Health Tips: ಗರ್ಭಕೊರಳಿನ ಕ್ಯಾನ್ಸರ್ ಬಗ್ಗೆ ನಮಗೆಷ್ಟು ಗೊತ್ತು?
ಗರ್ಭಕೊರಳಿನ ಕ್ಯಾನ್ಸರ್ ಇದು ಯಾವುದೇ ವಯಸ್ಸಿನವರನ್ನೂ ಬಾಧಿಸಬಹುದಾದರೂ, ೩೦ರ ನಂತರದ ಮಹಿಳೆಯನ್ನು ಬಾಧಿಸುವುದು ಹೆಚ್ಚು. ಸೂಕ್ತ ಮುನ್ನೆಚ್ಚರಿಕೆ ತೆಗೆದುಕೊಂಡರೆ, ಗರ್ಭಕೊರಳಿನ ಕ್ಯಾನ್ಸರ್ ಬಾರದಂತೆ ತಡೆಯುವುದಕ್ಕೆ ಸಾಧ್ಯವಿದೆ. ನಿಯಮಿತ ತಪಾಸಣೆಯಿಂದ ಕೆಲವು ರೀತಿಯ ಕ್ಯಾನ್ಸರ್‌ಗಳನ್ನು ಪ್ರಾರಂಭಿಕ ಹಂತದಲ್ಲಿ ಅಥವಾ ಪ್ರಾರಂಭವಾಗುವ ಮುನ್ನವೇ ಪತ್ತೆ ಮಾಡಬಹುದು.

Cervical cancer

ನವದೆಹಲಿ: ನಮ್ಮ ಆರೋಗ್ಯ ರಕ್ಷಣೆಯಲ್ಲಿ (Health Tips) ಹಲವು ವಿಷಯಗಳಿವೆ. ಒಂದು, ಸರಿಯಾದ ಸತ್ವಯುತ ಆಹಾರವನ್ನು ತೆಗೆದುಕೊಳ್ಳುವುದು, ತಪ್ಪದೆ ವ್ಯಾಯಾಮ ಮಾಡಿ ದೈಹಿಕ ಕ್ಷಮತೆಯನ್ನು ಕಾಪಾಡಿಕೊಳ್ಳುವುದು ಮತ್ತು ನಿಯಮಿತವಾಗಿ ತಪಾಸಣೆಗಳಿಗೆ ಒಳಗಾಗುವುದು- ಈ ಮೂರು ವಿಷಯಗಳನ್ನು ಪಾಲಿಸುವುದು ಆರೋಗ್ಯ ರಕ್ಷಣೆಯಲ್ಲಿ ಮಹತ್ತರ ಪಾತ್ರ ವಹಿಸುತ್ತವೆ. ಇದರಿಂದ ಮುಂದೆ ಬರಬಹುದಾದ ಬಹಳಷ್ಟು ತೊಂದರೆಗಳನ್ನು ಬುಡದಲ್ಲೇ ಕತ್ತರಿಸ ಬಹುದು. ನಿಯಮಿತ ತಪಾಸಣೆಯಿಂದ ಕೆಲವು ರೀತಿಯ ಕ್ಯಾನ್ಸರ್‌ಗಳನ್ನು ಪ್ರಾರಂಭಿಕ ಹಂತದಲ್ಲಿ ಅಥವಾ ಪ್ರಾರಂಭ ವಾಗುವ ಮುನ್ನವೇ ಪತ್ತೆ ಮಾಡಬಹುದು. ಉದಾ, ಸರ್ವೈಕಲ್ ಕ್ಯಾನ್ಸರ್ ಅಥವಾ ಗರ್ಭಕೊರಳಿನ ಕ್ಯಾನ್ಸರ್. ಇದು ಯಾವುದೇ ವಯಸ್ಸಿನವರನ್ನೂ ಬಾಧಿಸಬಹುದಾದರೂ, ೩೦ರ ನಂತರದ ಮಹಿಳೆಯನ್ನು ಬಾಧಿಸುವುದು ಹೆಚ್ಚು. ಸೂಕ್ತ ಮುನ್ನೆಚ್ಚರಿಕೆ ತೆಗೆದುಕೊಂಡರೆ, ಗರ್ಭಕೊರಳಿನ ಕ್ಯಾನ್ಸರ್ ಬಾರದಂತೆ ತಡೆಯುವುದಕ್ಕೆ ಸಾಧ್ಯವಿದೆ. ಈ ಬಗ್ಗೆ ಇಲ್ಲಿವೆ ವಿವರಗಳು.
