Ebola Disease: ಏನಿದು ಎಬೋಲಾ?; ರೋಗ ಲಕ್ಷಣಗಳನ್ನು ಗುರುತಿಸುವುದು ಹೇಗೆ, ಚಿಕಿತ್ಸೆ ಏನು?
ಎಬೋಲಾ ವೈರಸ್‌ಗೆ ಇದುವರೆಗೂ ಯಾವುದೇ ಲಸಿಕೆ ಕಂಡು ಹಿಡಿಯಲಾಗಿಲ್ಲ. ಸಂಶೋಧನೆಗಳು ನಡೆಯುತ್ತಿದ್ದರೂ, ಯಾವುದೇ ಪ್ರಗತಿ ಕಂಡಿಲ್ಲ. ಅದೇ ರೀತಿ ಯಾವುದೇ ರೀತಿಯ ಔಷಧಿಗಳೂ ಮಾರುಕಟ್ಟೆಯಲ್ಲಿ ಲಭ್ಯವಿಲ್ಲ. ಆದ ಕಾರಣ ತಡೆಗಟ್ಟುವ ಪ್ರಕ್ರಿಯೆಗೆ ಹೆಚ್ಚಿನ ಒತ್ತು ನೀಡಲಾಗಿದೆ.
-
| ಡಾ. ಮುರಲೀ ಮೋಹನ್ ಚೂಂತಾರು
ಆಫ್ರಿಕಾ ಖಂಡದ ಕಾಂಗೋ ಸೇರಿ ಹಲವು ದೇಶಗಳಲ್ಲಿ ಮಾರಣಾಂತಿಕ ಎಬೋಲಾ ರೋಗವು ಆತಂಕ ಮೂಡಿಸಿದೆ. ಆರಂಭದಲ್ಲಿ ಇದರ ಲಕ್ಷಣಗಳು ಸಾಮಾನ್ಯ ಜ್ವರದಂತೆ ಕಾಣುತ್ತವೆ, ಆದ್ದರಿಂದ ಹಲವರು ನಿರ್ಲಕ್ಷ್ಯ ಮಾಡುವ ಅಪಾಯವಿದೆ. ಆದರೆ ಸರಿಯಾದ ಸಮಯದಲ್ಲಿ ಚಿಕಿತ್ಸೆ ಪಡೆಯದಿದ್ದರೆ ಇದು ಜೀವಕ್ಕೆ ಕುತ್ತು ತರಬಹುದು. ಹೀಗಾಗಿ ಈ ಸಾಂಕ್ರಾಮಿಕ ರೋಗದ ಬಗ್ಗೆ ಮುನ್ನೆಚ್ಚರಿಕೆ ವಹಿಸುವುದು ಅವಶ್ಯಕ.
ಏನಿದು ಎಬೋಲಾ?
