ಕಾಫಿಯಲ್ಲಿಯೂ ಪ್ರೋಟೀನ್; ಏನಿದು ಹೊಸ ಟ್ರೆಂಡ್?
ದಿನನಿತ್ಯ ತಿನ್ನುವ ಆಹಾರದಲ್ಲಿ ಪ್ರೋಟೀನ್‌ಗೆ ಹೆಚ್ಚು ಮಹತ್ವ ನೀಡುವ ಇಂದಿನ ಯುವಜನತೆ, ಈಗ ತಮ್ಮ ಬೆಳಗಿನ ಕಾಫಿಯಲ್ಲೂ ಪ್ರೋಟೀನ್ ಹುಡುಕಲು ಶುರು ಮಾಡಿದ್ದಾರೆ "ಕಾಫಿ ಕುಡಿದರೆ ಆರೋಗ್ಯ ಹಾಳು" ಎಂಬ ಹಳೆಯ ಮಾತನ್ನು ಬದಿಗೊತ್ತಿ, ಕಾಫಿಯಲ್ಲೂ ಪ್ರೋಟೀನ್ ಸಿಗುವಂತೆ ಹೊಸ ಮಾದರಿಯ ಪ್ರೋಟೀನ್ ಕಾಫಿ ಫ್ಲೇವರ್‌ಗಳು ಮಾರುಕಟ್ಟೆಗೆ ಬಂದಿವೆ. ಸದ್ಯ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿರುವ ಈ 'ಪ್ರೋಫಿ' ಟ್ರೆಂಡ್ ನಿಜಕ್ಕೂ ಆರೋಗ್ಯಕ್ಕೆ ಅನುಕೂಲವೇ? ಈ ಟ್ರೆಂಡ್‌ಗೆ ತಜ್ಞರು ನೀಡುವ ರೇಟಿಂಗ್ ಏನು? ಇದನ್ನು ಪ್ರತಿದಿನ ಕುಡಿಯಬಹುದೇ? ಇಲ್ಲಿದೆ ಸಂಪೂರ್ಣ ವಿವರ.
ಸಂಗ್ರಹ ಚಿತ್ರ -
ಬೆಂಗಳೂರು: ಇಂದಿನ ಯುವಕರು ತಾವು ತಿನ್ನುವ ಪ್ರತಿಯೊಂದು ಆಹಾರದಲ್ಲೂ ಪ್ರೋಟೀನ್ (Protein in coffee) ಇರಬೇಕು ಎಂದು ಬಯಸುತ್ತಾರೆ. ಹೀಗಾಗಿ ಪೌಷ್ಟಿಕಾಂಶ ಹೆಚ್ಚಿರುವ ಹಾಗೂ ಪ್ರೋಟೀನ್ ಸಮೃದ್ಧವಾಗಿರುವ ಆಹಾರಗಳನ್ನೇ ಹೆಚ್ಚು ಆಯ್ಕೆ ಮಾಡುಕೊಳ್ಳುತ್ತಾರೆ. ಸಾಮಾನ್ಯ ದಿನಗಳಲ್ಲಿ ಕಾಫಿ ಎಂದ ತಕ್ಷಣ ʼʼಇದು ಆರೋಗ್ಯಕ್ಕೆ ಒಳ್ಳೆಯದಲ್ಲ, ಗ್ಯಾಸ್ಟ್ರಿಕ್ ಉಂಟುಮಾಡುತ್ತದೆʼʼ ಎಂದು ಭಾವಿಸುವವರೇ ಜಾಸ್ತಿ. ಜನರ ಈ ಮನಸ್ಥಿತಿಯನ್ನು ಬದಲಾಯಿಸಲು ಹಾಗೂ ಕಾಫಿಯಲ್ಲೂ ಪ್ರೋಟೀನ್ ಸಿಗುವಂತೆ ಮಾಡಲು ಹೊಸ ಮಾದರಿಯ ಹಲವಾರು 'ಪ್ರೋಟೀನ್ ಕಾಫಿ' ಫ್ಲೇವರ್‌ಗಳು ಮತ್ತು ಪ್ರೋಟೀನ್ ಪೌಡರ್‌ಗಳು ಮಾರುಕಟ್ಟೆಗೆ ಲಗ್ಗೆ ಇಟ್ಟಿವೆ.
