) ತಿಳಿಸಿದೆ. ಸರ್ಕಾರವು ಗೃಹಬಳಕೆಯ ಎಲ್‌ಪಿಜಿಗೆ ಆದ್ಯತೆ ನೀಡಿದೆ.
ಪೆಟ್ರೋಲಿಯಂ ಸಚಿವಾಲಯದ ಜಂಟಿ ಕಾರ್ಯದರ್ಶಿ (ಮಾರ್ಕೆಟಿಂಗ್ ಮತ್ತು ತೈಲ ಸಂಸ್ಕರಣಾಗಾರ) ಸುಜಾತಾ ಶರ್ಮಾ ಮಾತನಾಡಿ, ದೇಶವು ತನ್ನ ಎಲ್‌ಪಿಜಿ ಅಗತ್ಯದ ಶೇ. 60ರಷ್ಟು ವಿದೇಶಗಳಿಂದ ಪಡೆಯುತ್ತಿತ್ತು. ಅದರಲ್ಲಿ ಶೇ. 90ರಷ್ಟು ಹೊರ್ಮುಜ್ ಜಲಸಂಧಿಯ ಮೂಲಕ ಬರುತ್ತಿತ್ತು. ಅಮೆರಿಕ ಮತ್ತು ಇಸ್ರೇಲ್ ಜತೆಗಿನ ಯುದ್ಧದ ಸಂದರ್ಭದಲ್ಲಿ ಇರಾನ್ ಇದನ್ನು ಮುಚ್ಚಿದೆ. ಅಂದಿನಿಂದ ಸರ್ಕಾರ ದೇಶೀಯ ಉತ್ಪಾದನೆಯನ್ನು ಹೆಚ್ಚಿಸಲು ನಿರ್ದೇಶಿಸಿತ್ತು. ಸಂಸ್ಕರಣಾಗಾರಗಳು ಈಗ ಉತ್ಪಾದನೆಯನ್ನು ಶೇಕಡಾ 25ರಷ್ಟು ಹೆಚ್ಚಿಸಿವೆʼʼ ಎಂದು ಶರ್ಮಾ ಹೇಳಿದರು.
ಸಂಕಷ್ಟವು ಗಂಭೀರವಾಗಿದೆ ಎಂಬ ಭಾವನೆ ಮೂಡುವುದಕ್ಕೆ ಕಾರಣ ಭೀತಿಗೊಂಡು ಮಾಡುವ ಬುಕಿಂಗ್ ಎಂದು ಶರ್ಮಾ ಹೇಳಿದ್ದಾರೆ. ಜನರು ಅತುರದಲ್ಲಿ ಬುಕ್ಕಿಂಗ್ ಮಾಡಬಾರದು ಎಂದು ಅವರು ಸಲಹೆ ನೀಡಿದ್ದಾರೆ.
ಒಂದು ಮನೆಯಲ್ಲಿ ಎಷ್ಟು ಎಲ್‌ಪಿಜಿ ಸಿಲಿಂಡರ್ ಇಡಬಹುದು?
ವಿತರಣೆ ಹಂತದಲ್ಲಿ ಅನಿಯಂತ್ರಿತ ತಿರುಗಾಟ (ಡೈವರ್ಷನ್) ಆಗದಂತೆ ತಡೆಯಲು ಒನ್ ಟೈಮ್ ಡೆಲಿವರಿ ಕೋಡ್ (OTDC) ಮೂಲಕ ವಿತರಣೆ ಮಾಡುವ ವ್ಯವಸ್ಥೆಯನ್ನು ಖಚಿತಪಡಿಸಿದ್ದೇವೆ. ಹಾಗೆಯೇ ಎಲ್‌ಪಿಜಿ ಸಿಲಿಂಡರ್ ಮರುಬುಕ್ಕಿಂಗ್ ಅವಧಿಯನ್ನು 21 ದಿನಗಳಿಂದ 25 ದಿನಗಳಿಗೆ ವಿಸ್ತರಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ. ಎಲ್‌ಪಿಜಿ ಪರಿಸ್ಥಿತಿಯನ್ನು ನಿರ್ವಹಿಸಲು ಮತ್ತು ಅಗತ್ಯವಿದ್ದರೆ ಸರಿಯಾದ ಡೈವರ್ಷನ್ ಯೋಜನೆ ರೂಪಿಸಲು ಒಂದು ಸಮಿತಿಯನ್ನು ಕೂಡ ನೇಮಕ ಮಾಡಲಾಗಿದೆ.