ಎಬೋಲಾ ಎನ್ನುವುದು ಈ ಶತಮಾನದ ಹೊಸ ರೋಗವಾಗಿದ್ದು, ವೈರಸ್‌ನಿಂದ ಹರಡುವ ಈ ಸಾಂಕ್ರಾಮಿಕ ರೋಗ ಮೊದಲು ಕಾಣಿಸಿಕೊಂಡದ್ದು 1976ರಲ್ಲಿ. ರಿಪಬ್ಲಿಕ್ ಆಫ್ ಕಾಂಗೋ ದೇಶದ ಎಬೋಲಾ ಎಂಬ ನದಿ ತಟದ ಯಂಬಕು ಎಂಬ ಪುಟ್ಟ ಹಳ್ಳಿಯಲ್ಲಿ ಮೊದಲು ಕಾಣಿಸಿಕೊಂಡ ಕಾರಣದಿಂದಲೇ ಈ ರೋಗಕ್ಕೆ ಎಬೋಲಾ ಎಂಬ ಹೆಸರು ಬಂದಿದೆ. ಆಫ್ರಿಕಾ ಖಂಡದ ಉಗಾಂಡಾ, ಸಿಯೆರಾ ಲಿಯೋನ್, ಗಿನಿ, ಸೂಡಾನ್, ಐವರಿಕೋಸ್ಟ್, ಕಾಂಗೋ, ಗಬೋನ್, ಲೈಬೀರಿಯಾ, ಸಿರಿಯಾ, ನೈಜೀರಿಯಾ ಮುಂತಾದ ಸಣ್ಣ ಸಣ್ಣ ದೇಶಗಳ ಉಷ್ಣವಲಯ, ಗುಡ್ಡಗಾಡು ಮತ್ತು ಬೆಟ್ಟ ಪ್ರದೇಶಗಳಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತದೆ. ಈ ಕಾಡುಗಳಲ್ಲಿ ವಾಸಿಸುವ ಬಾವಲಿಗಳಲ್ಲಿ ಈ ವೈರಸ್ ಹೆಚ್ಚಾಗಿ ಜೀವಿಸುತ್ತದೆ. ಕಾಡು ಪ್ರಾಣಿಗಳಿಂದ ಮನುಷ್ಯರಿಗೆ ವೈರಸ್ ಹಬ್ಬುತ್ತದೆ. ಈ ರೋಗ ಬಳಿಕ ಮನುಷ್ಯರಿಂದ ಮನುಷ್ಯರಿಗೆ ಹರಡುತ್ತದೆ. ಮನುಷ್ಯರಲ್ಲಿ ಈ ಎಬೋಲಾ ರೋಗ ಮಾರಣಾಂತಿಕವಾಗಿದ್ದು, ಶೇಕಡಾ 90ಮಂದಿ ಸಾವನ್ನಪ್ಪುತ್ತಾರೆ.
ಹೇಗೆ ಹರಡುತ್ತದೆ?
ಎಬೋಲಾ ವೈರಸ್‌ಗಳಲ್ಲಿ ಹಲವಾರು ಉಪಜಾತಿಗಳಿದ್ದು, ಹೆಚ್ಚಿನ ವೈರಸ್‌ಗಳು ಮಾರಣಾಂತಿಕವಾಗಿದ್ದು, ವಿಪರೀತ ಜ್ವರ ಮತ್ತು ಅಧಿಕ ಆಂತರಿಕ ರಕ್ತಸ್ರಾವದಿಂದ ರೋಗಿಗಳು ಸಾವನ್ನಪ್ಪುತ್ತಾರೆ. ಎಬೋಲಾ ವೈರಸ್‌ನಿಂದ ಸೋಂಕಿತ ಪ್ರಾಣಿಗಳ ರಕ್ತ, ಮಲ, ಮೂತ್ರ, ವೀರ್ಯ, ಬೆವರು, ವಾಂತಿ, ಎಂಜಲು, ಉಗುಳು ಮತ್ತು ದೇಹದ ದ್ರವ್ಯಗಳ ಮುಖಾಂತರ, ಮನುಷ್ಯನ ದೇಹಕ್ಕೆ ಎಬೋಲಾ ವೈರಾಣು ಪ್ರವೇಶವಾಗುತ್ತದೆ ಅಥವಾ ಲ್ಯಾಬ್‌ಗಳಲ್ಲಿ ಎಬೋಲಾ ವೈರಸ್ ಸ್ಪರ್ಶದ ಮುಖಾಂತರವೂ ಹರಡಬಹುದು. ಎಬೋಲಾ ಗಾಳಿಯ ಮೂಲಕ ಪಸರಿಸುವ ರೋಗವಲ್ಲ. ಪ್ರಾಣಿಗಳಿಂದ ಮನುಷ್ಯನಿಗೆ ಹರಡುತ್ತದೆ.
