Health Tips: ಚಳಿಗಾಲದ ಸೋಂಕಿಗೆ ಮನೆಮದ್ದು ಬೇಕೆ?
ಚಳಿಗಾಲದಲ್ಲಿ ಮೂಗು, ಗಂಟಲು, ಶ್ವಾಸನಾಳಗಳು, ಸೈನಸ್‌ಗಳಿಗೆ ಸೋಂಕು ಥಟ್ಟನೆ ತಗುಲುತ್ತದೆ. ಪರಿಣಾಮ ನಿಲ್ಲದ ನೆಗಡಿ, ಕಾಡುವ ಕೆಮ್ಮು, ಕಿರಿಕಿರಿಯ ಗಂಟಲು, ಬಿಗಿಯುವ ಕಫ, ಊದಿಕೊಳ್ಳುವ ಸೈನಸ್, ಸುಸ್ತು, ಜಡತೆ… ಪಟ್ಟಿ ದೊಡ್ಡದು. ಕೆಮ್ಮಂತೂ ಶತಮಾನಗಳಿಂದ ನಮಗೇ ಅಂಟಿದಂತೆ ಗೋಳಾಡಿಸಿಬಿಡುತ್ತದೆ. ಒಮ್ಮೆ ಸೋಂಕು, ಇನ್ನೊಮ್ಮೆ ಅಲರ್ಜಿ ಎನ್ನುತ್ತ ನಮ್ಮ ಜನ್ಮಾಂತರದ ಬಂಧುಗಳಂತೆ ಜತೆಗೇ ಉಳಿದುಬಿಡುವ ಇವುಗಳನ್ನು ಓಡಿಸುವುದಕ್ಕೆ ಒಂದಿಷ್ಟು ಮನೆಮದ್ದುಗಳು ಇಲ್ಲಿವೆ.
ಸಾಂದರ್ಭಿಕ ಚಿತ್ರ. -
ನವದೆಲಿ, ಡಿ. 19: ಚಳಿಗಾಲ ಎನ್ನುವುದು (Winter Health Care) ಮೂಗು ಸೋರುವ, ಗಂಟಲು ಕೆರೆಯುವ, ಕೆಮ್ಮುತ್ತಲೇ ಕಳೆಯುವ ಕಾಲ ಆಗಬೇಕಿಲ್ಲ. ಈ ದಿನಗಳಲ್ಲಿ ವೈರಸ್ ಬಾಧೆ ಹೆಚ್ಚೆಂಬುದು ನಿಜ. ಮೂಗು, ಗಂಟಲು, ಶ್ವಾಸನಾಳಗಳು, ಸೈನಸ್‌ಗಳಿಗೆ ಸೋಂಕು ಥಟ್ಟನೆ ತಗುಲುತ್ತದೆ. ಪರಿಣಾಮವೇ ನಿಲ್ಲದ ನೆಗಡಿ, ಕಾಡುವ ಕೆಮ್ಮು, ಕಿರಿಕಿರಿಯ ಗಂಟಲು, ಬಿಗಿಯುವ ಕಫ, ಊದಿಕೊಳ್ಳುವ ಸೈನಸ್, ಸುಸ್ತು, ಜಡತೆ… ಪಟ್ಟಿ ದೊಡ್ಡದು. ಕೆಮ್ಮಂತೂ ಶತಮಾನಗಳಿಂದ ನಮಗೇ ಅಂಟಿದಂತೆ ಗೋಳಾಡಿಸಿಬಿಡುತ್ತದೆ. ಒಮ್ಮೆ ಸೋಂಕು, ಇನ್ನೊಮ್ಮೆ ಅಲರ್ಜಿ ಎನ್ನುತ್ತ ನಮ್ಮ ಜನ್ಮಾಂತರದ ಬಂಧುಗಳಂತೆ ಜತೆಗೇ ಉಳಿದುಬಿಡುವ ಇವುಗಳನ್ನು ಓಡಿಸುವುದಕ್ಕೆ ಒಂದಿಷ್ಟು ಮನೆಮದ್ದುಗಳು ಇಲ್ಲಿವೆ.
