Health Tips: ಅತಿಯಾದ ಒತ್ತಡ, ಶಿಸ್ತಿಲ್ಲದ ಜೀವನಶೈಲಿ... ಇವುಗಳೇ ಪಾರ್ಶ್ವವಾಯುವಿಗೆ ಕಾರಣ
ಹೃದಯಾಘಾತ ಹೃದಯಕ್ಕೆ ಹಾನಿ ಮಾಡಿದಂತೆ ಸ್ಟ್ರೋಕ್ ನೇರ ಮೆದುಳಿನ ನರಗಳ ಮೇಲೆ ಪರಿಣಾಮ ಬೀರುತ್ತದೆ. ಇದರಿಂದ ವ್ಯಕ್ತಿಯ ದೇಹದ ಒಂದು ಭಾಗ ಊನವಾಗಬಹುದು ಅಥವಾ ಸಾವು ಕೂಡ ಸಂಭವಿಸಬಹುದು. ಹೀಗಾಗಿ ಸ್ಟ್ರೋಕ್ ಸಮಸ್ಯೆ ಬಗ್ಗೆ ಅರಿವು, ಮುಂಜಾಗ್ರತೆ,ಚಿಕಿತ್ಸೆ ಬಗ್ಗೆ ತಿಳುವಳಿಕೆ ಬಹಳ ಮುಖ್ಯ.


ಬೆಂಗಳೂರು: ಸ್ಟ್ರೋಕ್ ಅಥವಾ ಪಾರ್ಶ್ವವಾಯು ಎಂದು ಕರೆಯಲ್ಪಡುವ ಸಮಸ್ಯೆ ಮಾರಣಾಂತಿಕವಾಗಿದ್ದು.ಇದಕ್ಕೆ ಬ್ರೇನ್ ಅಟ್ಯಾಕ್ ಎಂದೂ ಕರೆಯಲಾಗುತ್ತದೆ. ಹೃದಯಾಘಾತ ಹೃದಯಕ್ಕೆ ಹಾನಿ ಮಾಡಿದಂತೆ ಸ್ಟ್ರೋಕ್ (Stroke) ನೇರ ಮೆದುಳಿನ ನರಗಳ ಮೇಲೆ ಪರಿಣಾಮ ಬೀರುತ್ತದೆ. ಇದರಿಂದ ವ್ಯಕ್ತಿಯ ದೇಹದ ಒಂದು ಭಾಗ ಊನವಾಗಬಹುದು ಅಥವಾ ಸಾವು ಕೂಡ ಸಂಭವಿಸಬಹುದು. ಹೀಗಾಗಿ ಸ್ಟ್ರೋಕ್ ಸಮಸ್ಯೆ ಬಗ್ಗೆ ಅರಿವು, ಮುಂಜಾಗ್ರತೆ , ಚಿಕಿತ್ಸೆ ಬಗ್ಗೆ ತಿಳುವಳಿಕೆ ಬಹಳ ಮುಖ್ಯ.
ವಿಶ್ವದಲ್ಲಿ ನಾಲ್ವರಲ್ಲಿ ಒಬ್ಬರು ತಮ್ಮ ಜೀವಿತಕಾಲದಲ್ಲಿ ಸ್ಟ್ರೋಕ್ ಸಮಸ್ಯೆಯನ್ನು ಅನುಭವಿಸುತ್ತಾರೆ. ಈಗಾಗಲೇ 10 ಕೋಟಿ ಜನರು ಸ್ಟ್ರೋಕ್ ಸಮಸ್ಯೆ ಜೊತೆಯೇ ಬದುಕುತ್ತಿದ್ದಾರೆ.ವಯಸ್ಸು ಹೆಚ್ಚಾಗುತ್ತಿದ್ದಂತೆ ಪಾರ್ಶ್ವವಾಯುವಿಗೆ ಗುರಿಯಾಗುವ ಸಾಧ್ಯತೆ ಯೂ ಅಧಿಕವಾಗಿರುತ್ತದೆ. ಅದರಲ್ಲೂ ಶೇ. 85 ರಷ್ಟು ಐಶೆಮಿಕ್ ಸ್ಟ್ರೋಕ್ ಪ್ರಕರಣ ಕಂಡು ಬಂದರೂ ಹೆಮೊರೆಜಿಕ್ ಸ್ಟ್ರೋಕ್ ಹೆಚ್ಚು ಅಂಗವೈಕಲ್ಯತೆಗೆ ಹಾಗೂ ಸಾವಿಗೆ ಕಾರಣವಾಗುತ್ತದೆ. 1990 ರಿಂದ 2019ರವರೆಗೆ ಸ್ಟ್ರೋಕ್ ಪ್ರಕರಣಗ ಳಲ್ಲಿ ಶೇ. 70 ರಷ್ಟು ಏರಿಕೆ ಕಂಡಿದೆ ಹಾಗೇ ಸಾವನ್ನಪ್ಪುವ ಪ್ರಕರಣಗಳಲ್ಲಿ ಶೇ. 43ರಷ್ಟು ಏರಿಕೆ ದಾಖಲಿಸಿದೆ. ಕೆಳ ಹಾಗೂ ಮಧ್ಯಮ ಆದಾಯ ದೇಶಗಳಲ್ಲಿ ಶೇ. 86 ರಷ್ಟು ಸಾವು ಸ್ಟ್ರೋಕ್ ಸಮಸ್ಯೆಯಿಂದಲೇ ಕಂಡುಬರುತ್ತವೆ ಎಂದು ಮಂಗಳೂರಿನ ಕನ್ಸಲ್ಟೆಂಟ್ ನ್ಯೂರೊಲಾಜಿ, ಕೆಎಂಸಿ ಆಸ್ಪತ್ರೆಯ ವೈದ್ಯರು ಡಾ ರೋಹಿತ್ ಪೈ ತಿಳಿಸಿದ್ದಾರೆ.
