ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

ಆಹಾರವನ್ನು ಹಬೆಯಲ್ಲೋ ನೀರಲ್ಲೋ ಹೇಗೆ ಬೇಯಿಸಿದರೆ ಒಳ್ಳೆಯದು?

Health Tips: ಯಾವ ರೀತಿಯಿಂದ ಅಡುಗೆ ಮಾಡಿದರೆ ಹೆಚ್ಚು ಪೌಷ್ಟಿಕಾಂಶಗಳನ್ನು ಕಾಪಾಡಿ ಕೊಳ್ಳಬಹುದು? ನೀರಲ್ಲಿ ಬೇಯಿಸುವುದು, ಹಬೆಯಲ್ಲಿ ಬೇಯಿಸುವುದು, ಹುರಿಯುವುದು, ಕರಿ ಯುವುದು, ಕೆಂಡ/ಬೆಂಕಿಯಲ್ಲಿ ಸುಡುವುದು- ಹೀಗೆ ಅಡುಗೆ ಅಟ್ಟುವ ಬಗೆಯಲ್ಲಿ ಹಲವು ಆಯ್ಕೆ ಗಳಿದ್ದಾಗ ಯಾವುದನ್ನು ಆಯ್ದುಕೊಳ್ಳುವುದು? ಅದರ ಸಾಧಕ-ಬಾಧಕಗಳೇನು?

ಆಹಾರವನ್ನು ಹೇಗೆ ಬೇಯಿಸಿದರೆ ಉತ್ತಮ?

ಸಂಗ್ರಹ ಚಿತ್ರ -

Profile
Pushpa Kumari Feb 14, 2026 7:00 AM

ಬೆಂಗಳೂರು,ಫೆ.13: ಆಯ್ಕೆಗಳು ಹೆಚ್ಚಾದರೆ ಸಮಸ್ಯೆಗಳೂ ಹೆಚ್ಚು ಎನ್ನುವ ಮಾತಿದೆ. ಆಯ್ಕೆಯಿಂದಲೇ ಸಮಸ್ಯೆ ಎಂದಲ್ಲ, ಆದರೆ ಯಾವುದನ್ನು ಆಯ್ದುಕೊಳ್ಳುವುದು ಎನ್ನುವ ಸಮಸ್ಯೆ ಕಾಡಬಹುದು. ಉದಾ, ಯಾವ ರೀತಿಯಿಂದ ಅಡುಗೆ ಮಾಡಿದರೆ ಹೆಚ್ಚು ಪೌಷ್ಟಿಕಾಂಶಗಳನ್ನು ಕಾಪಾಡಿಕೊಳ್ಳಬಹುದು? ನೀರಲ್ಲಿ ಬೇಯಿಸುವುದು, ಹಬೆಯಲ್ಲಿ ಬೇಯಿಸುವುದು, ಹುರಿಯುವುದು, ಕರಿಯುವುದು, ಕೆಂಡ/ಬೆಂಕಿಯಲ್ಲಿ ಸುಡುವುದು- ಹೀಗೆ ಅಡುಗೆ ಅಟ್ಟುವ ಬಗೆಯಲ್ಲಿ ಹಲವು ಆಯ್ಕೆಗಳಿದ್ದಾಗ ಯಾವುದನ್ನು ಆಯ್ದುಕೊಳ್ಳುವುದು? ಅದರ ಸಾಧಕ-ಬಾಧಕಗಳೇನು?

ರುಚಿಯನ್ನೇ ಪ್ರಧಾನವಾಗಿ ಇರಿಸಿಕೊಂಡರೆ ಕೆಂಡದಲ್ಲಿ ಸುಡುವುದು, ಕರಿಯುವುದು, ಹುರಿಯುವುದು ಇಂಥವೆಲ್ಲ ಹೆಚ್ಚಿನ ಅಂಕಗಳನ್ನು ಪಡೆದುಕೊಳ್ಳುವುದು ಖಚಿತ. ಕೆಂಡದಲ್ಲಿ ಸುಡುವಾಗಿನ ಘಮ ಮತ್ತು ರುಚಿಯನ್ನು ಬೇರಾವುದೂ ಸರಿಗಟ್ಟಲು ಸಾಧ್ಯವಿಲ್ಲ. ಎಣ್ಣೆಯಲ್ಲಿ ಮುಳುಗಿಸಿ ಕರಿಯುವುದು ಸಹ ರಸನೆಯನ್ನು ತೃಪ್ತಿಪಡಿಸುವ ಸಮರ್ಥ ಮಾರ್ಗ. ಹುರಿಯುವುದರಲ್ಲಿ ಎಣ್ಣೆಯನ್ನು ಕಡಿಮೆ ಮಾಡಿ, ಆರೋಗ್ಯದ ಬಗ್ಗೆಯೂ ಕಾಳಜಿ ತೋರಬಹುದು. ಆದರೆ ಪೌಷ್ಟಿಕಾಂಶಗಳನ್ನು ಹಿಡಿದಿಟ್ಟುಕೊಳ್ಳುವುದು ನಿಮ್ಮ ಆಯ್ಕೆಯಾದರೆ, ಆರೋಗ್ಯಕರ ಮಾರ್ಗಗಳನ್ನು ಹುಡುಕುವವರು ನೀವಾದರೆ, ಈ ಮೂರೂ ದಾರಿಗಳು ನಿಮಗಲ್ಲ. ಜಿಡ್ಡಿಲ್ಲದಂತೆ ಹಬೆಯಲ್ಲಿ ಅಥವಾ ನೀರಿನಲ್ಲಿ ಬೇಯಿಸುವುದು ನಿಮ್ಮ ಸಹಜ ಆಯ್ಕೆಯಾಗಬಹುದು. ಅದರಲ್ಲಿ ಯಾವುದು ಸರಿ?

ನೀರಿನಲ್ಲಿ ಬೇಯಿಸುವುದು: ಇದಕ್ಕೆ ಹೆಚ್ಚಿನ ಪರಿಕರಗಳ ಅಗತ್ಯವಿಲ್ಲ. ಬೆಂಕಿ, ನೀರು, ಪಾತ್ರೆ- ಇವಿಷ್ಟಿದ್ದರೆ ಧಾನ್ಯ, ಕಾಳು, ಬೇಳೆ, ತರಕಾರಿ- ಏನನ್ನಾದರೂ ಬೇಯಿಸಬಹುದು. ಧಾನ್ಯ, ಬೇಳೆ, ಕಾಳುಗಳನ್ನು ಬೇಯಿಸಲು ಭಾರತೀಯರ ನೆಚ್ಚಿನ ಆಯ್ಕೆಯೆಂದರೆ ಪ್ರೆಷರ್‌ ಕುಕ್‌ ಮಾಡುವುದು. ಆದರೆ ಅದನ್ನೇ ತರಕಾರಿಗಳಿಗೆ ಅನ್ವಯಿಸಬೇಕೆಂದಿಲ್ಲವಲ್ಲ. ತರಕಾರಿಗಳನ್ನು ಹದವಾಗಿ ಬೇಯಿಸಬೇಕೆಂದರೆ ಪಾತ್ರೆಯಲ್ಲಿ ನೀರಿಟ್ಟು ಬೇಯಿಸಿಕೊಳ್ಳುವುದೇ ಸಾಕಾಗುತ್ತದೆ. ಆದರೆ ಇದಕ್ಕೊಂದಿಷ್ಟು ಸಾಧಕ-ಬಾಧಕಗಳಿವೆ.

