ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

Health Tips: ಬೆಳೆಯುವ ಮಕ್ಕಳ ಮೂಳೆಗಳ ಆರೈಕೆ ಹೇಗೆ?

Health Tips: ಬೆಳೆಯುವ ಮಕ್ಕಳಿಗೆ ಬೇಕಾಗುವ ಪೋಷ ಕಾಂಶಗಳನ್ನು ತೂಗಿಸುವುದು ಇಂದಿನ ಪೋಷಕರಿಗೆ ದೊಡ್ಡ ಸವಾಲು. ಬೇಕಾದ ಗುಜರಿ ತಿಂಡಿಗಳನ್ನು ನಿಮಿಷಾರ್ಧದಲ್ಲಿ ಆರ್ಡರ್‌ ಮಾಡುವ ಸೌಖ್ಯ ಬೆರಳ ತುದಿಯಲ್ಲಿ ಇರುವಾಗ, ಆರೋಗ್ಯಕರ ತಿಂಡಿಗಳನ್ನು ಮಕ್ಕಳಿಗೆ ತಿನಿಸುವುದು ಸವಾಲಾಗಬಹುದು. ಅದರಲ್ಲೂ ಬೆಳೆಯುವ ವಯಸ್ಸಿನಲ್ಲಿ ಮೂಳೆಗಳ ಬೆಳವಣಿಗೆಗೆ ಅಗತ್ಯವಾದದ್ದೇನು?

ಮಕ್ಕಳ ಮೂಳೆಗಳ ಆರೈಕೆ ಹೇಗಿರಬೇಕು?

ಇಂಟರ್ ನೆಟ್ ಚಿತ್ರ -

Profile
Pushpa Kumari Oct 24, 2026 7:00 AM

ನವದೆಹಲಿ: ಬೆಳೆಯುವ ಮಕ್ಕಳಿಗೆ ಬೇಕಾಗುವ ಪೋಷಕಾಂಶಗಳನ್ನು ತೂಗಿಸುವುದು ಇಂದಿನ ಪೋಷಕರಿಗೆ ದೊಡ್ಡ ಸವಾಲು. ಬೇಕಾದ ಗುಜರಿ ತಿಂಡಿಗಳನ್ನು ನಿಮಿಷಾರ್ಧದಲ್ಲಿ ಆರ್ಡರ್‌ ಮಾಡುವ ಸೌಖ್ಯ ಬೆರಳ ತುದಿಯಲ್ಲಿ ಇರುವಾಗ, ಆರೋಗ್ಯಕರ ತಿಂಡಿಗಳನ್ನು ಮಕ್ಕಳಿಗೆ (Children Bone) ತಿನಿಸುವುದು ಸವಾಲಾಗಬಹುದು. ಅದರಲ್ಲೂ ಬೆಳೆಯುವ ವಯಸ್ಸಿನಲ್ಲಿ ಮೂಳೆಗಳ ಬೆಳವಣಿಗೆಗೆ ಅಗತ್ಯವಾದದ್ದೇನು? ಹದಿಹರೆಯ ಮುಗಿಯುವವರೆಗೂ ಮೂಳೆಗಳ ಬೆಳವಣಿಗೆ ನಡೆ ಯುತ್ತಿರುವುದರಿಂದ ಈ ವಯೋಮಾನದವರು ಮಾಡಬೇಕಾದ ಕಾಳಜಿ ಏನು?