ಪಾರ್ಶ್ವವಾಯುವಿಗೆ ಕಾರಣಗಳೇನು?
ಪಾರ್ಶ್ವವಾಯುವಿಗೆ ಕಾರಣವಾಗುವ ಅಂಶಗಳಲ್ಲಿ ಬದಲಿಸಬಹುದಾದ ಹಾಗೂ ಬದಲಾಯಿಸಲು ಅಸಾಧ್ಯವಾದ ಅಂಶಗಳು ಕೂಡ ಇವೆ. ಬದಲಾಯಿಸಲು ಅಸಾಧ್ಯವಾದ ಅಂಶವೆಂದರೆ ಅದು ವಂಶವಾಹಿನಿಯಲ್ಲಿ ಬರುವ ಸಮಸ್ಯೆ. ಇನ್ನು ಬದಲಾಯಿಸ ಬಹುದಾದ ಅಂಶಗಳು ಎಂದರೆ ಅತಿಯಾದ ರಕ್ತದೊತ್ತಡ, ಅನಿಯಂತ್ರಿತ ಡಯಾಬಿಟಿಸ್, ಧೂಮ ಪಾನ,ಸ್ಯಾಚುರೇಟೆಡ್ ಕೊಬ್ಬುಗಳಲ್ಲಿ ಸಮೃದ್ಧವಾಗಿರುವ ಆಹಾರಗಳು,ಬೊಜ್ಜು ಅತಿಯಾದ ಮದ್ಯ ಪಾನ,ಶಿಸ್ತಿಲ್ಲದ ಜೀವನಶೈಲಿ, ಹೃದಯ ಕಾಯಿಲೆ, ಪೇಟೆಂಟ್ ಫೊರಮೆನ್ ಓವಲೆ ಮುಂತಾದ ಹೃದಯ ಅಪಾಯಕಾರಿ ಅಂಶಗಳು.
ಪಾರ್ಶ್ವವಾಯು ಲಕ್ಷಣಗಳೇನು?