ಆಫ್ರಿಕಾದ ಕಾಡುಗಳಲ್ಲಿನ ಗೊರಿಲ್ಲಾ, ಚಿಂಪಾಂಚಿ, ಕಾಡುಹಂದಿಗಳು, ಮಂಗಗಳು ಮತ್ತು ಬಾವಲಿಗಳ ಮುಖಾಂತರ ಈ ವೈರಸ್ ಮನುಷ್ಯನಿಗೆ ಹರಡುತ್ತದೆ. ಮನುಷ್ಯನಿಗೆ ವೈರಾಣು ಬಂದ ಬಳಿಕ ದೇಹದ ರಕ್ತ, ಜೊಲ್ಲುರಸ, ವೀರ್ಯ ಮತ್ತಿತರ ದೇಹದ ದ್ರವ್ಯಗಳ ಮುಖಾಂತರ ಇನ್ನೊಬ್ಬ ಮನುಷ್ಯನಿಗೆ ಹರಡುತ್ತದೆ ಅಥವಾ ಈ ದ್ರವ್ಯಗಳಿಂದ ಸೋಂಕು ಹೊಂದಿದ ವಸ್ತುಗಳ ಮುಖಾಂತರ ಎಬೋಲಾ ವೈರಾಸ್ ಹರಡಬಹುದು. ರೋಗದ ಕಿಟಕಿ ಅವಧಿ 2 ರಿಂದ 17 ದಿನಗಳು
ರೋಗದ ಲಕ್ಷಣಗಳು
- ವಿಪರೀತ ಜ್ವರ ಮತ್ತು ತಲೆನೋವು
- ಮಾಂಸಖಂಡಗಳಲ್ಲಿ ನೋವು ಮತ್ತು ಹೊಟ್ಟೆ ನೋವು
- ವಿಪರೀತ ಬಳಲಿಕೆ
- ಗಂಟಲು ಕೊರೆತ ಮತ್ತು ಗಂಟುನೋವು
- ವಾಂತಿ, ಭೇದಿ
- ಮೂಗಿನಲ್ಲಿ ರಕ್ತ, ವಾಂತಿಯಲ್ಲಿ ರಕ್ತ, ಎಂಜಲಲ್ಲಿ ರಕ್ತ ಕಾಣಿಸಿಕೊಳ್ಳಬಹುದು ಮತ್ತು ಆಂತರಿಕ ರಕ್ತಸ್ರಾವ
- ಎದೆನೋವು, ಕಿಡ್ನಿ ಮತ್ತು ಯಕೃತ್ ನಿಷ್ಕ್ರಿಯಗೊಳ್ಳುವುದು
ಒಟ್ಟಿನಲ್ಲಿ ಎಬೋಲಾ ರೋಗಾಣುಗಳು ಮನುಷ್ಯನ ರೋಗ ನಿರೋಧಕ ಶಕ್ತಿಯನ್ನು ಕುಂದಿಸಿ, ಆಂತರಿಕ ರಕ್ತಸ್ರಾವದಿಂದ ಬಳಲಿಸಿ ಸಾವಿಗೆ ಕಾರಣವಾಗುತ್ತದೆ. ರಕ್ತ ಪರೀಕ್ಷೆ ಮಾಡಿದಲ್ಲಿ ಬಿಳಿ ರಕ್ತಕಣಗಳು ಮತ್ತು ಪ್ಲೇಟ್‌ಲೆಟ್ ಕಣಗಳ ಸಂಖ್ಯೆ ಕಡಿಮೆಯಾಗಿರುತ್ತದೆ ಮತ್ತು ಯಕೃತ್‌ನ ಕಿಣ್ವಗಳು ರಕ್ತದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಇರುತ್ತದೆ.