ಬೆಳ್ಳುಳ್ಳಿ: ಪ್ರಬಲ ಉತ್ಕರ್ಷಣ ನಿರೋಧಕವನ್ನು ಹೊಂದಿರುವ ಬೆಳ್ಳುಳ್ಳಿ ಚಳಿಗಾಲಕ್ಕೆ ಅಗತ್ಯವಾಗಿ ಬೇಕಾದ್ದು. ಗಂಟಲು ನೋವು, ಕೆಮ್ಮಿನ ಕಿರಿಕಿರಿಗೆ ಹಸಿ ಬೆಳ್ಳುಳ್ಳಿಯನ್ನು ಜಜ್ಜಿ ನಾಲ್ಕಾರು ಹರಳು ಉಪ್ಪಿನೊಂದಿಗೆ ಬಾಯಲ್ಲಿಟ್ಟುಕೊಂಡು, ಬರುವ ರಸವನ್ನು ನುಂಗುತ್ತಿದ್ದರೆ ಉಪಯುಕ್ತ. ಹಸಿ ಬೆಳ್ಳುಳ್ಳಿಯ ವಾಸನೆ ಸಹಿಸಲು ಕಷ್ಟ ಎಂದಿದ್ದರೆ, ಮಾಡುವ ಅಡುಗೆಗಳಲ್ಲಿ ಬೆಳ್ಳುಳ್ಳಿಯನ್ನು ಧಾರಾಳವಾಗಿ ಬಳಸಿ.
ಶುಂಠಿ: ಉರಿಯೂತ ನಿವಾರಣೆ, ಸೋಂಕು ನಿಯಂತ್ರಣ ಮತ್ತು ಕಫ ಕರಗುವುದಕ್ಕೆ ಶುಂಠಿ ಪರಿಣಾಮಕಾರಿ ಮದ್ದು. ಇದರಲ್ಲಿರುವ ಜಿಂಜರಾಲ್ ಅಂಶಗಳು ಉತ್ತಮ ಉತ್ಕರ್ಷಣ ನಿರೋಧಕಗಳಾಗಿ ಕೆಲಸ ಮಾಡುತ್ತವೆ. ಊದಿಕೊಂಡ ಶ್ವಾಸನಾಳಗಳನ್ನು ಹಿಗ್ಗಿಸಿ, ಕಫ ಹೊರಹೋಗುವಂತೆ ಮಾಡುವ ಒಳ್ಳೆಯ ಬ್ರಾಂಕೊ-ಡಯಲೇಟರ್ ಇದು. ಕೊಂಚ ಶುಂಠಿಯ ರಸವನ್ನು ತೆಗೆದು ಅದಕ್ಕೆ ಸ್ವಲ್ಪ ಜೇನುತುಪ್ಪ ಸೇರಿಸಿ ಸೇವಿಸಬಹುದು. ಒಣಶುಂಠಿಯನ್ನು ಬಾಯಲ್ಲಿಟ್ಟು ರಸ ನುಂಗಬಹುದು ಅಥವಾ ಶುಂಠಿಯ ಚಹಾ ಇಲ್ಲವೇ ಕಷಾಯ ಮಾಡಿ ಸೇವಿಸಬಹುದು.
ತುಳಸಿ: ಕೆಮ್ಮು ಮತ್ತು ಕಫ ನಿವಾರಣೆಯ ಗುಣ ಹೊಂದಿರುವ ತುಳಸಿಯಲ್ಲಿ ಸೋಂಕು ನಿರೋಧಕ ಸಾಮರ್ಥ್ಯವೂ ಇದೆ. ನೆಗಡಿ, ಜ್ವರದಂಥ ಸೂಕ್ಷ್ಮಾಣುಗಳ ಸೋಂಕಿಗೂ ಇದು ಔಷಧಿಯಾಗಬಲ್ಲದು. ಶ್ವಾಸನಾಳಗಳನ್ನು ಹಿಗ್ಗಿಸಿ ಬಿಗಿದ ಕಫವನ್ನು ಸಡಿಲ ಮಾಡುತ್ತದೆ. ಒಣ ಕೆಮ್ಮಿಗೆ ತುಳಸಿಯ ಕಷಾಯ ಪರಿಣಾಮಕಾರಿ ಮದ್ದು. ತುಳಸಿಯ ರಸವನ್ನು ತೆಗೆದು ಕೊಂಚ ಜೇನುತುಪ್ಪ ಸೇರಿಸಿ ಸೇವಿಸಿದರೂ ಫಲಿತಾಂಶ ಉತ್ತಮವಾಗಿರುತ್ತದೆ.