ಕೆಎಂಸಿ ಆಸ್ಪತ್ರೆಯ ಇಂಟರ್ವೆನ್ಶನಲ್ ನ್ಯೂರೊಲಾಜಿಸ್ಟ್ ಡಾ. ಶಿವಾನಂದ ಪೈ ಈ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ. ಸ್ಟ್ರೋಕ್ ನಲ್ಲಿ ಎರಡು ವಿಧಗಳಿವೆ. ಅಪಧಮನಿ ಅಥವಾ ರಕ್ತನಾಳದಲ್ಲಿ ರಕ್ತ ಹೆಪ್ಪುಗಟ್ಟಿದಾಗ ರಕ್ತ ಸಂಚಲನದಲ್ಲಿ ವ್ಯತ್ಯಯ ಉಂಟಾ ಗುತ್ತದೆ. ಇದರಿಂದ ಮೆದುಳಿಗೆ ಪೂರೈಕೆಯಾಗುವ ರಕ್ತದ ಪ್ರಮಾಣದಲ್ಲಿ ಸಮಸ್ಯೆ ಉಂಟಾದಾಗ ಸ್ಟ್ರೋಕ್ ಆಗುವ ಸಂಭವವಿರುತ್ತದೆ. ಇನ್ನೊಂದು ಹೆಮೊರಾಜಿಕ್ ಸ್ಟ್ರೋಕ್. ಮೆದುಳಿನ ನರಗಳು ಒಡೆದು ರಕ್ತಸ್ರಾವ ಉಂಟಾದಾಗ ಸ್ಟ್ರೋಕ್ ಆಗಬಹುದು. ಎರಡೂ ವಿಧದಲ್ಲಿ ಮೆದುಳಿನ ಜೀವಕೋಶಗಳಿಗೆ ಹಾನಿಯಾಗುವ ಮೂಲಕ ರೋಗಿ ದೇಹದ ಕೆಲ ಕಾರ್ಯದ ಮೇಲೆ ನಿಯಂತ್ರಣ ಕಳೆದುಕೊಳ್ಳುತ್ತಾನೆ. ನೆನಪಿನ ಶಕ್ತಿ ಕಳೆದುಕೊಳ್ಳುವುದು, ಮಾತಿನಲ್ಲಿ ತೊದಲುವಿಕೆ, ದೇಹದ ಅಂಗಗಳ ಸಂಚಲನದಲ್ಲಿ ವ್ಯತ್ಯಯ ಇತ್ಯಾದಿ. ಹೃದಯಾಘಾತ ರೀತಿ ಸ್ಟ್ರೋಕ್ ಕೂಡ ತುರ್ತು ಪರಿಸ್ಥಿತಿ ಆಗಿದ್ದು ತಕ್ಷಣ ವೈದ್ಯಕೀಯ ನೆರವು ಅಗತ್ಯವಿರುತ್ತದೆ.
ಸ್ಟ್ರೋಕ್ ಆದ ಒಂದು ಗಂಟೆಯೊಳಗೆ ಸೂಕ್ತ ಚಿಕಿತ್ಸೆ ನೀಡುವುದು ಅತ್ಯಗತ್ಯ. ಹೀಗಾಗಿ ಈ ಸಮಸ್ಯೆಯ ಲಕ್ಷಣಗಳ ಬಗ್ಗೆ ಅರಿವು ಹೊಂದುವುದು ಮುಖ್ಯ.
- ದಿಢೀರ್ ಮುಖ, ಕೈ, ಕಾಲು ಸೇರಿ ದೇಹದ ಒಂದು ಭಾಗದಲ್ಲಿ ಆಶಕ್ತತೆ , ಮರಗಟ್ಟುವಿಕೆ ಅನುಭವ
- ಮಾತಾಡುವಲ್ಲಿ, ಮಾತು ಅರ್ಥ ಮಾಡಿಕೊಳ್ಳುವಲ್ಲಿ ದಿಢೀರ್ ಸಮಸ್ಯೆ, ಗೊಂದಲ
- ಅಂಗಗಳ ಚಲನೆ ಹೊಂದಾಣಿಕೆಯಲ್ಲಿ ಗೊಂದಲ, ತಲೆಸುತ್ತುವಿಕೆ, ಸಮತೋಲನ ತಪ್ಪುವುದು
- ದಿಢೀರ್ ತಲೆ ನೋವು, ವಾಕರಿಕೆ, ತಲೆ ಸುತ್ತುವುದು , ಕಣ್ಣು ಮಂಜಾಗುವುದು
ಸ್ಟ್ರೋಕ್ ತೀವ್ರ ಮಟ್ಟದ ಮೆದುಳು ಹಾನಿಗೆ ಗುರಿಯಾಗಿಸುತ್ತದೆ ಜೊತೆಗೆ ಸಾವಿಗೂ ಕಾರಣವಾಗುತ್ತದೆ. ಯಾವ ಮಟ್ಟದಲ್ಲಿ ಮೆದುಳು ಹಾನಿಗೊಳಗಾಗಿದೆ ಎನ್ನುವುದರ ಮೇಲೆ ಅಂಗವೈಕಲ್ಯ ನಿರ್ಧಾರವಾಗುತ್ತದೆ. ಮೆದುಳಿನ ಪ್ರತಿಯೊಂದು ಭಾಗವೂ ದೇಹದ ಒಂದೊಂದು ಕಾರ್ಯವನ್ನು ನಿಭಾಯಿಸುತ್ತದೆ. ಮೆದುಳಿನ ಬಲ ಭಾಗಕ್ಕೆ ಸ್ಟ್ರೋಕ್ ಆದರೆ ದೇಹದ ಎಡ ಭಾಗದಲ್ಲಿ ಪಾರ್ಶ್ವವಾಯು ಕಂಡುಬರುತ್ತದೆ. ಹೀಗಾಗಿ ಸ್ಟ್ರೋಕ್ ಸಮಸ್ಯೆಗೆ ಒಳಗಾದವರು ದೂರ ನಿರ್ಧರಿಸುವಲ್ಲಿ, ದೇಹದ ಸಮ ತೋಲನ ಕಾಯ್ದುಕೊಳ್ಳುವಲ್ಲಿ , ನೆನಪಿನ ಶಕ್ತಿಯಲ್ಲಿ ಸಮಸ್ಯೆ ಎದುರಿಸುತ್ತಾರೆ.
ಚಿಕಿತ್ಸೆ ಹೇಗೆ?
ಸ್ಟ್ರೋಕ್ ಗೆ ಚಿಕಿತ್ಸೆ ಆರಂಭಿಸುವ ಮುನ್ನ ಯಾವ ರೀತಿಯಲ್ಲಿ ಮೆದುಳು ಹಾನಿಗೊಳಗಾಗಿದೆ ಎಂಬುದನ್ನು ವೈದ್ಯರು ಪರೀಕ್ಷಿಸುತ್ತಾರೆ. ನ್ಯೂರೊಲಾಜಿಕಲ್ ಪರೀಕ್ಷೆ , ರಕ್ತ ಪರೀಕ್ಷೆ, ಎಲೆಕ್ಟ್ರೊಕಾರ್ಡಿಯೊಗ್ರಾಮ್, ಸಿಟಿ ಸ್ಕ್ಯಾನ್, ಡೊಪ್ಲರ್ ಅಲ್ಟ್ರಾಸೌಂಡ್ ಪರೀಕ್ಷೆಯನ್ನು ನಡೆಸಲಾಗುತ್ತದೆ.
ಇದನ್ನು ಓದಿ: Health Tips: ಗರ್ಭಿಣಿಯರು ʻಇಬ್ಬರಿಗೆ ಆಗುವಷ್ಟುʼ ತಿನ್ನಬೇಕೆ?
ರಕ್ತ ಹೆಪ್ಪುಗಟ್ಟಿ ರಕ್ತನಾಳ ಬ್ಲಾಕ್ ಆಗಿ ಸ್ಟ್ರೋಕ್ ಆಗಿದ್ದಲ್ಲಿ ಟಿಪಿಎ ಚಿಕಿತ್ಸೆಯನ್ನು 4 ಗಂಟೆಯೊಳಗೆ ನೀಡಲಾಗುತ್ತದೆ. ಇದಲ್ಲದೇ ನರದಲ್ಲಿ ಬ್ಲಾಕ್ ಇದ್ದಲ್ಲಿ ಕ್ಯಾಥೆಟರ್ ಡಿವೈಸ್ ಮೂಲಕ ಬ್ಲಾಕೇಜ್ ಸಮಸ್ಯೆಯನ್ನು ಪರಿಹರಿಸಲಾಗುತ್ತದೆ. ಇದರ ಜೊತೆಗೆ ಪಾರ್ಶ್ವವಾಯು ಸಮಸ್ಯೆಯ ಗಂಭೀರತೆ ಹಾಗೂ ವಿಧದ ಆಧಾರದ ಮೇಲೆ ಹಾಗೇ ರೋಗಿಯ ಸ್ಥಿತಿಯನ್ನು ಆಧರಿಸಿ ವಿವಿಧ ಚಿಕಿತ್ಸೆಯನ್ನು ತಜ್ಷರು ಕೈಗೊಳ್ಳುತ್ತಾರೆ. ಸ್ಟ್ರೋಕ್ ಆದ ಕೂಡಲೇ ಆದಷ್ಟು ಬೇಗ ರೋಗಿಯನ್ನು ಆಸ್ಪತ್ರೆಗೆ ಕರೆತರುವುದು ಮುಖ್ಯವಾಗುತ್ತದೆ.ಚಿಕಿತ್ಸೆ ಬಳಿಕ ಸ್ಟ್ರೋಕ್ ರೋಗಿಗಳಿಗೆ ಫಿಸಿಕಲ್ ಥೆರಪಿ, ಸ್ಪೀಚ್ ಥೆರಪಿಯಂತಹ ಚಿಕಿತ್ಸೆ ನಂತರದ ಕೆಲ ಆರೈಕೆ ಕೂಡ ಅಗತ್ಯವಾಗುತ್ತದೆ ಎನ್ನುತ್ತಾರೆ ಡಾ. ಶಿವಾನಂದ ಪೈ.