ಎಬೋಲಾ ವೈರಸ್‌ನ ಹೊರಭಾಗದಲ್ಲಿರುವ ಪ್ರೋಟೀನ್, ರಕ್ತನಾಳಗಳ ಒಳಭಾಗದಲ್ಲಿರುವ ಎಂಡೋಥಿಲಿಯಮ್ ಜೀವಕೋಶಗಳಿಗೆ ದಾಳಿ ಮಾಡಿ, ನಿಷ್ಕ್ರಿಯಗೊಳಿಸಿ ಆಂತರಿಕ ರಕ್ತಸ್ರಾವಕ್ಕೆ ಕಾರಣವಾಗುತ್ತದೆ. ಇದರಿಂದ ಸೋಂಕಿತ ವ್ಯಕ್ತಿ ‘ಶಾಕ್ ಸಿಂಡ್ರೋಮ್’ ನಿಂದಾಗಿ ಕೋಮಾಕ್ಕೆ ಜಾರಿ, ಜೀವ ಪಕ್ಷಿ ಹಾರಿಹೋಗಬಹುದು.
ತಡೆಗಟ್ಟುವುದು ಹೇಗೆ?
ಎಬೋಲಾ ವೈರಸ್‌ಗೆ ಇದುವರೆಗೂ ಯಾವುದೇ ಲಸಿಕೆ ಕಂಡು ಹಿಡಿಯಲಾಗಿಲ್ಲ. ಸಂಶೋಧನೆಗಳು ನಡೆಯುತ್ತಿದ್ದರೂ, ಯಾವುದೇ ಪ್ರಗತಿ ಕಂಡಿಲ್ಲ. ಅದೇ ರೀತಿ ಯಾವುದೇ ರೀತಿಯ ಔಷಧಿಗಳೂ ಮಾರುಕಟ್ಟೆಯಲ್ಲಿ ಲಭ್ಯವಿಲ್ಲ. ಆದ ಕಾರಣ ತಡೆಗಟ್ಟುವ ಪ್ರಕ್ರಿಯೆಗೆ ಹೆಚ್ಚಿನ ಒತ್ತು ನೀಡಲಾಗಿದೆ. ಸದ್ಯದ ಮಟ್ಟಿಗೆ ರೋಗಿಗಳನ್ನು ತೀವ್ರ ನಿಗಾ ಘಟಕಲ್ಲಿರಿಸಿ ಚಿಕಿತ್ಸೆ ನೀಡಲಾಗುತ್ತದೆ. ಜ್ವರ ಕಡಿಮೆ ಮಾಡಲು ಮತ್ತು ವ್ಯಕ್ತಿ ದ್ರವ್ಯಹೀನವಾಗದಂತೆ ದ್ರಾವಣ ನೀಡುವಿಕೆ ಮತ್ತು ಖನಿಜಾಂಶ, ಲವಣಾಂಶಗಳ ಕುಂದಾಗದಂತೆ ದ್ರವ್ಯ ಸೇವನೆ ಮುಂತಾದವುಗಳ ಬಗ್ಗೆ ಹೆಚ್ಚಿನ ನಿಗಾ ನೀಡಲಾಗುತ್ತದೆ. ವ್ಯಕ್ತಿಯನ್ನು ಬೇರೆ ಪ್ರತ್ಯೇಕವಾದ ಕೊಠಡಿಯಲ್ಲಿರಿಸಿ, ಬೇರೆ ವ್ಯಕ್ತಿಗಳಿಗೆ ರೋಗ ಹರಡದಂತೆ ಎಚ್ಚರಿಕೆ ವಹಿಸಲಾಗುತ್ತದೆ. ಆಕ್ಸಿಜನ್ ಮತ್ತು ರಕ್ತದ ಒತ್ತಡ ಕಡಿಮೆಯಾಗದಂತೆ ವಿಶೇಷ ನಿಗಾ ವಹಿಸಲಾಗುತ್ತದೆ. ಹೆಚ್ಚಾಗಿ ಸಾವು 10 ದಿನಗಳ ಒಳಗೆ ಸಂಭವಿಸುತ್ತದೆ. ಆತಂಕದ ಅಂಶವೆಂದರೆ, ಈ ರೋಗ ಆಫ್ರಿಕಾ ಖಂಡದಿಂದ ಬೇರೆ ದೇಶಗಳಿಗೆ ಹರಡಿದೆ. ನಮ್ಮ ದೇಶಕ್ಕೂ ವಕ್ಕರಿಸಿದೆ. ಎಬೋಲಾ ಪೀಡಿತ ದೇಶಗಳಿಗೆ ವಾಯು ಸಂಚಾರವನ್ನು ಮತ್ತು ಭೇಟಿಯನ್ನು ನಿಷೇಧಿಸಲಾಗಿದೆ. ಆ ಮೂಲಕ ವಿಶ್ವದೆಲ್ಲೆಡೆಗೆ ಹರಡದಂತೆ ಎಚ್ಚರ ವಹಿಸಲಾಗಿ ದೆ.
ಎಬೋಲಾ ತಡೆಗಟ್ಟಲು ಈ ಕೆಳಗಿನ ಯೋಜನೆಗಳನ್ನು ಹಮ್ಮಿಕೊಳ್ಳಲಾಗಿದೆ.
- ಜನರಲ್ಲಿ ಎಬೋಲಾ ರೋಗದ ಬಗ್ಗೆ ಬೀದಿ ನಾಟಕ, ವೃತ್ತ ಪತ್ರಿಕೆ, ದೃಶ್ಯ ಮಾಧ್ಯಮಗಳ ಮೂಲಕ ಜಾಗೃತಿ ಮೂಡಿಸುವುದು.
- ಕಾಡು ಪ್ರಾಣಿಗಳನ್ನು ಮತ್ತು ಸಾಕು ಪ್ರಾಣಿಗಳನ್ನು ಮುಟ್ಟದಂತೆ ಹೆಚ್ಚಿನ ನಿಗಾ ವಹಿಸುವುದು ಅಗತ್ಯವಿದ್ದಲ್ಲಿ ಕೈ ಚೀಲ ಮುಂತಾದ ದೇಹ ರಕ್ಷಣಾ ಕವಚಗಳ ಮುಖಾಂತರ ರೋಗಾಣು ಹರಡದಂತೆ ಎಚ್ಚರವಹಿಸಬೇಕು.
- ಮಾಸಾಂಹಾರ ಸೇವನೆಗೆ ಮೊದಲು, ಮಾಂಸವನ್ನು ಸರಿಯಾಗಿ ಬೇಯಿಸಿ ರೋಗಾಣು ಮುಕ್ತಿಗೊಳಿಸಬೇಕು.
- ರೋಗ ಪೀಡಿತ ವ್ಯಕ್ತಿಗಳನ್ನು ಬೇರೆಯವರ ಸಂಪರ್ಕ ಸಿಗದಂತೆ ಪ್ರತ್ಯೇಕವಾಗಿ ಇರಿಸುವುದು. ಈ ರೋಗಿಗಳ ಜೊತೆ ದೈಹಿಕ ಸಂಪರ್ಕವನ್ನು ಕಡಿಮೆ ಮಾಡುವುದು ಮತ್ತು ಅಗತ್ಯವಿದ್ದಲ್ಲಿ ಸೂಕ್ತ ರಕ್ಷಣಾ ಕವಚಗಳಾದ ಕಾಲು ಕವಚ, ಕೈ ಗವಸು, ಕನ್ನಡಕ, ತಲೆಗವಸು, ನಿಲುವಂಗಿ ಮುಂತಾದವುಗಳನ್ನು ಉಪಯೋಗಿಸಿ ರೋಗಾಣು ಹರಡದಂತೆ ನಿಗಾ ವಹಿಸುವುದು.
- ಎಬೋಲಾ ರೋಗದಿಂದ ಮೃತ ವ್ಯಕ್ತಿಯನ್ನು ಕೂಡಾ ವಿಶೇಷ ಮುತುವರ್ಜಿ ವಹಿಸಿ, ಬೇರೆಯವರ ಸಂಪರ್ಕವಾಗದಂತೆ ನೋಡಿಕೊಳ್ಳಬೇಕು ಮತ್ತು ದೇಹವನ್ನು ಹುಗಿಯಲಾಗುತ್ತದೆ. ಯಾವುದೇ ರೀತಿಯ ದೈಹಿಕ ಸಂಪರ್ಕವನ್ನು ರೋಗಿಯ ಬಂದುಗಳಿಗೂ ಆಗದಂತೆ ನಿಗಾ ವಹಿಸುವುದು.
- ಎಬೋಲಾ ಬಗ್ಗೆ ಹೆಚ್ಚಿನ ಜಾಗೃತಿ ಮಾಡಿಸುವ ಕಾರ್ಯಕ್ರಮಗಳನ್ನು ಸಂಗೀತ ಸಂಜೆಗಳನ್ನು, ನಾಟಕಗಳನ್ನು ಆಯೋಜಿಸಿ ಜನರಲ್ಲಿ ಜಾಗೃತಿ ಮಾಡಿಸುವುದು
ಚಿಕಿತ್ಸೆ ಹೇಗೆ?
ಈ ಶತಮಾನದ ಹೊಸದಾದ ರೋಗ ಎಬೋಲಾ, ಮಾರಾಣಾಂತಿಕ ಕಾಯಿಲೆ ಎಂಬುವುದಂತೂ ಸತ್ಯ. ಕಾಯಿಲೆಯನ್ನು ಗುಣ ಪಡಿಸುವುದಕ್ಕಿಂತ ಕಾಯಿಲೆ ತಡೆಗಟ್ಟುವುದು ಜಾಣತನ ಎಂಬುದು ಎಲ್ಲರಿಗೂ ತಿಳಿದ ವಿಚಾರ. ಕೇವಲ ಜ್ವರ, ತಲೆನೋವು ಎಂದು ನಿರ್ಲಕ್ಷ ಮಾಡದೆ ವೈದ್ಯರ ಸಲಹೆ ಮತ್ತು ಸೂಕ್ತ ಮಾರ್ಗದರ್ಶನದ ಮುಖಾಂತರ ಚಿಕಿತ್ಸೆ ಅತೀ ಅವಶ್ಯಕ. ಈ ರೋಗಕ್ಕೆ ಔಷಧಿ ಇಲ್ಲದಿದ್ದರೂ, ದೇಹಕ್ಕೆ ಸೂಕ್ತ ಪ್ರಮಾಣದಲ್ಲಿ ನೀರಿನ ಅಂಶ, ಜ್ವರಕ್ಕೆ ಔಷಧಿ ಮತ್ತು ಸರಿಯಾದ ರೋಗ ನಿರೋಧಕ ಔಷಧಿಗಳನ್ನು ಒದಗಿಸಿದಲ್ಲಿ, ರೋಗದ ತೀರ್ವತೆ ಮತ್ತು ಸಾವಿನ ಸಾಂದ್ರತೆಯನ್ನು ಕಡಿಮೆ ಮಾಡಬಹುದು.
ಯಾಕೆ ಎಚ್ಚರ ವಹಿಸಬೇಕು?
ಜಗತ್ತಿನ ಯಾವುದೇ ಭಾಗದಲ್ಲಿ, ಕಂಡು ಕೇಳರಿಯದ ವಿಚಿತ್ರ ರೋಗ ಬಂದರೆ ನಾವೇಕೆ ತಲೆ ಕೆಡಿಸಿಕೊಳ್ಳಬೇಕು? ನಮಗ್ಯಾಕೆ ಅದರ ಉಸಾಬಾರಿ ಎಂದು ಕೈ ಕಟ್ಟಿ ಕುಳಿತುಕೊಳ್ಳುವ ಕಾಲಸ್ಥಿತಿಯಲ್ಲಿ ನಾವೀಗ ಬದುಕುತ್ತಿಲ್ಲ. ಯಾಕೆಂದರೆ ಜಗತ್ತು ಎಷ್ಟೇ ವಿಶಾಲವಾದರೂ ಆಧುನಿಕ ತಂತ್ರಜ್ಞಾನ ಮತ್ತು ವಿಜ್ಞಾನ ಕೌಶಲಗಳಿಂದ ಬಹಳಷ್ಟು ಕಿರಿದಾಗಿದೆ ಎಂದರೂ ತಪ್ಪಿಲ್ಲ. ದೂರದ ಆಮೇರಿಕಾ ದೇಶದಲ್ಲಿ ಹುಟ್ಟಿದ ರೋಗವೊಂದು ದಿನ ಬೆಳಗಾಗುದರ ಒಳಗೆ ಭಾರತಕ್ಕೆ ಬರಲೂ ಬಹುದು. ಹಾಗೆಯೇ ಇಲ್ಲಂದಲೂ ಬೇರೆ ಕಡೆ ಹರಡಬಹುದು ಬೆಳವಣಿಗೆ ಹೊಂದಿದ ರಾಷ್ಟ್ರಗಳಿಂದ ಬೆಳೆಯುತ್ತಿರುವ ದೇಶಗಳಿಗೆ ಹೊಸ ಹೊಸ ರೋಗಗಳು ಬಂದಲ್ಲಿ, ನಮ್ಮ ದೇಶದ ಆರ್ಥಿಕತೆಗೆ ಮತ್ತು ಬೆಳವಣಿಗೆಗೆ ದೊಡ್ಡ ಹೊಡೆತ ಬೀಳ ಬಹುದು. ಜಾಗತಿಕವಾಗಿ ಬಹಳಷ್ಟು ಖ್ಯಾತಿ ಹೊಂದಿರುವ ಮತ್ತು ಬಹಳ ವೇಗವಾಗಿ ಬೆಳೆಯುತ್ತಿರುವ ನಮ್ಮ ಭಾರತದ ಬೆಂಗಳೂರು, ಹೈದರಾಬಾದ್, ಮುಂಬೈ ಮುಂತಾದ ನಗರಗಳಿಗೆ ಈ ಎಬೋಲಾ ಬಂದಿರಿವುದರಿಂದ ನಾವು ಸಾಕಷ್ಟು ಮುನ್ನೆಚ್ಚರಿಕೆ ವಹಿಸುವುದರಲ್ಲಿಯೇ ನಮ್ಮ ಜಾಣತನ ಅಡಗಿದೆ.
ಕೊನೆ ಮಾತು
ಯುದ್ಧಕಾಲದಲ್ಲಿ ಶಸ್ತ್ರಾಭ್ಯಾಸ ಮಾಡುವುದಕ್ಕಿಂತ ಸಾಕಷ್ಟು ಮೊದಲೇ ಸನ್ನದ್ಧವಾಗಿರುವುದರಲ್ಲಿಯೇ ನಮ್ಮ ಹಿತ ಅಡಗಿದೆ. ಇಲ್ಲವಾದಲ್ಲಿ ಕೊಳವೆ ಬಾವಿಗೆ ಮಗು ಬಿದ್ದ ಬಳಿಕ ಮತ್ತೊಂದು ಕೊಳವೆ ಬಾವಿ ತೋಡಿ ಮಗುವಿನ ಜೀವ ಉಳಿಸಲು ಹೆಣಗಾಡಿದಂತೆ ಆಗಬಹುದು.
(ಲೇಖಕರು: ಬಾಯಿ, ಮುಖ, ದವಡೆ ಶಸ್ತ್ರ ಚಿಕಿತ್ಸಕರು, ಸುರಕ್ಷಾ ದಂತ ಚಿಕಿತ್ಸಾಲಯ, ಹೊಸಂಗಡಿ)