Bengaluru accident: ಬೆಂಗಳೂರಿನಲ್ಲಿ ಟಿಪ್ಪರ್ ಲಾರಿ ಹರಿದು 5 ವರ್ಷದ ಬಾಲಕ ಸಾವು; ತಾಯಿಯೊಂದಿಗೆ ಶಾಲೆಗೆ ಹೋಗುತ್ತಿದ್ದಾಗ ದುರಂತ!
ಬೆಂಗಳೂರು ನಗರದ ಉತ್ತರಹಳ್ಳಿಯ ಸಾವನದರ್ಬಾರ್ ಆಶ್ರಮದ ಬಳಿ ಅಪಘಾತ ಸಂಭವಿಸಿದೆ. ಮಗನನ್ನು ಶಾಲೆಗೆ ಬಿಡಲು ತಾಯಿ ಸ್ಕೂಟರ್‌ನಲ್ಲಿ ಕರೆದುಕೊಂಡು ಹೋಗುತ್ತಿದ್ದಾಗ ಘಟನೆ ನಡೆದಿದೆ. ಸದ್ಯ ಮೃತ ಬಾಲಕನ ತಂದೆ ನೀಡಿದ ದೂರಿನನ್ವಯ ಕೆಂಗೇರಿ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
-
ಬೆಂಗಳೂರು: ಟಿಪ್ಪರ್ ಲಾರಿ ಹರಿದು 5 ವರ್ಷದ ಬಾಲಕ ಸ್ಥಳದಲ್ಲೇ ದಾರುಣವಾಗಿ ಮೃತಪಟ್ಟಿರುವ ಘಟನೆ (Bengaluru accident) ನಗರದ ಉತ್ತರಹಳ್ಳಿಯ ಸಾವನದರ್ಬಾರ್ ಆಶ್ರಮದ ಬಳಿ ನಡೆದಿದೆ. ಭವೀನ್ (5) ಮೃತಪಟ್ಟ ಮಗು. ಮಗನನ್ನು ಶಾಲೆಗೆ ಬಿಡಲು ತಾಯಿ ಸ್ಕೂಟರ್‌ನಲ್ಲಿ ತೆರಳುತ್ತಿದ್ದ ವೇಳೆ ದುರಂತ ಸಂಭವಿಸಿದೆ.
ಸೋಮವಾರ ಬೆಳಗ್ಗೆ ತಾಯಿ ಶುಭಲತಾ ಅವರು ಮಗ ಭವೀನ್‌ನನ್ನು ಶಾಲೆಗೆ ಬಿಡಲು ಸ್ಕೂಟರ್‌ನಲ್ಲಿ ಹೋಗುತ್ತಿದ್ದಾಗ, ಎದುರಿನಿಂದ ದ್ವಿಚಕ್ರ ವಾಹನವೊಂದು ಬಂದು ಡಿಕ್ಕಿಯಾಗಿದೆ. ಇದರಿಂದ ತಾಯಿ ಮತ್ತು ಮಗ ಇಬ್ಬರೂ ರಸ್ತೆಗೆ ಬಿದ್ದಿದ್ದಾರೆ. ಅದೇ ವೇಳೆ ಹಿಂಭಾಗದಿಂದ ವೇಗವಾಗಿ ಬಂದ ಟಿಪ್ಪರ್ ವಾಹನ ಭವೀನ್ ಮೇಲೆ ಹರಿದಿದೆ. ತೀವ್ರ ರಕ್ತಸ್ರಾವದಿಂದ ಸ್ಥಳದಲ್ಲೇ ಬಾಲಕ ಕೊನೆಯುಸಿರೆಳೆದಿದ್ದಾನೆ.
ಘಟನೆಯಲ್ಲಿ ತಾಯಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಅಪಘಾತವೆಸಗಿದ ಟಿಪ್ಪರ್ ಚಾಲಕ ಹಾಗೂ ಅಪಘಾತಕ್ಕೆ ಕಾರಣವಾದ ಮತ್ತೊಂದು ದ್ವಿಚಕ್ರ ವಾಹನದ ಸವಾರ ಇಬ್ಬರೂ ವಾಹನಗಳನ್ನು ಬಿಟ್ಟು ಸ್ಥಳದಿಂದ ಪರಾರಿಯಾಗಿದ್ದಾರೆ. ಸದ್ಯ ಮೃತ ಬಾಲಕನ ತಂದೆ ನೀಡಿದ ದೂರಿನನ್ವಯ ಕೆಂಗೇರಿ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಸದ್ಯ ಪೊಲೀಸರು ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸುತ್ತಿದ್ದು, ತಲೆಮರೆಸಿಕೊಂಡಿರುವ ಇಬ್ಬರೂ ಚಾಲಕರ ಪತ್ತೆಗೆ ತನಿಖೆ ತೀವ್ರಗೊಳಿಸಿದ್ದಾರೆ.
