ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

ಪೋಷಕರು ತಿಳಿದಿರಲೇಬೇಕು ಮಕ್ಕಳ ಮೆದುಳಿನ ಈ ರಹಸ್ಯ

How to Boost Baby Brain Development? ಮಕ್ಕಳು ಬೆಳವಣಿಗೆಯ ಹಂತ ಕುತೂಹಲವಾಗಿರುತ್ತದೆ. ಆದರೆ ಈ ಸಂದರ್ಭದಲ್ಲಿ ಅವರ ಮೆದುಳನ್ನು ಜೋಪಾನ ಮಾಡಿ ನೋಡಿಕೊಳ್ಳಬೇಕಾದ ಜವಾಬ್ದಾರಿ ಪೋಷಕರದ್ದಾಗಿರುತ್ತದೆ. ಇದು ಹೇಗೆ ಎನ್ನುವ ಕುರಿತು ವಿಶ್ವವಾಣಿ ಹೆಲ್ತ್ ಸಂದರ್ಶನದಲ್ಲಿ ಮೈಸೂರು ವಿಶ್ವವಿದ್ಯಾನಿಲಯದ ಜೆನೆಟಿಕ್ ಮತ್ತು ಜೆನಾಮಿಕ್ಸ್ ವಿಭಾಗದ ಪ್ರೊ. ಸುತ್ತೂರು ಎಸ್. ಮಾಲಿನಿ ಹೇಳಿರುವುದು ಹೀಗೆ...

ಮಕ್ಕಳ ಬುದ್ಧಿ ಬೆಳವಣಿಗೆಗೆ ಏನು ಮಾಡಬೇಕು ಗೊತ್ತೆ?

ಪ್ರೊ. ಸುತ್ತೂರು ಎಸ್. ಮಾಲಿನಿ -

ಬೆಂಗಳೂರು, ಫೆ. 8: ತಾಯಿಯ ಗರ್ಭದಲ್ಲಿ (pregnancy) 21ನೇ ದಿನಕ್ಕೆ ಆರಂಭವಾಗುವ ಮಗುವಿನ ಮೆದುಳಿನ (Brain) ಬೆಳವಣಿಗೆ 25 ವರ್ಷಗಳವರೆಗೂ ನಡೆಯುತ್ತದೆ. ಹೀಗಾಗಿ ಹಂತ ಹಂತವಾಗಿ ಅವರಿಗೆ ಬೇಕಾದ ಅರಿವು ನೀಡಬೇಕಿರುವುದು ಪೋಷಕರ ಜವಾಬ್ದಾರಿ. ಮಾನವನ ದೇಹದಲ್ಲಿ ಅತ್ಯಂತ ಸಂಕೀರ್ಣವಾದ ಅಂಗವೆಂದರೆ ಮೆದುಳು. ಅದರ ಬೆಳವಣಿಗೆ ಚೆನ್ನಾಗಿಯಾದರೆ ಮಾತ್ರ ಮನುಷ್ಯನ ಸರ್ವತೋಮುಖ ಬೆಳವಣಿಗೆ ಸಾಧ್ಯ ಎನ್ನುತ್ತಾರೆ ಮೈಸೂರು ವಿಶ್ವವಿದ್ಯಾನಿಲಯದ ಜೆನೆಟಿಕ್ ಮತ್ತು ಜೆನಾಮಿಕ್ಸ್ ವಿಭಾಗದ ಪ್ರೊ. ಸುತ್ತೂರು ಎಸ್. ಮಾಲಿನಿ.

ವಿಶ್ವವಾಣಿ ಹೆಲ್ತ್ ಸಂದರ್ಶನದಲ್ಲಿ ಕೇಶವ್ ಪ್ರಸಾದ್ ಅವರೊಂದಿಗೆ ಮಾತನಾಡಿದ ಅವರು, ಮಗುವಿನ ಮೆದುಳಿನ ಬೆಳವಣಿಗೆ ಸಾಮಾನ್ಯವಾಗಿ ಐದು ತಿಂಗಳ ಒಳಗೆ ನಡೆಯುತ್ತದೆ. ಆರೇಳು ವರ್ಷದೊಳಗೆ ಶೇ. 80ರಷ್ಟು ಮಗುವಿನ ಮೆದುಳಿನ ಬೆಳವಣಿಗೆ ಪೂರ್ಣಗೊಳ್ಳುತ್ತದೆ. ಹೀಗಾಗಿ ಈ ಅವಧಿಯಲ್ಲಿ ಮಗು ತುಂಬಾ ಬುದ್ದಿವಂತವಾಗಿರುತ್ತದೆ ಮತ್ತು ಹೆಚ್ಚು ಚಟುವಟಿಕೆಯಿಂದ ಕೂಡಿರುತ್ತದೆ ಎನ್ನುತ್ತಾರೆ ಮಾಲಿನಿ.

