ನಾರಿಯರಲ್ಲಿ ಆಟೋಇಮ್ಯುನ್ ಕಾಯಿಲೆಗಳ ಹೆಚ್ಚಳ ಮತ್ತು ರೋಗ ನಿರೋಧಕತೆಯ ಸವಾಲು
ಎಲ್ಲದರಲ್ಲೂ "ಲೇಡೀಸ್ ಫ಼ಸ್ಟ್" ಇರುವ ಸಮಾಜದಲ್ಲಿ, ಆಟೋಇಮ್ಯುನಿಟಿ ಸಂಬಂಧಿತ ಕಾಯಿಲೆ ಗಳೂ ಪುರುಷರಿಗಿಂತ ನಾಲ್ಕು ಪಟ್ಟು ಮಹಿಳೆಯರಲ್ಲೇ ಹೆಚ್ಚಾಗಿ ಕಾಣಸಿಗುವುದು ವಿಷಾದನೀಯ. ಅನೇಕ ಸಂಶೋಧನೆಗಳ ನಂತರವೂ ದೇಹದ ಈ ವರ್ತನೆಗೆ ಸೂಕ್ತ ಕಾರಣಗಳು ಧೃಢೀಕರಿಸ ಲ್ಪಟ್ಟಿಲ್ಲ. ಆದರೆ ಮಹಿಳೆಯರ ವಯಸ್ಸು, ಆಹಾರಶೈಲಿ, ದೈಹಿಕ ಕಾಯಕಗಳು, ಹಾರ್ಮೋನಿನ ಬದಲಾವಣೆ, ಜೀವನ ಶೈಲಿಯ ಒತ್ತಡಗಳು ಹಾಗೂ ಹೆಚ್ಚುತ್ತಿರುವ ಆಟೋಇಮ್ಯುನ್ ಕಾಯಿಲೆಗಳ ಸಂಬಂಧವು ಸಮೀಕ್ಷೆ ಗಳಲ್ಲಿ ಮೂಲವನ್ನು ಕಂಡುಕೊಳ್ಳುತ್ತಿವೆ.
-
ವ್ಯಕ್ತಿಯ ರೋಗ ನಿರೋಧಕ ಶಕ್ತಿಯು ರೋಗ ಉತ್ಪತ್ತಿಯ ಕಾರಣಗಳ ವಿರುದ್ಧ ಹೋರಾಡುವು ದನ್ನು ಬಿಟ್ಟು, ತಾನಿರುವ ದೇಹದ ಜೀವಕೋಶಗಳನ್ನೇ ಪರಕೀಯವೆಂದೆಣಿಸಿ ರೋಗವನ್ನು ಉತ್ಪತ್ತಿ ಮಾಡುವಲ್ಲಿ ತೊಡಗಿಕೊಳ್ಳುವುದೇ ಆಟೋಇಮ್ಮ್ಯುನಿಟಿ. ದೈಹಿಕವಾದ ರೋಗ ನಿರೋಧಕ ಶಕ್ತಿಯು ಆರೋಗ್ಯಯುತ ಹಾಗೂ ರೋಗಕಾರಣೀಭೂತವಾಗುವ ಅಂಶಗಳನ್ನು ಗುರುತಿಸುವಲ್ಲಿ ವಿಫಲವಾಗುವ ಕಾಯಿಲೆಯಿದು.
ಎಲ್ಲದರಲ್ಲೂ "ಲೇಡೀಸ್ ಫ಼ಸ್ಟ್" ಇರುವ ಸಮಾಜದಲ್ಲಿ, ಆಟೋಇಮ್ಯುನಿಟಿ ಸಂಬಂಧಿತ ಕಾಯಿಲೆ ಗಳೂ ಪುರುಷರಿಗಿಂತ ನಾಲ್ಕು ಪಟ್ಟು ಮಹಿಳೆಯರಲ್ಲೇ ಹೆಚ್ಚಾಗಿ ಕಾಣಸಿಗುವುದು ವಿಷಾದನೀಯ. ಅನೇಕ ಸಂಶೋಧನೆಗಳ ನಂತರವೂ ದೇಹದ ಈ ವರ್ತನೆಗೆ ಸೂಕ್ತ ಕಾರಣಗಳು ಧೃಢೀಕರಿಸ ಲ್ಪಟ್ಟಿಲ್ಲ. ಆದರೆ ಮಹಿಳೆಯರ ವಯಸ್ಸು, ಆಹಾರಶೈಲಿ, ದೈಹಿಕ ಕಾಯಕಗಳು, ಹಾರ್ಮೋನಿನ ಬದಲಾವಣೆ, ಜೀವನ ಶೈಲಿಯ ಒತ್ತಡಗಳು ಹಾಗೂ ಹೆಚ್ಚುತ್ತಿರುವ ಆಟೋಇಮ್ಯುನ್ ಕಾಯಿಲೆಗಳ ಸಂಬಂಧವು ಸಮೀಕ್ಷೆಗಳಲ್ಲಿ ಮೂಲವನ್ನು ಕಂಡುಕೊಳ್ಳುತ್ತಿವೆ.
