Vishwavani Health: ಜೆನ್ ಝೀಗಳು ಇಷ್ಟಪಟ್ಟು ಸೇವಿಸುವ ಸಂಸ್ಕರಿಸಿದ ಮಾಂಸಾಹಾರದಿಂದ ಕ್ಯಾನ್ಸರ್ ಅಪಾಯ ಹೆಚ್ಚು; ಯಾಕೆ?
Side Effects On Meat Eat: ಜೆನ್ ಝೀ ಸಮುದಾಯದವರು ಸಂಸ್ಕರಿಸಿದ ಆಹಾರ, ಪಾಶ್ಚಾತ್ಯ ಜೀವನ ಶೈಲಿಯನ್ನು ಅನುಸರಿಸುತ್ತಿದ್ದಾರೆ. ಈ ಮೂಲಕ ಅವರಲ್ಲಿ ಕ್ಯಾನ್ಸರ್ ಅಪಾಯ ಹೆಚ್ಚುತ್ತಿದೆ. ಸಂಸ್ಕರಿಸಿದ ಮಾಂಸಾಹಾರ ಸೇವನೆ ಅತ್ಯಂತ ಅಪಾಯಕಾರಿ. ಕ್ಯಾನ್ಸರ್‌ಗೆ ಇದು ಮುಖ್ಯ ಕಾರಣ ಎನ್ನುತ್ತಾರೆ ಮೈಸೂರು ವಿವಿಯ ಡಾ. ಸುತ್ತೂರು ಮಾಲಿನಿ. ಈ ಕುರಿತು ಅವರು 'ವಿಶ್ವವಾಣಿ ಹೆಲ್ತ್ʼ ಯುಟ್ಯೂಬ್ ಚಾನಲ್‌ಗೆ ನೀಡಿರುವ ಮಾಹಿತಿ ಇಲ್ಲಿದೆ.
ಡಾ. ಸುತ್ತೂರು ಮಾಲಿನಿ -
ಬೆಂಗಳೂರು: ಹೆಚ್ಚಿನ ಸಸ್ಯಾಹಾರ ಸೇವನೆ ಆರೋಗ್ಯಕ್ಕೆ ಒಳ್ಳೆಯದು. ಆದರೆ ಹೆಚ್ಚಿನ ಮಾಂಸಾಹಾರ ಸೇವನೆ ಅಪಾಯಕಾರಿ. ಅದರಲ್ಲಿಯೂ ಸಂಸ್ಕರಿಸಿದ ಮಾಂಸಾಹಾರ ದೇಹಕ್ಕೆ ಒಳ್ಳೆಯದಲ್ಲ (Side Effects On Meat Eat) ಎನ್ನುತ್ತಾರೆ ಮೈಸೂರು ವಿಶ್ವವಿದ್ಯಾಲಯದ ಜೆನೆಟಿಕ್ಸ್ ಮತ್ತು ಜಿನೋಮಿಕ್ಸ್ ಅಧ್ಯಯನ ವಿಭಾಗದ ಮುಖ್ಯಸ್ಥೆ ಡಾ. ಸುತ್ತೂರು ಮಾಲಿನಿ (Dr. Suttur Malini). ʼವಿಶ್ವವಾಣಿ ಹೆಲ್ತ್ʼ (Vishwavani Health) ಯುಟ್ಯೂಬ್ ಚಾನಲ್‌ನಲ್ಲಿ ಕೇಶವ್ ಪ್ರಸಾದ್ ಅವರೊಂದಿಗಿನ ಸಂದರ್ಶನದಲ್ಲಿ ಅವರು ಮಾತನಾಡಿ, ಜೆನ್ ಝೀಗಳು ಸಂಸ್ಕರಿಸಿದ ಆಹಾರ, ಪಾಶ್ಚಾತ್ಯ ಜೀವನ ಶೈಲಿಯನ್ನು ಅನುಸರಿಸುತ್ತಿದ್ದಾರೆ. ಇದರಿಂದ ಅವರಲ್ಲಿ ಕ್ಯಾನ್ಸರ್ ಅಪಾಯವು ಹೆಚ್ಚು ಎಂದರು.
ಯಾವುದೇ ಆಹಾರ ಸೇವಿಸುವ ಮೊದಲು ಇದು ನಮ್ಮ ದೇಹಕ್ಕೆ ಒಳ್ಳೆಯದೇ ಎಂಬುದನ್ನು ನಾವು ಪ್ರಶ್ನೆ ಮಾಡಿಕೊಳ್ಳಬೇಕು. ಇದರಿಂದ ನಾವು ನಮ್ಮ ಆರೋಗ್ಯ ಕಾಳಜಿ ಬಗ್ಗೆ ಮುಂಚಿತವಾಗಿಯೇ ಮನಸ್ಸಿಗೆ ಸೂಚನೆ ಕೊಟ್ಟಂತಾಗುತ್ತದೆ. ಆಗ ಅದು ಬೇಡವಾದ ಆಹಾರಗಳನ್ನು ತಿರಸ್ಕರಿಸಲು ಪ್ರಾರಂಭಿಸುತ್ತದೆ ಎಂದು ಹೇಳಿದರು.
