ಸಂಗೊಳ್ಳಿ ರಾಯಣ್ಣ ವೀರಭೂಮಿ, ಪುತ್ಥಳಿ ಲೋಕಾರ್ಪಣೆ; ನಮ್ಮ ಸರ್ಕಾರ ದೇಶ ಮೆಚ್ಚುವ ಕೆಲಸ ಮಾಡಿದೆ ಎಂದ ಹೆಬ್ಬಾಳ್ಕರ್
Laxmi Hebbalkar: ಕ್ರಾಂತಿವೀರ ಸಂಗೊಳ್ಳಿ ರಾಯಣ್ಣನ ಪುಣ್ಯ ಭೂಮಿ ನಂದಗಡದಲ್ಲಿ ವೀರ ಭೂಮಿಯನ್ನು ಲೋಕಾರ್ಪಣೆ ಮಾಡುವ ಮೂಲಕ ಇಡೀ ದೇಶವೇ ಮೆಚ್ಚುವಂಥ ಕೆಲಸವನ್ನು ನಮ್ಮ ಸರ್ಕಾರ ಮಾಡಿದೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ತಿಳಿಸಿದ್ದಾರೆ.
ನಂದಗಡ ಕಾರ್ಯಕ್ರಮಕ್ಕೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಭೇಟಿ. -
ಬೆಳಗಾವಿ, ಜ.19: ದೇಶಕ್ಕಾಗಿ ತನ್ನ ಪ್ರಾಣವನ್ನೇ ತ್ಯಾಗ ಮಾಡಿದ ವೀರ ಸಂಗೊಳ್ಳಿ ರಾಯಣ್ಣನ ಪುಣ್ಯ ಭೂಮಿ ನಂದಗಡದಲ್ಲಿ ವೀರ ಭೂಮಿಯನ್ನು ಲೋಕಾರ್ಪಣೆ ಮಾಡುವ ಮೂಲಕ ಇಡೀ ದೇಶವೇ ಮೆಚ್ಚುವಂಥ ಕೆಲಸವನ್ನು ನಮ್ಮ ಸರ್ಕಾರ ಮಾಡಿದೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ (Laxmi Hebbalkar) ಹೇಳಿದರು. ನಂದಗಡದಲ್ಲಿ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ವಸ್ತು ಸಂಗ್ರಹಾಲಯ (ವೀರಭೂಮಿ) ಲೋಕಾರ್ಪಣೆ, ಸಮಾಧಿ ಬಳಿಯ ಕೆರೆಯಲ್ಲಿರುವ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಪ್ರತಿಮೆ ಅನಾವರಣ ಸಮಾರಂಭ ಮತ್ತು ವಿವಿಧ ಕಾಮಗಾರಿಗಳ ಭೂಮಿ ಪೂಜೆ ಕಾರ್ಯಕ್ರಮದಲ್ಲಿ ಸಚಿವರು ಮಾತನಾಡಿದರು.
ಸರ್ಕಾರಕ್ಕೆ ಮತ್ತು ನಮ್ಮ ಮುಖ್ಯಮಂತ್ರಿಗಳಿಗೆ ನಾನು ಅಭಿನಂದನೆ ಸಲ್ಲಿಸುತ್ತೇನೆ. ಇಂದು ಇಡೀ ರಾಷ್ಟ್ರ ಹೆಮ್ಮೆ ಪಡುವ ಕೆಲಸ ಆಗಿದೆ ಎಂದ ಅವರು, ಸಂಗೊಳ್ಳಿ ರಾಯಣ್ಣ ಅಂದರೆ ಧೈರ್ಯ, ಸಂಗೊಳ್ಳಿ ರಾಯಣ್ಣ ಎಂದರೆ ವಿಶ್ವಾಸ, ಅವರ ತ್ಯಾಗ, ದೇಶ ಭಕ್ತಿ ನಮ್ಮ ಕಣ್ಣ ಮುಂದೆ ಕಾಣುತ್ತದೆ. ಸಂಗೊಳ್ಳಿ ರಾಯಣ್ಣನವರ ಹೆಸರು ಹೇಳಿದರೆ ಸಾಕು ಮೈ ರೋಮಾಂಚನ ಆಗುತ್ತೆ. ಇಂಥ ಕ್ರಾಂತಿ ವೀರನನ್ನು 33ನೇ ವಯಸ್ಸಿನಲ್ಲಿ ಗಲ್ಲಿಗೆ ಏರಿಸಲಾಯಿತು. ಕೇವಲ 33ನೇ ವಯಸ್ಸಿನಲ್ಲಿ ತನ್ನ ಕೊರಳನ್ನು ಒಡ್ಡಿದ್ದಾರೆ ಅಂದರೆ ಎಂತಹ ಕ್ರಾಂತಿಕಾರಿ ಇರಬೇಕು ಎಂದು ಸಚಿವರು ಕ್ರಾಂತಿವೀರ ಸಂಗೊಳ್ಳಿ ರಾಯಣ್ಣನ ಹೋರಾಟವನ್ನು ಸ್ಮರಿಸಿದರು.