ಸಾಧಕ: ನೀರಿನಲ್ಲಿ ಬೇಯಿಸುವುದರಿಂದ ತರಕಾರಿಯನ್ನು ಅಗತ್ಯಕ್ಕೆ ತಕ್ಕಂತೆ ಮೃದುವಾಗಿಸಿ ಕೊಳ್ಳಲು ಸಾಧ್ಯವಿದೆ. ಹಾಗಾಗಿ ಇದು ಸುಲಭವಾಗಿ ಪಚನವಾಗುತ್ತದೆ. ಬೆಂದ ತರಕಾರಿಯಲ್ಲಿರುವ ನಾರಿನ ಅಂಶವನ್ನು ಕಷ್ಟವಿಲ್ಲದೆಯೇ ಕರುಳು ಉಪಯೋಗಿಸಬಲ್ಲದು. ಜೀರ್ಣಾಂಗಗಳ ಸಮಸ್ಯೆ ಇದ್ದವರಿಗೆ, ರೋಗಿಗಳಿಗೆ, ಮಕ್ಕಳಿಗೆ, ವೃದ್ಧರಿಗೆ ಹೀಗೆ ಬೇಯಿಸುವುದು ನೆಚ್ಚಿನ ಆಯ್ಕೆ. ಕೆಲವು ಬಗೆಯ ಅಡುಗೆಗಳಿಗೆ, ಅಂದರೆ ಸೂಪ್, ಬ್ರಾತ್‌, ಪ್ಯೂರಿ ತಯಾರಿಕೆಗಳಿಗೆ ತರಕಾರಿಗಳನ್ನು ಪೂರ್ಣ ಮೃದುವಾಗುವಷ್ಟು ಬೇಯಿಸಿಕೊಳ್ಳುವುದು ಅಗತ್ಯ. ಅಧಿಕ ಪ್ರಮಾಣದಲ್ಲಿ ಅಡುಗೆ ಸಿದ್ಧಪಡಿಸುವಾಗಲೂ ಇದು ಅನುಕೂಲಕರ ಆಯ್ಕೆ.

ಬಾಧಕ: ಕೆಲವು ಬಗೆಯ ಪೋಷಕಾಂಶಗಳು ನೀರಿನಲ್ಲಿ ಬೇಯಿಸುವಾಗ ನಷ್ಟವಾಗಿಬಿಡುತ್ತವೆ. ಉದಾ, ವಿಟಮಿನ್‌ ಸಿ, ಬೀಟಾ ಕ್ಯಾರೊಟಿನ್‌ ಮುಂತಾದ ಸತ್ವಗಳನ್ನು ನೀರಿನಲ್ಲಿ ಕುದಿಸಿದಾಗ ಕರಗಿಹೋಗುತ್ತವೆ. ಈ ಹಿನ್ನೆಲೆಯಲ್ಲಿ, ತರಕಾರಿ ಬೇಯಿಸಿದ ನೀರನ್ನು ಎಸೆಯದೆ ಬಳಕೆ ಮಾಡಿದರೆ ಒಳ್ಳೆಯದು. ಅಂದರೆ ತರಕಾರಿ ಬೇಯಿಸಿ ಬಸಿದ ನೀರು ಸಹ ಸತ್ವಭರಿತವಾದದ್ದು. ನೀರಿನಲ್ಲಿ ಬೆಂದ ತರಕಾರಿಗಳ ಬಣ್ಣ, ರುಚಿ, ಘಮಗಳೆಲ್ಲ ಒಂದಿಷ್ಟು ಪ್ರಮಾಣದಲ್ಲಿ ನಷ್ಟವಾಗುತ್ತವೆ.

Health Tips: ಕಸೂರಿ ಮೇಥಿ: ರುಚಿಗಷ್ಟೇ ಅಲ್ಲ, ಆರೋಗ್ಯಕ್ಕೂ ಬೇಕು!

