Pralhad Joshi: ಭಾರತದ ಪವನ ಶಕ್ತಿಗೆ ಕರ್ನಾಟಕ ಸೇರಿ 3 ರಾಜ್ಯಗಳ ಮಹತ್ವದ ಕೊಡುಗೆ: ಜೋಶಿ ಮೆಚ್ಚುಗೆ
Wind Energy India 2025: ಚೆನ್ನೈನಲ್ಲಿ ಗುರುವಾರ ನಡೆದ ʼವಿಂಡ್ ಎನರ್ಜಿ ಇಂಡಿಯಾ-2025ʼರ 7ನೇ ಆವೃತ್ತಿ ಅಧಿವೇಶನ ಉದ್ದೇಶಿಸಿ ಮಾತನಾಡಿದ ಕೇಂದ್ರ ಹೊಸ ಮತ್ತು ನವೀಕರಿಸಬಹುದಾದ ಇಂಧನ ಸಚಿವ ಪ್ರಲ್ಹಾದ್ ಜೋಶಿ, ಕರ್ನಾಟಕ, ತಮಿಳುನಾಡು ಮತ್ತು ಆಂಧ್ರಪ್ರದೇಶ ಒಟ್ಟಾಗಿ ಭಾರತದ ಪವನ ಶಕ್ತಿ ಸಾಮರ್ಥ್ಯದ ಅರ್ಧದಷ್ಟು ಕೊಡುಗೆ ನೀಡುತ್ತಿದ್ದು, ಇದು 54 GW ಆಗಿದೆ. ಭಾರತ ವಿಶ್ವದ 4ನೇ ಅತಿದೊಡ್ಡ ನವೀಕರಿಸಬಹುದಾದ ಇಂಧನ ಸಾಮರ್ಥ್ಯ ಹೊಂದಿದ್ದು, 2030ರ ವೇಳೆಗೆ 500 GW ಇಂಧನ ಉತ್ಪಾದನೆ ಗುರಿಯತ್ತ ಸಾಗುತ್ತಿದೆ. ಇದರಲ್ಲಿ ಪವನ ಶಕ್ತಿಯು 100 GW ಕೊಡುಗೆ ನೀಡುವ ಮೂಲಕ ಪ್ರಮುಖ ಪಾತ್ರ ವಹಿಸುತ್ತದೆ ಎಂದರು. ದೇಶದ ಪವನ ವಿದ್ಯುತ್ ಸಾಮರ್ಥ್ಯದ ಶ್ರೇಯಾಂಕವು ವಿಶ್ವದಲ್ಲಿ 4ನೇ ಸ್ಥಾನದಲ್ಲಿದೆ ಎಂದು ಹೇಳಿದ್ದಾರೆ.
-
ನವದೆಹಲಿ, ಅ. 30: ಭಾರತದ ಪವನ ಶಕ್ತಿ (Wind Energy) ಸಾಮರ್ಥ್ಯಕ್ಕೆ ಕರ್ನಾಟಕ ಸೇರಿದಂತೆ ಮೂರು ರಾಜ್ಯಗಳು ಶೇ. 50ರಷ್ಟು ಕೊಡುಗೆ ನೀಡುತ್ತಿವೆ ಎಂದು ಕೇಂದ್ರ ಹೊಸ ಮತ್ತು ನವೀಕರಿಸಬಹುದಾದ ಇಂಧನ ಸಚಿವ ಪ್ರಲ್ಹಾದ್ ಜೋಶಿ (Pralhad Joshi) ಹೇಳಿದರು. ಚೆನ್ನೈನಲ್ಲಿ ಗುರುವಾರ ನಡೆದ ʼವಿಂಡ್ ಎನರ್ಜಿ ಇಂಡಿಯಾ-2025ʼರ 7ನೇ ಆವೃತ್ತಿ ಅಧಿವೇಶನ ಉದ್ದೇಶಿಸಿ ಮಾತನಾಡಿದ ಸಚಿವರು, ಕರ್ನಾಟಕ, ತಮಿಳುನಾಡು ಮತ್ತು ಆಂಧ್ರಪ್ರದೇಶ ಒಟ್ಟಾಗಿ ಭಾರತದ ಪವನ ಶಕ್ತಿ ಸಾಮರ್ಥ್ಯದ ಅರ್ಧದಷ್ಟು ಕೊಡುಗೆ ನೀಡುತ್ತಿದ್ದು, ಇದು 54 GW ಆಗಿದೆ ಎಂದು ಹೇಳಿದರು.
