Vishwavani Health: ಉಪಹಾರಕ್ಕೆ ಇಡ್ಲಿ ಸಾಂಬಾರ್ ಬೆಸ್ಟ್; ವೈದ್ಯರು ಹೀಗೆನ್ನುವುದೇಕೆ?
Health Tips: ಹುಷಾರಿಲ್ಲದೇ ಇದ್ದಾಗ ವೈದ್ಯರು ಎಲ್ಲ ಆಹಾರದಲ್ಲೂ ಪಥ್ಯೆ ಮಾಡಲು ಹೇಳಿದರೂ ಇಡ್ಲಿಯನ್ನು ಸೇವಿಸಿ ಎನ್ನುತ್ತಾರೆ. ಇದಕ್ಕೆ ಕಾರಣ ಹಲವು. ಇಡ್ಲಿ-ಸಾಂಬಾರ್-ಚಟ್ನಿ ಬೆಳಗಿನ ಉಪಹಾರಕ್ಕೆ ಸೂಕ್ತ ಆಹಾರ. ಇದನ್ನು ಸೇವಿಸುವುದರಿಂದ ಆರೋಗ್ಯಕ್ಕೆ ಸಾಕಷ್ಟು ಲಾಭವಿದೆ. ಅವು ಯಾವುದು ಎನ್ನುವ ಕುರಿತು ಮೈಸೂರು ವಿವಿಯ ಜೆನೆಟಿಕ್ಸ್ ಮತ್ತು ಜಿನೋಮಿಕ್ಸ್ ಅಧ್ಯಯನ ವಿಭಾಗದ ಅಧ್ಯಕ್ಷೆ ಡಾ. ಸುತ್ತೂರು ಮಾಲಿನಿ ನೀಡಿರುವ ಮಾಹಿತಿ ಇಲ್ಲಿದೆ.
ಡಾ. ಸುತ್ತೂರು ಮಾಲಿನಿ -
ಬೆಂಗಳೂರು, ಜೂ. 14: ಕಾಲ ಬದಲಾಗಿದೆ. ಈಗ ನಾವು ಮಾತ್ರೆಗಳನ್ನು ಆಹಾರದ ರೀತಿಯಲ್ಲಿ ಸೇವಿಸುತ್ತಿದ್ದೇವೆ. ನಮ್ಮ ಹಿರಿಯರಲ್ಲಿ ಅನೇಕರು ಜೀವಮಾನದಲ್ಲೇ ಆಸ್ಪತ್ರೆಗೆ ಹೋಗದವರು ಕೂಡ ಇದ್ದಾರೆ. ಇದಕ್ಕೆ ಮುಖ್ಯ ಕಾರಣ ಆಹಾರ ಪದ್ಧತಿ. ಯಾವತ್ತೂ ಕೂಡ ಬ್ರೇಕ್ ಫಾಸ್ಟ್ ಸ್ಕಿಪ್ ಮಾಡಲೇಬಾರದು. ಬೆಳಗ್ಗಿನ ಆಹಾರ ಸೇವಿಸದಿರುವುದು ಆರೋಗ್ಯ ಸಮಸ್ಯೆಗೆ ಮೂಲ ಕಾರಣವಾಗಿರುತ್ತದೆ. ಜಗತ್ತಿನಲ್ಲಿ ಅತೀ ಶ್ರೇಷ್ಠ ಮತ್ತು ಉತ್ಕೃಷ್ಟವಾದ ಬ್ರೇಕ್ ಫಾಸ್ಟ್ ಎಂದರೆ ಇಡ್ಲಿ, ಚಟ್ನಿ, ಸಾಂಬಾರ್ ಎನ್ನುತ್ತಾರೆ ಮೈಸೂರು ವಿವಿಯ ಜೆನೆಟಿಕ್ಸ್ ಮತ್ತು ಜಿನೋಮಿಕ್ಸ್ ಅಧ್ಯಯನ ವಿಭಾಗದ ಅಧ್ಯಕ್ಷೆ ಡಾ. ಸುತ್ತೂರು ಮಾಲಿನಿ. 'ವಿಶ್ವವಾಣಿ ಹೆಲ್ತ್' (Vishwavani Health) ಯುಟ್ಯೂಬ್ ಚಾನೆಲ್‌ನಲ್ಲಿ ಕೇಶವ ಪ್ರಸಾದ್ ಅವರೊಂದಿಗಿನ ಸಂದರ್ಶನದಲ್ಲಿ ಮಾತನಾಡಿದ ಅವರು, ಇಡ್ಲಿ, ಚಟ್ನಿ, ಸಾಂಬಾರ್ ನಲ್ಲಿರುವ ವಿಶೇಷತೆಯ ಬಗ್ಗೆ ಮಾಹಿತಿ ಹಂಚಿಕೊಂಡರು.