ಈಗಾಗಲೇ ಹದಿಹರೆಯದ ಒಳಗಿನ ಮಕ್ಕಳಿಗೂ ಪೂರಕ ಪೌಷ್ಟಿಕಾಂಶಗಳನ್ನು ನೀಡುವ ಪರಿಪಾಠ ಹೆಚ್ಚುತ್ತಿದೆ. ಅದರಲ್ಲೂ ಆ ಮಕ್ಕಳು ಕ್ರೀಡೆಗಳಲ್ಲಿ ಸತತವಾಗಿ ತೊಡಗಿಸಿಕೊಂಡವರು ಎಂದಾದರೆ ಪ್ರೊಟೀನ್‌, ಖನಿಜ ಮತ್ತು ವಿಟಮಿನ್‌ ಪೂರಕಗಳನ್ನು ನೀಡುವಂತೆ ಎಷ್ಟೋ ಮಂದಿ ಕೋಚ್‌ಗಳೇ ಪಾಲಕರಿಗೆ ಹೇಳುತ್ತಾರೆ. ಆದರೆ ಕೆಲವೊಂದು ಪ್ರೊಟೀನ್‌ ಪೂರಕಗಳಲ್ಲಿ ಕಂಡುಬರುವಂಥ ಅಂಶಗಳು ಮಕ್ಕಳ ಬೆಳವಣಿಗೆಯ ಸಂದರ್ಭದಲ್ಲಿನ ನೈಸರ್ಗಿಕ ಚೋದಕಗಳಿಗೆ ಅಡ್ಡಿಪಡಿಸಲೂ ಬಹುದು. ಹಾಗಾಗಿ ವೈದ್ಯರ ಮಾರ್ಗದರ್ಶನ ವಿಲ್ಲದೆ ನೀಡುವ ಇಂಥ ಯಾವುದೇ ಪೂರಕಗಳು ಮಕ್ಕಳಿಗೆ ಮಾರಕವಾಗಬಹುದು. ಸತ್ವಗಳನ್ನು ಆಹಾರದ ಮೂಲಕವೇ ನೀಡುವುದು ಬೆಳೆಯುವ ಎಳೆಯರಿಗೆ ಸೂಕ್ತ.

Health Tips: ಈ ಆರೋಗ್ಯ ಸಮಸ್ಯೆ ಇದ್ದವರು ಅಪ್ಪಿತಪ್ಪಿಯೂ ಮಖಾನ ಸೇವಿಸಬೇಡಿ

ಕ್ಯಾಲ್ಶಿಯಂ: ಬೆಳೆಯುತ್ತಿರುವ ಮೂಳೆಗಳಿಗೆ ಸಾಕಷ್ಟು ಪ್ರೊಟೀನ್‌ ಅಗತ್ಯವಿದೆ. ಹಾಗಾಗಿ ಹಾಲು, ಮೊಸರು, ಚೀಸ್‌, ಪನೀರ್‌, ರಾಗಿ, ಎಳ್ಳು, ಹಸಿರು ತರಕಾರಿಗಳಂಥ ಪ್ರೊಟೀನ್‌ಭರಿತ ಆಹಾರಗಳನ್ನು ಪ್ರತಿನಿತ್ಯ ಸೇವಿಸಲು ಮಕ್ಕಳನ್ನು ಪ್ರೋತ್ಸಾಹಿಸಿ.

ವಿಟಮಿನ್‌ ಡಿ: ಸೇವಿಸುವ ಕ್ಯಾಲ್ಶಿಯಂ ಖನಿಜವನ್ನು ಹೀರಿಕೊಳ್ಳಲು ಅಗತ್ಯವಾಗಿದ್ದು ಡಿ ಜೀವಸತ್ವ. ಹಾಗಾಗಿ ಮಕ್ಕಳನ್ನು ಬಿಸಿಲಿನಲ್ಲಿ ಆಡಲು ಪ್ರೋತ್ಸಾಹಿಸಿ. ಇದಲ್ಲದೆ, ಅಣಬೆ, ಮೊಟ್ಟೆ, ಕೆಲವು ಜಾತಿಯ ಮೀನುಗಳಲ್ಲೂ ವಿಟಮಿನ್‌ ಡಿ ದೊರೆಯುತ್ತದೆ. ಆಯಾ ಮಕ್ಕಳ ಆಹಾರಕ್ರಮಕ್ಕೆ ಅನುಗುಣವಾಗಿ ಇವುಗಳನ್ನು ಬಳಸಬಹುದು. ಹಾಗೂ ವಿಟಮಿನ್‌ ಡಿ ಕೊರತೆಯಿದೆ ಎನಿಸಿದರೆ ರಕ್ತಪರೀಕ್ಷೆಯ ಮೂಲಕ ಅದನ್ನು ತಿಳಿದುಕೊಂಡು, ವೈದ್ಯರ ಸಲಹೆ ಪಡೆಯಬಹುದು.