ಪವನ ವಿದ್ಯುತ್ ಅಲ್ಲಿ ಭಾರತಕ್ಕೆ 4ನೇ ಶ್ರೇಯಾಂಕ
ಭಾರತ ವಿಶ್ವದ 4ನೇ ಅತಿದೊಡ್ಡ ನವೀಕರಿಸಬಹುದಾದ ಇಂಧನ ಸಾಮರ್ಥ್ಯ ಹೊಂದಿದ್ದು, 2030ರ ವೇಳೆಗೆ 500 GW ಇಂಧನ ಉತ್ಪಾದನೆ ಗುರಿಯತ್ತ ಸಾಗುತ್ತಿದೆ. ಇದರಲ್ಲಿ ಪವನ ಶಕ್ತಿಯು 100 GW ಕೊಡುಗೆ ನೀಡುವ ಮೂಲಕ ಪ್ರಮುಖ ಪಾತ್ರ ವಹಿಸುತ್ತದೆ ಎಂಬ ಆಶಾಭಾವ ವ್ಯಕ್ತಪಡಿಸಿದ ಸಚಿವರು, ದೇಶದ ಪವನ ವಿದ್ಯುತ್ ಸಾಮರ್ಥ್ಯದ ಶ್ರೇಯಾಂಕವು ವಿಶ್ವದಲ್ಲಿ 4ನೇ ಸ್ಥಾನದಲ್ಲಿದೆ ಎಂದು ಹೇಳಿದರು.
ರಾಮನಾಥಪುರಂ ಅಲ್ಲಿ 500 ಮೆಗಾವ್ಯಾಟ್ ಯೋಜನೆ
ಮೊದಲ ಪವನ ವಿದ್ಯುತ್ ಸ್ಥಾವರಗಳಿಂದ ಇಂದಿನ ಅತ್ಯಾಧುನಿಕ ಟರ್ಬೈನ್‌ಗಳವರೆಗೆ ತಮಿಳುನಾಡು ಭಾರತದ ಶುದ್ಧ ಇಂಧನ ಪ್ರಯಾಣವನ್ನು ಮುನ್ನಡೆಸಿದೆ ಮತ್ತು ಇತರ ರಾಜ್ಯಗಳಿಗೆ ಸ್ಫೂರ್ತಿಯಾಗಿದೆ. ಹೊಸ ಪ್ರದೇಶಗಳಲ್ಲಿ ಪವನ ವಿದ್ಯುತ್ ಉತ್ಪಾದನೆ ಉತ್ತೇಜಿಸಲು ಕೇಂದ್ರ ಸರ್ಕಾರ ಅಂತರ ನಿಧಿ ಯೋಜನೆ ಪ್ರಾರಂಭಿಸಿದೆ. ಈ ಯೋಜನೆಯಡಿ ತಮಿಳುನಾಡಿನ ರಾಮನಾಥಪುರಂ ಕರಾವಳಿಯಲ್ಲಿ 500 ಮೆಗಾವ್ಯಾಟ್ ಯೋಜನೆಯನ್ನು ಸ್ಥಾಪಿಸಲಾಗುವುದು. ಇದಕ್ಕೆ ಫೆಬ್ರವರಿ 2026ರೊಳಗೆ ಟೆಂಡರ್ ಬಿಡುಗಡೆಯಾಗಲಿದೆ ಎಂದು ಸಚಿವ ಜೋಶಿ ತಿಳಿಸಿದರು.
ವರ್ಷದ ಮೊದಲ ಆರು ತಿಂಗಳಲ್ಲಿ 3 GWಗಿಂತ ಹೆಚ್ಚಿನ ಪವನ ಸಾಮರ್ಥ್ಯವನ್ನು ಸೇರಿಸಲಾಗಿದೆ ಮತ್ತು ಮಾರ್ಚ್ 2026ರ ವೇಳೆಗೆ ಇನ್ನೂ 3GW ಪವನ ಸಾಮರ್ಥ್ಯವನ್ನು ಸೇರಿಸಲಾಗುವುದು. ಇದು ಕಳೆದ ವರ್ಷದ 4GW ಪವನ ವಿದ್ಯುತ್‌ಗಿಂತ ಹೆಚ್ಚಿನ ವಾರ್ಷಿಕ ಸೇರ್ಪಡೆಯಾಗಿದೆ. ದೇಶದ ಒಟ್ಟು ಸ್ಥಾಪಿತ ಸಾಮರ್ಥ್ಯವು 500GW ಸಮೀಪಿಸುತ್ತಿದೆ ಮತ್ತು ಪಳೆಯುಳಿಕೆಯೇತರ ಮೂಲಗಳು 257GW ಗಿಂತ ಹೆಚ್ಚು ಕೊಡುಗೆ ನೀಡುತ್ತವೆ. ಇದರಿಂದಾಗಿ ಸಾಂಪ್ರದಾಯಿಕ ಉಷ್ಣ ವಿದ್ಯುತ್ ಪಾಲು ಗಮನಾರ್ಹ ಕಡಿಮೆಯಾಗಿದೆ ಎಂದರು.