ಇದನ್ನೂ ಓದಿ: Health Tips: ಆರೋಗ್ಯಕರ ಆಹಾರಪದ್ಧತಿಯಿಂದ ತಿನ್ನುವ ವ್ಯಸನ ತಡೆಯಬಹುದೇ?
ಕಾರಣಗಳು
ವಯಸ್ಸು ಹಾಗೂ ಹಾರ್ಮೋನಿನ ಬದಲಾವಣೆ: ಹೆಣ್ಣುಮಗುವೊಂದು ತನ್ನ ಜೀವನದಲ್ಲಿ ಮುಟ್ಟಿನ ಪ್ರಾರಂಭ (12-16yrs), ಗರ್ಭಧಾರಣೆ (24-35yrs), ಬಾಣಂತಿ, ಮುಟ್ಟಿನ ಅಂತ್ಯ(45-55yrs) - ಹೀಗೆ ವಯೋನುಗುಣವಾದ ಹಾರ್ಮೋನಿನ ಏರುಪೇರುಗಳನ್ನು ಅನುಭವಿಸುತ್ತದೆ.
ಮುಖ್ಯವಾಗಿ ಈಸ್ಟ್ರೋಜನ್ ಹಾಗೂ ಪ್ರೊಜೆಸ್ಟೆರೋನ್ ನಲ್ಲಿ ಈ ವೇಗದ ಹಾಗೂ ಏರಿಳಿತದ ಬದಲಾವಣೆಯು ರೋಗನಿರೋಧಕ ಶಕ್ತಿಯಲ್ಲಿನ ವ್ಯತ್ಯಾಸಕ್ಕೆ ಕಾರಣವಾಗುತ್ತವೆ. ನಂತರದಲ್ಲಿ ಆಂತರಿಕ ಬದಲಾವಣೆಗನುಗುಣವಾದ ರೀತಿಯಲ್ಲಿ ಮಧುಮೇಹ, ಸಂಧಿವಾತ, ಸೋರಿಯಾಸಿಸ್, ಅಟೋಪಿಕ್ ಡರ್ಮಟೈಟಿಸ್ ನಂತಹ ಅನೇಕ ಚರ್ಮದ ಕಾಯಿಲೆಗಳು, ಉಬ್ಬಸ ಕಾಯಿಲೆಯ ತೀವ್ರ ಹೆಚ್ಚಳದಂತಹ ಆಟೋಇಮ್ಯುನ್ ಕಾಯಿಲೆಗಳನ್ನು ಉಂಟುಮಾಡುತ್ತವೆ.
ದೈಹಿಕ ಶ್ರಮ: ಕಾಲಾನುಸಾರಿಯಾಗಿ ನಮ್ಮ ಪೂರ್ವಜರ ದೈಹಿಕ ಶಕ್ತಿಯು ಪ್ರಸ್ತುತ ಪೀಳಿಗೆಯನ್ನು ತಲುಪುವಲ್ಲಿ ಅಸಮರ್ಥವಾಗಿದೆ. ಅತಿಯಾಗಿ ಕುಳಿತು ಮಾಡುವ ಕೆಲಸಗಳು, ತಡರಾತ್ರಿಯವರೆಗಿನ ಐಟಿ ಕಾರ್ಯಗಳು, ದೇಹದ ಅಂಗಾಂಗಳ ಅಸಮತೋಲನದ ಭಂಗಿಗಳು, ಉಡುಪಿನಲ್ಲಾದ ಬದಲಾವಣೆ, ಎಸಿ ರೂಮ್ ನ ಅತಿ ಬಳಕೆ ಇವೆಲ್ಲವೂ ಪ್ರಕೃತಿಗೆ ಅನುಗುಣವಾಗಿ ದೇಹದಲ್ಲಾಗುವ ಬದಲಾವಣೆಗಳನ್ನು ಸಹಕರಿಸುತ್ತಿಲ್ಲ. ಬೆವರಿನ ರೂಪದಲ್ಲಿ ವಿಸರ್ಜಿತವಾಗಬೇಕಾದ ಅಂಶಗಳು ದೇಹದಲ್ಲಿಯೇ ಉಳಿದುಕೊಳ್ಳುವುದು (ಟೊಕ್ಸಿನ್ ಅಕ್ಯುಮ್ಯುಲೇಶನ್), ತೂಕದ ಹೆಚ್ಚಳದೊಂದಿಗೆ ಮೂಳೆಯ ಶಕ್ತಿ ಕುಂಠಿತವಾಗುವುದು, ದೈಹಿಕ ಶ್ರಮದ ಕೊರತೆಯಿಂದ ಮಧುಮೇಹಗಳಂತಹ ರೋಗಗಳುಂಟಾಗುವುದು ಸರ್ವೇಸಾಮಾನ್ಯವೆಂದೆಣಿಸಿದೆ.
