ʻಟಾಕ್ಸಿಕ್ʼ ಸಿನಿಮಾ ರಿಲೀಸ್‌ಗೆ ಕ್ಷಣಗಣನೆ; ಶ್ರೀಕ್ಷೇತ್ರ ಧರ್ಮಸ್ಥಳದಲ್ಲಿ ‘ರಾಕಿ ಭಾಯ್’ ಯಶ್ ವಿಶೇಷ ಪೂಜೆ
'ಟಾಕ್ಸಿಕ್' ಸಿನಿಮಾ ಬಿಡುಗಡೆಗೆ ಕ್ಷಣಗಣನೆ ಆರಂಭವಾಗಿರುವ ಹೊತ್ತಿನಲ್ಲಿ, ʻರಾಕಿಂಗ್ ಸ್ಟಾರ್ʼ ಯಶ್ ಅವರು ಧರ್ಮಸ್ಥಳ ಶ್ರೀ ಮಂಜುನಾಥ ಸ್ವಾಮಿ ಸನ್ನಿಧಿಗೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದ್ದಾರೆ. ಚೆನ್ನೈ ಪ್ರಚಾರ ಮುಗಿಸಿ ಧರ್ಮಸ್ಥಳಕ್ಕೆ ಆಗಮಿಸಿದ್ದು, ಬಳಿಕ ಕೊಚ್ಚಿ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ.
-
ಬಹುನಿರೀಕ್ಷಿತ ಪ್ಯಾನ್-ಇಂಡಿಯಾ ಸಿನಿಮಾ ‘ಟಾಕ್ಸಿಕ್’ ತೆರೆಕಾಣಲು ಕೆಲವೇ ಗಂಟೆಗಳು ಬಾಕಿ ಇರುವ ಬೆನ್ನಲ್ಲೇ, ‘ರಾಕಿಂಗ್ ಸ್ಟಾರ್’ ಯಶ್ ಅವರು ಇಂದು (ಆ.25) ಪುಣ್ಯಕ್ಷೇತ್ರ ಧರ್ಮಸ್ಥಳಕ್ಕೆ ಭೇಟಿ ನೀಡಿ ಶ್ರೀ ಮಂಜುನಾಥ ಸ್ವಾಮಿಯ ದರ್ಶನ ಪಡೆದಿದ್ದಾರೆ. ಚೆನ್ನೈನಿಂದ ವಿಶೇಷ ವಿಮಾನದ ಮೂಲಕ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸಿದ ಅವರು, ಅಲ್ಲಿಂದ ರಸ್ತೆ ಮಾರ್ಗವಾಗಿ ಧರ್ಮಸ್ಥಳಕ್ಕೆ ತೆರಳಿ ಚಿತ್ರದ ಯಶಸ್ಸಿಗಾಗಿ ವಿಶೇಷ ಪ್ರಾರ್ಥನೆ ಹಾಗೂ ಪೂಜೆ ಸಲ್ಲಿಸಿದ್ದಾರೆ.
ಸಂಪ್ರದಾಯದಂತೆ ಪಾಲಿಸುತ್ತಿರುವ ಯಶ್
ಪ್ರತಿ ಬಾರಿಯೂ ತಮ್ಮ ಹೊಸ ಚಿತ್ರ ಬಿಡುಗಡೆಯಾಗುವ ಮುನ್ನ ಧರ್ಮಸ್ಥಳಕ್ಕೆ ಭೇಟಿ ನೀಡಿ ಮಂಜುನಾಥ ಸ್ವಾಮಿಯ ಆಶೀರ್ವಾದ ಪಡೆಯುವುದನ್ನು ಯಶ್ ಸಂಪ್ರದಾಯದಂತೆ ಪಾಲಿಸಿಕೊಂಡು ಬಂದಿದ್ದಾರೆ. ಈ ಹಿಂದೆ ‘ಕೆಜಿಎಫ್’ ಸರಣಿ ಚಿತ್ರಗಳ ಬಿಡುಗಡೆ ಸಂದರ್ಭದಲ್ಲೂ ಅವರು ಕ್ಷೇತ್ರಕ್ಕೆ ಆಗಮಿಸಿ ಪೂಜೆ ಸಲ್ಲಿಸಿದ್ದರು. ಇದೀಗ ಅದೇ ಪರಂಪರೆಯನ್ನು ಮುಂದುವರಿಸಿರುವ ನಟ, ‘ಟಾಕ್ಸಿಕ್’ ಚಿತ್ರಕ್ಕೂ ದೇವರ ಕೃಪೆ ಕೋರಿದ್ದಾರೆ.