ಪ್ರೊ. ಸುತ್ತೂರು ಎಸ್. ಮಾಲಿನಿ ಅವರೊಂದಿಗಿನ ಸಂದರ್ಶನದ ವಿಡಿಯೊ ಇಲ್ಲಿದೆ:



ಮೆದುಳನ್ನು ಬಳಕೆ ಮಾಡದೇ ಹೋದರೆ ಅದು ನಶಿಸಿ ಹೋಗಲು ಪ್ರಾರಂಭವಾಗುತ್ತದೆ. ಹೀಗಾಗಿಯೇ ಮಕ್ಕಳಿಗೆ ಮೊಬೈಲ್ ಕೊಡಬಾರದು ಎನ್ನುವುದು. ಯಾಕೆಂದರೆ ಇದು ಯೋಚನೆ ಮಾಡುವ ಶಕ್ತಿಯನ್ನು ಕಡಿಮೆ ಮಾಡುತ್ತದೆ. ಆರು ವರ್ಷದೊಳಗಿನ ಮಕ್ಕಳಿಗೆ 30 ಮಿಲಿಯನ್ ಪದಗಳನ್ನು ಕಲಿಯುವ ಸಾಮರ್ಥ್ಯವಿರುತ್ತದೆ. ಯಾಕೆಂದರೆ ಈ ಅವಧಿಯಲ್ಲಿ ಮಕ್ಕಳಲ್ಲಿ ಪ್ರತಿ ಸೆಕೆಂಡಿಗೆ 7,000 ನರಗಳು ಬೆಳವಣಿಗೆ ಆಗ್ತಾ ಇರುತ್ತದೆ ಎಂದು ಅವರು ಹೇಳಿದರು.

ಉಪವಾಸ ಮಾಡಿದ್ರೆ ಕ್ಯಾನ್ಸರ್ ಬರಲ್ವಾ? ವೈದ್ಯರ ಸಲಹೆ ಏನು?

ಮಕ್ಕಳಿಗೆ ಆಟದಲ್ಲಿ ಪಾಠ ಮಾಡಬೇಕು. ಇದರಿಂದ ಅವರು ಸಾಕಷ್ಟು ವಿಷಯಗಳನ್ನು ಕಲಿಯುತ್ತಾರೆ. 0-6 ವರ್ಷದವರೆಗೆ ಮಕ್ಕಳನ್ನು ಹತ್ತಿರ ಇರಿಸಿ. ಮೊಬೈಲ್ ಗಳನ್ನು ದೂರವಿರಿಸಿ. ಪೋಷಕರು ಮಕ್ಕಳ ವಿಚಾರದಲ್ಲಿ ಸಹನೆಯನ್ನು ಕಾಯ್ದುಕೊಳ್ಳುವುದು ತುಂಬಾ ಮುಖ್ಯ. ಅವರ ಪ್ರತಿಯೊಂದು ಚಟುವಟಿಕೆಗಳನ್ನು ನಾವು ತಡೆದುಕೊಳ್ಳಬೇಕು. ಆಗ ಅವರ ಬೆಳವಣಿಗೆ ಚೆನ್ನಾಗಿ ನಡೆಯುತ್ತದೆ ಎಂದು ಅವರು ತಿಳಿಸಿದರು.

ಶಿಸ್ತು ಕಲಿಸಿ

6- 13ರ ವರ್ಷದವರೆಗೆ ಮಕ್ಕಳಿಗೆ ಶಿಸ್ತು ಕಲಿಸಬೇಕು. ಹಾಸಿಗೆಯನ್ನು ಮಡಚಿಡುವುದು, ರೂಮ್ ಸ್ವಚ್ಛ ಮಾಡಿಸುವುದು, ಪಾತ್ರೆ ತೊಳೆಯುವುದು ಇತ್ಯಾದಿ. ಇದಕ್ಕಾಗಿ ಹೊಡೆದು, ಬಯ್ದು ಹೇಳುವುದಲ್ಲ. ಶಾಂತಿಯಿಂದ ನಾವು ಮಾಡುವ ಕೆಲಸದಲ್ಲಿ ಅವರನ್ನು ನಮ್ಮ ಜತೆಗೆ ಸೇರಿಸಬೇಕು ಎಂದರು.