ಈರುಳ್ಳಿ: ಇದರಲ್ಲಿರುವ ಸಲ್ಫರ್ ಅಂಶಗಳು ಕಫ ಕರಗುವುದಕ್ಕೆ ನೆರವಾಗುತ್ತವೆ. ನೆಗಡಿಯನ್ನು ಕಡಿಮೆ ಮಾಡುವುದಕ್ಕೆ ಮತ್ತು ಬಿಗಿದ ಕಫವನ್ನು ಕರಗಿಸುವುದಕ್ಕೆ ಇದನ್ನು ಪರಂಪರಾಗತ ಔಷಧಿಯಲ್ಲಿ ಬಳಸಲಾಗುತ್ತದೆ. ಈರುಳ್ಳಿಯನ್ನು ಜಜ್ಜಿ ರಸ ತೆಗೆದು ಅಷ್ಟೇ ಪ್ರಮಾಣದ ಜೇನು ತುಪ್ಪದೊಂದಿಗೆ ಸೇವಿಸುವುದು ಕ್ರಮ. ಅದಿಲ್ಲದಿದ್ದರೆ, ಈರುಳ್ಳಿಯನ್ನು ಕೆಂಪು ಕಲ್ಲುಸಕ್ಕರೆ ಯೊಂದಿಗೆ ಕುದಿಸಿ ಕಷಾಯ ಮಾಡಿ. ಶೋಧಿಸಿದ ಕಷಾಯಕ್ಕೆ ನಾಲ್ಕಾರು ಹನಿ ನಿಂಬೆ ರಸ ಹಾಕಿ ಕುಡಿಯುವುದು ಪರಿಣಾಮಕಾರಿ.
ರಾತ್ರಿ ಮಲಗುವ ಮೊದಲು ಇದನ್ನು ತಿಂದ್ರೆ ಕಣ್ತುಂಬ ನಿದ್ರೆ ಗ್ಯಾರಂಟಿ
ಅರಿಶಿನ: ನೆಗಡಿ-ಕೆಮ್ಮಿಗೆ ಅರಿಶಿನ ಹಾಲು ಅಥವಾ ಕಷಾಯ ಸೇವಿಸುವುದು ಅಜ್ಜಿಯರ ಕಾಲದಿಂದ ಬಳಕೆಯಲ್ಲಿದೆ. ಇದು ಚಿಕ್ಕ ಮಕ್ಕಳಿಂದ ಹಿಡಿದು ವೃದ್ಧರವರೆಗೆ ಎಲ್ಲರಿಗೂ ಹಿತವಾಗುವಂಥ ಮದ್ದು. ಸೋಂಕು ನಿವಾರಿಸುವ, ಉರಿಯೂತ ಶಮನ ಮಾಡುವಂಥ ಉತ್ಕರ್ಷಣ ನಿರೋಧಕ ಕರ್ಕುಮಿನ್ ಅರಿಶಿನದಲ್ಲಿದೆ. ಗಂಟಲು ನೋವು, ಕಿರಿಕಿರಿಗಳಿಗೆ ಬಿಸಿ ನೀರಿಗೆ ಉಪ್ಪಿನೊಂದಿಗೆ ಅರಿಶಿನವನ್ನೂ ಹಾಕಿ ಗಾರ್ಗಲ್ ಮಾಡುವುದು ಉತ್ತಮ.
ಕರಿಮೆಣಸು: ಅರಿಶಿನದೊಂದಿಗೆ ಕರಿ ಕಾಳುಮೆಣಸು ಬಳಸುವುದರಿಂದ ಉತ್ಕರ್ಷಣ ನಿರೋಧಕಗಳ ಸಾಂದ್ರತೆಯನ್ನು ಹೆಚ್ಚಿಸಬಹುದು. ಯಾವುದೇ ಕಷಾಯಗಳ ಜತೆಗೆ, ಸೂಪ್‌ಗಳ ಜತೆಗೆ ಕರಿ ಮೆಣಸು ಬಳಸಿದರೆ ಸೋಂಕುಗಳನ್ನು ಪರಿಣಾಮಕಾರಿಯಾಗಿ ತಡೆಗಟ್ಟಬಹುದು. ಕಾಳು ಮೆಣಸಿನಲ್ಲಿರುವ ಪೆಪ್ಪರಿನ್ ಅಂಶದಲ್ಲಿ ಬ್ಯಾಕ್ಟೀರಿಯ ಮತ್ತು ವೈರಸ್‌ಗಳನ್ನು ನಿರೋಧಿಸುವ ಗುಣಗಳಿವೆ. ಹಾಗಾಗಿ ಚಳಿಗಾಲದ ಖಾದ್ಯಗಳ ಖಾರಕ್ಕೆ ಕರಿಮೆಣಸು ಉಪಯುಕ್ತ.
ವಿಟಮಿನ್ ಸಿ: ದೇಹದ ಪ್ರತಿರೋಧಕತೆಯನ್ನು ಹೆಚ್ಚಿಸುವ ಸಿ ಜೀವಸತ್ವಭರಿತ ಆಹಾರಗಳನ್ನು ಹೆಚ್ಚಾಗಿ ಸೇವಿಸುವುದರಿಂದಲೂ ಸೋಂಕುಗಳ ಕಾಟದಿಂದ ತಪ್ಪಿಸಿಕೊಳ್ಳಬಹುದು. ಕಿತ್ತಳೆ ಹಣ್ಣು, ದ್ರಾಕ್ಷಿ, ನಿಂಬೆರಸ, ಕಿವಿ ಹಣ್ಣು, ನೆಲ್ಲಿಕಾಯಿ, ಪರ್ಸಿಮನ್, ಬೆರ್ರಿಗಳು, ಬ್ರೊಕೊಲಿ, ಕ್ಯಾಪ್ಸಿಕಂ, ಮೊಳಕೆ ಕಾಳುಗಳು, ಹೂ ಕೋಸಿನಿಂದ ಹೆಚ್ಚಿನ ವಿಟಮಿನ್ ಸಿ ಪಡೆಯಬಹುದು.
ಜಿಂಕ್: ವಿಟಮಿನ್ ಸಿ ಜತೆಗೆ ಸತು ಅಥವಾ ಜಿಂಕ್ ಇರುವಂಥ ಆಹಾರಗಳು ಸಹ ರೋಗನಿರೋಧಕ ಶಕ್ತಿಯನ್ನು ಉತ್ತೇಜಿಸಬಲ್ಲವು. ದೇಹದಲ್ಲಿ ಬಿಳಿ ರಕ್ತ ಕಣಗಳ ಉತ್ಪಾದನೆಯನ್ನು ಪ್ರಚೋದಿಸುವ ಶಕ್ತಿ ಜಿಂಕ್‌ಗೆ ಇದೆ. ಯಾವುದೋ ಸೋಂಕುಗಳ ವಿರುದ್ಧ ಹೋರಾಡಲು ದೇಹದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಬಿಳಿ ರಕ್ತಕಣಗಳು ಬೇಕು. ಹಾಗಾಗಿ ಕುಂಬಳಕಾಯಿ ಬೀಜ, ಸೂರ್ಯಕಾಂತಿ ಬೀಜ, ಗೋಡಂಬಿ, ಹೆಂಪ್ ಬೀಜ, ಮೊಟ್ಟೆ, ಅಣಬೆ ಮುಂತಾದ ಜಿಂಕ್ ಹೆಚ್ಚಿರುವ ಆಹಾರಗಳನ್ನು ಸೇವಿಸುವುದು ಪ್ರಯೋಜನಕಾರಿ.