ಕಾರ್ಬೋಹೈಡ್ರೇಟ್, ಪ್ರೊಟೀನ್‌ನ ಪರಿಪೂರ್ಣ ಮಿಶ್ರಣ ಇಡ್ಲಿ-ಸಾಂಬಾರ್ಚ-ಟ್ನಿ ಹಾಗೂ ಕಿಚಿಡಿ. ಇವೆರಡು ಅತ್ಯುತ್ತಮ ಬ್ರೇಕ್ ಫಾಸ್ಟ್ ರೆಸಿಪಿಗಳು. ಯಾವತ್ತೂ ನಮ್ಮ ಬೆಳಗ್ಗಿನ ಉಪಾಹಾರದಲ್ಲಿ ಕಾರ್ಬೋಹೈಡ್ರೇಟ್ ಪ್ರಮಾಣ 60, ಪ್ರೊಟೀನ್ ಪ್ರಮಾಣ 40 ಇರಬೇಕು ಎಂದು ಅವರು ಹೇಳಿದರು.
ವಿಡಿಯೊ ಇಲ್ಲಿದೆ:
ಭಾರತೀಯರ ಅಡುಗೆ ಮನೆಯೇ ಸೂಕ್ಷ್ಮ ಜೀವವಿಜ್ಞಾನದ ಪ್ರಯೋಗಾಲಯ ಎನ್ನಬಹುದು. ಯಾಕೆಂದರೆ ಇಲ್ಲಿ ಬಳಸುವ ಪ್ರತಿಯೊಂದು ವಸ್ತು, ಪ್ರಮಾಣ, ವಿಧಿವಿಧಾನವು ಕೂಡ ಸಾಕಷ್ಟು ಮಹತ್ವ ಪೂರ್ಣ ಸಂಗತಿಗಳನ್ನು ಒಳಗೊಂಡಿದೆ ಎಂದು ಅವರು ತಿಳಿಸಿದರು.
ಹುಷಾರಿಲ್ಲದೆ ಇದ್ದರೂ ಇಡ್ಲಿ ತಿನ್ನಬಹುದು. ಯಾಕೆಂದರೆ ಇದರಲ್ಲಿ ಹೇರಳವಾದ ಪೌಷ್ಟಿಕಾಂಶವಿದೆ, ಸುಲಭವಾಗಿ ಜೀರ್ಣವಾಗುತ್ತದೆ ಮತ್ತು ಮೆಟಾಬಾಲಿಸಂ ಸ್ಥಿರತೆಯನ್ನು ಕಾಪಾಡುತ್ತದೆ. ಇಡ್ಲಿಯು ಒಳ್ಳೆಯ ಬ್ಯಾಕ್ಟೀರಿಯಾಗಳನ್ನು ಒಳಗೊಂಡಿರುತ್ತದೆ. ಆದರೆ ಹಬೆಯಲ್ಲಿ ಬೇಯುಸುವಾಗ ಅವುಗಳು ಸತ್ತುಹೋದರೂ ಅದರಿಂದ ಉತ್ಪಾದನೆಯಾಗಿರುವ ಒಳ್ಳೆಯ ಅಂಶಗಳು ಇಡ್ಲಿಯಲ್ಲಿ ಉಳಿದುಕೊಂಡಿರುತ್ತದೆ ಎಂದು ಹೇಳಿದರು.
ಬೇಸಿಗೆಯಿಂದ ಮಳೆಗಾಲಕ್ಕೆ: ತಪ್ಪಿಸಬೇಕಾದ ಹತ್ತು ಅಭ್ಯಾಸಗಳು
ಇಡ್ಲಿ ಸೇವನೆಯ ಬಳಿಕ ಅದು ದೊಡ್ಡ ಕರುಳಿನಲ್ಲಿ ಜೀರ್ಣವಾಗುತ್ತದೆ. ಇದರಿಂದ ಸ್ಮಾಲ್ ಚೈನ್ ಫ್ಯಾಟಿ ಆ್ಯಸಿಡ್ ಬಿಡುಗಡೆಯಾಗುತ್ತದೆ. ಇದು ದೇಹಕ್ಕೆ ಬೇಗನೆ ಶಕ್ತಿಯನ್ನು ಕೊಡುತ್ತದೆ ಮತ್ತು ಇದರಿಂದ ಬೊಜ್ಜು ಉಂಟಾಗುವುದಿಲ್ಲ ಎಂದು ಅವರು ತಿಳಿಸಿದರು.