ಹಬೆಯಲ್ಲಿ ಬೇಯಿಸುವುದು: ಇದಕ್ಕೊಂದಿಷ್ಟು ಪರಿಕರಗಳು ಬೇಕು. ಗುಣಮಟ್ಟದ ಸ್ಟೀಮರ್‌ ಇಲ್ಲದಿದ್ದರೆ ಈ ಕೆಲಸ ಕಷ್ಟವೆನಿಸುತ್ತದೆ. ಅದನ್ನೊಮ್ಮೆ ಹೊಂದಿಸಿಕೊಂಡರೆ ಸ್ಟೀಮಿಂಗ್‌ ಒಳ್ಳೆಯ ಆಯ್ಕೆ. ಕಿಂಚಿತ್‌ ಜಿಡ್ಡೂ ಇಲ್ಲದಂತೆ, ಆರೋಗ್ಯಕ್ಕೆ ಪೂರಕವಾದ ರೀತಿಯಲ್ಲಿ ತರಕಾರಿಗಳನ್ನು ಬೇಯಿಸಿಕೊಳ್ಳಬಹುದು. ಆದರೆ ಇದಕ್ಕೂ ಒಂದಿಷ್ಟು ಸಾಧಕ-ಬಾಧಕಗಳಿವೆ. ಏನವು?

ಸಾಧಕ: ಯಾವುದೇ ರೀತಿಯ ಅಡುಗೆಯಲ್ಲೂ ಅತಿ ಹೆಚ್ಚಿನ ಪ್ರಮಾಣದ ಸತ್ವಗಳನ್ನು ಉಳಿಸಿಕೊಳ್ಳಲು ಸಾಧ್ಯವಾಗುವುದು ಸ್ಟೀಮಿಂಗ್‌ನಲ್ಲಿ. ಜೀವಸತ್ವಗಳು, ಉತ್ಕರ್ಷಣ ನಿರೋಧಕಗಳೆಲ್ಲ ಹಬೆಯಲ್ಲಿ ಬೇಯಿಸಿದಾಗ ಹೆಚ್ಚೇನೂ ನಷ್ಟವಾಗುವುದಿಲ್ಲ. ತರಕಾರಿಗಳ ಬಣ್ಣ, ರುಚಿ, ಘಮ, ಸತ್ವ ಎಲ್ಲವನ್ನೂ ಹಾಳಾಗದಂತೆ ಉಳಿಸಿಕೊಳ್ಳಲು ಸಾಧ್ಯವಿದೆ. ಬೆಂದು ಮೆತ್ತಗಾದ ತರಕಾರಿಗಳು ಇಷ್ಟವಿಲ್ಲದವರು ಸ್ಟೀಮಿಂಗ್‌ ಮೂಲಕ ಸುಟಿಯಾದ ತರಕಾರಿಗಳನ್ನೇ ತಿನ್ನಬಹುದು.

ಬಾಧಕ: ದೊಡ್ಡ ಪ್ರಮಾಣದಲ್ಲಿ ಸ್ಟೀಮಿಂಗ್‌ ಮಾಡುವುದಕ್ಕೆ ದೊಡ್ಡ ಸ್ಟೀಮರ್‌ಗಳ ಲಭ್ಯತೆ ಕಷ್ಟವಾಗಬಹುದು. ಜೀರ್ಣಾಂಗಗಳ ಸಮಸ್ಯೆ ಇದ್ದವರಿಗೆ, ಬಾಯಲ್ಲಿ ಹಲ್ಲಿಲ್ಲದವರಿಗೆ ಹಬೆಯಲ್ಲಿ ಬೇಯಿಸಿದ ತರಕಾರಿಗಳಿಗಿಂತ ಸುಲಭವಾಗಿ ಜೀರ್ಣವಾಗುವಂತೆ ನೀರಲ್ಲಿ ಬೆಂದ ತರಕಾರಿಗಳೇ ಸೂಕ್ತ. ಹೆಚ್ಚಿನ ನಾರು ಜೀರ್ಣವಾಗದವರಿಗೆ ಇದೇನೂ ಅನುಕೂಲಕರ ಅಯ್ಕೆಯಲ್ಲ.