ಕಚ್ಚಾ ತೈಲದ ಬಗ್ಗೆಯೂ ಚಿಂತಿಸುವ ಅಗತ್ಯವಿಲ್ಲ ಎಂದು ಶರ್ಮಾ ಹೇಳಿದರು. ತೈಲ ಒಳಹರಿವು ದೈನಂದಿನ ಅಗತ್ಯವಾದ 5.5 ಮಿಲಿಯನ್ ಬ್ಯಾರೆಲ್‌ಗಳನ್ನು ಮೀರುತ್ತಿದೆ. ಹೊರ್ಮುಜ್ ಮುಚ್ಚಲ್ಪಟ್ಟಿದೆ. 40 ದೇಶಗಳಿಂದ ಕಚ್ಚಾ ತೈಲ ಬರುತ್ತಿದೆ ಮತ್ತು ಸಂಸ್ಕರಣಾಗಾರಗಳು ಪೂರ್ಣ ಸಾಮರ್ಥ್ಯದಲ್ಲಿ ಕಾರ್ಯನಿರ್ವಹಿಸುತ್ತಿವೆ ಎಂದು ತಿಳಿಸಿದರು.
ಸೌದಿ ಅರೇಬಿಯಾದ ಎಲ್‌ಪಿಜಿ ಬೆಲೆಗಳು ಶೇ. 33ರಷ್ಟು ಹೆಚ್ಚಾಗಿದೆ ಎಂದು ಶರ್ಮಾ ಹೇಳಿದರು. ಇದು ಜಾಗತಿಕ ಸವಾಲು, ಹೀಗಾಗಿ ಅಗತ್ಯ ವಲಯಗಳಿಗೆ ಆದ್ಯತೆ ನೀಡಲಾಗುತ್ತದೆ ಎಂದು ಅವರು ಹೇಳಿದರು.
ಹೊರ್ಮುಜ್ ಜಲಸಂಧಿ ಬಂದಾಗಿದ್ದರೂ ಭಾರತಕ್ಕಿಲ್ಲ ಸಮಸ್ಯೆ; ಎಲ್‌ಪಿಜಿ ಬಿಕ್ಕಟ್ಟು ಬಗೆಹರಿಯಲಿದೆ ಎಂದ ಕೇಂದ್ರ
ಕಟ್ಟಿಗೆ ಮತ್ತು ಕಲ್ಲಿದ್ದಲು ಮೊರೆ ಹೋದ ಹೋಟೆಲ್‌ಗಳು
ಮಧ್ಯಪ್ರಾಚ್ಯದಲ್ಲಿ ಇರಾನ್ ಮತ್ತು ಅಮೆರಿಕ-ಇಸ್ರೇಲ್ ನಡುವೆ ನಡೆಯುತ್ತಿರುವ ಭೀಕರ ಯುದ್ಧವು ಭಾರತದ ಅಡುಗೆಮನೆಗಳಿಗೆ ನೇರವಾಗಿ ತಟ್ಟಿದೆ. ಜಗತ್ತಿನ ಅತಿ ಪ್ರಮುಖ ತೈಲ ಮತ್ತು ಅನಿಲ ಸಾಗಾಣಿಕಾ ಮಾರ್ಗವಾದ ಹೊರ್ಮುಜ್ ಜಲಸಂಧಿ ಬಂದ್ ಆಗಿರುವುದರಿಂದ, ಭಾರತಕ್ಕೆ ಆಮದಾಗುತ್ತಿದ್ದ ದ್ರವೀಕೃತ ಪೆಟ್ರೋಲಿಯಂ ಗ್ಯಾಸ್ ಪೂರೈಕೆಯಲ್ಲಿ ಭಾರಿ ವ್ಯತ್ಯಯ ಉಂಟಾಗಿದೆ. ಇದರ ಪರಿಣಾಮವಾಗಿ ಮೆಟ್ರೋ ನಗರಗಳ ಹೋಟೆಲ್‌ಗಳು ಗ್ಯಾಸ್ ಕೊರತೆಯಿಂದ ಕಟ್ಟಿಗೆ ಮತ್ತು ಕಲ್ಲಿದ್ದಲು ಒಲೆಗಳನ್ನು ಬಳಸುವ ಪರಿಸ್ಥಿತಿ ಎದುರಾಗಿದೆ.
ಭಾರತವು ತನ್ನ ಒಟ್ಟು ಎಲ್‌ಪಿಜಿ ಅಗತ್ಯದ ಶೇಕಡಾ 62ರಷ್ಟನ್ನು ವಿದೇಶಗಳಿಂದ ಆಮದು ಮಾಡಿಕೊಳ್ಳುತ್ತದೆ. ಇದರಲ್ಲಿ ಶೇಕಡಾ 90ರಷ್ಟು ಪಾಲನ್ನು ಕತಾರ್, ಯುಎಇ, ಸೌದಿ ಅರೇಬಿಯಾ ಮತ್ತು ಕುವೈತ್‌ನಂತಹ ಮಧ್ಯಪ್ರಾಚ್ಯ ರಾಷ್ಟ್ರಗಳು ಪೂರೈಸುತ್ತವೆ. ಹೊರ್ಮುಜ್ ಜಲಸಂಧಿಯ ಮೇಲೆ ಇರಾನ್ ನಿಯಂತ್ರಣ ಹೊಂದಿರುವುದರಿಂದ ಈ ಮಾರ್ಗದಲ್ಲಿ ಹಡಗುಗಳ ಸಂಚಾರ ಸಂಪೂರ್ಣ ಸ್ಥಗಿತಗೊಂಡಿದೆ.