ವ್ಯಾಯಾಮ: ಬೆಳೆಯುವ ದೇಹಕ್ಕೆ ಮೂಳೆಗಳು ಸದೃಢವಾಗುವುದು ಮಾತ್ರವೇ ಮುಖ್ಯವಲ್ಲ; ಸ್ನಾಯುಗಳು ವೃದ್ಧಿಸಬೇಕು, ಶರೀರದ ಸಮತೋಲನವೂ ಸ್ಥಿರಗೊಳ್ಳಬೇಕು. ಈ ಎಲ್ಲವನ್ನೂ ಸಾಧಿಸುವುದಕ್ಕೆ ಇರುವ ಒಂದೇ ದಾರಿಯೆಂದರೆ ವ್ಯಾಯಾಮ. ಆಡುವುದು, ಓಡುವುದು, ಸ್ಕಿಪ್ಪಿಂಗ್‌, ಸೈಕಲ್‌ ಹೊಡೆಯುವುದು, ಈಜು, ನೃತ್ಯ ಮುಂತಾದ ಯಾವುದೇ ಅವರಿಗಿಷ್ಟವಾಗುವ ಚಟುವಟಿಕೆಯಲ್ಲಿ ಕಡ್ಡಾಯವಾಗಿ ಅವರನ್ನು ತೊಡಗಿಸಲೇಬೇಕು. ಬಾಲ್ಯ ಇರುವುದು ಆಡುವುದಕ್ಕೆ, ಮೊಬೈಲ್‌ ನೋಡುವುದಕ್ಕಲ್ಲ.

ನಿದ್ದೆ: ಬೆಳೆಯುವುದಕ್ಕೆ ಅತಿ ಅಗತ್ಯವಾಗಿ ಬೇಕಾದಂಥ ವಿಷಯಗಳಲ್ಲಿ ನಿದ್ದೆಯನ್ನು ಲೆಕ್ಕಕ್ಕೆ ಹಿಡಿಯುವುದೇ ಅಪರೂಪ. ಮಕ್ಕಳ ವಯಸ್ಸಿಗೆ ಅನುಗುಣವಾಗಿ ಅಗತ್ಯವಿರುವಷ್ಟು ನಿದ್ದೆಯನ್ನು ಅವರು ಮಾಡಲೇಬೇಕು. ಬೆಳವಣಿಗೆ ಚುರುಕಾಗುವುದೇ ದೇಹದ ವಿಶ್ರಾಂತ ಸಮಯದಲ್ಲಿ. ಹಾಗಾಗಿ ನಿದ್ದೆಗೆ ಅಡ್ಡಿಯಾಗುವಂಥ ಎಲ್ಲವನ್ನೂ ಬದಿಗೆಸೆದು, ನಿತ್ಯವೂ ನಿದ್ದೆಗೊಂದು ನಿಗದಿತ ಸಮಯವನ್ನು ಪಾಲಿಸಲು ಮಕ್ಕಳಿಗೆ ತಿಳಿಹೇಳಿ.

ಸಮತೋಲಿತ ಆಹಾರ: ಎಲ್ಲಕ್ಕಿಂತ ದೊಡ್ಡ ಕಷ್ಟ ಇರುವುದು ಇದೇ ಭಾಗದಲ್ಲಿ ಬಹಳಷ್ಟು ಮಕ್ಕಳು ಒಳ್ಳೆಯ ಆಹಾರವನ್ನು ಒಲ್ಲೆನೆನ್ನುತ್ತಾರೆ. ಇನ್ನಷ್ಟು ಮಕ್ಕಳು ನಾನಾ ರೀತಿಯ ಅಲರ್ಜಿಗಳಿಂದ ಬಳಲುತ್ತಾ ಸತ್ವಗಳಿಂದ ವಂಚಿತರಾಗಿರುತ್ತಾರೆ. ಉದಾ, ಡೇರಿ ಉತ್ಪನ್ನಗಳು, ಕಾಯಿ-ಬೀಜಗಳು, ಅಣಬೆಗಳು, ಗೋಧಿ ಹೀಗೆ ಹಲವು ಅಗತ್ಯ ಸತ್ವಗಳು ಮಕ್ಕಳಿಗೆ ದೊರೆಯದೆ ಹೋಗಬಹುದು. ಇದಕ್ಕೆ ಬದಲಿಗಳನ್ನು ವೈದ್ಯರು ಸೂಚಿಸುತ್ತಾರೆ. ಇಂಥ ಎಲ್ಲಾ ಸಂರ್ಭಗಳಲ್ಲೂ ಸಕ್ಕರೆಭರಿತ ಪಾನೀಯಗಳು, ಸೋಡಾ, ಕೆಫೀನ್‌ಗಳು, ಚಿಪ್ಸ್‌ನಂಥ ಸಂಸ್ಕರಿತ ಆಹಾರಗಳು, ಪ್ಯಾಕ್‌ ಮಾಡಿದ ತಿನಿಸುಗಳು ಮಾಡುವ ಹಾನಿಯನ್ನು ಮಕ್ಕಳಿಂದ ದೂರ ಮಾಡಿ.