ಪವನ ವಿದ್ಯುತ್ ಶೇ. 64ರಿಂದ 85ಕ್ಕೆ ಹೆಚ್ಚಿಸಿ
ನವೀಕರಿಸಬಹುದಾದ ಇಂಧನ ವಲಯದ ಉಪಕರಣ ತಯಾರಕರು, ಘಟಕ ತಯಾರಕರು ಹಾಗೂ ಉದ್ಯಮದ ಪಾಲುದಾರರು, ಶುದ್ಧ ಇಂಧನ ತಂತ್ರಜ್ಞಾನಗಳಲ್ಲಿ ಪ್ರಧಾನ ಮಂತ್ರಿಯವರ ಆತ್ಮನಿರ್ಭರ ಭಾರತ್ ದೃಷ್ಟಿಕೋನಕ್ಕೆ ಅನುಗುಣವಾಗಿ ಪವನ ಯೋಜನೆಗಳಲ್ಲಿ ಪ್ರಸ್ತುತ ಶೇ.64ರಿಂದ 85ಕ್ಕೆ ಹೆಚ್ಚಿಸಲು ಕೈ ಜೋಡಿಸಬೇಕೆಂದು ಒತ್ತಾಯಿಸಿದ ಸಚಿವ ಪ್ರಲ್ಹಾದ್ ಜೋಶಿ, ಭಾರತದ ಶುದ್ಧ ಇಂಧನ ಪೂರೈಕೆ ವ್ಯವಸ್ಥೆಯನ್ನು ಬಲಪಡಿಸುವಲ್ಲಿ ದೇಶೀಯ ಮೌಲ್ಯವರ್ಧನೆ ಹೆಚ್ಚಿಸುವುದು ಅತ್ಯಗತ್ಯ ಎಂದು ಪ್ರತಿಪಾದಿಸಿದರು.
ಭಾರತ ಪ್ರತಿಯೊಂದು ವಲಯದಲ್ಲೂ ತ್ವರಿತ ಪ್ರಗತಿಗೆ ವಿಶ್ವದಲ್ಲೇ ಒಂದು ಉತ್ತಮ ನಿದರ್ಶನವಾಗಿದೆ. ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ದೂರದೃಷ್ಟಿಯ ನಾಯಕತ್ವದಲ್ಲಿ ಆರ್ಥಿಕತೆ, ಕಾರ್ಯತಂತ್ರ, ತಾಂತ್ರಿಕ ಯಾವುದೇ ಕ್ಷೇತ್ರದಲ್ಲೂ ಜಾಗತಿಕ ನಾಯಕನಾಗುವ ಮಹತ್ವಾಕಾಂಕ್ಷೆ ಹೊಂದಿದೆ ಎಂದು ಹೇಳಿದರು.
ಈ ಸುದ್ದಿಯನ್ನೂ ಓದಿ | ISA 8th Session: ಭಾರತದ ಸೌರ ಸಾಧನೆಗೆ ತಲೆದೂಗಿವೆ 125 ರಾಷ್ಟ್ರಗಳು
ಕಾರ್ಯಕ್ರಮದಲ್ಲಿ ತಮಿಳುನಾಡು ಸಾರಿಗೆ ಮತ್ತು ವಿದ್ಯುತ್ ಸಚಿವ ಎಸ್.ಎಸ್. ಶಿವಶಂಕರ್, ಜರ್ಮನಿಯ ಆರ್ಥಿಕ ಸಹಕಾರ ಮತ್ತು ಅಭಿವೃದ್ಧಿ ಸಚಿವರ ಸಂಸದೀಯ ರಾಜ್ಯ ಕಾರ್ಯದರ್ಶಿ ಜೋಹಾನ್ ಸಾಥಾಫ್ ಭಾಗವಹಿಸಿದ್ದರು.