ಸಾಂಬಾರಿನಲ್ಲಿ ಬೇಳೆ, ನುಗ್ಗೆ, ಅರಶಿನ, ಕಾಳು ಮೆಣಸು ಇವೆಲ್ಲ ಪೋಷಕಾಂಶಗಳ ಖನಿಜವಾಗಿದೆ. ದೇಹದಲ್ಲಿರುವ ವಿಷಕಾರಿ ಅಂಶಗಳನ್ನು ತೆಗೆದು ಹಾಕುವ ಗುಣವನ್ನು ಇದು ಹೊಂದಿದೆ. ಇನ್ನು ಚಟ್ನಿಯಲ್ಲಿ ಬಳಸುವ ಕೊಬ್ಬರಿಯಲ್ಲಿರುವ ಲಾರಿಕ್ ಆ್ಯಸಿಡ್ ತಾಯಿಯ ಎದೆ ಹಾಲಿನಲ್ಲಿರುವಂತ ಅಂಶ. ಸೂಕ್ಷ್ಮಾಣುಗಳನ್ನು ಸಾಯಿಸುವ ಶಕ್ತಿ ಇದಕ್ಕೆ ಇದೆ. ಒಗ್ಗರಣೆಗೆ ಬಳಸುವ ತೆಂಗಿನ ಎಣ್ಣೆಯು ವೈರಸ್ ನ ಹೊರಗಿನ ಕವಚವನ್ನು ಒಡೆಯುವ ಶಕ್ತಿ ಇದೆ. ಹೀಗಾಗಿ ಇದನ್ನು ವೈರಸ್ ನಿರೋಧಕವಾಗಿಯೂ ಬಳಸಲಾಗುತ್ತದೆ. ಒಬ್ಬ ವ್ಯಕ್ತಿ ಆರೋಗ್ಯವಾಗಿರಲು ಏನೇನು ಬೇಕು ಎಲ್ಲ ಅಂಶಗಳು ತೆಂಗಿನ ಕಾಯಿಯಲ್ಲಿ ಇದೆ. ಇದರಲ್ಲಿರುವ ಮತ್ತೊಂದು ಪ್ರಮುಖ ಅಂಶವೆಂದರೆ ಮೀಡಿಯಂ ಚೈನ್ ಫ್ಯಾಟಿ ಆ್ಯಸಿಡ್. ಇದು ತಕ್ಷಣವೇ ದೇಹಕ್ಕೆ ಎನರ್ಜಿಯನ್ನು ಕೊಡುತ್ತದೆ ಎಂದು ಅವರು ತಿಳಿಸಿದರು.
ಇಡ್ಲಿ, ಸಾಂಬಾರ್, ಚಟ್ನಿ ಬೆಳಗಿನ ಉಪಹಾರದಲ್ಲಿ ಸೇವಿಸುವುದು ಒಳ್ಳೆಯದು. ಆದರೆ ವಡೆವನ್ನು ಬಿಟ್ಟರೆ ಒಳ್ಳೆಯದು. ಮನೆಯಲ್ಲಿ ಮಾಡಿದ ವಡೆ ಸೇವಿಸಬಹುದು. ಆದರೆ ಅದು ಮಿತಿಯಲ್ಲಿದ್ದರೆ ಉಳ್ಳೆಯದು. ಇನ್ನು ದೋಸೆ ಕೂಡ ಒಳ್ಳೆಯದು. ಆದರೆ ಅತಿಯಾಗಿ ತುಪ್ಪ, ಎಣ್ಣೆ ಬಳಸುವುದು ಒಳ್ಳೆಯದಲ್ಲ ಎಂದರು.
Dr N Someshwara Column: ಬ್ರಿಟಿಷರ ಅಹಂಕಾರವನ್ನು ಮಣಿಸಿದ ಬಂಗಾಳದ ಇಕ್ಕುಳ
ಇಡ್ಲಿ ಮಾಡುವಾಗ ಅಕ್ಕಿ ಮತ್ತು ಉದ್ದಿನ ಪ್ರಮಾಣ 50:50 ಅಥವಾ 60:40 ಇರಬೇಕು. ಇಡ್ಲಿಯಲ್ಲಿ ಹಿಟ್ಟು ಮತ್ತು ತಯಾರಿಸುವ ವಿಧಾನ ಎರಡು ಕೂಡ ಮುಖ್ಯವಾಗಿರುತ್ತದೆ. ಆಗಲೇ ಅದು ದೇಹಕ್ಕೆ ಸರಿಯಾದ ಫಲಿತಾಂಶ ಕೊಡಲು ಸಾಧ್ಯವಾಗುತ್ತದೆ ಎನ್ನುತ್ತಾರೆ ಡಾ. ಸುತ್ತೂರು ಮಾಲಿನಿ.