ಈ ಅವಧಿಯು ಮಕ್ಕಳ ಕಲಿಕೆ ಅವಧಿಯಾಗಿರುತ್ತದೆ. ಬದುಕಿನಲ್ಲಿ ಶಿಸ್ತು ಅನ್ನು ಅವರು ಇದೇ ಅವಧಿಯಲ್ಲಿ ಕಲಿಯುತ್ತಾರೆ. ಮಕ್ಕಳಿಗೆ ಪ್ರತಿಯೊಂದು ಕಲಿಕೆ ವಿಚಾರವನ್ನು ನಾವು ಅವರಿಗೆ ಈ ಸಂದರ್ಭದಲ್ಲಿ ಕೊಡಬೇಕು. ಅವರ ಕೈಗೆ ಮನೆಯ ಲೆಕ್ಕದ ಪುಸ್ತಕವನ್ನು ನೀಡಬೇಕು. ಇದರಿಂದ ಅವರು ಜವಾಬ್ದಾರರಾಗುತ್ತಾರೆ ಎಂದು ತಿಳಿಸಿದರು.

ಸ್ನೇಹಿತರ ರೀತಿ ನೋಡಿ

13 ವರ್ಷದ ಬಳಿಕ ಮಕ್ಕಳನ್ನು ನಾವು ಸ್ನೇಹಿತರ ರೀತಿ ನೋಡಿಕೊಳ್ಳಬೇಕು. ಸಮಸ್ಯೆಗಳ ಬಗ್ಗೆ ಅವರಲ್ಲಿ ಮುಕ್ತವಾಗಿ ಚರ್ಚಿಸಬೇಕು. ಕಲಿಕೆಗೆ ಪೂರಕವಾದ ವಸ್ತುಗಳನ್ನು ಕೊಡಬೇಕು. ಇದು ಹರೆಯದ ಹಂತ. ಈ ಸಂದರ್ಭದಲ್ಲಿ ಅವರನ್ನು ನಿಯಂತ್ರಿಸುವುದು ತುಂಬಾ ಕಷ್ಟ. ಯಾಕೆಂದರೆ ಅವರಲ್ಲಿ ಸಿಟ್ಟು ಹೆಚ್ಚಾಗಿರುತ್ತದೆ. ಇದು ಹಾರ್ಮೋನ್‌ಗಳ ವ್ಯತ್ಯಾಸದಿಂದ ಆಗುತ್ತದೆ ಎಂಬುದನ್ನು ಪೋಷಕರು ಅರ್ಥ ಮಾಡಿಕೊಳ್ಳಬೇಕು ಎಂದು ಪ್ರೊ. ಸುತ್ತೂರು ಎಸ್. ಮಾಲಿನಿ ಸಲಹೆ ನೀಡಿದರು.

ವೇಗನ್ ಆಹಾರ ಕ್ರಮ ಆರೋಗ್ಯಕ್ಕೆ ಒಳಿತೇ? ವೈದ್ಯರ ಸಲಹೆ ಏನು?

ಈ ಅವಧಿಯಲ್ಲಿ ಸಾಮಾನ್ಯವಾಗಿ ಪೋಷಕರು ಮತ್ತು ಮಕ್ಕಳ ನಡುವೆ ತಪ್ಪು ತಿಳುವಳಿಕೆ ಹೆಚ್ಚಾಗುತ್ತದೆ. ಒಳ್ಳೆಯ ಸಂಸ್ಕಾರ ಕೊಟ್ಟಾಗ ಮಗು ಉತ್ತಮ ರೀತಿಯಲ್ಲಿ ಬೆಳೆಯುತ್ತದೆ. ಇದಕ್ಕಾಗಿ ನಾವು ಅವರಿಗೆ ಒಳ್ಳೆಯ ಅಭ್ಯಾಸಗಳನ್ನು ಮಾಡಿಸಬೇಕು. ಮಕ್ಕಳೊಂದಿಗೆ ಪೋಷಕರು ಕೂಡ ಬೆಳೆಯಬೇಕು ಎಂದು ಅವರು ಹೇಳಿದರು.

ಮಾನವನ ದೇಹದ ಪ್ರತಿಯೊಂದು ಅಂಗವೂ ದುರಸ್ತಿಯಾಗುತ್ತದೆ. ಆದರೆ ಮೆದುಳು ಆಗುವುದಿಲ್ಲ. ಹೀಗಾಗಿ ಮಕ್ಕಳ ಮೆದುಳನ್ನು ಜೋಪಾನ ಮಾಡಬೇಕು. ಆರೋಗ್ಯಕರವಾಗಿ ಬೆಳೆಸಬೇಕು ಎನ್ನುತ್ತಾರೆ ಮಾಲಿನಿ.