ಶಿಡ್ಲಘಟ್ಟದ ಬಳಿ ಓಮ್ನಿ- ಗೂಡ್ಸ್ ವಾಹನ ಡಿಕ್ಕಿಯಾಗಿ ಮೂವರ ದುರ್ಮರಣ
ಚಿಕ್ಕಬಳ್ಳಾಪುರ: ಓಮ್ನಿ ಕಾರು ಹಾಗೂ ಮಿನಿ ಗೂಡ್ಸ್ ವಾಹನ ಡಿಕ್ಕಿಯಾಗಿ ಮೂವರು ಮಹಿಳೆಯರು ಮೃತಪಟ್ಟಿರುವುದು ಚಿಕ್ಕಬಳ್ಳಾಪುರ (Chikkaballapur Accident) ಜಿಲ್ಲೆ ಶಿಡ್ಲಘಟ್ಟ ತಾಲೂಕಿನ ಕೊತ್ತನೂರು ಗೇಟ್ ಬಳಿ ನಡೆದಿದೆ. ಶಿಡ್ಲಘಟ್ಟ-ಚಿಂತಾಮಣಿ ಮಾರ್ಗದ ಕೊತ್ತನೂರು ಗೇಟ್ ಸಮೀಪ ದುರ್ಘಟನೆ ನಡೆದಿದ್ದು, ಚಿಂತಾಮಣಿ ತಾಲೂಕಿನ ಮಲ್ಲಿಕಾರ್ಜುನಪುರ ಗ್ರಾಮದ ರೂಪಾ (30), ರತ್ನಮ್ಮ (45) ಹಾಗೂ ಮುನಿಚೆನ್ನಮ್ಮ (40) ಮೃತಪಟ್ಟಿದ್ದಾರೆ.
ಮಲ್ಲಿಕಾರ್ಜುನಪುರ ಗ್ರಾಮದಿಂದ ಹುಜುಗೂರು ಗ್ರಾಮಕ್ಕೆ ಹೂ ಕಟಾವು ಕೆಲಸಕ್ಕೆ ತೆರಳುತ್ತಿದ್ದ ವೇಳೆ ಅಪಘಾತ ಸಂಭವಿಸಿದೆ. ಓಮ್ನಿ ಕಾರಿನಲ್ಲಿ ಸುಮಾರು 10 ಮಂದಿ ಕೂಲಿ ಕಾರ್ಮಿಕರು ಪ್ರಯಾಣಿಸುತ್ತಿದ್ದರು ಎನ್ನಲಾಗಿದೆ. ಕಾರ್ಮಿಕರನ್ನು ಕರೆದುಕೊಂಡು ಹೋಗುತ್ತಿದ್ದ ರಾಮಚಂದ್ರಪ್ಪ ಎಂಬವರ ಕಾರಿಗೆ ಅಪಘಾತ ಸಂಭವಿಸಿದೆ.
ತಪ್ಪಿದ ಭಾರಿ ದುರಂತ; ಬಿಹಾರದಲ್ಲಿ ಹಳಿ ತಪ್ಪಿದ ಸಿಕ್ಕಿಂ ಮಹಾನಂದ ಎಕ್ಸ್‌ಪ್ರೆಸ್ ರೈಲು
ಇನ್ನು ಅಪಘಾತದಲ್ಲಿ ಓಮ್ನಿ ಕಾರಿನ ಚಾಲಕ ಮನೋಜ್ ಸೇರಿ ಹಲವರಿಗೆ ಗಾಯಗಳಾಗಿವೆ. ಗಾಯಾಳುಗಳನ್ನು ಶಿಡ್ಲಘಟ್ಟ ತಾಲೂಕು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದ್ದು, ಗಂಭೀರವಾಗಿ ಗಾಯಗೊಂಡಿರುವ ಚಾಲಕ ಮನೋಜ್ ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿದೆ. ಇನ್ನು ಕೆಲ ಮಹಿಳೆಯರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಘಟನೆ ಸಂಬಂಧ ಶಿಡ್ಲಘಟ್ಟ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.