ಡಾ. ಸುತ್ತೂರು ಮಾಲಿನಿ ಜತೆಗಿನ ಸಂದರ್ಶನ:
ನಮ್ಮ ಆಹಾರದಲ್ಲಿ ಸಸ್ಯಾಹಾರ ಸೇವನೆ ಪ್ರಮಾಣ ಹೆಚ್ಚಿರಬೇಕು. ಮಾಂಸಾಹಾರವನ್ನು ವಾರಕ್ಕೊಮ್ಮೆ ಸೇವಿಸಿದರೆ ಸಾಕು. ತಾಜಾ ಮಾಂಸಾಹಾರ ಸೇವನೆ ಉತ್ತಮ. ಅದರಿಂದ ಯಾವುದೇ ರೀತಿಯ ಸಮಸ್ಯೆಗಳು ಉಂಟಾಗುವುದಿಲ್ಲ. ಆದರೆ ಸರಿಯಾಗಿ ಬೇಯಿಸದ, ಸರಿಯಾಗಿ ಸ್ವಚ್ಛಗೊಳಿಸದ ಜೊತೆಗೆ ಸಂಸ್ಕರಿಸದ ಮಾಂಸಾಹಾರ ಸೇವನೆ ಆರೋಗ್ಯಕ್ಕೆ ಒಳ್ಳೆಯದಲ್ಲ ಎಂದರು.
ಆಹಾರ ಸೇವನೆಯ ವಿಧಾನದಲ್ಲಿದೆ ಆರೋಗ್ಯದ ಗುಟ್ಟು: ವಿಜ್ಞಾನ ಹೇಳೋದೇನು?
ಸಂಸ್ಕರಿಸಿದ ಆಹಾರ ಸೇವನೆಯಿಂದಲೇ ಹೆಚ್ಚಿನ ಆರೋಗ್ಯ ಸಮಸ್ಯೆಗಳು ಕಾಡುತ್ತವೆ. ಇದು ಕ್ಯಾನ್ಸರ್‌ಗೆ ಮೂಲ ಕಾರಣವೂ ಹೌದು. ವಿಶ್ವ ಆರೋಗ್ಯ ಸಂಸ್ಥೆ ಸಂಸ್ಕರಿಸಿದ ಮಾಂಸಾಹಾರವನ್ನು ಗ್ರೂಪ್ 1 ಕ್ಯಾನರ್‌ಕಾರಕಗಳು ಎಂದು ಗುರುತಿಸಿದೆ. ಇದು ಈ ಗ್ರೂಪ್‌ನಲ್ಲಿ ಸಿಗರೇಟು, ಆಲ್ಕೋಹಾಲ್ ಕೂಡ ಇದೆ. ಹೀಗಾಗಿ ಸಂಸ್ಕರಿಸಿದ ಮಾಂಸಾಹಾರವನ್ನು ಸೇವಿಸದೇ ಇರುವುದೇ ಒಳ್ಳೆಯದು ಎಂದು ಅವರು ಸಲಹೆ ನೀಡಿದರು.
ಅಪರೂಪಕ್ಕೊಮ್ಮೆ ಇದನ್ನು ಸೇವನೆ ಮಾಡಿದರೆ ಹೆಚ್ಚಿನ ಹಾನಿಯಾಗುವುದಿಲ್ಲ. ಆದರೆ ಅದನ್ನೇ ನಾವು ಹೆಚ್ಚಾಗಿ ಬಳಕೆ ಮಾಡುವುದರಿಂದ ಸಮಸ್ಯೆ ಹೆಚ್ಚುತ್ತದೆ. ಮಾಂಸಾಹಾರ ಸಂಸ್ಕರಣೆಗೆ ಸೋಡಿಯಂ ನೈಟ್ರೈಡ್, ಸೋಡಿಯಂ ನೈಟ್ರೇಟ್ ಬಳಸಲಾಗುತ್ತದೆ. ಇದು ದೇಹದೊಳಗೆ ಸೇರಿ ಎನ್ ನೈಟ್ರೊ ಅಮೈನೋ ಬಿಡುಗಡೆ ಮಾಡುತ್ತದೆ. ಇದರಿಂದಲೇ ಕ್ಯಾನ್ಸರ್ ಬರುತ್ತದೆ. ಯಾಕೆಂದರೆ ಇದು ದೇಹದಲ್ಲಿ ಡಿಎನ್‌ಎ ರೂಪಾಂತರ ಮಾಡುತ್ತದೆ. ದೇಹದಲ್ಲಿ ಕ್ಯಾನರ್ ಬಾರದಂತೆ ತಡೆಯಲು ಇರುವ ಜೀನ್‌ಗಳನ್ನೇ ಇದು ನಾಶ ಮಾಡುತ್ತದೆ ಎಂದು ತಿಳಿಸಿದರು.
ಇನ್ನು ಸಂಸ್ಕರಿಸಿದ ಆಹಾರದಲ್ಲಿ ಐರನ್ ಜಾಸ್ತಿ ಇರುತ್ತದೆ. ಇದು ಜೀವ ಕೋಶದ ಹೊರ ಪದರವನ್ನು ನಾಶ ಮಾಡುತ್ತದೆ. ಇದರಿಂದ ಕೂಡ ಹಲವಾರು ರೀತಿಯ ತೊಂದರೆಗಳಾಗುತ್ತವೆ. ಸುಟ್ಟು, ಡೀಪ್ ಫ್ರೈ ಮಾಡಿರುವ ಮಾಂಸಾಹಾರವನ್ನು ಸೇವಿಸಲೇಬಾರದು. ಇದರಿಂದ ಕೂಡ ನಮ್ಮ ಡಿಎನ್‌ಎ ನಾಶವಾಗುತ್ತದೆ ಎಂದರು.
ಇನ್ನು ಮಾಂಸವನ್ನು ಸರಿಯಾದ ವಿಧಾನದಲ್ಲಿ ತಯಾರಿಸುವುದು ಕೂಡ ಅತ್ಯಗತ್ಯ. ಸಾಮಾನ್ಯವಾಗಿ ಆಹಾರವನ್ನು ಬೇಯಿಸಲು ಒಂದು ನಿಯಮವಿದೆ. ಇವತ್ತು ಹೆಚ್ಚಿನವರಿಗೆ ಇದರ ಬಗ್ಗೆ ಗೊತ್ತೇ ಇಲ್ಲ. ಇದರಿಂದ ಅಮೃತವಾಗಬೇಕಾದ ಆಹಾರ ವಿಷವಾಗುತ್ತಿದೆ. ಮಾಂಸಾಹಾರವನ್ನು ಸರಿಯಾದ ವಿಧಾನದಲ್ಲಿ ಮಾಡದೇ ಇದ್ದರೆ ಇದು ಉರಿಯೂತವನ್ನು ಕೂಡ ಉಂಟು ಮಾಡುತ್ತದೆ. ದೇಹಕ್ಕೆ ತೊಂದರೆ ಉಂಟು ಮಾಡುವ ರಾಸಾಯನಿಕಗಳನ್ನು ಹೆಚ್ಚು ಮಾಡುತ್ತದೆ. ವಯಸ್ಸಾಗುವಿಕೆಯನ್ನು ಹೆಚ್ಚು ವೇಗಗೊಳಿಸುತ್ತಿದೆ ಎಂದು ತಿಳಿಸಿದರು.
ಇನ್ನು ಮಾಂಸಾಹಾರ ತಯಾರಿಸುವ ವಿಧಾನ ಕೂಡ ಸರಿಯಾಗಿರಬೇಕು. ಇದರಲ್ಲಿ ಸರಿಯಾದ ಪ್ರಮಾಣದ ಸಾಕಷ್ಟು ಮಸಾಲೆಗಳು ಬಳಕೆಯಾಗಲೇಬೇಕು. ಮುಖ್ಯವಾಗಿ ಶುಂಠಿ, ಅರಶಿನ, ಕರಿಮೆಣಸು. ಇವುಗಳಲ್ಲಿ ಫೈಟೋ ಕೆಮಿಕಲ್ ಇರುವುದರಿಂದ ಅವುಗಳು ಕ್ಯಾನ್ಸರ್ ವಿರುದ್ಧಹೋರಾಡಲು ದೇಹಕ್ಕೆ ರಕ್ಷಣೆಯನ್ನು ಒದಗಿಸುತ್ತದೆ ಎಂದು ಹೇಳಿದರು.
ಪರಿಮಳಕ್ಕೆ ಹೆಸರುವಾಸಿಯಾಗಿಲ್ಲ! ಅದ್ಭುತ ಆರೋಗ್ಯ ಲಾಭವನ್ನು ಹೊಂದಿದೆ ಏಲಕ್ಕಿ!
ಇದರೊಂದಿಗೆ ಮಾಂಸಾಹಾರ ಸೇವನೆ ಮಾಡುವಾಗ ಅದರ ಜತೆ ಫೈಬರ್ ಹೆಚ್ಚಿನ ಪ್ರಮಾಣದಲ್ಲಿರುವ ಆಹಾರ ಸೇವಿಸಬೇಕು. ಯಾಕೆಂದರೆ ಮಾಂಸಾಹಾರದ ಜತೆ ಏನು ಸೇವನೆ ಮಾಡುತ್ತಿದ್ದೇವೆ ಎಂಬುದು ಕೂಡ ಮುಖ್ಯವಾಗಿರುತ್ತದೆ. ಅಲ್ಲದೇ ದೈಹಿಕ ಶ್ರಮ ಕೂಡ ಅಷ್ಟೇ ಅಗತ್ಯವಾಗಿದೆ ಎಂದು ಡಾ. ಸುತ್ತೂರು ಮಾಲಿನಿ ತಿಳಿಸಿದರು.