ಆಹಾರಶೈಲಿ: ದೇಹದ ಪ್ರತೀ ಜೀವಕೋಶದ ಸುಸ್ಥಿತಿಗೆ ಸೇವಿಸುವ ಆಹಾರದ ಗುಣಗಳೇ ಮೂಲ ಕಾರಣಗಳು. ಜೀವಕೋಶವನ್ನು ಸುತ್ತುವರಿದ ಪೊರೆ (ಪ್ಲಾಸ್ಮಾ ಮೆಂಬ್ರೇನ್), ಜೀವಕೋಶಗಳ ಕಾರ್ಯಕ್ಷಮತೆ ಎಲ್ಲವೂ ವಿಟಮಿನ್ - ಮಿನರಲ್ ನಂತಹ ಪೋಷಕಾಂಶಗಳ ಕೊರತೆಯಿಂದ ವ್ಯತ್ಯಾಸಗೊಂಡು ತಮ್ಮ ರಚನೆಯನ್ನು ಕಳೆದುಕೊಳ್ಳುತ್ತವೆ. ಅತೀ ತಂಪಿನ ಮತ್ತು ಬಿಸಿಯ ಆಹಾರ, ಪದೇ ಪದೇ ಬಿಸಿ ಮಾಡಿದ ಆಹಾರ, ರಾಸಾಯನಿಕಗಳಿಂದ ಕಲಬೆರಕೆಗೊಂಡ ಆಹಾರಗಳು, ಒಮ್ಮೆ ಬಳಸಿದ ಎಣ್ಣೆಯಲ್ಲೇ ಅನೇಕ ಬಾರಿ ಕರಿದ ಪದಾರ್ಥಗಳು, ಸರಿಯಾಗಿ ಬೇಯಿಸದ ಖಾದ್ಯ ಗಳು - ಇವೇ ಮೊದಲಾದ ನಿತ್ಯದ ಆಹಾರಾಭ್ಯಾಸವು ಪೀಳಿಗೆಯ ದೈಹಿಕ ರಚನೆಯನ್ನೇ ಏರುಪೇರು ಮಾಡುತ್ತಿವೆ. ಇದು ಮುಂದಿನ ತಲೆಮಾರಿನ ಆನುವಂಶಿಕತೆಯನ್ನೇ ಬದಲಾಯಿಸಬಲ್ಲ ವಿಕೃತ ಶಕ್ತಿಯನ್ನು ಹೊಂದಿದೆ.
ಜೀವನಶೈಲಿ: ಹಣದ ಗಳಿಕೆ ಮತ್ತು ವ್ಯಯಿಸುವ ಮೂಲ ಉದ್ದೇಶವೊಂದನ್ನೇ ಹೊಂದಿರುವ ಜೀವನಶೈಲಿಯು, ನಶಿಸುವ ಆರೋಗ್ಯವನ್ನು ಪರಿಗಣಿಸದೇ, ಕಾರಣವಲ್ಲದ ಕಾರಣಕ್ಕೆ ಮಾನಸಿಕ ಒತ್ತಡವನ್ನು ಹೊಂದುವ, ನಕಾರಾತ್ಮಕತೆಯನ್ನು ಬಿಂಬಿಸುವ ಮಾದರಿಗಳಾಗಿವೆ. ಸಮೀಕ್ಷೆಯ ವರದಿಗಳ ಪ್ರಕಾರ ಸತತವಾದ ನಕಾರಾತ್ಮಕತೆ, ಒತ್ತಡ ಹಾಗೂ ಮಾನಸಿಕ ತುಮುಲಗಳು ಜೀವಕೋಶಗಳಲ್ಲಿನ "ಪವರ್ ಹೌಸ್" ಎನಿಸಿರುವ ಮೈಟೊಕಾಂಡ್ರಿಯಾ ದ ರಚನಾತ್ಮಕ ಹಾಗೂ ಕ್ರಿಯಾತ್ಮಕ ಬದಲಾವಣೆಯನ್ನುಂಟುಮಾಡಿ, ಮಿದುಳಿನ ನರಗಳು ಬಳಲುವಂತೆ ಮಾಡುತ್ತವೆ. ಮೈಕ್ರೋಗ್ಲಿಯಾ ಎಂಬ ಮಿದುಳಿನ ನಿರೋಧಕ ಜೀವಕೋಶಗಳಲ್ಲಿ ಊತಗಳನ್ನು ಸೃಷ್ಟಿಸಿ , ಕಾಲಕ್ರಮೇಣವಾಗಿ ಹಾನಿಕರವಾದ ರಾಸಾಯನಿಕಗಳನ್ನು ಉತ್ಪತ್ತಿ ಮಾಡುತ್ತವೆ. ಸತತವಾದ ಈ ಕ್ರಿಯೆಯು ಮಿದುಳಿನ ನರಗಳನ್ನು ಶಾಶ್ವತವಾಗಿ ನಾಶ ಮಾಡುತ್ತವೆ. ಹಾಗಾಗಿ ಕಾರಣಾಂತರಗಳಿಂದ ಮನೆಯಲ್ಲೂ, ಸಮಾಜದಲ್ಲಿಯೂ ಭಾವನಾತ್ಮಕವಾಗಿ, ಆರ್ಥಿಕವಾಗಿ ಅತಿಯಾಗಿ ಒತ್ತಡಕ್ಕೊಳ ಪಡುವ ಮಹಿಳೆಯರು ವಯೋಭೇದವಿಲ್ಲದೆ ಸಿಸ್ಟಮಿಕ್ ಲ್ಯುಪಸ್ ಎರಿತಮಟೋಸಿಸ್ (ಎಸ್ ಎಲ್ ಇ), ರಿಯಾಕ್ಟಿವ್ ಏರ್ ವೇ ಡಿಸೀಸ್, ಡಯಾಬಿಟಿಸ್ ನಂತಹ ಆಟೋಇಮ್ಯುನ್ ಕಾಯಿಲೆಗಳಿಗೆ ತುತ್ತಾಗುತ್ತಿದ್ದಾರೆ.
ಲಕ್ಷಣಗಳು ಮತ್ತು ಚಿಕಿತ್ಸೆ: ಚರ್ಮ, ಮಾಂಸಖಂಡ, ಯಕೃತ್, ಮೇದೋಜೀರಕ ಗ್ರಂಥಿ, ಶ್ವಾಸಕೋಶಗಳೇ ಮೊದಲಾದ ಬಾಹ್ಯ ಹಾಗೂ ಆಭ್ಯಂತರ ಅಂಗಗಳ ಮಿಶ್ರಿತ ದೀರ್ಘಕಾಲೀನ ಲಕ್ಷಣಗಳನ್ನು ತೋರ್ಪಡಿಸುವ ಆಟೋಇಮ್ಯುನ್ ಕಾಯಿಲೆಗಳಿಗೆ ತತ್ಸಂಬಂಧೀ ವಮನ, ವಿರೇಚನಗಳಂತಹ ಶೋಧನ ಚಿಕಿತ್ಸೆಗಳನ್ನು ಆಯುರ್ವೇದ ಶಾಸ್ತ್ರದಲ್ಲಿ ವಿವರಿಸಲಾಗಿದೆ. ಕಾಲಕ್ಕೆ ತಕ್ಕ ನಿಯಮಿತವಾದ ಪಥ್ಯ ಆಹಾರದ ಸೇವನೆ, ಮನೋ ನಿಯಂತ್ರಕ ಯೋಗ ಪ್ರಾಣಾಯಾಮಗಳ ನಿರಂತರ ಅಭ್ಯಾಸ, ಋತುವಿಗನುಸಾರವಾದ ದೈಹಿಕ ಚಿಕಿತ್ಸೆಗಳಿಂದ ನಿರೀಕ್ಷಿಸುವ ಆಟೋ ಇಮ್ಯುನ್ ವ್ಯಾಧಿಗಳನ್ನು ಪರಿಣಾಮಕಾರಿಯಾಗಿ ನಿಯಂತ್ರಿಸಬಹುದು. ಈಗಾಗಲೇ ಉದ್ಭವಿಸಿರುವ ಅನೇಕ ವ್ಯಾಧಿಗಳ ಆನುವಂಶಿಕತೆಯನ್ನು ಮುಂದಿನ ಜನಾಂಗಗಳು ಪರಂಪರಾನುಗತವಾಗಿ ಹೊಂದದಂತೆ ನಿಯಂತ್ರಿಸಬಹುದು.
ಡಾ. ಕಾವ್ಯ
ಸಹಾಯಕ ಪ್ರಾಧ್ಯಾಪಕರು, ಬಾಲರೋಗ ವಿಭಾಗ
ಎಸ್‌ಡಿಎಂ ಆಯುರ್ವೇದ ಕಾಲೇಜು, ಉಡುಪಿ
ಕ್ಷಮಾವತಂ 2026ರ ಮುಖ್ಯ ಭಾಷಣಕಾರರು