ಆಧುನಿಕ ಕಾಲದಲ್ಲಿ ಸ್ವಾತಂತ್ರ್ಯ ತಂದು ಕೊಟ್ಟುವರನ್ನು ನಾವು ಬೆಳಕಿಗೆ ತರಬೇಕು. ಇಂದು ಚುನಾವಣೆ ಸಂದರ್ಭದಲ್ಲಿ ಜಾತಿ ಜಾತಿ ಮಧ್ಯೆ ಬೆಂಕಿ ಹಚ್ಚುವ ಕೆಲಸ ಮಾಡುತ್ತಿದ್ದಾರೆ. ನಾವು ಅಭಿವೃದ್ಧಿ ಕೆಲಸದ ಕಡೆ ಮಾತ್ರ ಗಮನ ಕೊಡುತ್ತೇವೆ ಎಂದ ಅವರು, ಎರಡು ತಿಂಗಳ ಗೃಹ ಲಕ್ಷ್ಮೀ ಹಣವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬಿಡುಗಡೆ ಮಾಡಿದ್ದಾರೆ. ಆದಷ್ಟು ಬೇಗ ಫಲಾನುಭವಿಗಳ ಖಾತೆಗೆ ಜಮಾ ಮಾಡಲಾಗುವುದು ಎಂದರು.
ಕರಾವಳಿ ಭಾಗದಲ್ಲಿ ಪ್ರವಾಸೋದ್ಯಮ ಅಭಿವೃದ್ಧಿಗೆ ಸಂಪೂರ್ಣ ಸಹಕಾರ: ಲಕ್ಷ್ಮಿ ಹೆಬ್ಬಾಳ್ಕರ್
ಈ ವೇಳೆ ಕಾಗಿನೆಲೆಯ ಕನಕಗುರು ಪೀಠದ ಡಾ.ನಿರಂಜನಾನಂದ ಪುರಿ ಮಹಾಸ್ವಾಮೀಜಿ ಸಮಾರಂಭದ ಸಾನ್ನಿಧ್ಯ ವಹಿಸಿದ್ದರು. ಜಿಲ್ಲಾ ಉಸ್ತುವಾರಿ ಸಚಿವ ಸತೀಶ್ ಜಾರಕಿಹೊಳಿ, ಸಚಿವರಾದ ಬೈರತಿ ಸುರೇಶ್, ಶಿವರಾಜ್ ತಂಗಡಗಿ, ವಿಧಾನಸಭೆಯ ಮುಖ್ಯ ಸಚೇತಕ ಅಶೋಕ್ ಪಟ್ಟಣ, ಕರ್ನಾಟಕ ಹಣಕಾಸು ಸಂಸ್ಥೆಯ ಅಧ್ಯಕ್ಷ ಹಾಗೂ ಶಾಸಕ ಮಹಾಂತೇಶ್ ಕೌಜಲಗಿ, ರಾಜ್ಯ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಯ ಅಧ್ಯಕ್ಷ ಎಚ್.ಎಂ. ರೇವಣ್ಣ, ಶಾಸಕರಾದ ವಿಠ್ಠಲ ಹಲಗೇಕರ್, ಬಾಬಾಸಾಹೇಬ್ ಪಾಟೀಲ, ವಿಶ್ವಾಸ್ ವೈದ್ಯ, ಗಣೇಶ್ ಹುಕ್ಕೇರಿ, ಮಹೇಂದ್ರ ತಮ್ಮಣ್ಣವರ್, ವಿಧಾನ ಪರಿಷತ್ ಸದಸ್ಯ ಚನ್ನರಾಜ ಹಟ್ಟಿಹೊಳಿ, ಮಾಜಿ ಶಾಸಕರಾದ ಅಂಜಲಿ ನಿಂಬಾಳಕರ್, ಅರವಿಂದ ಪಾಟೀಲ್, ಬುಡಾ ಅಧ್ಯಕ್ಷ ಲಕ್ಷ್ಮಣರಾವ್ ಚಿಂಗಳೆ, ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಯ ಅಧ್ಯಕ್ಷ ವಿನಯ ನಾವಲಗಟ್ಟಿ ಹಾಗೂ ವಿವಿಧ ಇಲಾಖೆಯ ಅಧಿಕಾರಿಗಳು, ರಾಯಣ್ಣ ಅಭಿವೃದ್ಧಿ ಪ್ರಾಧಿಕಾರದ ಸಿಬ್ಬಂದಿ, ಸಹಸ್ರಾರು ಸಂಖ್ಯೆಯ ರಾಯಣ್ಣ ಅಭಿಮಾನಿಗಳು ಉಪಸ್ಥಿತರಿದ್ದರು.