ಸೋಶಿಯಲ್ ಮೀಡಿಯಾದಲ್ಲಿ ಸದ್ಯ 'ಪ್ರೋಫಿ' (Proffee = Protein + Coffee) ಎಂಬ ಹೊಸ ಹೆಲ್ತ್ ಟ್ರೆಂಡ್ ಭಾರಿ ಸದ್ದು ಮಾಡುತ್ತಿದೆ. ಆದರೆ, ನಿಜವಾಗಿಯೂ ದಿನನಿತ್ಯ ಕುಡಿಯುವ ಕಾಫಿಗೆ ಪ್ರೋಟೀನ್ ಶೇಕ್ ಅಥವಾ ಪೌಡರ್ ಸೇರಿಸಿ ಕುಡಿಯುವುದು ದೇಹಕ್ಕೆ ಒಳ್ಳೆಯದೇ? ಈ ಬಗ್ಗೆ ಪೌಷ್ಟಿಕಾಂಶ ತಜ್ಞರು ಏನು ಹೇಳುತ್ತಾರೆ ಎಂಬ ವಿವರ ಇಲ್ಲಿದೆ.
ಏನಿದು 'ಪ್ರೋಫಿ' ಟ್ರೆಂಡ್?
ಸಾಮಾನ್ಯವಾಗಿ ಬೆಳಿಗ್ಗೆ ಅಥವಾ ಸಂಜೆ ಕುಡಿಯುವ ಬಿಸಿ ಅಥವಾ ಕೋಲ್ಡ್ ಕಾಫಿಗೆ ಪ್ರೋಟೀನ್ ಶೇಕ್, ವೇ ಪ್ರೋಟೀನ್, ಅಥವಾ ಪ್ಲಾಂಟ್-ಬೇಸ್ಡ್ ಪ್ರೋಟೀನ್ ಪೌಡರ್ ಸೇರಿಸಿ ಕುಡಿಯುವುದನ್ನೇ 'ಪ್ರೋಫಿ' ಎನ್ನಲಾಗುತ್ತದೆ. ಫಿಟ್‌ನೆಸ್ ಪ್ರಿಯರು, ಜಿಮ್‌ಗೆ ಹೋಗುವವರು ಮತ್ತು ತೂಕ ಇಳಿಸಿಕೊಳ್ಳಲು ಬಯಸುವವರು ಈ ಟ್ರೆಂಡ್‌ಗೆ ಹೆಚ್ಚು ಮಾರುಹೋಗಿದ್ದಾರೆ.
ಕಾಫಿಗೆ ಪ್ರೋಟೀನ್ ಸೇರಿಸುವುದರ ಪ್ರಯೋಜನಗಳು
ವರ್ಕೌಟ್ ಮಾಡುವವರಿಗೆ ಕಾಫಿಯಲ್ಲಿರುವ ಕೆಫೀನ್ ತಕ್ಷಣದ ಶಕ್ತಿಯನ್ನು ನೀಡಿದರೆ, ಅದಕ್ಕೆ ಸೇರಿಸುವ ಪ್ರೋಟೀನ್ ವ್ಯಾಯಾಮದ ನಂತರ ಹಾನಿಗೊಳಗಾದ ಸ್ನಾಯುಗಳನ್ನು ಬೇಗನೇ ಗುಣಪಡಿಸಲು ನೆರವಾಗುತ್ತದೆ. ಬರಿ ಕಾಫಿ ಕುಡಿದರೆ ಅದರಲ್ಲಿರುವ ಕೆಫೀನ್‌ನಿಂದ ಹಸಿವು ತಾತ್ಕಾಲಿಕವಾಗಿ ಕಡಿಮೆಯಾಗಬಹುದು, ಆದರೆ ಸ್ವಲ್ಪ ಸಮಯದಲ್ಲೇ ಮತ್ತೆ ಹಸಿವಾಗುತ್ತದೆ. ಅದೇ ಕಾಫಿಗೆ ಪ್ರೋಟೀನ್ ಬೆರೆಸಿದಾಗ ದೇಹದಲ್ಲಿ ಹಸಿವನ್ನು ಉತ್ತೇಜಿಸುವ ಹಾರ್ಮೋನ್‌ಗಳು ಕಡಿಮೆಯಾಗಿ, ದೀರ್ಘಕಾಲ ಹೊಟ್ಟೆ ತುಂಬಿದ ಅನುಭವವಾಗುತ್ತದೆ. ಇದು ಅನಗತ್ಯವಾಗಿ ಜಂಕ್ ಫುಡ್ ತಿನ್ನುವುದನ್ನು ತಡೆಯುತ್ತದೆ. ಬರಿ ಕೆಫೀನ್ ಮತ್ತು ಸಕ್ಕರೆ ಇರುವ ಕಾಫಿ ಸೇವಿಸಿದಾಗ ರಕ್ತದಲ್ಲಿನ ಸಕ್ಕರೆ ಪ್ರಮಾಣ ಹಠಾತ್ತನೆ ಏರಿಕೆಯಾಗುತ್ತದೆ. ಆದರೆ ಕಾಫಿಯ ಜೊತೆ ಪ್ರೋಟೀನ್ ಸೇರಿದಾಗ, ಗ್ಲೂಕೋಸ್ ಹೀರಿಕೊಳ್ಳುವ ಪ್ರಕ್ರಿಯೆ ನಿಧಾನವಾಗಿ, ರಕ್ತದಲ್ಲಿ ಸಕ್ಕರೆ ಮಟ್ಟ ಸ್ಥಿರವಾಗಿರಲು ಸಹಾಯ ಮಾಡುತ್ತದೆ.
ತಜ್ಞರ ನೀಡುವ ಎಚ್ಚರಿಕೆ
ಬಿಸಿ ಕಾಫಿಗೆ ಪ್ರೋಟೀನ್ ಪೌಡರ್ ಬೆರೆಸಿದಾಗ ಅದು ಸರಿಯಾಗಿ ಕರಗದೆ ಗಂಟುಕಟ್ಟಿಕೊಳ್ಳಬಹುದು ಹಾಗೂ ಕೆಲವರಲ್ಲಿ ಹೊಟ್ಟೆ ಉರಿ ಅಥವಾ ಗ್ಯಾಸ್ಟ್ರಿಕ್ ಸಮಸ್ಯೆಯನ್ನು ಹೆಚ್ಚು ಮಾಡಬಹುದು. ಮಾರುಕಟ್ಟೆಯಲ್ಲಿ ಸಿಗುವ ರೆಡಿ ಟು ಡ್ರಿಂಕ್ 'ಪ್ರೋಟೀನ್ ಕಾಫಿ' ಫ್ಲೇವರ್‌ಗಳಲ್ಲಿ ಹೆಚ್ಚಿನ ಪ್ರಮಾಣದ ಕೃತಕ ಸಿಹಿ, ಪ್ರಿಸರ್ವೇಟಿವ್‌ಗಳು ಮತ್ತು ಕೆಮಿಕಲ್‌ಗಳು ಇರುತ್ತವೆ. ಇವುಗಳನ್ನು ಪ್ರತಿದಿನ ಸೇವಿಸುವುದು ಆರೋಗ್ಯಕ್ಕೆ ಹಾನಿಕರ. ಪ್ರೋಟೀನ್ ಕಾಫಿ ಕುಡಿಯುವ ಭರದಲ್ಲಿ ಪ್ರೋಟೀನ್ ಪೌಡರ್, ಹಾಲು ಹಾಗೂ ಸಿಹಿ ಪದಾರ್ಥಗಳನ್ನು ಹೆಚ್ಚು ಬಳಸಿದರೆ ದೇಹಕ್ಕೆ ಅತಿಯಾದ ಕ್ಯಾಲೋರಿ ಸೇರುತ್ತದೆ. ಇದರಿಂದ ತೂಕ ಇಳಿಯುವ ಬದಲು ಹೆಚ್ಚಾಗುವ ಅಪಾಯವಿರುತ್ತದೆ. ಬರಿ ಪ್ರೋಟೀನ್ ಕಾಫಿಯನ್ನೇ ಬೆಳಗಿನ ಉಪಹಾರವನ್ನಾಗಿ ಮಾಡಿಕೊಂಡರೆ ದೇಹಕ್ಕೆ ಸಿಗಬೇಕಾದ ನಾರುಪದಾರ್ಥ, ವಿಟಮಿನ್ ಮತ್ತು ಖನಿಜಾಂಶಗಳ ಕೊರತೆ ಉಂಟಾಗುತ್ತದೆ.
ಕಾಫಿಗೆ ಪ್ರೋಟೀನ್ ಸೇರಿಸಿ ಕುಡಿಯುವುದು ಕೆಟ್ಟದ್ದಲ್ಲ, ಆದರೆ ಮಾರುಕಟ್ಟೆಯಲ್ಲಿ ಸಿಗುವ ಪ್ಯಾಕ್ ಮಾಡಿದ ಸಿಹಿ ಫ್ಲೇವರ್‌ಗಳಿಗಿಂತ ಮನೆಯಲ್ಲೇ ನೈಸರ್ಗಿಕವಾಗಿ ತಯಾರಿಸಿದ ಪ್ರೋಟೀನ್ ಶೇಕ್ ಅಥವಾ ಸಕ್ಕರೆ ರಹಿತ ಪ್ರೋಟೀನ್ ಪೌಡರ್ ಅನ್ನು ಕೋಲ್ಡ್ ಕಾಫಿಗೆ ಬೆರೆಸಿ ಕುಡಿಯುವುದು ಸೂಕ್ತ. ಯಾವುದಕ್ಕೂ ನಿಮ್ಮ ದೇಹದ ಅಗತ್ಯಕ್ಕೆ ತಕ್ಕಂತೆ ಪೌಷ್ಟಿಕತಜ್ಞರ ಸಲಹೆ ಪಡೆಯುವುದು ಒಳಿತು.