ಕೊಚ್ಚಿಯಲ್ಲಿ ಇಂದು ಪ್ರೀ-ರಿಲೀಸ್ ಈವೆಂಟ್
ಬಿಡುವಿಲ್ಲದ ಪ್ರಚಾರ ಕಾರ್ಯಗಳಲ್ಲಿ ತೊಡಗಿಸಿಕೊಂಡಿರುವ ಯಶ್, ಆಗಸ್ಟ್ 24ರಂದು ಚೆನ್ನೈನಲ್ಲಿ ನಡೆದ ಅದ್ಧೂರಿ ಪ್ರೀ-ರಿಲೀಸ್ ಇವೆಂಟ್‌ನಲ್ಲಿ ಪಾಲ್ಗೊಂಡಿದ್ದರು. ಅಲ್ಲಿಂದ ನೇರವಾಗಿ ಮಂಗಳೂರಿಗೆ ವಿಮಾನದ ಮೂಲಕ ಆಗಮಿಸಿದ ಅವರು, ಧರ್ಮಸ್ಥಳಕ್ಕೆ ತೆರಳಿದರು. ಇನ್ನು ಧರ್ಮಸ್ಥಳದಲ್ಲಿ ದೇವರ ದರ್ಶನ ಮುಗಿಸಿದ ತಕ್ಷಣವೇ ಅವರು ಕೇರಳಕ್ಕೆ ಪ್ರಯಾಣ ಬೆಳೆಸಲಿದ್ದಾರೆ. ಚಿತ್ರದ ನಿರ್ದೇಶಕಿ ಗೀತು ಮೋಹನ್‌ದಾಸ್ ಮೂಲತಃ ಕೇರಳದವರಾಗಿದ್ದು, ಇಂದು ಕೊಚ್ಚಿಯಲ್ಲಿ ಆಯೋಜಿಸಲಾಗಿರುವ ‘ಟಾಕ್ಸಿಕ್’ ಪ್ರೀ-ರಿಲೀಸ್ ಕಾರ್ಯಕ್ರಮದಲ್ಲಿ ಇಡೀ ಚಿತ್ರತಂಡದೊಂದಿಗೆ ಯಶ್ ಭಾಗಿಯಾಗಲಿದ್ದಾರೆ.
ಧರ್ಮಸ್ಥಳಕ್ಕೆ ಬಂದ ʻರಾಕಿ ಭಾಯ್ʼ ಯಶ್
12 ಸಾವಿರ ಸ್ಕ್ರೀನ್‌ಗಳಲ್ಲಿ ʻಟಾಕ್ಸಿಕ್ʼ ರಿಲೀಸ್
ಭಾರತೀಯ ಚಿತ್ರರಂಗದಲ್ಲೇ ಭಾರೀ ಕುತೂಹಲ ಮೂಡಿಸಿರುವ ‘ಟಾಕ್ಸಿಕ್’ ಸಿನಿಮಾ ನಾಳೆ (ಆಗಸ್ಟ್ 26) ವಿಶ್ವಾದ್ಯಂತ ಬರೋಬ್ಬರಿ 12 ಸಾವಿರಕ್ಕೂ ಅಧಿಕ ಚಿತ್ರಮಂದಿರಗಳಲ್ಲಿ ಅದ್ದೂರಿಯಾಗಿ ಬಿಡುಗಡೆಯಾಗಲಿದ್ದು, ವಿಶ್ವದಾದ್ಯಂತ ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ.