ನೆರೆ ಹಾವಳಿಯಿಂದ ವ್ಯಾಪಕ ಕೃಷಿ ಹಾನಿ; 1,545 ಕೋಟಿ ರೂ. ಪರಿಹಾರ ಒದಗಿಸುವಂತೆ ಕೇಂದ್ರಕ್ಕೆ ಮನವಿ ಸಲ್ಲಿಸಲು ಸಚಿವ ಸಂಪುಟ ತೀರ್ಮಾನ
2025ರ ನೈಋತ್ಯ ಮುಂಗಾರು ಅವಧಿಯಲ್ಲಿ ಹಾನಿಗೊಳಗಾದ ಮೂಲ ಸೌಕರ್ಯಗಳ ಪುನನಿರ್ಮಾಣವನ್ನು ಕೈಗೊಳ್ಳಲು ಎನ್‌ಡಿಆರ್‌ಎಫ್‌ನ ಚೇತರಿಕೆ ಮತ್ತು ಪುನರ್‌ನಿರ್ಮಾಣ ವಿಂಡೋದ ಅಡಿಯಲ್ಲಿ ಜಿಲ್ಲಾ ಮತ್ತು ವಲಯವಾರು ಹಾನಿ ಮೌಲ್ಯಮಾಪನದ ವಿವರಗಳೊಂದಿಗೆ ಸುಮಾರು 1,545.23 ಕೋಟಿ ರೂ. ಆರ್ಥಿಕ ಸಹಾಯವನ್ನು ಕೋರಿ ಭಾರತ ಸರ್ಕಾರಕ್ಕೆ ಮನವಿ ಸಲ್ಲಿಸಲು ಹಾಗೂ ಭಾರತ ಸರ್ಕಾರದ ಉನ್ನತ ಮಟ್ಟದ ಸಮಿತಿಯು ಪರಿಹಾರ ನಿಧಿಯನ್ನು ಅನುಮೋದಿಸಿದ ನಂತರ, ಆರ್ಥಿಕ ಪರಿಣಾಮಗಳ ಪ್ಯಾರ‍್ಯಾಗ್ರಾಫ್‌ನಲ್ಲಿ ನಿರ್ದಿಷ್ಟಪಡಿಸಿದ ವೆಚ್ಚ ಹಂಚಿಕೆ ಮಾದರಿಗೆ ಅನುಗುಣವಾಗಿ ರಾಜ್ಯ ನಿಧಿಯಿಂದ ವೆಚ್ಚವನ್ನು ಹಂಚಿಕೊಳ್ಳಲು ಸಚಿವ ಸಂಪುಟ ನಿರ್ಧರಿಸಿದೆ.
ಸಾಂದರ್ಭಿಕ ಚಿತ್ರ -
Ramesh B
Oct 30, 2025 10:23 PM
ಬೆಂಗಳೂರು, ಅ. 30: 2025ರ ನೈಋತ್ಯ ಮುಂಗಾರು ಅವಧಿಯಲ್ಲಿ ಭಾರಿ ಮಳೆ ಮತ್ತು ನದಿ ಪ್ರವಾಹದಿಂದ ಹಾನಿಗೊಳಗಾದ ಮೂಲ ಸೌಕರ್ಯಗಳ ಪುನನಿರ್ಮಾಣವನ್ನು ಕೈಗೊಳ್ಳಲು ಎನ್‌ಡಿಆರ್‌ಎಫ್ (NDRF)ನ ಚೇತರಿಕೆ ಮತ್ತು ಪುನರ್‌ನಿರ್ಮಾಣ ವಿಂಡೋದ ಅಡಿಯಲ್ಲಿ (PDNA) ಜಿಲ್ಲಾ ಮತ್ತು ವಲಯವಾರು ಹಾನಿ ಮೌಲ್ಯಮಾಪನದ ವಿವರಗಳೊಂದಿಗೆ ಸುಮಾರು 1,545.23 ಕೋಟಿ ರೂ. ಆರ್ಥಿಕ ಸಹಾಯವನ್ನು ಕೋರಿ ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸಲು ಹಾಗೂ ಭಾರತ ಸರ್ಕಾರದ ಉನ್ನತ ಮಟ್ಟದ ಸಮಿತಿಯು ಪರಿಹಾರ ನಿಧಿಯನ್ನು ಅನುಮೋದಿಸಿದ ನಂತರ, ಆರ್ಥಿಕ ಪರಿಣಾಮಗಳ ಪ್ಯಾರ‍್ಯಾಗ್ರಾಫ್‌ನಲ್ಲಿ ನಿರ್ದಿಷ್ಟಪಡಿಸಿದ ವೆಚ್ಚ ಹಂಚಿಕೆ ಮಾದರಿಗೆ ಅನುಗುಣವಾಗಿ ರಾಜ್ಯ ನಿಧಿಯಿಂದ ವೆಚ್ಚವನ್ನು ಹಂಚಿಕೊಳ್ಳಲು ಸಚಿವ ಸಂಪುಟ ನಿರ್ಧರಿಸಿದೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನೇತೃತ್ವದಲ್ಲಿ ಗುರುವಾರ ಸಚಿವ ಸಂಪುಟ ಸಭೆ ನಡೆಯಿತು.
ಗಂಗಾ ಕಲ್ಯಾಣ ಫಲಾನುಭವಿಗಳ ಆಯ್ಕೆ ಉಸ್ತುವಾರಿ ಸಚಿವರ ಹೆಗಲಿಗೆ: ಗಂಗಾ ಕಲ್ಯಾಣ ಯೋಜನೆಯಡಿಯಲ್ಲಿ ಆಯ್ಕೆಯಾದ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಫಲಾನುಭವಿಗಳಿಗೆ ಕೊಳವೆಬಾವಿಗಳನ್ನು ಕೊರೆಯಲು ಮತ್ತು ಪಂಪ್ ಸೆಟ್‌ಗಳನ್ನು ಸರಬರಾಜು ಮಾಡಲು 2022-23ನೇ ಸಾಲಿನಲ್ಲಿ Empanel ಮಾಡಿಕೊಂಡಿರುವ ಗುತ್ತಿಗೆದಾರರ ಅವಧಿಯನ್ನು ಮುಂದಿನ ಎರಡು ವರ್ಷಗಳಿಗೆ (2024-25 ಮತ್ತು 2025-26 ಸಾಲಿನ ಗುರಿಗಳಿಗೆ) ಸೀಮಿತಗೊಳಿಸಿ, 2027ನೇ ಜೂನ್‌ವರೆಗೆ ವಿಸ್ತರಿಸಲು ಆಡಳಿತಾತ್ಮಕ ಅನುಮೋದನೆ ನೀಡಲು, ಗಂಗಾಕಲ್ಯಾಣ ಯೋಜನೆ ಮತ್ತು ಇತರ ಸ್ವಯಂ ಉದ್ಯೋಗ ಯೋಜನೆಗಳಡಿ ಫಲಾನುಭವಿಗಳನ್ನು ಆಯಾ ವರ್ಷದ ಅಕ್ಟೋಬರ್ 31ನೇ ತಾರೀಖಿನೊಳಗೆ ಸಂಬಂಧಪಟ್ಟ ಆಯಾ ಕ್ಷೇತ್ರದ ಶಾಸಕರು ಆಯ್ಕೆ ಮಾಡದೇ ಇದ್ದಲ್ಲಿ ಆಯ್ಕೆ ಪ್ರಕ್ರಿಯೆಯನ್ನು ಪೂರ್ಣಗೊಳಿಸಲು ಆಯಾ ಜಿಲ್ಲಾ ಮಾನ್ಯ ಉಸ್ತುವಾರಿ ಸಚಿವರಿಗೆ ವಹಿಸಲು (2025-26ನೇ ಸಾಲಿನ ಗುರಿಗಳನ್ನು ಹೊರತುಪಡಿಸಿ) ಸಚಿವ ಸಂಪುಟ ನಿರ್ಣಯಿಸಿದೆ.
ಈ ಸುದ್ದಿಯನ್ನೂ ಓದಿ: Cabinet Meeting: ಸರ್ಕಾರಿ ಶಾಲೆಗಳಲ್ಲಿ 2,200 ಕೊಠಡಿ ನಿರ್ಮಾಣಕ್ಕೆ ಸಚಿವ ಸಂಪುಟ ಅನುಮೋದನೆ
ಪೊಲೀಸ್ ಇಲಾಖೆಗೆ ವಾಹನ ಖರೀದಿ: 2025-26ನೇ ಸಾಲಿನಲ್ಲಿ ಪೊಲೀಸ್ ಇಲಾಖೆಗೆ 241 ವಿವಿಧ ಮಾದರಿಯ ವಾಹನಗಳನ್ನು 34.95 ಕೋಟಿ ರೂ. ಅಂದಾಜು ಮೊತ್ತದಲ್ಲಿ ಖರೀದಿಸಲು ಆಡಳಿತಾತ್ಮಕ ಅನುಮೋದನೆ ನೀಡಲಾಗಿದೆ ಎಂದು ಸಚಿವರು ತಿಳಿಸಿದರು.
ಸಿದ್ದರಾಮಯ್ಯ ಎಕ್ಸ್ ಪೋಸ್ಟ್:
ನೈಋತ್ಯ ಮುಂಗಾರು ಅವಧಿಯಲ್ಲಿ ಭಾರೀ ಮಳೆ ಮತ್ತು ಪ್ರವಾಹದಿಂದ ಹಾನಿಗೊಳಗಾದ ಪ್ರದೇಶಗಳಲ್ಲಿನ ಮೂಲಸೌಕರ್ಯಗಳ ಪುನರ್ ನಿರ್ಮಾಣಕ್ಕೆ ಎನ್‌ಡಿಆರ್‌ಎಫ್ ಅಡಿಯಲ್ಲಿ ₹1545.23 ಕೋಟಿ ಸಹಾಯಧನ ನೀಡುವಂತೆ ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸಲು ಇಂದು ನನ್ನ ಅಧ್ಯಕ್ಷತೆಯಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ನಿರ್ಧರಿಸಲಾಗಿದೆ.#CabinetDecisions pic.twitter.com/sNu1Y9LpDP
— Siddaramaiah (@siddaramaiah) October 30, 2025
ಗ್ರೇಟರ್ ಬೆಂಗಳೂರು ಕ್ರಿಯಾ ಯೋಜನೆಗೆ ಅನುಮೋದನೆ: ಮುಖ್ಯಮಂತ್ರಿ ಮೂಲ ಸೌಕರ್ಯ ಅಭಿವೃದ್ಧಿ ಯೋಜನೆ ಅನುದಾನದಲ್ಲಿ ಗ್ರೇಟರ್ ಬೆಂಗಳೂರು ಪ್ರಾಧಿಕಾರದ ವ್ಯಾಪ್ತಿಯಲ್ಲಿರುವ 5 ಬೆಂಗಳೂರು ನಗರ ಪಾಲಿಕೆಗಳ ವ್ಯಾಪ್ತಿಯ ವಾರ್ಡ್ ಅಭಿವೃದ್ಧಿ ಮತ್ತು ಮೂಲ ಸೌಕರ್ಯ ಅಭಿವೃದ್ಧಿ ಕಾಮಗಾರಿಗಳನ್ನು 1,055 ಕೋಟಿ ರೂ. ಮೊತ್ತದಲ್ಲಿ ಕೈಗೊಳ್ಳುವ ಕ್ರಿಯಾ ಯೋಜನೆಗೆ ಆಡಳಿತಾತ್ಮಕ ಅನುಮೋದನೆಗೆ ಅನುಮೋದನೆ ನೀಡಲಾಗಿದೆ.
ಗ್ರೇಟರ್ ಬೆಂಗಳೂರು ಮೂಲ ಸೌಕರ್ಯಕ್ಕೆ ಅನುದಾನ: ವಿಶೇಷ ಮೂಲಭೂತ ಸೌಕರ್ಯಕ್ಕೆ ಬಂಡವಾಳ ಬೆಂಬಲ ಯೋಜನೆ ಅಡಿ ಗ್ರೇಟರ್ ಬೆಂಗಳೂರು ಪ್ರಾಧಿಕಾರದ ವ್ಯಾಪ್ತಿಯಲ್ಲಿರುವ 5 ಬೆಂಗಳೂರು ನಗರ ಪಾಲಿಕೆಗಳಲ್ಲಿನ ಮುಖ್ಯ ಮತ್ತು ಉಪಮುಖ್ಯ ರಸ್ತೆಗಳ ಡಾಂಬರಿಕರಣ ಕಾಮಗಾರಿಗಳನ್ನು 1,241.57 ಕೋಟಿ ರೂ. ಅಂದಾಜು ಮೊತ್ತದಲ್ಲಿ ಕೈಗೊಳ್ಳುವ ಕ್ರಿಯಾ ಯೋಜನೆಗೆ ಆಡಳಿತಾತ್ಮಕ ಅನುಮೋದನೆ ನೀಡಲಾಗಿದೆ ಎಂದು ಸಚಿವರು ವಿವರಿಸಿದರು.
8 ಕಡೆ ಟೆಕ್ನಾಲಜಿ ಬ್ಯುಸಿನೆಸ್ ಇನ್‌ಕ್ಯೂಬೇಟರ್ಸ್ ಸ್ಥಾಪನೆ: ಕರ್ನಾಟಕ ಸ್ಟಾರ್ಟ್ಅಪ್ ಪಾಲಿಸಿ 2022-27ರ ಅಡಿಯಲ್ಲಿ ಐದು ವರ್ಷಗಳ ಅವಧಿಗೆ 80 ಕೋಟಿ ರೂ. ಹಂಚಿಕೆಯೊಂದಿಗೆ (ಪ್ರತಿ ಟಿಬಿಐಗೆ 10 ಕೋಟಿ ರೂ.) ಎಂಟು ಟೆಕ್ನಾಲಜಿ ಬ್ಯುಸಿನೆಸ್ ಇನ್‌ಕ್ಯೂಬೇಟರ್ಸ್ (TBIs) 2.0 ಸ್ಥಾಪಿಸಲು ಸಚಿವ ಸಂಪುಟ ನಿರ್ಣಯಿಸಿದೆ. ಮೈಸೂರು, ಬಾಗಲಕೋಟೆ, ಶಿವಮೊಗ್ಗ, ಮಂಗಳೂರು, ಧಾರವಾಡ, ಬೆಳಗಾವಿ ಜಿಲ್ಲೆಗಳಲ್ಲಿ ಸ್ಥಾಪಿಸಲು ಉದ್ದೇಶಿಸಲಾಗಿದೆ.
ಘನತ್ಯಾಜ್ಯ ನಿರ್ವಹಣೆಗೆ ಜಮೀನು: ಬೆಂಗಳೂರು ನಗರದ ಸಮಗ್ರ ಘನತ್ಯಾಜ್ಯ ನಿರ್ವಹಣೆ (ISWM)) ಮೆ|| ಟರ‍್ರಾ ಫರ್ಮ ಬಯೋಟೆಕ್ನಾಲಜೀಸ್ ಸಂಸ್ಥೆಯವರಿಗೆ ಪ್ರತಿ ಎಕರೆ ಜಮೀನಿಗೆ 1.50 ಕೋಟಿ ರೂ. ಭೂ ಪರಿಹಾರ ನಿಗದಿಪಡಿಸಲು ಸಚಿವ ಸಂಪುಟ ನಿರ್ಧರಿಸಿದೆ.
ಮುಂದಿನ ಸಚಿವ ಸಂಪುಟ ಸಭೆಯಲ್ಲಿ ಒಳಮೀಸಲಾತಿ ಬಗ್ಗೆ ಚರ್ಚೆ: ʼʼಒಳಮೀಸಲಾತಿ ಬಗ್ಗೆ ಮುಖ್ಯಮಂತ್ರಿ ಸೇರಿದಂತೆ ಸಮಾಜ ಕಲ್ಯಾಣ ಸಚಿªರು ಹಾಗೂ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಎಚ್.ಕೆ. ಪಾಟೀಲ್ ಹಾಗೂ ಕಾರ್ಯದರ್ಶಿಗಳು ಸೇರಿದಂತೆ ಚರ್ಚೆ ನಡೆಸಿ, ಮಸೂದೆ ರೂಪಿಸಲು ಸಾಧ್ಯವಾದರೆ ಸಂಪುಟ ಸಭೆಯಲ್ಲಿ ಮಂಡಿಸಲು ಸೂಚಿಸಲಾಗಿತ್ತು. ನಿನ್ನೆ ಸಭೆ ನಡೆಸಲು ಸಾಧ್ಯವಾಗದ ಹಿನ್ನೆಲೆಯಲ್ಲಿ ಈ ಬಗ್ಗೆ ಚರ್ಚೆ ನಡೆದಿಲ್ಲ ಎಂದು ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಎಚ್.ಕೆ. ಪಾಟೀಲ್ ತಿಳಿಸಿದರು. ಬೆಳಗಾವಿ ಅಧಿವೇಶನದ ದಿನಾಂಕವನ್ನು ಇಂದಿನ ಸಭೆಯಲ್ಲಿ ನಿಗದಿ ಮಾಡಲಾಗಿಲ್ಲʼʼ ಎಂದರು.
ಈ ಸುದ್ದಿಯನ್ನೂ ಓದಿ: DK Shivakumar: ತೇಜಸ್ವಿ ಸೂರ್ಯ ಎಳಸು, ಅನುಭವವಿಲ್ಲದ ವೇಸ್ಟ್ ಮೆಟೀರಿಯಲ್- ಡಿಕೆಶಿ ವಾಗ್ದಾಳಿ
ಮೇಲ್ಮನವಿ ಸಲ್ಲಿಸಲು ತೀರ್ಮಾನ: ʼʼಸಾರ್ವಜನಿಕ ಸ್ಥಳಗಳಲ್ಲಿ ಸಂಘ ಸಂಸ್ಥೆಗಳು ಚಟುವಟಿಕೆಗಳನ್ನು ಹಮ್ಮಿಕೊಳ್ಳುವುದನ್ನು ನಿಷೇಧಿಸಿ ಹೊರಡಿಸಿರುವ ಆದೇಶಕ್ಕೆ ಸರ್ವೋಚ್ಛ ನ್ಯಾಯಾಲಯ ತಡೆಯಾಜ್ಞೆ ನೀಡಿರುವ ಬಗ್ಗೆ ಮಾತನಾಡಿ ತಡೆಯಾಜ್ಞೆಯನ್ನು ತೆರವುಗೊಳಿಸಲು ಮೇಲ್ಮನವಿ ಸಲ್ಲಿಸಲಾಗುವುದು ಎಂದು ಸರ್ಕಾರ ಈಗಾಗಲೇ ಘೋಷಿಸಿದೆʼʼ ಎಂದು ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಎಚ್.ಕೆ.ಪಾಟೀಲ್ ತಿಳಿಸಿದರು.
ತುಮಕೂರು ಜಿಲ್ಲಾ ಆಸ್ಪತ್ರೆಯಲ್ಲಿ ಕ್ಯಾನ್ಸರ್ ಕೇರ್ ಕೇಂದ್ರ ಸ್ಥಾಪನೆ: ತುಮಕೂರು ಜಿಲ್ಲಾ ಆಸ್ಪತ್ರೆಯಲ್ಲಿ ಕ್ಯಾನ್ಸರ್ ಕೇರ್ ಕೇಂದ್ರ ಸ್ಥಾಪನೆಗೆ ಅಗತ್ಯವಿರುವ ಮೊದಲನೇ ಹಂತದ ಉಪಕರಣಗಳು, ಸಿಎಸ್‌ಎಸ್‌ಡಿ ಉಪಕರಣಗಳು ಮತ್ತು ಪೀಠೋಪಕರಣಗಳಿಗೆ ಒಟ್ಟಾರೆ 50 ಕೋಟಿ ರೂ. ಮೊತ್ತದಲ್ಲಿ ಖರೀದಿಸಲು ಆಡಳಿತಾತ್ಮಕ ಅನುಮೋದನೆ ನೀಡಲಾಗಿದೆ.