ವೈರಸ್ ಕಾರಣ: ಹ್ಯೂಮನ್ ಪ್ಯಾಪಿಲೋಮ ವೈರಸ್ ಅಥವಾ ಎಚ್‌ಪಿವಿ ಎಂದು ಕರೆಯಲಾಗುವ ವೈರಸ್‌ನಿಂದ ಗರ್ಭಕಂಠದ ಕ್ಯಾನ್ಸರ್ ಮಹಿಳೆಯರಲ್ಲಿ ಕಾಣಿಸಿಕೊಳ್ಳುತ್ತದೆ. ಲೈಂಗಿಕವಾಗಿ ಸಕ್ರಿಯರಾಗಿರುವವರಲ್ಲಿ ಈ ವೈರಸ್ ಹರಡುತ್ತದೆ. ಒಮ್ಮೆ ವೈರಸ್ ಬಂದ ಮೇಲೆ ಹಲವಾರು ವರ್ಷಗಳ ನಂತರ ಗರ್ಭಕೋಶದ ಕಂಠದಲ್ಲಿ ಕ್ಯಾನ್ಸರ್ ಲಕ್ಷಣಗಳು ಕಾಣಿಸಿಕೊಳ್ಳುತ್ತವೆ. ಏಷ್ಯಾ ಖಂಡದಲ್ಲಿ ಮಹಿಳೆಯರು ತುತ್ತಾಗುತ್ತಿರುವ ಕ್ಯಾನ್ಸರ್‌ಗಳ ಪೈಕಿ ಮುಂಚೂಣಿಯಲ್ಲಿ ಸರ್ವೈಕಲ್ ಕ್ಯಾನ್ಸರ್ ಸಹ ಒಂದು. ಗ್ರಾಮೀಣ ಮತ್ತು ನಗರ ಭಾಗಗಳೆಂಬ ವ್ಯತ್ಯಾಸವಿಲ್ಲದಂತೆ ಈ ಸಮಸ್ಯೆ ಕಾಣಿಸಿಕೊಳ್ಳುತ್ತಿದೆ.
ಲಕ್ಷಣಗಳೇನು?: ಪ್ರಾರಂಭದಲ್ಲಿ ಈ ಕ್ಯಾನ್ಸರ್ ಯಾವುದೇ ಲಕ್ಷಣಗಳನ್ನು ತೋರುವುದಿಲ್ಲ ಎನ್ನುವುದು ಸಮಸ್ಯೆ ಯನ್ನು ಹೆಚ್ಚಿಸುತ್ತದೆ. ರೋಗ ಮುಂದುವರಿದಂತೆ, ಋತುಚಕ್ರಗಳ ನಡುವಿನ ಅವಧಿಯಲ್ಲಿ ರಕ್ತಸ್ರಾವ ಆಗುವುದು, ಲೈಂಗಿಕ ಕ್ರಿಯೆಯ ಸಂದರ್ಭದಲ್ಲಿ ನೋವು ಅಥವಾ ರಕ್ತಸ್ರಾವ, ಮೂತ್ರದಲ್ಲಿನ ರಕ್ತ, ರಜೋನಿವೃತ್ತಿಯ ನಂತರ ರಕ್ತಸ್ರಾವ, ಕಿಬ್ಬೊಟ್ಟೆಯಲ್ಲಿ ನೋವು, ಬೆನ್ನಿನ ಕೆಳಭಾಗದಲ್ಲಿ ನೋವು- ಇಂಥ ಲಕ್ಷಣಗಳು ಕಾಣುತ್ತವೆ. ಆಗ ತುರ್ತಾಗಿ ಸ್ತ್ರೀರೋಗ ತಜ್ಞರನ್ನು ಕಾಣಬೇಕಾಗುತ್ತದೆ.
ಲಸಿಕೆ ಇದೆ: ಎಚ್‌ಪಿವಿ ರೋಗಾಣುವಿನಿಂದ ಬರುವ ಗರ್ಭಕೊರಳಿನ ಕ್ಯಾನ್ಸರ್ ತಡೆಯಲು ಸಾಧ್ಯವಿದೆ. ಇದಕ್ಕಾಗಿ ಪರಿಣಾಮಕಾರಿ ಲಸಿಕೆ ಲಭ್ಯವಿದ್ದು, 9-14 ವರ್ಷ ವಯೋಮಾನದ ಹೆಣ್ಣು ಮಕ್ಕಳಿಗೆ ಇದನ್ನು ನೀಡಿದರೆ, ಅತಿ ಹೆಚ್ಚಿನ ಪ್ರಮಾಣದಲ್ಲಿ ಯಶಸ್ಸಿದೆ. ಆನಂತರ 24 ವರ್ಷ ವಯಸ್ಸಿನವರೆಗೂ ಮಹಿಳೆಯರು ಇದನ್ನು ಪಡೆಯಬಹುದಾಗಿದ್ದು, ಯಶಸ್ಸಿನ ಪ್ರಮಾಣ ಸಮಾಧಾನಕರವಾಗಿದೆ. ಆನಂತರ 45 ವರ್ಷಗಳವರೆಗೂ ಮಹಿಳೆಯರು ಇದನ್ನು ಪಡೆಯ ಬಹುದಾಗಿದ್ದರೂ ವಯಸ್ಸು ಹೆಚ್ಚಿದಂತೆಲ್ಲಾ ಲಸಿಕೆಯ ಯಶಸ್ಸಿನ ಪ್ರಮಾಣ ಕಡಿಮೆಯಾಗುತ್ತದೆ.
ಏನು ಪರೀಕ್ಷೆ?: ಗರ್ಭ ಕಂಠದ ಕೆಲವು ಅಂಗಾಂಶಗಳನ್ನು ತೆಗೆಯುವ ವೈದ್ಯರು, ಅದನ್ನು ಪರೀಕ್ಷೆ ಮಾಡಿಸುತ್ತಾರೆ. ಅದರಲ್ಲಿ ಯಾವುದಾದರೂ ಅಸ್ವಾಭಾವಿಕ ಬೆಳವಣಿಗೆಗಳು ಇವೆಯೇ ಎಂಬುದನ್ನು ಪರಿಶೀಲಿಸಲಾಗುತ್ತದೆ. ಈಗಾಗಲೇ ಕ್ಯಾನ್ಸರ್ ಬಂದಿರುವುದು ಮಾತ್ರವಲ್ಲ, ಮುಂದಿನ ನಾಲ್ಕಾರು ವರ್ಷಗಳಲ್ಲಿ ಈ ಕೋಶಗಳಲ್ಲಿ ಅನಿಯಂತ್ರಿತ ಬೆಳವಣಿಗೆ ಆಗಬಹುದೇ ಎಂಬುದನ್ನೂ ಈ ಪರೀಕ್ಷೆಯಲ್ಲಿ ಪತ್ತೆ ಮಾಡಬಹುದು. ಹಾಗಾಗಿ ಪ್ರತಿ ಮೂರು ವರ್ಷಗಳಿಗೊಮ್ಮೆ ಪ್ಯಾಪ್ ಸ್ಮೇರ್ ಪರೀಕ್ಷೆ ಯನ್ನು ಮಹಿಳೆಯರು ತಪ್ಪದೆ ಮಾಡಿಸುವುದು ಸೂಕ್ತ. ಈ ಪರೀಕ್ಷೆಯಲ್ಲಿ ಕ್ಯಾನ್ಸರ್ ಸಂಭಾವ್ಯತೆಯನ್ನು ಉದ್ಭವಾವಸ್ಥೆಯಲ್ಲೇ ಪತ್ತೆ ಮಾಡಬಹುದು.
ಇದನ್ನು ಓದಿ:Health Tips: ಗರ್ಭಿಣಿಯರು ʻಇಬ್ಬರಿಗೆ ಆಗುವಷ್ಟುʼ ತಿನ್ನಬೇಕೆ?
ಬದಲಾವಣೆಗಳು: ಬದುಕಿನ ಶೈಲಿಯಲ್ಲಿನ ಕೆಲವು ಬದಲಾವಣೆಗಳು ನಮ್ಮನ್ನು ಇಂಥ ರೋಗಗಳಿಂದ ದೂರ ಇರಿಸುತ್ತವೆ. ಸುರಕ್ಷಿತ ಲೈಂಗಿಕ ಅಭ್ಯಾಸಗಳು ಬದುಕಿನಲ್ಲಿ ಅತ್ಯಂತ ಮಹತ್ವವನ್ನು ಹೊಂದಿವೆ. ಒಂದಕ್ಕಿಂತ ಹೆಚ್ಚು ಲೈಂಗಿಕ ಸಂಗಾತಿ ಗಳನ್ನು ಹೊಂದುವುದು ಮತ್ತು ಕಾಂಡೊಮ್ ಬಳಸದೆ ಇರುವುದು ಹಲವು ರೋಗಗಳನ್ನು ತರಬಹುದು. ಅತಿ ಸಣ್ಣ ಪ್ರಾಯ ದಲ್ಲಿ ಲೈಂಗಿಕವಾಗಿ ಸಕ್ರಿಯರಾಗುವುದು ಸಹ ಕ್ಯಾನ್ಸರ್ ಸಹಿತ ಹಲವು ಸಮಸ್ಯೆಗಳನ್ನು ತಂದೊಡ್ಡುತ್ತದೆ. ಸಮತೋಲನ ದಿಂದ ಕೂಡಿದ ತಾಜಾ ಆಹಾರಗಳ ಸೇವನೆ, ಸಿಗರೇಟ್ ಮತ್ತು ಮದ್ಯಗಳನ್ನು ದೂರ ಮಾಡುವುದು.. ಈ ನಿಟ್ಟಿನಲ್ಲಿ ಅಗತ್ಯ ಕ್ರಮಗಳು,ನಿಯಮಿತವಾದ ವ್ಯಾಯಾಮ ಮತ್ತು ಒತ್ತಡ ನಿವಾರಣೆಯ ಕ್ರಮಗಳು ನಮ್ಮ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತವೆ.